ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಡಿಪಾರ್ಚರ್ ಪ್ರವೇಶ ದ್ವಾರದ ಸಮೀಪ ಸ್ಪೋಟಕ ವಸ್ತುವಿದ್ದ ವಾರಸುದಾರರಿಲ್ಲದ ಬ್ಯಾಗ್ ಪತ್ತೆ ಆಗಿರುವ ಸುದ್ದಿ ಇದೀಗ ಹಲವು ಬಣ್ಣಗಳನ್ನು ಪಡೆದುಕೊಂಡು, ಬ್ಯಾಗ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಬಂಧನದವರೆಗೆ ತಲುಪಿದೆ.
ಘಟನೆ ನಡೆದಿದ್ದು ಜನವರಿ 20 ರಂದು ಸೋಮವಾರ ಬೆಳಗ್ಗೆ 8.45ರ ಸುಮಾರಿಗೆ ವಿಮಾನ ನಿಲ್ದಾಣದ ಟಿಕೇಟ್ ಕೌಂಟರ್ ಮತ್ತು ಡಿಪಾರ್ಚರ್ ಗೇಟಿನ ಬ್ಯಾಗಿನಲ್ಲಿ ಸ್ಪೋಟಕ ವಸ್ತುವನ್ನು ಉದ್ದೇಶಕ ಪೂರ್ವಕವಾಗಿ ಇರಿಸಿದ್ದಾನೆ ಎಂದು ಅಂದು ಬೆಳಗ್ಗೆ ಗಂಟೆ 10ಕ್ಕೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್ ಐ ಆರ್) ದಾಖಲಾಗುತ್ತದೆ. ಬ್ಯಾಗ್ ಪತ್ತೆಯಾದ ಒಂದು ಗಂಟೆಯೊಳಗೆ ಈ ಎಫ್ಐಆರ್ ಅನ್ನು ಸಿಐಎಸ್ಎಫ್ ಇನ್ಸ್ ಪೆಕ್ಟರ್ ಮಾನಸ್ ನಾಯಕ್ ಎಂಬವರು ದಾಖಲಿಸುತ್ತಾರೆ.
ಇದಾದ ಅನಂತರ ಖಾಸಗಿ ಟಿವಿ ಚಾನಲುಗಳ ಪ್ರತಿನಿಧಿಗಳು ವಿಮಾನ ನಿಲ್ದಾಣಕ್ಕೆ ದೌಡಾಯಿಸುತ್ತಾರೆ. ಸಂಶಯಿತ ಬ್ಯಾಗನ್ನು ಬಾಂಬ್ ಕಂಟೈನರಿನಲ್ಲಿ ಇರಿಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ತಮ್ಮ ಹೇಳಿಕೆಯ ವಿಡಿಯೊವೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಾರೆ. ಜನರು ಭಯಭೀತಿ ಪಡುವ ಅಗತ್ಯವಿಲ್ಲ, ಎಲ್ಲವೂ ನಿಯಂತ್ರಣದಲ್ಲಿ ಎನ್ನುತ್ತಾರೆ. ಅಷ್ಟರೊಳಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ ದೊಡ್ಡ ಬಾಂಬ್ ಎಂಬಿತ್ಯಾದಿ ಸುದ್ದಿಗಳು ಖಾಸಗಿ ಟಿವಿಗಳಲ್ಲಿ, ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತವೆ.
