ಕಣ್ಣಿಗೆ ಕಾಣದ ವೈರಸ್ ವಿರುದ್ಧದ ಯುದ್ಧ ಈ ವಿಶ್ವಕ್ಕೆ ಹೊಸದೇನಲ್ಲ. ದಶಕಗಳ ಹಿಂದೆಯೇ ಹಂಟಾ ವೈರಸ್, ಮಾಬರ್ಗ್ ವೈರಸ್, ಸಾರ್ಸ್, ಎಬೋಲಾ, ನಿಫಾ ವೈರಸ್ ಎಂಬ ಮಾರಣಾಂತಿಕ ಮಹಾಮಾರಿಗಳನ್ನು ಈ ವಿಶ್ವ ಎದುರಿಸಿದೆ. ಇದಲ್ಲದೆ ಕಾಲರಾ, ಪ್ಲೇಗ್, ಚಿಕನ್ ಪಾಕ್ಸ್ ನಂತಹ ಸಾಂಕ್ರಾಮಿಕ ರೋಗವನ್ನೂ ಎದುರುಗೊಂಡಿದ್ದೇವೆ. ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ. ಆದರೆ, ಮನುಕುಲಕ್ಕೆ ಈ ಹಿಂದೆ ಯಾವ ರೋಗವೂ ಒಡ್ಡದಷ್ಟು ಭೀತಿಯನ್ನು ಕರೋನಾ ಎಂಬ ಯಕಶ್ಚಿತ್ ವೈರಸ್ ಒಡ್ಡಿರುವುದು ಸುಳ್ಳಲ್ಲ.
ಕರೋನಾವೈರಸ್.. ಅಸಲಿಗೆ ಚೀನಾದ ವುಹಾನ್ ಪ್ರಾಂತ್ಯದ ಮಾಂಸದ ಮಾರುಕಟ್ಟೆಯೊಂದರಿಂದ ಮನುಕುಲಕ್ಕೆ ಮಾರಕವಾಗಲು ಹೊರಟ ಈ ಕರೋನಾ ಎಂಬ ವೈರಸ್ ಈ ಭೂಮಿಗೆ ಹೊಸದೇನಲ್ಲ. 80ರ ದಶಕದಲ್ಲೇ ಈ ವೈರಸ್ ಇರುವಿಕೆಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ಆದರೆ, ಮೂರು ದಶಕಗಳ ನಂತರ ಈ ವೈರಸ್ ಮಾನವ ಕುಲಕ್ಕೆ ಈ ಪರಿ ಮಾರಕವಾಗುತ್ತದೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ.

ಪ್ರಸ್ತುತ ಜಗತ್ತಿನಲ್ಲಿ ಕರೋನಾ ವೈರಸ್ ಸಾವಿರಾರು ಜನರ ಜೀವವನ್ನು ಬಲಿ ತೆಗೆದುಕೊಂಡಿರಬಹುದು. ಆದರೂ ಇತರೆ ವೈರಸ್ ಗೆ ಹೋಲಿಕೆ ಮಾಡಿದರೆ ಕರೋನಾ ಅಷ್ಟೊಂದು ಅಪಾಯಕಾರಿ ವೈರಸ್ ಏನಲ್ಲ. ಈ ವೈರಸ್ ಗೆ ಹೆದರುವ ಅಗತ್ಯವೂ ಇಲ್ಲ ಎನ್ನುತ್ತಿದೆ ವೈಜ್ಞಾನಿಕ ಜಗತ್ತು. ಇದಕ್ಕೆ ಪುಷ್ಠಿ ನೀಡುವಂತಿದೆ ಕೆಲವು ಅಂಕಿಅಂಶಗಳು.
ಕರೋನಾಗೆ ಹೆದರುವ ಅಗತ್ಯವಿಲ್ಲವೇಕೆ?
ಹೌದು, ಕರೋನಾ ಎಂಬ ಮಹಾಮಾರಿಗೆ ಖಂಡಿತ ಹೆದರುವ ಅಗತ್ಯ ಇಲ್ಲ. ಏಕೆಂದರೆ ಕೇವಲ 4 ವರ್ಷದ ಹಿಂದೆ ಆಫ್ರಿಕಾ ಮೂಲದ ಎಬೋಲಾ ಎಂಬ ವೈರಸ್ ಇಡೀ ಜಗತ್ತನ್ನೇ ತಲ್ಲಣಕ್ಕೆ ದೂಡಿತ್ತು. ಅಂದರೆ ಈ ಖಾಯಿಲೆ ನೂರು ಜನರಲ್ಲಿ ಕಾಣಿಸಿಕೊಂಡರೇ ಆ ಪೈಕಿ ಕನಿಷ್ಟ 60 ಜನರನ್ನು ಬಲಿ ಪಡೆಯುತ್ತದೆ.
