ಮಲೆನಾಡು ಭಾಗದಲ್ಲಿ ಮಂಗಗಳ ದಾಳಿ ಪ್ರತೀ ಊರಲ್ಲಿ ನೂರು ಕಥೆಗಳು ಹೇಳುತ್ತವೆ, ಮಂಗಗಳೇ ಲೇಖಕರ ಕಥೆಗಳಿಗೆ ಸ್ಫೂರ್ತಿಯಾಗಿವೆ, ಮಂಗಗಳೇ ರಾಜಕಾರಣದ ವಿಷಯಗಳಾಗಿವೆ, ಮಂಗಗಳೇ ಅರಣ್ಯ ಅಧಿಕಾರಿಗಳ ನಿದ್ದೆಗೆಡಿಸಿವೆ. ಇಂತಹ ಚಾಲಾಕಿ ಮಂಗಗಳ ಹತೋಟಿಗೆ ಈ ಭಾಗದ ರೈತರು ಕಾಲಕಾಲಕ್ಕೆ ಕೆಲವು ವಿನೂತನ ವಿಧಾನಗಳನ್ನ ಕಂಡುಕೊಂಡಿದ್ದಾರೆ. ಎರಡು ವಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹುಲಿರೂಪದ ನಾಯಿ ಇಣುಕುತ್ತಿದೆ, ಮಲೆನಾಡಿನ ರೈತನೊಬ್ಬ ನಾಯಿಗೆ ಹುಲಿ ಪೇಂಟ್ ಮಾಡಿ ಮಂಗಗಳನ್ನ ಓಡಿಸುತ್ತಿದ್ದಾನೆ ಎಂಬ ಸುದ್ದಿ ಹರಡುತ್ತಿದೆ. ಈ ನಾಯಿಯನ್ನ ಅರಸಿ ತೀರ್ಥಹಳ್ಳಿಗೆ ಹೋದಾಗ ಈ ರೈತನ ಹೆಸರು ಶ್ರೀಕಾಂತ್ ಗೌಡ, ಆಗುಂಬೆ ಮಾರ್ಗವಾಗಿ ಸಾಗಿದರೆ ಇಪ್ಪತ್ತು ಕಿಲೋಮೀಟರ್ ಅಂತರದಲ್ಲಿ ನಾಲೂರು ಗ್ರಾಮದವರು ಎಂದು ತಿಳಿಯಿತು.
ಮೇಘರವಳ್ಳಿಯಿಂದ ಮುಂದೆ ನಾಲೂರು, ಬಸ್ ನಿಲ್ದಾಣದ ಪಕ್ಕದಲ್ಲೇ ಮನೆ, ರೈತ ಶ್ರೀಕಾಂತ್ ಗೌಡ ಅಡಕೆ ಸುಲಿಸುವುದರಲ್ಲಿ ಮಗ್ನರಾಗಿದ್ದರು, ಮನೆಗೆ ಕಾಲಿಡುತ್ತಿದ್ದಂತೆ ಚಂಗನೇ ಹಾರಿಬಂದ ಇವರ ಪಟ್ಟೆಹುಲಿ ನಾಯಿ ಎದೆ ಝಲ್ಲೆನಿಸುವಂತೆ ಮಾಡಿತು, ನಿಜ ಅಕ್ಷರಶಃ ಈ ನಾಯಿ ಹುಲಿಯಂತೇ ಕಾಣುತ್ತಿದೆ, ಅದರ ಮೇಲೆ ಮೂಡಿದ ಕಪ್ಪು ಪಟ್ಟೆಗಳೂ ಕೂಡ ಅಷ್ಟೇ ಚೆನ್ನಾಗಿ ಬಳಿಯಲಾಗಿದೆ. ಶ್ರೀಕಾಂತ್ ಗೌಡರಿಗೆ ತಮ್ಮ ನಾಯಿ ಇಷ್ಟೆಲ್ಲಾ ವೈರಲ್ ಆಗುತ್ತೆ ಎಂಬ ಪೂರ್ವಪರ ಇಲ್ಲ, ಏಕೆಂದರೆ ಈ ಭಾಗದಲ್ಲಿ ಈ ತರಹ ನಾಯಿಗಳು ಸಾಮಾನ್ಯ. ಐದು ವರ್ಷಗಳ ಹಿಂದೆ ಉಡುಪಿಯ ಕುಂದಾಪುರದ ರೈತನೊಬ್ಬ ಈ ಪ್ರಯೋಗ ಮಾಡಿದ್ದ, ಆಗುಂಬೆ ಗೇಟ್ನಲ್ಲಿ ಒಬ್ಬ ತಂದು ಕಟ್ಟಿದ್ದ.