ಬಜಪೆ ಪೊಲೀಸರು ದಾಖಲಿಸಿದ ಎಫ್ಐಆರ್, ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ ಡಿಐಜಿ ಅನಿಲ್ ಪಾಂಡೆ ದೆಹಲಿಯಲ್ಲಿ ನೀಡಿದ ಹೇಳಿಕೆ ಮತ್ತು ಕಮೀಷನರ್ ಮೊದಲು ನೀಡಿದ ಹೇಳಿಕೆಯಲ್ಲಿ ಎಲ್ಲೂ ಕೂಡ ಸಜೀವ ಬಾಂಬ್ ಪತ್ತೆಯಾಗಿದೆ ಎಂಬ ಉಲ್ಲೇಖ ಆಗಿಲ್ಲ. ಸ್ಪೋಟಕಗಳು ಪತ್ತೆಯಾಗಿದ್ದು, ಐಇಡಿ ಕೂಡ ಆಗಿರುವ ಸಾಧ್ಯತೆ ಇರುವ ಬಾಂಬ್ ನಿಷ್ಕ್ರೀಯ ತಂಡಕ್ಕೆ ಒಪ್ಪಿಸಲಾಗಿದೆ ಎಂದಷ್ಟೇ ಹೇಳಲಾಗಿತ್ತು.
ಮಾತ್ರವಲ್ಲದೆ, ಸುದ್ದಿ ಹೊರಬರುವ ವೇಳೆಗಾಗಲೇ ಪೊಲೀಸರು ಮತ್ತು ಸಿಐಎಸ್ಎಫ್ ಸಿಬ್ಬಂದಿ ಸಿಸಿಟಿವಿಗಳಿಂದ ಪತ್ತೆ ಮಾಡಿದ ಟೊಪ್ಪಿ ಧರಿಸಿರುವ ಶಂಕಿತ ಭಯೋತ್ಪಾದಕನ ಚಿತ್ರ ಮಾಧ್ಯಮಗಳಿಗೆ ಬಿಡುಗಡೆ ದೊರಕಿತ್ತು. ಸಾಮಾನ್ಯವಾಗಿ ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಪೊಲೀಸ್ ಮತ್ತು ಭದ್ರತಾ ಪಡೆ ನಡುವ ಮಾತ್ರ ಇಂತಹ ಮಾಹಿತಿಯನ್ನು ಹಂಚಿಕೊಂಡು ಸಂಶಯಿತ ಪತ್ತೆಗೆ ಶ್ರಮಿಸಲಾಗುತ್ತದೆ. ಅನಿವಾರ್ಯವಾದರೆ ಮಾತ್ರ ಮಾಧ್ಯಮಗಳ ಮೂಲಕ ಸಾರ್ವಜನಿಕರ ಗಮನಕ್ಕೆತರಲಾಗುತ್ತದೆ. ಆದರೆ, ಮಂಗಳೂರಿನಲ್ಲಿ ಹಾಗಾಗದೆ, ಮಾಧ್ಯಮಗಳಿಗೆ ಬಿಡುಗಡೆಯಾಗಿದೆ.
ಅನಂತರ ನಡೆದಿರುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿರುವ “ಡ್ರಾಮಾ” ಆಗಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಮಾಧ್ಯಮಗಳ ಮುಂದೆ ಸಾರ್ವಜನಿಕರಿಗೆ ತಲುಪಿದೆ. ಅದರೊಂದಿಗೆ ಬಹುದೊಡ್ಡ ಅನಾಹುತ ಆಗಿರುವುದು ಜನರಲ್ಲಿ ಭೀತಿ ಉಂಟು ಮಾಡುವ ದೃಶ್ಯಗಳು ಕೂಡ ಪ್ರಸಾರ ಆಗಿವೆ. ಮಂಗಳೂರು ನಗರ ಈಗಾಗಲೇ ಹಲವು ಕಾರಣಗಳಿಂದ ಸಮಸ್ಯೆಯನ್ನು ಎದುರಿಸುತ್ತಿವೆ. ಪೊಲೀಸರು ಕೇರಳದ ಮಂದಿಗೆ ನೀಡಿರುವ ನೊಟೀಸುಗಳು, ಇಲ್ಲಿ ನಡೆದಿರುವ ಗೋಲಿಬಾರ್ ಪ್ರಕರಣ, ವಾಣಿಜ್ಯ ಚಟುವಟಿಕೆಯನ್ನು ಕುಂಠಿತಗೊಳಿಸಿದೆ. ಮಾತ್ರವಲ್ಲದೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೊರ ಭಾಗದಿಂದ ಬರುವ ವಿದ್ಯಾರ್ಥಿಗಳು ಎಷ್ಟು ಎಂಬ ಆತಂಕ ಈಗಾಗಲೇ ಆರಂಭವಾಗಿದೆ.
