ಸಂಕ್ರಾಂತಿ ಮುಗಿಯುತ್ತಿದ್ದಂತೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ (ಬಿಸಿಸಿಐ) ಕ್ರಿಕೆಟ್ ಪ್ರಿಯರಿಗೆ ಶಾಕ್ ನೀಡಿದೆ. ಇಂದು ಪ್ರಕಟಿಸಿರುವ 2019-2020ನೇ ಸಾಲಿನ ನೂತನ ವಾರ್ಷಿಕ ಒಪ್ಪಂದ ಪಟ್ಟಿಯಿಂದ ನಾಲ್ವರು ಹಿರಿಯ ಆಟಗಾರರ ಹೆಸರನ್ನು ಕೈಬಿಡಲಾಗಿದೆ. ಇವರಲ್ಲಿ ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೆಂದ್ರ ಸಿಂಗ್ ಧೋನಿ ಹೆಸರು ಸೇರಿರುವುದು ಅವರ ಕ್ರಿಕೆಟ್ ಭವಿಷ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಇರಿಸಿದೆ. ಈ ಕುರಿತಾಗಿ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು, ಕ್ರಿಕೆಟ್‌ನಲ್ಲಿ ಮಾಹಿ ಯುಗಾಂತ್ಯವಾಯಿತು ಎಂಬ ಆತಂಕ ಧೋನಿ ಅಭಿಮಾನಿಗಳಲ್ಲಿ ಕಂಡುಬರುತ್ತಿದೆ.
ಕಳೆದ ವರ್ಷ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಸೆಮಿ ಫೈನಲ್ ಮ್ಯಾಚ್‌ನಲ್ಲಿ ಧೋನಿ ಕೊನೆಯ ಬಾರಿ ಅಂಗಣಕ್ಕೆ ಇಳಿದಿದ್ದರು. ವಿಶ್ವಕಪ್‌ನಲ್ಲಿ ವಿಫಲರಾದ ಬಳಿಕ ಎಂದೂ ಕ್ರಿಕೆಟ್ ಕಡೆ ತಿರುಗಿ ನೋಡದ ಧೋನಿಯನ್ನು, ಆ ನಂತರದ ಯಾವುದೇ ಸೀರೀಸ್‌ಗಳಿಗೂ ಆಯ್ಕೆ ಮಾಡಿರಲಿಲ್ಲ. ಇದರಿಂದ ಬಿಸಿಸಿಐ ಆಯ್ಕೆ ಸಮಿತಿಯು ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಹಿಂದಿನ ಆಯ್ಕೆ ಮಂಡಳಿಯ ಅಧ್ಯಕ್ಷರಾದ ಎಂ ಕೆ ಪ್ರಸಾದ್ ಕೂಡ ಧೋನಿಯವರ ಕಳಪೆ ಫಾರ್ಮ್‌ನ ಕಾರಣ ನೀಡಿ ಅವರನ್ನು ಆಯ್ಕೆ ಮಾಡಿರಲಿಲ್ಲ. ಈ ಕುರಿತು ಕ್ರಿಕೆಟ್ ವಲಯದಲ್ಲಿ ಬಹಳ ಚರ್ಚೆಗಳು ನಡೆದರೂ ಧೋನಿ ತಮ್ಮ ಭವಿಷ್ಯದ ನಿರ್ಧಾರದ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಸಿಸಿಐನ ಉನ್ನತ ಅಧಿಕಾರಿ ಧೋನಿ ಜೊತೆ ಈ ವಿಷಯವನ್ನು ಮುಂಚೆನೇ ಚರ್ಚೆ ಮಾಡಲಾಗಿತ್ತು. ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಆಟಗಾರನಿಗೆ ಮಾಹಿತಿಯನ್ನು ನೀಡಿದೇ ಅವರನ್ನು ಒಪ್ಪಂದದಿಂದ ಕೈಬಿಡುವುದು ಶಿಷ್ಟಾಚಾರವಲ್ಲದ ಕಾರಣಕ್ಕೆ ಅವರಿಗೆ ವಿಷಯವನ್ನು ತಿಳಿಸಿಯೇ ಈ ನಿರ್ಧಾರ ಕೈಗೊಂಡಿದ್ದೇವೆಂದು ಹೇಳಿದರು. ಸೆಪ್ಟೆಂಬರ್ 19ರ ನಂತರ ಯಾವುದೇ ಪಂದ್ಯದಲ್ಲಿ ಕಣಕ್ಕಿಳಿಯದ ಕಾರಣಕ್ಕೆ ಅವರನ್ನು ಕೈಬಿಡಲಾಗಿದೆಯಷ್ಟೇ, ಮುಂಬರುವ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಮಾಹಿ ಆಡಿದರೆ ಅವರನ್ನು ಖಂಡಿತವಾಗಿಯೂ ಒಪ್ಪಂದಕ್ಕೆ ಒಳಪಡಿಸಲಾಗುವುದು, ಧೋನಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕ್ರಿಕೆಟ್ ತಜ್ಞರ ಅಭಿಪ್ರಾಯದ ಪ್ರಕಾರ ಬಿಸಿಸಿಐನ ಈ ನಿರ್ಧಾರವನ್ನು ಧೋನಿಯ ಯುಗಾಂತ್ಯವೆಂದೇ ವಿಶ್ಲೇಷಿಲಾಗುತ್ತಿದೆ. ಭಾರತಕ್ಕಾಗಿ 90 ಟೆಸ್ಟ್, 350 ಏಕದಿನ ಹಾಗೂ 98 ಟಿ20 ಪಂದ್ಯಗಳನ್ನಾಡಿರುವ ಧೋನಿ ಹಲವು ದಾಖಲೆಗಳ ಸರದಾರ. ಭಾರತಕ್ಕಾಗಿ ಅತೀ ಹೆಚ್ಚು ಜಯ ತಂದುಕೊಟ್ಟ ಕಪ್ತಾನ, ಅತೀ ಹೆಚ್ಚು ಸ್ಟಂಪಿಂಗ್ ಹಾಗೂ ವಿಕೆಟ್ ಕೀಪರ್ ಆಗಿ ಉತ್ತಮ ದಾಖಲೆಯನ್ನು ಹೊಂದಿರುವ ಧೋನಿ ಭಾರತ ಕಂಡ ಅತ್ಯುತ್ತಮ ಫಿನಿಷರ್. ಹೆಲಿಕಾಪ್ಟರ್ ಶಾಟ್ ಅನ್ನು ಕ್ರಕಿಟ್ ಜಗತ್ತಿಗೆ ಮೊದಲು ಪರಿಚಯಿಸಿದ ಆಟಗಾರ. ಇಂತಹ ಕ್ರಿಕೆಟ್ ದಿಗ್ಗಜನ ಹೆಸರು ಒಮ್ಮೆಗೆ ಬಿಸಿಸಿಐ ಕೈಬಿಟ್ಟಿದ್ದು ನಿಜಕ್ಕೂ ಆಶ್ಚರ್ಯಕರ.
