ರಾಜ್ಯ ಸರ್ಕಾರ ಅಗತ್ಯವಿರುವ ವಿಷಯವನ್ನು ಚರ್ಚಿಸುವುದು ಬಿಟ್ಟು ಅನಗತ್ಯ ವಿಚಾರಗಳನ್ನು ಕೈಗೆತ್ತಿಕೊಂಡು ದುಂದುವೆಚ್ಚ ಮಾಡುತ್ತಿದೆ. ಹಂಪಿ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರವು ಹೆಚ್ಚು ಅನುದಾನ ನೀಡದ ಹಿನ್ನಲೆ ಪುರಾತನ ಕನ್ನಡ ವಿವಿ ಸಂಕಷ್ಟಕ್ಕೆ ಎದುರಾಗಿ ವಿವಿ ಮುಚ್ಚುವಂತಹ ಸ್ಥಿತಿಗೆ ಬಂದು ತಲುಪಿರುವುದು ದುರಾದೃಷ್ಟಕರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ನಾಡಿನ ಇತರ ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದ ಸಿದ್ಧರಾಮಯ್ಯ, ಪತ್ರದಲ್ಲಿ ಸರ್ಕಾರದ ಕೆಲವು ನಡೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2017 ರಲ್ಲಿ ವಿವಿ ಗೆ ಹಿಂದಿನ 25 ಕೋಟಿ 15 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ವರ್ಷ ಕೇವಲ 50 ಲಕ್ಷ ಬಿಡುಗಡೆ ಮಾಡುವುದಾಗಿ ಹೇಳಿದ್ದರೂ, ಇಲ್ಲಿಯವರೆಗೆ ಬಿಡುಗಡೆಯಾಗಿರುವುದು 25 ಲಕ್ಷವಷ್ಟೇ.. ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗ ಬೇಕು ಇಷ್ಟು ಕಡಿಮೆ ವೆಚ್ಚದಲ್ಲಿ ವಿವಿಯ ಆಡಳಿತ ನಡೆಸುವುದಾದರು ಹೇಗೆ? ನಾಡುನುಡಿ ಸಂಸ್ಕೃತಿ ಕಟ್ಟುವ ಭಾಷೆಯ ಸೊಬಗನ್ನು ಸಾರುವ ನಾಡುಕಟ್ಟುವ ಉದ್ದೇಶದಿಂದ ಸ್ಥಾಪಿತವಾದ ಹಂಪಿ ವಿವಿ ಗೆ ನೇರವಾಗಿ ಕನ್ನಡದ ಬೌದ್ಧಿಕ ವಿಕಾಸ ಮತ್ತು ಕನ್ನಡ ಜ್ಞಾನ ಸೃಷ್ಟಿಯ ಕುತ್ತಿಗೆ ಹಿಚುಕಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಸಂಕಷ್ಟದ ಕಾಲದಲ್ಲಿ ನಿಗಮಮಂಡಳಿ ಸ್ಥಾಪಿಸಿ ಅಧ್ಯಕ್ಷರನ್ನಾಗಿ ಮಾಡಿ ಅವರುಗಳಿಗೆ ಸಚಿವ ಸಂಪುಟದ ಸ್ಥಾನಕೊಟ್ಟು ನೂರಾರು ಕೋಟಿ ದುಂದುವೆಚ್ಚ ಮಾಡುವ ಬದಲು ಹಸಿದವರ ಹೊಟ್ಟೆಗೆ ಅನ್ನ ಬಟ್ಟೆ ಮತ್ತು ಭಾಷೆಯ ಕೆಲಸಕ್ಕೆ ಹಣ ನೀಡದ ಸರ್ಕಾರ ನಾಡ ದ್ರೋಹಿ ಸರ್ಕಾರ , ರೈತ, ಕಾರ್ಮಿಕರ, ಭಾಷಿಗರ ಸಿಟ್ಟಿಗೆ ಗುರಿಯಾದ ಸರ್ಕಾರ ಹಿಂದೆಲ್ಲ ಧೂಳಿಪಟವಾಗಿದೆ ಎಂಬುವುದನ್ನು ಯಡಿಯೂರಪ್ಪ ಸರ್ಕಾರ ಗಮನದಲ್ಲಿಟ್ಟುಕೊಂಡು ಕೂಡಲೇ ಹಂಪಿ ವಿವಿ ಸೇರಿದಂತೆ ಕರ್ನಾಟಕದ ಇತರೆ ವಿವಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಅನುದಾನ ಕೊರತೆಯಿಂದ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗದ ಪರಿಸ್ಥಿತಿಗೆ ತಲುಪಿವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಅನುದಾನ ನೀಡಿ, ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವಾಗಬೇಕು ಎಂದು ಮುಖ್ಯಮಂತ್ರಿಯವರನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.