ಮಾಧ್ಯಮಗಳಲ್ಲಿ ಏನೇ ವರದಿ ಆಗಿದ್ದರೂ ಕೂಡ ಬ್ಯಾಗಿನಲ್ಲಿ ಪತ್ತೆ ಆಗಿದ್ದು ಬಾಂಬ್ ಆಗಿರದೆ ಸಣ್ಣ ಪ್ರಮಾಣ ಸ್ಪೋಟಕ ಸಾಮಾಗ್ರಿಯಾಗಿತ್ತು. ಆರಂಭದಲ್ಲಿ ಸುರಕ್ಷ ಕ್ರಮಗಳನ್ನು ಕೈಗೊಂಡಿರುವುದು ಎಲ್ಲವೂ ಸರಿಯಾಗಿದೆ. ಆದರೆ, ಒಟ್ಟು ಸೊತ್ತನ್ನು ಫಾರೆನ್ಸಿಕ್ ವಿಭಾಗಕ್ಕೆ ಹಸ್ತಾಂತರಿಸುವ ಬದಲು ಸ್ಟೋಟಿಸುವ ಅಗತ್ಯವಾದರು ಏನಿತ್ತು ಎಂಬುದು ಈ ಬಗ್ಗೆ ಮಾಹಿತಿ ಇದ್ದವರ ಪ್ರಶ್ನೆ. ಈ ಹಿನ್ನೆಲೆಯಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪೊಲೀಸರ ಕ್ರಮವನ್ನು ಸಂಶಯದಿಂದ ನೋಡಿರುವುದು.
ಇದಕ್ಕೆ ಪೂರಕವಾಗಿ ಬುಧವಾರ ಟ್ವೀಟ್ ಮಾಡಿರುವ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯಲು ಹೋಗದೆ ವೃತ್ತಿಪರತೆಯಿಂದಕೆಲಸ ಮಾಡಬೇಕು. ಮಂಗಳೂರು ಪೊಲೀಸರು ತಮ್ಮ ತಪ್ಪುಗಳನ್ನುಮುಚ್ಚಿಕೊಳ್ಳಲು ಅನಗತ್ಯವಾಗಿ ಸಾರ್ವಜನಿಕರಲ್ಲಿಗೊಂದಲಸೃಷ್ಟಿಸಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದ್ದಾರೆ ಎಂದಿದ್ದಾರೆ.
ಪೊಲೀಸರ ಕ್ರಮವನ್ನು ಪ್ರಶ್ನೆ ಮಾಡಿರುವ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಪ್ರತಿಪಕ್ಷ ಮತ್ತು ನೆಟ್ಟಿಗರ ಟೀಕೆ ಟಿಪ್ಪಣಿಗೆ ಆಹಾರವಾಗಿದ್ದಾರೆ. ಮಾತ್ರವಲ್ಲದೆ, ಕುಮಾರಸ್ವಾಮಿ ಅವರ ಹೇಳಿಕೆಗೆ ಪರೋಕ್ಷ ಹೇಳಿಕೆ ನೀಡಿರುವ ಪೊಲೀಸ್ ಆಯುಕ್ತರು ಮುಖಂಡರು ಜವಾಬ್ದಾರಿಯಿಂದ ಹೇಳಿಕೆಗಳನ್ನು ನೀಡಬೇಕೆಂದು ಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಸರಕಾರವೇ ತನ್ನ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುತ್ತದೆಯೇ ವಿನಃ ಅಧಿಕಾರಿಗಳು ಪ್ರತಿಪಕ್ಷ ಮುಖಂಡರಿಗೆ ಪ್ರತಿಹೇಳಿಕೆ ನೀಡುವುದು ವಿರಳ.
