ವಿಶ್ವದಲ್ಲಿ ಕರೋನಾ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಶುಕ್ರವಾರ 45,39,401 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. 3,03,555 ಜನರು ವಿಶ್ವವ್ಯಾಪಿ ಅಸುನೀಗಿದ್ದಾರೆ. ಆದರೆ ಭಾರತದಲ್ಲಿ ಕರೋನಾ ಸೋಂಕು ರಣಕೇಕೆ ಹಾಕುತ್ತಿದ್ದು ಸಾವು ನೋವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಅದೇ ರೀತಿ ಕರ್ನಾಟಕದಲ್ಲೂ ಕರೋನಾ ಸೋಂಕು ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು 100 ಜನರಲ್ಲಿ ಒಬ್ಬರಿಗೆ ಕರೋನಾ ಪಾಸಿಟಿವ್ ಬರುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಆದರೂ ಸಮುದಾಯ ಸೋಂಕಿಗೆ ಕರ್ನಾಟಕ ತುತ್ತಾಗಿಲ್ಲ ಎನ್ನುವ ಮೂಲಕ ಜನರನ್ನು ಸಮಾಧಾನ ಮಾಡುವ ಕೆಲಸವನ್ನೂ ಮಾಡಿದ್ದಾರೆ.
ಇನ್ನೂ ಮುಂದುವರಿದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿರುವ ಮಾತು ಇಡೀ ಕನ್ನಡಿಗರ ಎದೆ ಝಲ್ ಎನ್ನುವಂತೆ ಮಾಡಿದೆ. ಇಲ್ಲೀವರೆಗೂ ಕರ್ನಾಟಕದಲ್ಲಿ 1 ಲಕ್ಷ 20 ಸಾವಿರ ಜನರನ್ನು ತಪಾಸಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸೋಂಕು ಯಾವ ಸ್ಥಿತಿಯಲ್ಲಿ ಇರುತ್ತೆ ಅನ್ನೋದ್ರ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮೂರು ವರದಿಗಳು ಬಂದಿವೆ. ಆ ಅಂಕಿ ಸಂಖ್ಯೆಗಳನ್ನು ಜನರ ಮುಂದೆ ಬಹಿರಂಗ ಮಾಡುವ ಮೂಲಕ ಸಾರ್ವಜನಿಕರ ಆತಂಕ ಹೆಚ್ಚಾಗುವಂತೆ ಮಾಡಲು ಸರ್ಕಾರ ಸಿದ್ಧವಿಲ್ಲ ಎನ್ನುವ ಮೂಲಕ ಕರೋನಾ ರಣ ಕೇಕೆ ಗಣನೀಯವಾಗಿ ಏರಿಕೆಯಾಗಲಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಜೊತೆಗೆ ತುಂಬಾ ಕೆಟ್ಟ ಪರಿಸ್ಥಿತಿಗೂ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದಿದ್ದಾರೆ. ಇನ್ನೊಂದು ವಿಚಾರ ಎಂದರೆ ಭಾರತ ಹಾಗೂ ಕರ್ನಾಟಕದ ಪಾಲಿಗೆ ಇಂದು ಒಂದೇ ದಿನ ನಿರ್ಣಾಯಕ ದಿನ ಆಗಿದೆ.