2017-18 ರಲ್ಲಿ ಕೇರಳದಲ್ಲಿ ಕಾಣಿಸಿಕೊಂಡಿದ್ದ ನಿಫಾ ವೈರಸ್ ಸಾವಿನ ಪ್ರಭಾವ ಶೇ.40 ರಷ್ಟು. ಇನ್ನೂ ಹಂಟಾ ವೈರಸ್, ಹೆಚ್1ಎನ್1, ಮಾಬರ್ಗ್, ಸಾರ್ಸ್ ಹೀಗೆ ಎಲ್ಲಾ ವೈರಸ್ಗಳ ಸಾವಿನ ಪ್ರಮಾಣ ಶೇ.20 ರಿಂದ ಶೇ.30 ರಷ್ಟಿದೆ. ಆದರೆ, ಈ ಯಾವ ವೈರಸ್ ಗಳಿಗೂ ಜಗತ್ತು ಹೆದರಲೇ ಇಲ್ಲ.
2002ರ ಆಸುಪಾಸಿನಲ್ಲಿ ಚೀನಾದಿಂದಲೇ ಇಡೀ ವಿಶ್ವಕ್ಕೆ ವ್ಯಾಪಿಸಿ ಭಯದ ವಾತಾವರಣವನ್ನೇ ನಿರ್ಮಾಣ ಮಾಡಿದ್ದ ’ಸಾರ್ಸ್’ ಎಂಬ ವೈರಸ್ ಮಾಡಿದ ಹಾವಳಿಯನ್ನು ಸಾಮಾನ್ಯವಾಗಿ ಜನ ಮರೆತಿರಲಿಕ್ಕಿಲ್ಲವೇನೋ? ಶೇ. 30 ರಷ್ಟು ಸಾವಿನ ಪ್ರಮಾಣವನ್ನು ಹೊಂದಿದ್ದ ಸಾರ್ಸ್ ಎಂಬ ಮಹಾಮಾರಿಯ ಸದ್ದಡಗಿಸುವಲ್ಲಿ ವಿಜ್ಞಾನ ಲೋಕ ಸಫಲವಾಗಿತ್ತು. ಈ ಮೇಲಿನ ಎಲ್ಲಾ ವೈರಸ್ಗಳಿಗೆ ಹೋಲಿಕೆ ಮಾಡಿದರೆ ಕರೋನಾ ಲೆಕ್ಕಕ್ಕೆ ಇಲ್ಲ. ಏಕೆಂದರೆ ಇದರ ಕೊಲ್ಲುವ ಪ್ರಮಾಣ ಕೇವಲ ಶೇ.4 ರಷ್ಟು ಮಾತ್ರ.
ಇಲ್ಲಿದೆ ಕರೋನಾ ಸಾವಿನ ಅಸಲಿ ಲೆಕ್ಕ:
ಹೌದು..! ಹಂಟಾ, ಎಬೋಲಾ, ನೀಫಾ, ಮಾಬರ್ಗ್ ಹಾಗೂ ಸಾರ್ಸ್ ವೈರಸ್ಗಳಿಗೆ ಹೋಲಿಕೆ ಮಾಡಿದರೆ ಕರೋನಾವೈರಸ್ ಲೆಕ್ಕಕ್ಕೇ ಇಲ್ಲ. ಏಕೆಂದರೆ ಈ ವೈರಸ್ ಕೊಲ್ಲುವ ಪ್ರಮಾಣ ಕೇವಲ ಶೇ.4 ರಷ್ಟು ಮಾತ್ರ. ಅಂದರೆ ನೂರು ಜನಕ್ಕೆ ಕರೋನಾ ಆವರಿಸಿದರೆ ಅದು ಕೇವಲ 4 ಜನರನ್ನು ಮಾತ್ರ ಕೊಲ್ಲಲು ಸಾಧ್ಯ. ಉಳಿದವರು ಬೇಗ ಗುಣಮುಖರಾಗುತ್ತಾರೆ. ಅಂಕಿಅಂಶಗಳೂ ಸಹ ಇದಕ್ಕೆ ಪುಷ್ಠಿ ನೀಡುವಂತಿದೆ.
ಅಂಕಿಅಂಶಗಳ ಕಡೆಗೆ ಒಮ್ಮೆ ಗಮನಹರಿಸಿದರೆ, ಪ್ರಸ್ತುತ ವಿಶ್ವದಾದ್ಯಂತ ಸುಮಾರು 32,20,970 ಕರೋನಾ ಕೇಸ್ ದಾಖಲಾಗಿದೆ. ಈ ಪೈಕಿ 2,28,251 ಜನ ಮೃತಪಟ್ಟಿದ್ದರೆ ಸುಮಾರು10,01,933 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ.
