
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (Karnataka Industrial Area Development Board-KIADB) ಯಲ್ಲಿ ಅಸ್ಥಿತ್ವದಲ್ಲಿ ಇಲ್ಲದ ಹುದ್ದೆಯನ್ನು ಸೃಷ್ಟಿಸಿದ ವಿಚಾರ ಬೆಳಕಿಗೆ ಬಂದಿದೆ. ಈಗಾಗಲೇ ಹಲವಾರು ಅವ್ಯವಹಾರಗಳಿಗೆ ಕಾರಣೀಭೂತವಾಗಿರುವ KIADBಯ ಅವ್ಯವಾಹರದ ಕೊಳಚೆಯ ದುರ್ನಾತ ಮತ್ತಷ್ಟು ದಟ್ಟವಾಗಿ ಹಬ್ಬುತ್ತಿದೆ. ಈ ಬಾರಿ ಸುದ್ದಿಯಲ್ಲಿರುವವರು KIADBಯ ಪ್ರಧಾನ ವ್ಯವಸ್ಥಾಪಕರಾಗಿರುವ ಗಂಗಾಧರಯ್ಯನವರು.
Also Read: KIADB ಅಧಿಕಾರಿಗಳ ದಿವ್ಯ ನಿರ್ಲ್ಯಕ್ಷ; ಬೆಂಗಳೂರಿನ ಕೈ ತಪ್ಪಿದ ಮಹತ್ವದ ಯೋಜನೆ
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಜೋಟಿ ನಿರ್ದೇಶಕರಾಗಿದ್ದ ಗಂಗಾಧರಯ್ಯನವರು, KIADBಯ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (CBIC), ಬೆಂಗಳೂರು ಮುಂಬೈ ಆರ್ಥಿಕ ಕಾರಿಡಾರ್ (BMEC), ರಾಷ್ಟ್ರೀಯ ಕೈಗಾರಿಕಾ ಹೂಡಿಕೆ ವಲಯ (NIMZ), ಜಪಾನ್ ಇಂಡಸ್ಟ್ರಿಯಲ್ ಇಂಡಸ್ಟ್ರಿಯಲ್ ಟೌನ್ಶಿಪ್ ಸೇರಿದಂತೆ KIADBಯ 8 ಯೋಜನೆಗಳ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಅವರೊಂದಿಗೆ ಕಾರ್ಯದರ್ಶಿಯಾಗಿ ಮುದ್ದು ಕುಮಾರ್ ಅವರಿದ್ದರು.


ಸೇವಾ ಅರ್ಹತೆ ಮೇಲೆ, KIADBಯ ನೌಕರರಾಗಿದ್ದ ವಿ ಹೆಚ್ ಮಹೇಶ ಮತ್ತು ವಸಂತ ಕುಮಾರ್ ಎಂಬ ಇಬ್ಬರಿಗೆ ಕಾರ್ಯದರ್ಶಿಯಾಗಿ ಭಡ್ತಿ ಸಿಕ್ಕಿದಾಗ, ಮುದ್ದು ಕುಮಾರ್ ಅಥವಾ ಗಂಗಾಧರಯ್ಯ ತಮ್ಮ ಸ್ಥಾನವನ್ನು ತ್ಯಜಿಸಬೇಕಾದ ಅನಿವಾರ್ಯತೆ ಒದಗಿ ಬಂತು. ಗಂಗಾಧರಯ್ಯನವರು ಬೇರೆ ಇಲಾಖೆಯಿಂದ ಇಲ್ಲಿಗೆ ನಿಯೋಜಿತರಾಗಿದ್ದರಿಂದ ಅವರಿಗೆ ಗೃಹ ಇಲಾಖೆಗೆ ವರ್ಗಾಯಿಸಿ ಆದೇಶ ನೀಡಲಾಯಿತು.
ಈ ಸಂದರ್ಭದಲ್ಲಿ ಗಂಗಾಧರಯ್ಯನವರಿಗೆ ಲಾಭದಾಯಕವಾಗಿದ್ದಂತಹ KIADBಯನ್ನು ತೊರೆಯುವ ನೋವು ಉಂಟಾಗಿದ್ದು ಸಹಜ. ಇತರ ಇಲಾಖೆಗಳಲ್ಲಿ ಇಲ್ಲದಷ್ಟು ಹಣದ ಹೊಳೆ KIADBಯಲ್ಲಿ ಹರಿಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವಂತಹ ಸತ್ಯ. ಇಂತಹ ಸಂದರ್ಭದಲ್ಲಿ ಸೃಷ್ಟಿಯಾಗಿದ್ದೇ, ಪ್ರಧಾನ ವ್ಯವಸ್ಥಾಪಕ (General Manager) ಹುದ್ದೆ.
Also Read: ಬೀದಿ ದೀಪದ ಬೆಳಕಿನಲ್ಲಿ ಸರ್ಕಾರಿ ಬೊಕ್ಕಸವನ್ನು ಕಗ್ಗತ್ತಲೆಗೆ ತಳ್ಳಿದ KIADB
KIADBಯ ಹುದ್ದೆಗಳ ಪಟ್ಟಿಯಲ್ಲಿ ಇಲ್ಲದೇ ಇರುವಂತಹ ಒಂದು ಹುದ್ದೆ ಕೇವಲ ಓರ್ವ ವ್ಯಕ್ತಿಗಾಗಿ ಸೃಷ್ಟಿಯಾಗುತ್ತದೆ. KIADBಯ ಬೋರ್ಡ್ ಮೀಟಿಂಗ್ನಲ್ಲಿ ಈ ಕುರಿತು ಚರ್ಚೆಯಾದಾಗ ಇಂತಹ ಒಂದು ಹುದ್ದೆ ಸೃಷ್ಟಿಸಿದರೂ, ಅಲ್ಲಿ ಬರುವಂತಹ ವ್ಯಕ್ತಿ KAS ಅಧಿಕಾರಿಯಾಗಿರಬೇಕು ಅಥವಾ KIADB ನೌಕರರಾಗಿದ್ದು ಭಡ್ತಿಯನ್ನು ಪಡೆದಿರಬೇಕೆಂಬ ನಿಯಮಗಳನ್ನು ಹೇರಿತ್ತು, ಎಂದು KIADB ಮೂಲಗಳು ತಿಳಿಸಿವೆ. ಇದಾವುದೇ ಅರ್ಹತೆಗಳನ್ನು ಹೊಂದಿರದಂತಹ ಗಂಗಾಧರಯ್ಯನವರು ಪ್ರಧಾನ ವ್ಯವಸ್ಥಾಪಕರಾಗಿ ಹುದ್ದೆಯನ್ನು ಸ್ವೀಕರಿಸುತ್ತಾರೆಂದರೆ ಇದು ಸ್ವಂತ ಲಾಭಕ್ಕಾಗಿ ಮಾಡಿರುವಂತಹ ಕೆಲಸವಲ್ಲದೇ ಮತ್ತೇನು? ಎಂಬ ಪ್ರಶ್ನೆ ಮೂಡುತ್ತದೆ.
ರದ್ದುಗೊಳಿಸಿದ್ದ ಸ್ಥಾನ ಮತ್ತೆ ಅಸ್ಥಿತ್ವಕ್ಕೆ:
ಕೆಲವು ವರ್ಷಗಳ ಹಿಂದೆ ಪ್ರಧಾನ ವ್ಯವಸ್ಥಾಪಕ ಸ್ಥಾನ KIADBಗೆ ಅಗತ್ಯವಿಲ್ಲ ಎಂಬ ಕಾರಣಕ್ಕೆ ಆ ಸ್ಥಾನವನ್ನು ರದ್ದುಗೊಳಿಸಲಾಗಿತ್ತು. ಆದರೆ, ಇದ್ದಕ್ಕಿದ್ದ ಹಾಗೆ, ಈ ಸ್ಥಾನ ಮತ್ತೆ ಅಸ್ಥಿತ್ವಕ್ಕೆ ಬರಲು ಕಾರಣವೇನು ಎಂಬುದು ಎಲ್ಲಿಯೂ ಸ್ಪಷ್ಟವಾಗಿ ತಿಳಿಸಿಲ್ಲ. ಅದರಲ್ಲೂ, ರಾಜ್ಯ ಹಣಕಾಸು ಇಲಾಖೆಯ ಅನುಮತಿಯಿಲ್ಲದೇ, ಇಂತಹ ಒಂದು ಹುದ್ದೆಯನ್ನು ಸೃಷ್ಟಿಸಲಾಗಿದೆ.
ಕರ್ನಾಟಕ ಸರ್ಕಾರ 22 ಜುಲೈ 2019ರಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿರುವ ಹುದ್ದೆಗಳ ಪಟ್ಟಿ ಹಾಗೂ ಅವುಗಳನ್ನು ಅಲಂಕರಿಸುವವರ ಅರ್ಹತೆಗಳ ಪಟ್ಟಿಯಲ್ಲಿ ಪ್ರಧಾನ ವ್ಯವಸ್ಥಾಪಕ ಎಂಬ ಹುದ್ದೆಯೇ ಇಲ್ಲ. ಹಾಗಾದರೆ, ಚಿನ್ನದ ಮೊಟ್ಟೆಯನ್ನಿಡುವ KIADBಯಂತಹ ಕೋಳಿಯನ್ನು ತೊರೆಯಲು ಇಚ್ಚಿಸದ ಅಧಿಕಾರಿಯೊಬ್ಬರ ಸ್ವಹಿತಾಸಕ್ತಿಗಾಗಿ ಒಂದು ಸ್ಥಾನವನ್ನೇ ಅನಧಿಕೃತವಾಗಿ ಸೃಷ್ಟಿಸಲಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.



ಕೆಲಸ-ಕಾರ್ಯ ವಿಂಗಡನೆಯಲ್ಲೂ ತಾರತಮ್ಯ:
ಪ್ರತಿಯೊಬ್ಬ ಅಧಿಕಾರಿಯೂ ಹುದ್ದೆಯನ್ನು ಅಲಂಕರಿಸುವಾಗ ಅವರು ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಹಾಗೂ ಯೋಜನೆಗಳ ಪಟ್ಟಿಯನ್ನು ನೀಡಲಾಗುತ್ತದೆ. ಈಗಾಗಲೇ, ಕಾರ್ಯ ನಿರ್ವಹಿಸುತ್ತಿದ್ದ ಮೂರು ಕಾರ್ಯದರ್ಶಿಗಳ ಕೆಲಸವನ್ನು, ಹೊಸದಾಗಿ ಸೃಷ್ಟಿಸಿರುವ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಬರುವವರೊಂದಿಗೆ ಹಂಚಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಈ ರೀತಿ ಕೆಲಸಗಳ ವಿಂಗಡನೆ ಮಾಡುವಾಗ ಮೊದಲೇ ಇದ್ದಂತಹ ಕಾರ್ಯದರ್ಶಿಗಳು ಜವಾಬ್ದಾರಿ ವಹಿಸಿಕೊಂಡು ಬಂದಂತಹ ಪ್ರಮುಖ ಯೋಜನೆಗಳು ಗಂಗಾಧರಯ್ಯನವರ ಪಾಲಾಗಿವೆ.
Also Read: ಜಿಂದಾಲ್ಗೆ ಕಡಿಮೆ ದರದಲ್ಲಿ 3,666 ಎಕರೆ ಭೂಮಿಗೆ ಶುದ್ಧ ಕ್ರಯಪತ್ರ, ವಿವಾದ
ಉದಾಹರಣೆಗೆ, ಡಿಫೆನ್ಸ್ ಆಂಡ್ ಏರೋಸ್ಪೇಸ್ ಇಂಡಸ್ಟ್ರಿಯಲ್ ಪಾರ್ಕ್ ಆಂಡ್ ಹೌಸಿಂಗ್ ಏರಿಯಾ, ದೇವನಹಳ್ಳಿ ಇಲ್ಲಿನ ಭೂ ಹಂಚಿಕೆ ಪ್ರಕ್ರಿಯೆ, ದೊಡ್ಡಬಳ್ಳಾಪುರ, ಒಬ್ದೇವನಹಳ್ಳಿಯಂತಹ ಪ್ರಮುಖ ಕೈಗಾರಿಕಾ ಪ್ರದೇಶಗಳ ಹೊಣೆಗಾರಿಕೆ ಗಂಗಾಧರಯ್ಯನವರ ಪಾಲಿಗೆ ಬಂದಿವೆ. ಈಗಾಗಲೇ, ಸಾಕಷ್ಟು ಕೆಲಸಗಳು ಮುಗಿದಿರುವ ಎಲೆಕ್ಟ್ರಾನಿಕ್ ಸಿಟಿ ಫೇಸ್ 2 ಮತ್ತು ಇನ್ನು ಆರಂಭವಾಗಬೇಕಾಗಿರುವ ಫೇಸ್-3ಯ ಯೋಜನೆಗಳ ಹೊಣೆಗಾರಿಕೆ ಮುದ್ದು ಕುಮಾರ್ ಅವರಿಗೆ ದೊರೆತಿದೆ. ಬಿಡದಿ, ಹಾರೋಹಳ್ಳಿಯಲ್ಲಿರುವ ಕೈಗಾರಿಕಾ ಯೋಜನೆಗಳ ಹೊಣೆಗಾರಿಕೆ ಮಹೇಶ ಅವರಿಗೆ ದೊರೆತಿದ್ದರೆ, ಮೈಸೂರು, ಹಾಸನ ಮತ್ತು ಕಲಬುರ್ಗಿಯಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿನ ಭೂ ಹಂಚಿಕೆ ವಸಂತ ಕುಮಾರ್ ಅವರಿಗೆ ದೊರೆತಿದೆ.
ಪ್ರಮುಖವಾಗಿ ಹಣ ಹುಟ್ಟುವಂತಹ ಮತ್ತು ಹೆಚ್ಚಿನ ಪ್ರಾಮುಖ್ಯತೆ ಇರುವಂತಹ ಯೋಜನೆಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವಲ್ಲಿ ಗಂಗಾಧರಯ್ಯನವರು ಯಶಸ್ವಿಯಾಗಿದ್ದಾರೆ.





ಗಂಗಾಧರಯ್ಯ ಭ್ರಷ್ಟಾಚಾರ ಬಯಲು ಮಾಡಿದ ಜನಸ್ಪಂದನ ಸಭೆ:
ಗಂಗಾಧರಯ್ಯನವರ ಮೇಲೆ ಸುಖಾ ಸುಮ್ಮನೆ ಆರೋಪಗಳು ಕೇಳಿ ಬರುತ್ತಿಲ್ಲ. ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 28 ಡಿಸೆಂಬರ್ 2018ರಂದು ಜನಸ್ಪಂದನ ಸಭೆಗೆ ಬಂದಿದ್ದ ಒಬ್ಬರು ನೀಡಿದ ದೂರಿನಂತೆ, ದಾಬಸ್ಪೇಟೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ 20 ಎಕರೆ ಭೂ ಹಂಚಿಕೆ ವಿಚಾರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಚಾರವನ್ನು ಬಹಿರಂಗ ಪಡಿಸಲಾಗಿದೆ.
Also Read: ಜಿಂದಾಲ್ಗೆ ಉದಾರ ದರದಲ್ಲಿ ಭೂಮಿ; ಸಿಎಂಗೆ ಪಾಟೀಲ್ ಮತ್ತೊಂದು ತಕರಾರು ಪತ್ರ
“ದಾಬಸ್ಪೇಟೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಭೂ ಹಂಚಿಕೆ ವಿಚಾರವಾಗಿ ಮಾತನಾಡಲು ಗಂಗಾಧರಯ್ಯನವರನ್ನು ಭೇಟಿಯಾದಾಗ ರೂ. 1.5 ಕೋಟಿಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಲ್ಲಿ ಸಿಎಂ ಆಗಿರುವ ನಿಮಗೂ ಪಾಲು ನೀಡಬೇಕಿದೆ ಎಂದು ಹೇಳಿದ್ದಾರೆ,” ಎಂದು ದೂರಿನಲ್ಲಿ ಅಧಿಕೃತವಾಗಿ ದಾಖಲಿಸಲಾಗಿದೆ.

ಹೈಕೋರ್ಟ್ನಲ್ಲಿ ದೂರು ದಾಖಲು:
ಬೆಳಗಾವಿಯ ಬಸವರಾಜ ಯಲ್ಲಪ್ಪ ಭಗವತಿ ಎಂಬುವವರು ಗಂಗಾಧರಯ್ಯನವರಿಗೆ ಪ್ರಧಾನ ವ್ಯವಸ್ಥಾಪಕ ಹುದ್ದೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದಾರೆ.
ಒಟ್ಟಿನಲ್ಲಿ, ಸಾರ್ವಜನಿಕರ ಹಾಗೂ ರಾಜ್ಯದ ಒಳಿತಿಗಾಗಿ ಕೆಲಸ ನಿರ್ವಹಿಸಬೇಕಾಗಿದ್ದಂತಹ ಸರ್ಕಾರಿ ಅಧಿಕಾರಿಗಳು ಸಂಪೂರ್ಣ ಅಧಿಕಾರಾವಧಿಯನ್ನು ತಮ್ಮ ಕಿಸೆ ತುಂಬಿಸಿಕೊಳ್ಳಲು ಬಳಸಿಕೊಂಡಲ್ಲಿ, ರಾಜ್ಯದಲ್ಲಿ ಅಭಿವೃದ್ದಿ ಎನ್ನುವ ವಿಚಾರ ಮರೀಚಿಕೆಯಾಗುವುದರಲ್ಲಿ ಸಂಶಯವಿಲ್ಲ. ಅದರಲ್ಲೂ KIADBಯಲ್ಲಿ ನಡೆಯುವಂತಹ ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಯುವ ಅಗತ್ಯವೂ ಇದೆ. ಇಲ್ಲವಾದಲ್ಲಿ, KIADB ಭ್ರಷ್ಟಾಚಾರದ ಬೃಹತ್ ಕೂಪವಾಗಿ ಮಾರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.