ಶ್ರೀಕಾಂತ್ ಗೌಡ್ರು ತಮ್ಮ ಐವತ್ತಮೂರು ಎಕರೆ ತೋಟದಲ್ಲಿ ಅಡಕೆ, ಕಾಫಿ, ಎಲಚಿ ಸೇರಿ ಹಣ್ಣುಹಂಪಲಿನ ಗಿಡಗಳನ್ನೂ ಬೆಳೆಸಿದ್ದಾರೆ, ಈ ನಾಯಿಯನ್ನ ಪ್ರತಿದಿನ ಎರಡು ಬಾರಿ ತಮ್ಮ ತೋಟಗಳಿಗೆ ಕರೆದುಕೊಂಡು ಹೋಗುತ್ತಾರೆ, ನಾಯಿಯನ್ನ ಕಂಡ ಮಂಗಗಳು ಜಾಗೃತವಾಗಿ ಅರಚಲು ಆರಂಭಿಸುತ್ತವೆ, ಯಾವುದಾದರೂ ಆಘಾತದ ಮುನ್ಸೂಚನೆ ಇದ್ದರೆ ಮಂಗಗಳು ಈ ತರಹ ಕೂಗುತ್ತಾ ಸಂದೇಶವನ್ನ ರವಾನಿಸುತ್ತವೆ, ಇಡೀ ಹಿಂಡು ಜಾಗೃತವಾಗಿ ಅಲ್ಲಲ್ಲೇ ಅಡಗಿ ಕುಳಿತುಕೊಳ್ಳುತ್ತವೆ. ಬದ್ಧವೈರಿಯಾದ ಹುಲಿಯನ್ನ ಕಂಡರೆ ಆ ಜಾಗವನ್ನೇ ತೊರೆಯುತ್ತವೆ. ಈ ಕಾರಣದಿಂದಲೇ ಶ್ರಿಕಾಂತ್ ಗೌಡರ ನಾಯಿ ಹುಲಿಯಾಗಿದ್ದು.
ನಮ್ಮದು ಕುಗ್ರಾಮ ನಾಲೂರು, ಸುತ್ತಲೂ ಅರಣ್ಯ ಪ್ರದೇಶವವೇ ಹೆಚ್ಚಿರೋದ್ರಿಂದ ಮಂಗಗಳೂ ಜಾಸ್ತಿ, ಮಂಗಗಳಿಗೂ ಆಹಾರ ಸಿಗೋದಿಲ್ಲ, ಹಲಸು, ಹೆಬ್ಬಲಸು ಕಾಡಿನಲ್ಲಿ ಬರಿದಾದ ಮೇಲೆ ಹಳ್ಳಿಗಳತ್ತ ಗುಳೇ ಹೊರಡುತ್ತವೆ, ಇದು ಮಂಗಗಳು ಸೊಪ್ಪು ತಿನ್ನುವ ಕಾಲ ಎಂದು ನಮ್ಮ ಹಿರೀಕರು ಹೇಳುತ್ತಿದ್ದರು, ನಾನು ಹುಲಿ ಬೊಂಬೆಗಳನ್ನ ತಂದು ತೂಗು ಹಾಕಿದೆ, ನನ್ನ ಐವತ್ತಮೂರು ಎಕರೆ ತೋಟದಲ್ಲಿ ಈ ವಿಧಾನದಲ್ಲಿ ಬೆಳೆ ಕಾದುಕೊಳ್ಳುವುದು ಅಸಾಧ್ಯ ಎನಿಸಿತು. ಮಂಗಗಳು ಹುಲಿಗಳಿಗೆ ಹೆದರುತ್ತವೆ ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು, ಹಾಗಾಗಿ ನಾಯಿಗೆ ಹೇರ್ ಡೈ ಕಲರ್ ಬಳಿದು ಹುಲಿಯನ್ನಾಗಿಸಿದ್ದೇನೆ, ಇದು ವಾಲ್ ಪೇಂಟ್ ಅಲ್ಲ, ನಾಯಿಗೂ ಸಮಸ್ಯೆ ಆಗೋದಿಲ್ಲ ಎನ್ನುತ್ತಾರೆ ಶ್ರೀಕಾಂತ್.