ಭಾರತದಲ್ಲೂ ಸಹ 33,050 ಜನರಲ್ಲಿ ಕರೋನಾ ಕಾಣಿಸಿಕೊಂಡಿದ್ದರೆ, ಮೃತಪಟ್ಟವರ ಸಂಖ್ಯೆ 1,160 ಮಾತ್ರ. ಇನ್ನೂ 9340 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದವರೂ ಸಹ ಶೀಘ್ರದಲ್ಲಿ ಗುಣಮುಖರಾಗಲಿದ್ದಾರೆ ಎಂದು ಮಾಹಿತಿ ನೀಡುತ್ತಿದೆ ದೆಹಲಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ.
ಇತರೆ ವೈರಸ್ಗೆ ಹೋಲಿಕೆ ಮಾಡಿದರೆ ಕರೋನಾ ಕೊಲ್ಲುವ ಪ್ರಮಾಣ ಕಡಿಮೆಯೇ. ಆದರೆ, ಇದು ಬೇರೆ ವೈರಸ್ಗಿಂತ ಬೇಗ ಹರಡುತ್ತದೆ. ಇದೇ ಕಾರಣಕ್ಕೆ ಅಧಿಕ ಸಂಖ್ಯೆಯ ಜನರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಈ ವೈರಸ್ ಒಮ್ಮೆ ಕಾಣಿಸಿಕೊಂಡರೆ ಶ್ವಾಸಕೋಶ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. ಉಸಿರಾಟದ ತೊಂದರೆಯಿಂದ ಸಾವು ಸಂಭವಿಸುತ್ತದೆ.

ಆದರೆ, ವೈದ್ಯರು ನೀಡುವ ಮಾಹಿತಿಯ ಪ್ರಕಾರ ಈ ವೈರಸ್ ಮನುಷ್ಯನ ದೇಹದ ಒಳಗಿನ ಜೀವ ನಿರೋಧಕ ಶಕ್ತಿಯನ್ನು ಮೀರಿ ಕ್ರಿಯಾಶೀಲವಾಗಲಾರದು. ಯುವಕರಲ್ಲಿ ಈ ವೈರಸ್ ಕಾಣಿಸಿಕೊಂಡರೆ ಯಾವುದೇ ಚಿಕಿತ್ಸೆ ಇಲ್ಲದೆ ತಾನಾಗಿಯೇ ನಶಿಸಿಹೋಗುತ್ತದೆ. ಆದರೆ, ದೇಹದಲ್ಲಿ ಜೀವ ನಿರೋಧಕ ಶಕ್ತಿ ಕಡಿಮೆ ಇರುವ ವಯೋವೃದ್ಧರು ಮಾತ್ರ ಈ ವೈರಸ್ಗೆ ಬಲಿಯಾಗುತ್ತಾರೆ.
ಅಮೆರಿಕ, ಇಟಲಿ ಸೇರಿದಂತೆ ವಿಶ್ವದ ಎಲ್ಲಾ ದೇಶಗಳಲ್ಲೂ ಕರೋನಾಗೆ ಬಲಿಯಾದವರು ವಯೋವೃದ್ಧರು ಮಾತ್ರ ಎನ್ನುತ್ತಿದೆ ಅಂಕಿಅಂಶ. ಕರೋನಾ ಕಾರಣದಿಂದ ಮೃತಪಟ್ಟ ವಯೋವೃದ್ಧರ ಸಂಖ್ಯೆ ಶೇ.99. ಹೀಗಾಗಿ ಶೇ.80 ರಷ್ಟು ಯುವಕರನ್ನು ಹೊಂದಿರುವ ಯುವ ಭಾರತ ಎಂದಿಗೂ ಕರೋನಾಗೆ ಹೆದರುವ ಅಗತ್ಯ ಇಲ್ಲ. ಯುವಕರಿಗೆ ಈ ವೈರಸ್ ಬಂದಿದ್ದರೂ ತಾನಾಗಿಯೇ ಕಣ್ಮರೆಯಾಗುತ್ತದೆ. ಆದರೆ, ದೇಶದಲ್ಲಿರುವ ವಯೋವೃದ್ಧರನ್ನು ತೀವ್ರ ನಿಗಾ ವಹಿಸಿ ಮನೆಯಲ್ಲೇ ಇರುವಂತೆ ಎಲ್ಲರೂ ಒಟ್ಟಾಗಿ ನೋಡಿಕೊಂಡರೆ ಕರೋನಾ ವಿರುದ್ಧದ ಯುದ್ಧದಲ್ಲಿ ಭಾರತದ ಗೆಲುವು ಖಚಿತ ಎಂಬುದರಲ್ಲಿ ಎರಡು ಮಾತಿಲ್ಲ.