ಭದ್ರತಾ ಪಡೆಗಳ ಮೋಕ್ ಡ್ರಿಲ್ ನಡುವೆ ಸಂದರ್ಭದಲ್ಲಿ ಮಾದ್ಯಮಗಳನ್ನು ಇರಿಸಿಕೊಂಡು ಸ್ಪೋಟಕವನ್ನು ಸುಡುವ ಪ್ರಕ್ರಿಯೆ ನಡೆಯಿತು. ಇದಕ್ಕಾಗಿ 12 ಅಡಿ ಗುಂಡಿ ತೋಡಲಾಗಿದೆ, ಬಾಂಬ್ 10 ಕಿಲೋ ಭಾರವಾಗಿತ್ತು ಇತ್ಯಾದಿ ಟಿವಿ ಚಾನಲುಗಳಲ್ಲಿ ಪ್ರಸಾರವಾಗುತಿತ್ತು.
ಈ ನಡುವೆ, ಬಹುತೇಕ ಖಾಸಗಿ ಟಿವಿ ವಾಹಿನಿಗಳು, ಕೆಲವು ಪತ್ರಿಕೆಗಳು ಹಾಗೂ ಕೇಂದ್ರ ಸರಕಾರದ ಸಚಿವರೂ ಸೇರಿದಂತೆ ಆಡಳಿತರೂಢ ಪಕ್ಷದ ಮುಖಂಡರು ಇದೊಂದು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯಿಂದ ಆಗಿರುವ ಕೃತ್ಯ ಎಂಬ ನಿರ್ಧಾರಕ್ಕೆ ಬಂದಿದ್ದರು. ಇನ್ನೊಂದೆಡೆ, ಪೌರತ್ವ ತಿದ್ದುಪಡಿ ವಿರೋಧಿಗಳ ಕೃತ್ಯ ಇದಾಗಿರಬಹುದು ಎಂಬ ತೀರ್ಮಾನವು ಆಯ್ತು.
ಮಂಗಳೂರಿನಲ್ಲಿ ಸ್ಪೋಟಕ ಪತ್ತೆಯಾದ ಎರಡನೇ ದಿನ ಮಾಧ್ಯಮಗಳ ವರದಿಗಾರಿಕೆಯಲ್ಲಿ ಕೂಡ ಸ್ಪೋಟಕ ಬದಲಾವಣೆ ಆಗಿರುವುದನ್ನು ಉಲ್ಲೇಖಿಸಲೇ ಬೇಕಾಗುತ್ತದೆ.
ಈ ಮಧ್ಯೆ, ಸ್ಟೋಟಕ ವಸ್ತು ಇರಿಸಿದ್ದ ಮಣಿಪಾಲ ಮೂಲದ ಆದಿತ್ಯ ರಾವ್ ಎಂಬಾತ ಪೊಲೀಸರಿಗೆ ಶರಣಾಗಲು ನೇರವಾಗಿ ಬೆಂಗಳೂರಿನಲ್ಲಿ ಇರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಹೋಗಿದ್ದ. ಘಟನೆ ನಡೆದ 48 ಗಂಟೆಗಳ ಅನಂತರ ಬೆಂಗಳೂರಿಗೆ ಡಿಜಿಪಿ-ಐಜಿಪಿ ಕಚೇರಿಗೆ ತಲಪುವ ತನಕ ಕೂಡ ಪೊಲೀಸರಿಗೆ ಆರೋಪಿಯ ಪತ್ತೆ ಮಾಡಲು ಸಾಧ್ಯ ಆಗದಿರುವುದು ಕೂಡ ಕುತೂಹಲ ವಿಚಾರವಾಗಿದೆ.
ಈ ಮಧ್ಯೆ, ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಕಾನೂನು ಹಾಗೂ ಸಂಸದೀಯ ಸಚಿವರು ನೀಡಿರುವ ಹೇಳಿಕೆ ಅವಸರದಾಗಿತ್ತು. ಅನಂತರ ಕೂಡ ಆರೋಪಿ ಆದಿತ್ಯ ರಾವ್ ಮಾನಸಿಕ ಅಸ್ವಸ್ಥ ಎಂದು ಗೃಹ ಸಚಿವರು ಹೇಳಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ.