ಕೆಲವು ದಿನಗಳ ಹಿಂದೆ ಸೊರಬದ ರೈತ ಚಿದಾನಂದ ಗೌಡರು ಮೈಕ್ರೋಚಿಪ್ ರೀಡರ್ ಹಾಗೂ ಸ್ಪೀಕರ್ ಅಳವಡಿಸಿ ಮಂಗಗಳನ್ನ ಓಡಿಸಿದ್ದ ಕಥೆ ಎಲ್ಲೆಡೆ ಹರಿದಾಡಿತ್ತು, ಕೆಲವು ಕಡೆ ಹುಲಿಗಳ ಫ್ಲೆಕ್ಸ್ ಅಳವಡಿಸಲಾಗುತ್ತೆ, ಮಂಗಗಳ ಪ್ರತಿಕೃತಿಯನ್ನ ಪೇಂಟ್ ಮಾಡಿ ತೂಗು ಹಾಕಲಾಗುತ್ತೆ, ಇವೆಲ್ಲದನ್ನ ನೋಡಿ ರೈತರು ತಮ್ಮನ್ನ ಮೋಸಗೊಳಿಸಿದ್ದಾರೆಂದು ಮಂಗಗಳೂ ಅರಿತಿರುವುದರಿಂದ ಹೊಸ ಹೊಸ ಪ್ರಯೋಗಗಳಿಗೆ ರೈತರು ಅಣಿಯಾಗಿದ್ದಾರೆ. ಮಂಗಗಳು ತುಂಬಾ ಚಾಣಾಕ್ಷ ಬುದ್ಧಿಮತ್ತೆ ಹೊಂದಿರುತ್ತವೆ, ಮಂಗಗಳ ವರ್ತನೆ ಮೇಲೆ ಪುಸ್ತಕಗಳೇ ಪ್ರಕಟವಾಗಿವೆ, ತೇಜಸ್ವಿ ಕಥೆಗಳಲ್ಲಿ ಮಂಗಗಳ ವರ್ತನೆ ಮೇಲೆ ಒಂದಿಷ್ಟು ಸಾಲುಗಳಂತೂ ಇರುತ್ವೆ, ಹೀಗೆ ಮಲೆನಾಡಿನಲ್ಲಿ ಅಬೇಧ್ಯ ಸಾಮ್ರಾಜ್ಯ ಕಟ್ಟಿಕೊಂಡಿರುವ ಮಂಗಗಳ ಹಾವಳಿಗೆ ಅರ್ಧದಷ್ಟು ಬೆಳೆ ಪ್ರತೀ ವರ್ಷ ಹಾಳಾಗುತ್ತೆ, ವಿರಳವಾಗುತ್ತಿರುವ ಹಣ್ಣಿನ ಮರಗಳು, ನೀರಿನ ಒರತೆ, ಸ್ವಾಭಾವಿಕ ಸಸ್ಯವರ್ಗ ಮಂಗಗಳ ಹಾವಳಿಗೆ ಕಾರಣವಾಗಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಮಂಕೀಪಾರ್ಕ್ ಎಂಬುವ ಹೊಸ ಅಧ್ಯಾಯವೊಂದು ಆರಂಭವಾಗಿದೆ, ಅಸ್ಸಾಂ ರಾಜ್ಯದಲ್ಲಿ ಅಧ್ಯಯನ ಮಾಡಿ ಹೊಸನಗರದ ನಿಟ್ಟೂರು ಭಾಗದಲ್ಲಿ ಕಾರ್ಯರೂಪಕ್ಕೆ ತರುವ ಯೋಜನೆಗೆ ಮಲೆನಾಡಿನ ಎಲ್ಲಾ ಶಾಸಕರೂ ಪಕ್ಷಬೇಧ ಮರೆತು ಒಟ್ಟಾಗಿದ್ದಾರೆ. ರೈತರ ಬೆಳೆ ಉಳಿಸುವ ನಿಟ್ಟಿನಲ್ಲಿ ಇದು ಕಾರ್ಯಸಾಧುವಲ್ಲ, ಮಂಗಗಳನ್ನ ಕೂಡಿಡಲು ಸಾಧ್ಯವಿಲ್ಲ ಎಂಬುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ.