ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನಾ- ಎನ್ ಸಿಪಿ ಮೈತ್ರಿಯಲ್ಲಿ ಬಿರುಕು ಮೂಡಿಸಿರುವ ಪ್ರಮುಖ ಕಾರಣಗಳಲ್ಲಿ ಒಂದಾದ ಭೀಮಾ ಕೋರೆಗಾಂವ್ ಪ್ರಕರಣದ ತನಿಖೆಯ ವಿಷಯದಲ್ಲಿ ಪೂನಾ ಪೊಲೀಸರ ಕೈವಾಡದ ಶಂಕೆ ಬಲವಾಗುತ್ತಿದೆ. ತನಿಖಾ ಪತ್ರಿಕೋದ್ಯಮದಲ್ಲಿ ಮುಂಚೂಣಿಯಲ್ಲಿರುವ ‘ದ ಕ್ಯಾರವಾನ್’ ಮಾಧ್ಯಮ , ಈ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಮಹತ್ವದ ವರದಿ ಪ್ರಕಟಿಸಿದ್ದು, ಬಂಧಿತ ಸಾಮಾಜಿಕ ಕಾರ್ಯಕರ್ತರ ಕುರಿತ ತನಿಖೆ ನಿಷ್ಪಕ್ಷಪಾತವಾಗಿ ನಡೆದಿಲ್ಲಎಂಬ ಅಭಿಪ್ರಾಯಗಳಿಗೆ ಇಂಬು ನೀಡಿದೆ.
ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ರೋನಾ ವಿಲ್ಸನ್ ಅವರ ಕಂಪ್ಯೂಟರಿನ ಹಾರ್ಡ್ ಡಿಸ್ಕ್ ತಪಾಸಣೆ ನಡೆಸಿ, ಅದರ ವಿವರಗಳನ್ನು ವಿಶ್ಲೇಷಣೆ ಮಾಡಿರುವ ವರದಿ ಪೂನಾ ಪೊಲೀಸರು ತನಿಖೆಯಲ್ಲಿ ಲೋಪ ಎಸಗಿರುವುದು ಮತ್ತು ಹಾರ್ಡ್ ಡಿಸ್ಕ್ ನಲ್ಲಿ ಮಾಲ್ ವೇರ್ ಪತ್ತೆಯಾಗಿರುವುದರ ನಡುವೆ ನಂಟಿದೆ ಎಂದು ಅಭಿಪ್ರಾಯಪಟ್ಟಿದೆ. ಅಂದರೆ, ತನಿಖೆ ನಿಷ್ಪಕ್ಷಪಾತವಾಗಿ ನಡೆದಿಲ್ಲ ಎಂಬುದಕ್ಕಿಂತ; ವಿಲ್ಸನ್ ಅವರ ಕಂಪ್ಯೂಟರಿಗೆ ಅವರಿಗೆ ಗೊತ್ತಿಲ್ಲದಂತೆ, ಮಾಲ್ ವೇರ್ ಬಿಟ್ಟು ಅಲ್ಲಿನ ಮಾಹಿತಿಯನ್ನು ತಿರುಚಲಾಗಿದೆ ಮತ್ತು ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಸಂಚು ಕೂಡ ನಡೆದಿದೆ ಎಂಬ ಆಘಾತಕಾರಿ ಸಂಗತಿಯನ್ನು ವರದಿ ಬಹಿರಂಗಪಡಿಸಿದೆ. ಅದರಲ್ಲೂ ಆಡಳಿತ ವ್ಯವಸ್ಥೆಯೊಂದು ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲು ಸೈಬರ್ ತಂತ್ರಜ್ಞಾನವನ್ನು ಯಾವ ಮಟ್ಟಿಗೆ ದುರುಪಯೋಗಪಡಿಸಿಕೊಳ್ಳಬಹುದು ಎಂಬ ದಿಗ್ಬ್ರಮೆ ಹುಟ್ಟಿಸುವ ಸಂಗತಿಗಳನ್ನೂ ಈ ತನಿಖಾ ವರದಿ ಬಹಿರಂಗಪಡಿಸಿದೆ ಎಂಬುದು ಗಮನಾರ್ಹ.
ಪ್ರಮುಖವಾಗಿ ಭೀಮಾ ಕೋರೆಗಾಂವ್ ಹಿಂಸಾಚಾರದ ಹಿನ್ನೆಲೆಯಲ್ಲಿ, ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರರ ವಿರುದ್ಧ ನಕ್ಸಲ್ ನಂಟು ಮತ್ತು ಪ್ರಧಾನಿ ಮೋದಿ ಹತ್ಯೆಯ ಸಂಚಿನ ಆರೋಪ ಹೊರಿಸಲಾಗಿದೆ. ಆ ಹಿನ್ನೆಲೆಯಲ್ಲಿಯೇ ನಗರನಕ್ಸಲರು ಎಂದೂ ಸಾಮಾಜಿಕ ಹೋರಾಟಗಾರರನ್ನು ಪೊಲೀಸರು ಬ್ರಾಂಡ್ ಮಾಡಿದ್ದರು. 2018ರ ಜನವರಿಯಲ್ಲಿ ಭೀಮಾ ಕೋರೆಗಾಂವ್ ಸಮಾವೇಶದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೂನಾ ಪೊಲೀಸರು ಆ ವರ್ಷದ ಏಪ್ರಿಲ್ 17ರಂದು ಬಂಧೀಖಾನೆ ಹಕ್ಕುಗಳ ಹೋರಾಟಗಾರ ರಾನಾ ವಿಲ್ಸನ್ ಅವರನ್ನು ಬಂಧಿಸಿದ್ದರು. ಕೆಲವು ತಿಂಗಳ ನಂತರ, ಪ್ರಧಾನಿ ಹತ್ಯೆ ಮತ್ತು ಕೇಂದ್ರ ಸರ್ಕಾರವನ್ನು ಬುಡಮೇಲು ಮಾಡುವ ನಕ್ಸಲರ ಸಂಚಿನ ಕುರಿತ ಪತ್ರವೊಂದು ವಿಲ್ಸನ್ ಅವರ ಕಂಪ್ಯೂಟರಿನ ಹಾರ್ಡ್ ಡ್ರೈವ್ ನಲ್ಲಿ ಸಿಕ್ಕಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದರು.
ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಮತ್ತು ನ್ಯಾಯಾಲಯ ಎಲ್ಲಾಆರೋಪಿಗಳಿಗೆ ನೀಡಿದ್ದ ಆ ಹಾರ್ಡ್ ಡಿಸ್ಕಿನ ಯಥಾ ಕ್ಲೋನ್ ಪಡೆದು ಅದರ ಸೈಬರ್ ಫೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಿದ್ದು, ಕಂಪ್ಯೂಟರಿಗೆ ನೇರ ಸಂಪರ್ಕ ಸಾಧಿಸದೇ ಇಮೇಲ್ ಮತ್ತಿತರ ಆನ್ ಲೈನ್ ಮಾಧ್ಯಮದ ಮೂಲಕವೇ ಅದಕ್ಕೆ ಮಾಲ್ ವೇರ್ ರವಾನಿಸಿ, ಆ ಮೂಲಕ ಕಂಪ್ಯೂಟರಿನಲ್ಲಿ ವಿಲ್ಸನ್ ಅವರಿಗೆ ಗೊತ್ತಾಗದಂತೆ ಫೈಲುಗಳನ್ನು ರಚಿಸುವ, ತಿದ್ದುಪಡಿ ಮಾಡುವ ಮತ್ತು ನಾಶ ಮಾಡುವ ಕೆಲಸ ಮಾಡಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಪ್ರಮುಖ ಸಾಕ್ಷ್ಯವಾಗಿ ಉಲ್ಲೇಖಿಸಿರುವ ಈ ಹಾರ್ಡ್ ಡಿಸ್ಕಿನ ಮಾಹಿತಿಯನ್ನು ತಿರುಚುವ ಯತ್ನವಾಗಿ ಈ ಮಾಲ್ ವೇರ್ ಬಳಸಲಾಗಿದೆ. ಅದಲ್ಲದೆ ಜೊತೆಗೆ ಈ ಕಂಪ್ಯೂಟರಿಗೆ ಸಂಬಂಧಿಸಿದಂತೆ ಇನ್ನೂ ಹಲವು ವಿಷಯಗಳಲ್ಲಿ ಸಾಕ್ಷ್ಯಗಳನ್ನು ತಿರುಚುವ ಯತ್ನ ನಡೆದಿರುವುದು ಆ ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ‘ಕ್ಯಾರವಾನ್’ ವರದಿ ಸಂಪೂರ್ಣ ಮಾಹಿತಿ ಸಹಿತ ವಿವರ ನೀಡಿದೆ.
ಕಳೆದ ವರ್ಷದ ಜೂನ್ ನಲ್ಲಿ ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ವಕೀಲರಾದ ಸುರೇಂದ್ರ ಗಾದಿಲಿಂಗ್ ಅವರ ಹಾರ್ಡ್ ಡಿಸ್ಕ್ ಮತ್ತು ವಿಲ್ಸನ್ ಅವರ ಹಾರ್ಡ್ ಡಿಸ್ಕಿನಲ್ಲಿನ ‘ನಕ್ಸಲ್ ಸಂಪರ್ಕ’ ಕುರಿತ ಪತ್ರಗಳನ್ನು ಪೊಲೀಸರು ಪ್ರಕರಣದ ಪ್ರಮುಖ ಸಾಕ್ಷ್ಯಗಳು ಎಂದು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿಂತೆ ಈವರೆಗೆ 9 ಮಂದಿ ಸಾಮಾಜಿಕ ಹೋರಾಟಗಾರರು, ಲೇಖಕರು, ವಕೀಲರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಈ ಪತ್ರಗಳಲ್ಲಿ ಉಲ್ಲೇಖಿತರಾಗಿದ್ದಾರೆ ಅಥವಾ ಸ್ವತಃ ಆ ಪತ್ರಗಳನ್ನು ಅವರೇ ಬರೆದಿದ್ದಾರೆ ಎಂಬುದು ಆ ಬಂಧನಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಗಾದಿಲಿಂಗ್ ಅವರ ಡಿಸ್ಕ್ ಬಗ್ಗೆಯೂ ಸೈಬರ್ ಫೋರೆನ್ಸಿಕ್ ಪರೀಕ್ಷೆ ನಡೆಸಿದ್ದ ‘ಕ್ಯಾರವಾನ್’, ಆ ಡಿಸ್ಕ್ನ ಮಾಹಿತಿಯನ್ನು ಕೂಡ ತಿರುಚಲಾಗಿದ್ದು, ಅದರಲ್ಲಿ ಪತ್ರೆಯಾಗಿರುವ ಪತ್ರಗಳನ್ನು ಗಾದಿಲಿಂಗ್ ಅವರ ಗಮನಕ್ಕೆ ಬರದಂತೆ ಇತರರು ಅಳವಡಿಸಿರಬಹುದು ಎಂದು ಕಳೆದ ಡಿಸೆಂಬರ್ ವರದಿಯಲ್ಲಿ ಹೇಳಿತ್ತು.
ಆದರೆ, ಗಾದಿಲಿಂಗ್ ಪ್ರಕರಣದಲ್ಲಿ ಅವರ ಕಂಪ್ಯೂಟರಿನ ಹಾರ್ಡ್ ಡಿಸ್ಕನ್ನು ಇಡಿಯಾಗಿ ಹಾಜರುಪಡಿಸುವ ಬದಲಿಗೆ, ಪೊಲೀಸರು ತಮ್ಮ ಆರೋಪಕ್ಕೆ ಸಂಬಂಧಿಸಿದ ಕಡತಗಳನ್ನು ಮಾತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಹಾಗಾಗಿ, ಆ ಕಂಪ್ಯೂಟರಿನ ಮಾಹಿತಿ ತಿದ್ದುಪಡಿಯ ಬಗ್ಗೆ ಕರಾರುವಕ್ಕಾಗಿ ಹೇಳುವುದು ಸಾಧ್ವವಾಗಿರಲಿಲ್ಲ. ಆದರೆ, ವಿಲ್ಸನ್ ಪ್ರಕರಣದಲ್ಲಿ ಪೂನಾ ಪೊಲೀಸರು, ಅವರ ಕಂಪ್ಯೂಟರಿನ ಹಾರ್ಡ್ ಡಿಸ್ಕಿನ ಯಥಾ ಕ್ಲೋನ್ ಪ್ರತಿ ಹಾಜರಪಡಿಸಿದ್ದಾರೆ. ಹಾಗಾಗಿ ಸೈಬರ್ ಫೋರೆನ್ಸಿಕ್ ಪರೀಕ್ಷೆಯಲ್ಲಿ ಕರಾರುವಕ್ಕಾಗಿ ಡಿಸ್ಕಿನಲ್ಲಿ ಮಾಲ್ ವೇರ್ ಇರುವುದು ಪತ್ತೆಯಾಗಿದೆ. ವಿನ್ 32:ಟ್ರೋಜನ್-ಜೆನ್(Win32:Trojan-Gen) ಎಂಬ ಮಾಲ್ ವೇರ್ ಪತ್ತೆಯಾಗಿದ್ದು, ಅದರ ಮೂಲಕ ಕಂಪ್ಯೂಟರಿನ ಪಾಸ್ ವರ್ಡ್, ಯೂಸರ್ ನೇಮ್ಗಳನ್ನು ಕದಿಯುವುದು ಸಾಧ್ಯವಾಗಿದೆ. ಅಲ್ಲದೆ ಬಹಳ ಮುಖ್ಯವಾಗಿ ರಿಮೋಟ್ ಆಗಿಯೇ ಕಂಪ್ಯೂಟರಿನ ಸಂಪರ್ಕ ಸಾಧಿಸಿ ಅದರಲ್ಲಿ ಅದರ ಬಳಕೆದಾರರಿಗೆ ಗೊತ್ತಿಲ್ಲದಂತೆ ಫೈಲ್ ಅಳಡಿಸುವುದು, ತಿದ್ದುವುದು ಸಾಧ್ಯವಾಗಿದೆ!
ಮಾಲ್ ವೇರ್ ನ ‘ಎಕ್ಸಿಕ್ಯೂಟಬಲ್ ಫೈಲ್’ ಕಂಪ್ಯೂಟರ್ ಆನ್ ಮಾಡುತ್ತಲೇ ಲಾಂಚ್ ಆಗುತ್ತದೆ ಮತ್ತು ಪೊಲೀಸರು ಅದನ್ನು ವಶಪಡಿಸಿಕೊಳ್ಳುವವರೆಗೆ ಅದು ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಲೇ ಇತ್ತು ಮತ್ತು ಅದು ಇರುವುದು ವಿಲ್ಸನ್ ಅವರಿಗೆ ಗೊತ್ತೇ ಇರಲಿಲ್ಲ!
ಕಳೆದ ವರ್ಷದ ಡಿಸೆಂಬರಿನಲ್ಲಿಯೇ ಭೀಮಾ ಕೋರೆಗಾಂವ್ ಪ್ರಕರಣದ ವಕೀಲರು, ಹೋರಾಟಗಾರರಿಗೆ ಇಂತಹ ಮಾಲ್ ವೇರ್ ಒಳಗೊಂಡ ಅನಾಧೇಯ ಇಮೇಲ್ ಮತ್ತು ಮತ್ತಿತರ ಸಂದೇಶಗಳು ಬಂದಿದ್ದವು ಎಂಬುದನ್ನು ‘ದ ವೈರ್’ ಸುದ್ದಿತಾಣ ವರದಿ ಮಾಡಿತ್ತು ಎಂಬುದನ್ನು ಸ್ಮರಿಸಬಹುದು. ಅಂತಹ ಇಮೇಲ್ ಮತ್ತು ಸಂದೇಶಗಳನ್ನು ವಿಶ್ಲೇಷಿಸಿದ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಆಮ್ನೆಸ್ಟಿ ಟೆಕ್ ವಿಭಾಗ, ಇಮೇಲ್ ಮೂಲಕವೇ ಆ ಮಾಲ್ ವೇರ್ ಕಳಿಸಲಾಗಿದೆ. ಪತ್ರಕರ್ತರು ಮತ್ತು ಹೋರಾಟಗಾರರನ್ನು ಗುರಿಯಾಗಿಸಿಕೊಂಡೇ ಈ ಮಾಲ್ ವೇರ್ ತಯಾರು ಮಾಡಲಾಗಿದೆ ಎಂದು ಹೇಳಿತ್ತು. ಅಲ್ಲದೆ, ಒಮ್ಮೆ ನೀವು ಇಂತಹ ಮಾಲ್ ವೇರ್ ಹೊಂದಿರುವ ಇಮೇಲ್ ಅಥವಾ ಇನ್ನಾವುದೇ ಸಂದೇಶವನ್ನು ನಿಮ್ಮ ಕಂಪ್ಯೂಟರಿನಲ್ಲಿತೆರೆದರೆ( ಓಪನ್) ಮಾಡಿದರೆ, ದಾಳಿಕೋರರು ನಿಮ್ಮ ಕಂಪ್ಯೂಟರಿನ ಸಂಪೂರ್ಣ ಸಂಪರ್ಕ ಹೊಂದುತ್ತಾರೆ ಮತ್ತು ನಿಮ್ಮ ಕಡತಗಳು, ಕ್ಯಾಮರಾಗಳನ್ನು ಬಳಸಬಹುದು, ಸ್ಕ್ರೀನ್ ಶಾಟ್ ತೆಗೆಯಬಹುದು. ಅಷ್ಟೇ ಅಲ್ಲದೆ, ನೀವು ನಿಮ್ಮ ಕೀಬೋರ್ಡಿನಲ್ಲಿ ಕೀ ಮಾಡುವ ಪ್ರತಿಯೊಂದನ್ನು ಆತ ದೂರದಲ್ಲೇ ಕೂತು ರೆಕಾರ್ಡ್ ಕೂಡ ಮಾಡಿಕೊಳ್ಳಬಲ್ಲ! ಎಂದು ‘ಆಮ್ನೆಸ್ಟಿ ಟೆಕ್’ ಆ ಮಾಲ್ ವೇರ್ ಮಹಿಮೆ ಬಣ್ಣಿಸಿತ್ತು!
ಹಾಗೇ, ವಿಂಡೋಸ್ ಎಕ್ಸ್ ಫ್ಲೋರರ್ ನಲ್ಲಿನ ಯಾವುದೇ ಕಡತಗಳ ಬಳಕೆಯ ಕುರಿತು ತಾನೇತಾನಾಗಿ ಎಲ್ಲಾ ಚಟುವಟಿಕೆಯನ್ನು ದಾಖಲು ಮಾಡಿಕೊಳ್ಳುವ ಹಾರ್ಡ್ ಡಿಸ್ಕ್ ನ ‘ಶೆಲ್ ಬಗ್’ ಮಾಹಿತಿ ವಿಶ್ಲೇಷಣೆ ನಡೆಸುವುದು ಸಾಧ್ಯ. ಆ ವಿಶ್ಲೇಷಣೆಯ ಮೂಲಕ ಪೂನಾ ಪೊಲೀಸರು ತಮ್ಮ ಸಾಕ್ಷ್ಯವಾಗಿ ಪರಿಗಣಿಸಿರುವ ನಿರ್ದಿಷ್ಟ ಕಡತಗಳನ್ನು ವಿಲ್ಸನ್ ಕೊನೆಯ ಬಾರಿ ಬಳಸಿದ್ದು ಯಾವಾಗ ಎಂಬುದನ್ನು ತಿಳಿಯಲು ಸಾಧ್ಯವಿತ್ತು. ಆದರೆ, ಹಾರ್ಡ್ ಡಿಸ್ಕ್ ನಲ್ಲಿನ ಆ ;ಶೆಲ್ ಬಗ್’ ಮಾಹಿತಿಯನ್ನು ಡಿಲೀಟ್ ಮಾಡಲಾಗಿದೆ. ತಮ್ಮ ವಿರುದ್ಧ ಪೊಲೀಸರು ಸಾಕ್ಷ್ಯವಾಗಿ ಪರಿಗಣಿಸಿರುವ ಕಡತಗಳನ್ನೇ ಡಿಲೀಟ್ ಮಾಡದೇ ಉಳಿಸಿರುವ ವಿಲ್ಸನ್ ಅವರು, ಸ್ವತಃ ಶೆಲ್ ಬಗ್ ಮಾಹಿತಿ ಅಳಿಸಿರುವ ಸಾಧ್ಯತೆ ತೀರಾ ಕಡಿಮೆ. ಆ ಮಾಹಿತಿ ಡಿಲೀಟ್ ಆಗದೇ ಇದ್ದಿದ್ದರೆ, ಪೊಲೀಸರು ಉಲ್ಲೇಖಿಸಿರುವ ಪತ್ರ ಸೇರಿದಂತೆ ನಿರ್ದಿಷ್ಟ ಕಡತಗಳನ್ನು ವಿಲ್ಸನ್ ಸ್ವತಃ ಸೃಷ್ಟಿಸಿದ್ದರೆ? ಅಥವಾ ಅವರಿಗೆ ಗೊತ್ತಿಲ್ಲದಂತೆ ಇನ್ನಾರೋ ಸೃಷ್ಟಿಸಿದ್ದಾರೆಯೆ ಎಂಬುದನ್ನು ನಿಖರವಾಗಿ ಪತ್ತೆ ಮಾಡುವುದು ಸಾಧ್ಯವಿತ್ತು. ಹಾಗಾಗಿ ನಿರ್ದಿಷ್ಟವಾಗಿ ಶೆಲ್ ಬಗ್ ಮಾಹಿತಿ ಡಿಲೀಟ್ ಮಾಡಿರುವುದರ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆ ಮತ್ತೆ ಪೊಲೀಸರತ್ತಲೇ ಬೊಟ್ಟುಮಾಡುತ್ತಿದೆ!
ಇದೇ ರೀತಿಯಲ್ಲಿ; ತನಿಖಾ ಸಂಸ್ಥೆಯೊಂದು ಎಸಗಿರುವ ಕಿತಾಪತಿಯನ್ನು ಬೆತ್ತಲುಮಾಡಬಹುದಾಗಿದ್ದ ಹಲವು ಮಹತ್ವದ ಮಾಹಿತಿಯನ್ನು ವಿಲ್ಸನ್ ಕಂಪ್ಯೂಟರಿನ ಹಾರ್ಡ್ ಡಿಸ್ಕಿನಿಂದ ಅಳಿಸಿಹಾಕಲಾಗಿದೆ. ಅಂತಹ ಮತ್ತೊಂದು ನಿದರ್ಶನವೆಂದರೆ; ಕಂಪ್ಯೂಟರಿನ ರನ್ ಕಮಾಂಡ್ ಕುರಿತ ಕಂಪ್ಯೂಟರಿನ ರಿಜಿಸ್ಟ್ರಿಯನ್ನು ಕೂಡ ಡಿಲೀಟ್ ಮಾಡಿರುವುದು. ರನ್ ಕಮಾಂಡ್ ಬಳಸಿ ತೆರೆದಿರುವ ಕಡತಗಳು ಮತ್ತು ಅವುಗಳ ಬಳಕೆಯ ಕುರಿತ ಮಾಹಿತಿ ರಿಜಿಸ್ಟ್ರಿಯಲ್ಲಿ ದಾಖಲಾಗಿರುತ್ತದೆ. ಆ ಮಾಹಿತಿಯ ಲಭ್ಯವಿದ್ದರೆ ಕಂಪ್ಯೂಟರ್ ಬಳಕೆ ಮತ್ತು ಅದರಲ್ಲಿ ಮಾಲ್ ವೇರ್ ನಂತಹ ಪ್ರೋಗ್ರಾಮ್ ಬಳಕೆಯ ಬಗ್ಗೆ ಖಚಿತ ಮಾಹಿತಿ ದೊರೆಯುತ್ತಿತ್ತು. ತಾನೇತಾನಾಗಿ ಡಿಲೀಟ್ ಆಗದ ಆ ಮಹತ್ವದ ರಿಜಿಸ್ಟ್ರಿಯನ್ನು ಕೂಡ ಡಿಲೀಟ್ ಮಾಡಿದ್ದು ಯಾರು ಎಂಬುದು ಈಗಿನ ಪ್ರಶ್ನೆ! ಯಾಕೆಂದರೆ, ಆ ಕಾರ್ಯವನ್ನು ಸಾಮಾನ್ಯ ಕಂಪ್ಯೂಟರ್ ಬಳಕೆದಾರರು ಮಾಡಲಾಗದು. ಅದಕ್ಕೆ ಹೆಚ್ಚಿನ ಪರಿಣತಿ ಬೇಕಾಗುತ್ತದೆ. ಹಾಗಾಗಿ ಕಂಪ್ಯೂಟರಿನಲ್ಲಿ ನಡೆಸಿರುವ ಕುಕೃತ್ಯಗಳನ್ನು ಮುಚ್ಚಿಹಾಕುವ ಉದ್ದೇಶದಿಂದಲೇ ಆ ರಿಜಿಸ್ಟ್ರಿಯನ್ನು ಅಳಿಸಿಹಾಕಿರಬಹುದು ಎಂದು ವರದಿ ಹೇಳಿದೆ.
ಹಾಗೆಯೇ ಕಂಪ್ಯೂಟರ್ ಹಾರ್ಡ್ ಡಿಸ್ಕಿನಲ್ಲಿ ಅಳಿಸಿಹೋಗಿರುವ ಮತ್ತೊಂದು ಮಹತ್ವದ ಮಾಹಿತಿ ಸರ್ಚ್ ಸೌಲಭ್ಯ ಬಳಸಿ ತೆರೆದಿರುವ ಕಡತಗಳ ಮಾಹಿತಿ! ಕಂಪ್ಯೂಟರಿನ ಸ್ಟಾರ್ಟ್ ಬಟನ್ ಮೂಲಕ ಸರ್ಚ್ ಆಯ್ಕೆಯ ಬಳಸಿ ತೆರೆದ ಕಡತಗಳ ಮಾಹಿತಿ ಇದ್ದಿದ್ದರೆ ನಿರ್ದಿಷ್ಟ ಕಡತಗಳನ್ನು ಬಳಸಲು ವಿಲ್ಸನ್ ಯಾವಾಗ ಸರ್ಚ್ ಆಯ್ಕೆ ಬಳಸಿದ್ದರು ಮತ್ತು ಯಾವ ಮಹತ್ವದ ಕಡತಗಳನ್ನು ಹಾಗೆ ತೆರೆದಿದ್ದರು ಎಂಬುದನ್ನು ತಿಳಿಯಬಹುದಾಗಿತ್ತು. ಆ ಮೂಲಕ ಪೊಲೀಸರು ಆರೋಪಪಟ್ಟಿಯಲ್ಲಿ ಪ್ರಸ್ತಾಪಿಸಿರುವ ಕಡತಗಳನ್ನು ಅವರು ಬಳಸಿದ್ದರೆ ಎಂಬುದಕ್ಕೂ ಸಾಕ್ಷ್ಯ ದೊರೆಯುತ್ತಿತ್ತು. ಆದರೆ ಆ ಮಾಹಿತಿ ಕೂಡ ಅಳಿಸಿಹೋಗಿದೆ. ಈ ವಿಷಯದಲ್ಲಿಯೂ ಶಂಕೆಯ ಬೆರಳು ಪೊಲೀಸರತ್ತಲೇ ಚಾಚುತ್ತದೆ. ಏಕೆಂದರೆ ತಮ್ಮ ವಿರುದ್ಧದ ಆರೋಪಕ್ಕೆ ಬಳಸಲಾಗಿರುವ ಕಡತಗಳನ್ನು ಡಿಲೀಟ್ ಮಾಡದೇ ಉಳಿಸಿದ ವಿಲ್ಸನ್, ಈ ಮಾಹಿತಿಯನ್ನು ಮಾತ್ರ ಯಾಕೆ ಡಿಲೀಟ್ ಮಾಡುತ್ತಿದ್ದರು ಎಂಬ ತಾರ್ಕಿಕ ಪ್ರಶ್ನೆ ಇದೆ.
ಮತ್ತೊಂದು ಮಹತ್ವದ ಸಂಗತಿಯೆಂದರೆ; ಹಾರ್ಡ್ ಡಿಸ್ಕಿನಲ್ಲಿ ಇರುವ ಪತ್ರಗಳೆಲ್ಲಾ ಬಹುತೇಕ ಪಿಡಿಎಫ್ ನಮೂನೆಯಲ್ಲಿವೆ. ಪಿಡಿಎಫ್ ಕಡತ ಓದಲ ಬಳಸುವ ಅಡೋಬ್ ಆಕ್ರೋಬಾಟ್ ರೀಡರ್ ಬಳಸಿ ಆ ಕಡತಗಳು ಮೂಲತಃ ಯಾವ ತಂತ್ರಾಂಶದಲ್ಲಿ ರಚನೆಯಾಗಿದ್ದವು ಎಂಬುದನ್ನು ಕಂಡುಹಿಡಿಯಬಹುದು. ಪೊಲೀಸರು ಉಲ್ಲೇಖಿಸಿರುವ ಪತ್ರ ಮತ್ತಿತರ ಕಡತಗಳನ್ನು ಅದರಲ್ಲಿ ಪರಿಶೀಲಿಸಿದಾಗ ವಿಲ್ಸನ್ ಬರೆದಿದ್ದಾರೆ ಎಂದು ಆರೋಪಿಸಿರುವ ಪತ್ರಗಳನ್ನು ಮೈಕ್ರೋಸಾಫ್ಟ್ ವರ್ಡ್ ನ 2010ನೇ ಆವೃತ್ತಿಯಲ್ಲಿ ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ವಿಲ್ಸನ್ ಹೊಂದಿದ್ದ ಏಕೈಕ ಕಂಪ್ಯೂಟರಿನಲ್ಲಿ ಇದ್ದದ್ದು ಮೈಕ್ರೋಸಾಫ್ಟ್ ವರ್ಡ್ 2007 ಆವೃತ್ತಿ ಮಾತ್ರ. ಅಲ್ಲದೆ ಕಂಪ್ಯೂಟರಿನ ಹಿಸ್ಟರಿಯಲ್ಲಿ ಕೂಡ ಯಾವುದೇ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ವರ್ಡ್-2010 ಬಳಕೆಯಾದ ಮಾಹಿತಿ ಇಲ್ಲ!
ಇದು, ಇದೀಗ ಹಾರ್ಡ್ ಡಿಸ್ಕ್ ವಿಶ್ಲೇಷಣೆಯಲ್ಲಿ ಕಂಡುಬಂದಿರುವ ಆಘಾತಕಾರಿ ಸಂಗತಿಗಳು. ನೇರವಾಗಿ ಪೂನಾ ಪೊಲೀಸರತ್ತಲೇ ಬೊಟ್ಟುಮಾಡುವ ಈ ಎಲ್ಲಾ ಪಿತೂರಿಗಳ ಹೊರತಾಗಿಯೂ, ಹಾರ್ಡ್ ಡಿಸ್ಕ್ ವಶಪಡಿಸಿಕೊಳ್ಳುವಾಗ ಕೂಡ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿ ಅನುಸರಿಸಲೇಬೇಕಾದ ಪ್ರೋಟೋಕಾಲ್ ಕೂಡ ಗಾಳಿಗೆ ತೂರಿದ್ದಾರೆ ಎಂಬುದನ್ನು ಕ್ಯಾರವಾನ್ ಕಳೆದ ಡಿಸೆಂಬರ್ ವರದಿಯಲ್ಲೇ ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು. ಮಹತ್ವದ ಸಾಕ್ಷ್ಯಗಳ ತಿರುಚುವಿಕೆ ಅಥವಾ ನಾಶದ ಸಾಧ್ಯತೆಯನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಡಿಜಿಟಲ್ ಸಾಕ್ಷ್ಯ ಸಂಗ್ರಹದ ವೇಳೆ ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮಗಳನ್ನು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಆ ಪೈಕಿ ಪ್ರಮುಖವಾದುದು, ಸಾಕ್ಷ್ಯಗಳನ್ನು ವಶಪಡಿಸಿಕೊಂಡ ಕ್ಷಣವೇ, ಅದೇ ಜಾಗದಲ್ಲಿ ಹಾರ್ಡ್ ಡಿಸ್ಕ್, ಮೆಮೊರಿ ಕಾರ್ಡ್ ಮುಂತಾದವುಗಳ ಕ್ಲೋನಿಂಗ್- ಯಥಾ ನಕಲು- ಪ್ರತಿ ತಯಾರಿಸಬೇಕು. ಜೊತೆಗೆ ಆ ಡಿವೈಸ್(ಎಲೆಕ್ಟ್ರಾನಿಕ್ ಉಪಕರಣ) ಮಾಲೀಕರಾದ ಆರೋಪಿಗಳಿಗೆ, ಅವುಗಳ ಎಲೆಕ್ಟ್ರಾನಿಕ್ ಸೀಲ್ ಆಗಿ ಕಾರ್ಯನಿರ್ವಹಿಸುವ ‘ಹ್ಯಾಷ್ ವ್ಯಾಲ್ಯೂ’ (ನ್ಯೂಮರಿಕ್ ಕೋಡ್)ನೀಡಬೇಕು. ಹಾಗೆ ಹ್ಯಾಷ್ ವ್ಯಾಲ್ಯೂ ಕ್ರಿಯೇಟ್ ಆದ ಬಳಿಕ, ಆ ಉಪಕರಣಗಳ ಬಳಕೆಯಾದರೆ ಕೂಡಲೇ ಆ ಹ್ಯಾಷ್ ವ್ಯಾಲ್ಯೂ ಬದಲಾಗುತ್ತದೆ. ಕೋಡ್ ಬದಲಾವಣೆಯಾದಲ್ಲಿ ಆ ಉಪಕರಣದ ಮಾಹಿತಿ ತಿರುಚುವ ಪ್ರಯತ್ನ ನಡೆದಿದೆ ಎಂಬುದು ತಿಳಿಯುತ್ತದೆ.
ಆದರೆ, ಪೂನಾ ಪೊಲೀಸರು, 2018ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಪೊಲೀಸರು ವಿಲ್ಸನ್ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದರು. ಆದರೂ ಅಂದು ಪೊಲೀಸರು ವಿಲ್ಸನ್ ಅವರಿಗೆ ಹಾರ್ಡ್ ಡಿಸ್ಕಿನ ‘ಹ್ಯಾಷ್ ವ್ಯಾಲ್ಯೂ’ ನೀಡಿರಲಿಲ್ಲ. ಬಳಿಕ ಸುಮಾರು ಆರು ತಿಂಗಳ ಬಳಿಕ ಅಕ್ಟೋಬರಿನಲ್ಲಿ ಆ ಮಾಹಿತಿ ನೀಡಿದ್ದರು! ಪೂನಾದ ಪ್ರಾದೇಶಿಕ ಫೋರೆನ್ಸಿಕ್ ಲಾಬ್ ನೀಡಿದ ವರದಿಯಲ್ಲಿ ಆ ಹ್ಯಾಷ್ ವ್ಯಾಲ್ಯೂ ನೀಡಿದ್ದರೂ, ಆ ವರದಿಯಲ್ಲಿ ಕ್ಯಾರವಾನ್ ಉಲ್ಲೇಖಿಸಿರುವ ಮಾಲ್ ವೇರ್ ಬಗ್ಗೆಯಾಗಲೀ, ಕಂಪ್ಯೂಟರಿನಲ್ಲಿ ಡಿಲೀಟ್ ಆಗಿರುವ ಮಹತ್ವದ ಮಾಹಿತಿಗಳ ಬಗ್ಗೆಯಾಗಲೀ ಯಾವುದೇ ಉಲ್ಲೇಖವಿರಲಿಲ್ಲ! ಈ ಬಗ್ಗೆ ವಿವರ ಕೇಳಿ ಕ್ಯಾರವಾನ್ ಕಳಿಸಿದ ಪ್ರಶ್ನಾವಳಿಗೆ ಲಾಬ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ಹೇಳಿದೆ!
ಅಂದರೆ, ವಿಲ್ಸನ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಮಾಲ್ ವೇರ್ ಅಸ್ತ್ರ ಬಳಸಲಾಗಿದೆ ಮತ್ತು ಆ ಕುತಂತ್ರವನ್ನು ನ್ಯಾಯಾಲಯದ ಮುಂದೆ ಬಯಲಿಗೆಳೆಯಲು ಸಾಕ್ಷ್ಯವಾಗಬಹುದಾಗಿದ್ದ ಎಲ್ಲಾ ಮಹತ್ವದ ಮತ್ತು ನಿರ್ಣಾಯಕ ಮಾಹಿತಿಯನ್ನು ಕಂಪ್ಯೂಟರಿನಿಂದ ಅಳಿಸಿಹಾಕಲಾಗಿದೆ ಎಂಬ ದಿಕ್ಕಿನಲ್ಲಿ ‘ಕ್ಯಾರವಾನ್’ ವರದಿ ಸ್ಪಷ್ಟವಾಗಿ ಬೆಳಕು ಚೆಲ್ಲಿದೆ. ಈ ನಡುವೆ, ಪ್ರಕರಣದ ತನಿಖೆಯ ನ್ಯಾಯೋಚಿತವಾಗಿ ನಡೆದಿಲ್ಲ, ಇಡೀ ಪ್ರಕರಣದ ಹಿಂದೆ ಷಢ್ಯಂತ್ರದ ಸುಳಿವಿದೆ ಎಂದು ಎನ್ ಸಿಪಿ ನಾಯಕ ಶರದ್ ಪವಾರ್ ಹೇಳಿದ ಬೆನ್ನಲ್ಲೇ ಕೇಂದ್ರ ಸರ್ಕಾರ, ಪ್ರಕರಣದ ತನಿಖೆಯನ್ನು ಎನ್ ಐಎ ಗೆ ವಹಿಸಿದೆ. ಆ ಮೂಲಕ ಕೋರೆಗಾಂವ್ ಗಲಭೆ ಹಿಂದಿನ ಅಸಲೀ ಪಿತೂರಿಗಾರರು ಎಂಬ ಆರೋಪ ಹೊತ್ತಿರುವ ಪ್ರಭಾವಿ ಹಿಂದುತ್ವವಾದಿ ನಾಯಕರಾದ ಮಿಲಿಂದ್ ಏಕಭೋಟೆ ಮತ್ತು ಶಂಭಾಜಿ ಭಿಡೆ ಅವರ ರಕ್ಷಣೆಯ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ನಡುವೆ ಪ್ರಕರಣದ ತನಿಖೆಗೆ ಎಸ್ ಐಟಿ ರಚನೆಯಾಗಬೇಕು ಎಂದು ಎನ್ ಸಿಪಿ ಪಟ್ಟು ಹಿಡಿದಿದೆ!