ಹಲವಾರು ಯುವಕ ಯುವತಿಯರಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಅಭಿಲಾಷೆ ಇರುತ್ತದೆ. ಹೆಚ್ಚಿನವರಿಗೆ ಪೂರ್ಣಕಾಲಿಕ ಸೇವೆ ಸಲ್ಲಿಸಲಾಗದಿದ್ದರೂ ಕೆಲವು ವರ್ಷ ಸೇನೆಯಲ್ಲಿದ್ದುಕೊಂಡು ಅಲ್ಲಿನ ಅನುಭವಗಳನ್ನು ಪಡೆಯಬೇಕೆಂಬ ಮಹಾತ್ವಾಕಾಂಕ್ಷೆ ಮನದಲ್ಲಿ ಮನೆ ಮಾಡಿರುತ್ತದೆ. ಅಂತಹ ಯುವ ಜನಾಂಗವನ್ನು ಸೇನೆಗೆ ಸೇರಿಸಿಕೊಳ್ಳುವ ಪ್ರಸ್ತಾಪವೊಂದು ಸೇನೆ ಎದುರಿಟ್ಟಿದೆ.
ಅರ್ಹ ಆಕಾಂಕ್ಷಿ ಯುವ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಕಾಲ ಸೇನೆಯಲ್ಲಿ ತಾತ್ಕಲಿಕ ಸೇವೆ ಮಾಡಲು ಟೂರ್ ಆಫ್ ಡ್ಯೂಟಿಯ ಅಡಿಯಲ್ಲಿ ಅವಕಾಶ ನೀಡುವ ಕುರಿತು ಸೇನೆ ಗಂಭೀರವಾಗಿ ಯೋಚಿಸುತ್ತಿದೆ. ಈ ಪ್ರಸ್ತಾವನೆಗೆ ಅನುಮತಿ ಸಿಕ್ಕಿದರೆ ತಾತ್ಕಾಲಿಕವಾಗಿ ನಿರುದ್ಯೋಗ ಸಮಸ್ಯೆಗೆ ಸಹಾಯವಾಗಲಿದೆ.
ಈ ಪ್ರಸ್ತಾಪ ಅನುಷ್ಠಾನಕ್ಕೆ ಬಂದರೆ ಆರಂಭದಲ್ಲಿ 100 ಅಧಿಕಾರಿಗಳು ಹಾಗೂ 1,000 ಸೈನಿಕರ ನೇಮಕಾತಿ ನಡೆಯಲಿದೆ. ಟೂರ್ ಆಫ್ ಡ್ಯೂಟಿಯನ್ನು ಪ್ರಾಯೋಗಿಕವಾಗಿ ಆರಂಬಿಸುತ್ತಿದ್ದು, ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ನೇಮಕಾತಿ ನಡೆಯುವ ಸಾಧ್ಯತೆ ಇದೆಯೆಂದು ಸೇನೆ ಮುಖ್ಯಸ್ಥರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಆರ್ಮಿ ಚೀಫ್ ಜನರಲ್ M M ನರವಾಣೆ, ಸೇನೆ ಅಧಿಕಾರಿಗಳು ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ಹಲವಾರು ವಿದ್ಯಾರ್ಥಿಗಳು ಸೇನೆಯ ಅನುಭವಗಳನ್ನು ಹೊಂದಲು ಹಾಗೂ ತಾತ್ಕಾಲಿಕ ಸೇವೆ ಸಲ್ಲಿಸಲು ಉತ್ಸುಕರಾಗಿರುವ ಕುರಿತು ತಮ್ಮ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಟೂರ್ ಆಫ್ ಡ್ಯುಟಿಯ ಚಿಂತನೆ ಹುಟ್ಟಿಕೊಂಡಿದೆ ಎಂದಿದ್ದಾರೆ.