ಸ್ವತಃ ಬಾಂಬ್ ಪ್ರಕರಣದ ಆರೋಪಿ ಆದಿತ್ಯ ರಾವ್ ಹೇಳಿರುವ ಪ್ರಕಾರ ಮತ್ತು ಬೆಂಗಳೂರಿನಲ್ಲಿ ವೈದ್ಯಕೀಯ ತಪಾಸಣೆ ವೇಳೆ ಆತ ಆರೋಗ್ಯವಂತನಾಗಿದ್ದಾನೆ ಎನ್ನಲಾಗಿದೆ. ಹಾಗಾದರೆ, ಸಚಿವರು ಯಾಕೆ ಈ ಹೇಳಿಕೆ ನೀಡಬೇಕಾಯಿತು ಎಂಬುದು ಕೂಡ ಸಂಶಯಾಸ್ಪದವಾಗಿದೆ.
ಆದಿತ್ಯ ರಾವ್ ಪ್ರಕರಣದಿಂದಾಗಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ ಇರುವುದು ಕೂಡ ಬಹಿರಂಗವಾಗಿದೆ. ವಿಮಾನ ನಿಲ್ದಾಣದ ನಿರ್ಗಮನ ಮತ್ತು ಆಗಮನ ಪ್ರದೇಶಕ್ಕೆ ಪ್ರಯಾಣಿರಲ್ಲದವರು ಕೂಡ ಹೋಗುತ್ತಾರೆ. ಆದರೆ, ಅದ್ದಕೂ ಮುನ್ನ ತಪಾಸಣೆ ಇರುವುದಿಲ್ಲ. ಮಾತ್ರವಲ್ಲದೆ, ವಿಶಾಲವಾದ ಪಾರ್ಕಿಂಗ್ ಪ್ರದೇಶಕ್ಕೆ ಮುನ್ನ ಕೂಡ ತಪಾಸಣೆ ಇರುವುದಿಲ್ಲ.
ನಿರ್ಗಮನ ಗೇಟ್ ಬಳಿ ಅನಾಥ ಬ್ಯಾಗನ್ನು ಗಮನಿಸಿದ ಖಾಸಗಿ ವಿಮಾನ ಯಾನ ಸಂಸ್ಥೆಯ ಸಿಬ್ಬಂದಿ ವಿಮಾನ ನಿಲ್ದಾಣದ ಭದ್ರತೆ ಹೊಣೆ ಹೊತ್ತಿರುವ ಸಿಐಎಸ್ಎಫ್ ಸಿಬ್ಬಂದಿ ಗಮನಕಕ್ಕೆ ತಂದಿದ್ದರು. ಬ್ಯಾಗ್ ಯಾರದ್ದು ಎಂದು ಅಲ್ಲಿ ಬಹಿರಂಗವಾಗಿ ಅಲ್ಲಿದ್ದ ಜನರನ್ನು ವಿಚಾರಿಸಲಾಗಿತ್ತು. ಅನಂತರ ಬ್ಯಾಗ್ ತೆರೆದು ನೋಡಿದ್ದಾರೆ. ನಾಣ್ಯ ಹಾಕುವ ವ್ಯವಸ್ಥೆ ಇರುವ ಸ್ಟೀಲ್ ಟಿಫನ್ ಬಾಕ್ಸ್ ಅದರಲ್ಲಿತ್ತು. ಅನಂತರ ಸ್ಪೋಟಕ ಇರುವ ಸಂಶಯದಿಂದ ಸುರಕ್ಷ ಸ್ಥಳಕ್ಕೆ ಸ್ಥಳಾಂತರಿಸಿ, ಪೊಲೀಸ್ ದುರು ನೀಡಿದ್ದಾರೆ. ಅನಂತರ ನಡೆದಿರುವ ವಿದ್ಯಮಾನಗಳು ಸಂಶಯಾಸ್ಪದವಾಗಿವೆ.