ವಿಶ್ವಕಪ್ ನಂತರ ಕ್ರಿಕೆಟ್‌ನಿಂದ ಅಂತರ ಕಾಯ್ದುಕೊಂಡಿರುವ ಧೋನಿ, ತಮ್ಮ ವೃತ್ತಿ ಜೀವನದ ಕುರಿತು ಯಾವುದೇ ಗುಟ್ಟನ್ನು ಬಿಚ್ಚಿಟ್ಟಿಲ್ಲ. ಕ್ರಿಕೆಟ್‌ನಿಂದ ದೂರ ಉಳಿದು ಕೆಲ ಸಮಯ ಕುಟುಂಬದೊಂದಿಗೆ ಕಳೆಯುವ ಇಚ್ಚೆಯಿಂದ ಅಂಗಣದಿಂದ ಹೊರ ನಡೆದ ಧೋನಿ ಮತ್ತೆ ಕ್ರಿಕೆಟ್‌ಗೆ ಮರಳುತ್ತಾರೆಯೇ ಎಂಬ ಪ್ರಶ್ನೆಗೆ ಅವರು ಎಂದೂ ಉತ್ತರ ನೀಡಿಲ್ಲ. ಸೇನೆಯ ಪ್ಯಾರಾ ಕಮ್ಯಾಂಡೋ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕೆಲ ಸಮಯ ತರಭೇತಿ ಪಡೆದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಬಹಳ ವಿರಳ.

ಇನ್ನು, ಧೋನಿ ಕ್ರಿಕೆಟ್‌ನಿಂದ ದೂರವಾದ ಮೇಲೆ ಭಾರತೀಯ ಏಕದಿನ ಹಾಗೂ ಚುಟುಕು ಮಾದರಿಯಲ್ಲಿ ಅವರಂಥಹ ವಿಕೇಟ್ ಕೀಪರ್ ಇಲ್ಲದಿರುವುದು ಕೂಡ ಗಂಭೀರ ಸಮಸ್ಯೆಯಾಗಿದೆ. ರಿಷಭ್ ಪಂತ್ ಅವರಿಂದ ಸ್ಥಿರ ಪ್ರದರ್ಶನ ಯಾವುದೇ ಪಂದ್ಯದಲ್ಲಿ ಮೂಡಿ ಬರಲಿಲ್ಲ. ಪ್ರತೀ ಪಂದ್ಯದಲ್ಲೂ ಸ್ಟೇಡಿಯಂನಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಧೋನಿ ಧೋನಿ ಎಂದು ಕೂಗುವುದು ಸಹಜವಾಗಿತ್ತು. ಈ ವರ್ಷ ಒಕ್ಟೋಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಪಂದ್ಯಾವಳಿಯ ಮುಂಚೆ ಧೋನಿ ಮತ್ತೆ ಭಾರತವನ್ನು ಪ್ರತಿನಿಧಿಸಲಿದ್ದಾರೆಯೇ? ಅಥವಾ ಅವರ ಬದಲಿಗೆ ಬಿಸಿಸಿಐ ಯುವ ಆಟಗಾರರಿಗೆ ಮಣೆ ಹಾಕಲಿದೆಯೇ ಎನ್ನುವುದು ಕುತೂಹಲಕಾರ ಸಂಗತಿ.
ಏನೇ ಇದ್ದರೂ, ಕ್ರಿಕೆಟ್‌ನಿಂದ ಧೋನಿಯ ಹಠಾತ್ ನಿರ್ಗಮನ ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ಬಹಳಷ್ಟು ನಿರಾಸೆ ಮೂಡಿಸಿದೆ. ಐಪಿಎಲ್‌ನಲ್ಲಿ ಚೆನ್ನೈ ತಂಡದ ಪರ ಆಡಲಿಳಿಯುವ ಧೋನಿಯ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಕ್ರಿಕೆಟ್‌ಗೆ ಧೋನಿ ಅಂತಿಮ ವಿಧಾಯ ಹೇಳುವ ಮುಂಚೆ ಅವರನ್ನು ಮತ್ತೊಮ್ಮೆ ನೀಲಿ ಜೆರ್ಸಿಯಲ್ಲಿ ನೋಡುವ ತವಕ ಕ್ರಿಕೆಟ್ ಪ್ರಿಯರಿಗಿದೆ.