ಭಾರತ ಸರ್ಕಾರದ ಆರೋಗ್ಯ ಇಲಾಖೆ ಮಾಹಿತಿಯಂತೆ ಭಾರತದಲ್ಲಿ ಇಲ್ಲೀವರೆಗೂ ಕರೋನಾ ಸೋಂಕು ಪೀಡಿತರ ಸಂಖ್ಯೆ 81,970 ಆಗಿದೆ. ಕರೋನಾ ವೈರಸ್ ಜನ್ಮಭೂಮಿ ಚೀನಾದಲ್ಲಿ ಇಲ್ಲೀವರೆಗೂ ಕರೋನಾ ವೈರಸ್ ಸೋಂಕಿತರ ಸಂಖ್ಯೆ 82,933 ಆಗಿದೆ. ಸದ್ಯಕ್ಕೆ ಭಾರತ ಚೀನಾ ಹಿಂದೆ ಇದ್ದು, ಇಂದು ಸಂಜೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಆರೋಗ್ಯ ಬುಲೆಟಿನ್ ವೇಳೆಗೆ ಡ್ಯ್ರಾಗನ್ ರಾಷ್ಟ್ರ ಚೀನಾವನ್ನು ಹಿಂದಿಕ್ಕಿ ಮುಂದೆ ಸಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನೂ ಸಾವಿನ ಲೆಕ್ಕಾಚಾರದಲ್ಲೂ ಚೀನಾ ಜೊತೆ ಭಾರತ ಕಠಿಣ ಪೈಪೋಟಿ ನಡೆಸುತ್ತಿದ್ದು, ಚೀನಾದಲ್ಲಿ 4,633 ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಭಾರತದಲ್ಲಿ 2,649 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಇದರಲ್ಲಿ ವಿಶೇಷ ಎಂದರೆ ಚೀನಾದಲ್ಲಿ ನಿನ್ನೆ ಯಾವುದೇ ಸಾವು ನೋವಿನ ವರದಿ ಆಗಿಲ್ಲ. ಆದರೆ ಭಾರತದಲ್ಲಿ ನಿನ್ನೆ ಒಂದೇ ದಿನ 100 ಜನರು ಕರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟಾರೆ ಈಶಾನ್ಯ ರಾಜ್ಯಗಳ ಗಡಿಯಲ್ಲಿ ಚೀನಾ ಜೊತೆ ಭಾರತ ಯುದ್ಧದ ಸನ್ನದ್ಧ ಪೈಪೋಟಿ ನಡೆಸುತ್ತಿತ್ತು. ಇದೀಗ ಕರೋನಾದಲ್ಲಿ ಚೀನಾವನ್ನು ಹಿಂದಿಕ್ಕುವ ಹಂತದಲ್ಲಿದೆ.
ಭಾರತ ಚೀನಾ ದೇಶವನ್ನು ಹಿಂದಿಕ್ಕಿ ಮುಂದೆ ಹೊರಟಿದ್ದರೆ, ಕರ್ನಾಟಕದಲ್ಲಿ ಇಂದಿನ ಬೆಳಗ್ಗಿನ ತನಕ ಮಾಹಿತಿಯಂತೆ ಇಂದು 45 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಸಂಜೆ ಕರೋನಾ ಬುಲೆಟಿನ್ ಬಳಿಕ ಇಂದು ಮಧ್ಯಾಹ್ನ 12 ಗಂಟೆಗೆ ಕರೋನಾ ಬುಲೆಟಿನ್ ಬಿಡುಗಡೆ ಆಗಿದ್ದು, 45 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ ಸಾವಿರ ಗಡಿಯನ್ನು ದಾಟಿ ಮುಂದೆ ಸಾಗುತ್ತಿದೆ. ರಾಜ್ಯದಲ್ಲಿ ಇದುವರಗೆ 1032 ಸೋಂಕಿತರು ಇದ್ದು, ಇಂದು ಉಡುಪಿ 05, ಹಾಸನ 0೩, ಬೆಂಗಳೂರು 13, ಬೀದರ್ 3, ಕೋಲಾರ 1, ಚಿತ್ರದುರ್ಗ 02, ಬಾಗಲಕೋಟೆ 01, ದಕ್ಷಿಣ ಕನ್ನಡ 16, ಶಿವಮೊಗ್ಗ 01 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನ ಶಿವಾಜಿನಗರದಲ್ಲಿ 11 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು ಹೋಟೆಲ್ ಕ್ವಾರಂಟೈನ್‌ನಿಂದ ಐಸೊಲೇಷನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 12 ರಂದು ದುಬೈನಿಂದ ಬಂದಿದ್ದ 179 ಮಂದಿಯಲ್ಲಿ 125 ಜನ ಮಂಗಳೂರಿನಲ್ಲಿ ಕ್ವಾರೆಂಟೈನಲ್ಲಿದ್ದರು. ಅದರಲ್ಲಿ 15 ಮಂದಿಗೆ ಕರೊನಾ ಪಾಸಿಟಿವ್ ಬಂದಿದೆ. ಇನ್ನೊಂದು ಸುರತ್ಕಲ್ ಮೂಲದ ಮಹಿಳೆಗೂ ಕರೋನಾ ಪಾಸಿಟಿವ್ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿಗೆ ಮುಂಬೈನಿಂದ ಬಂದಿದ್ದ ವ್ಯಕ್ತಿಗೆ ಕರೋನಾ ಸೋಂಕು ಖಚಿತವಾಗಿದೆ. ಇದುವರೆಗೂ ಶಿವಮೊಗ್ಗ ಜಿಲ್ಲೆ ಹಸಿರು ವಲಯದಲ್ಲೇ ಇದೆ. ಶಿವಮೊಗ್ಗದಲ್ಲಿ ಇದ್ದವರಿಗೆ ಇದುವರೆಗೆ ಕರೋನಾ ಸೋಂಕು ಬಂದಿಲ್ಲ ಎಂದು ಉಸ್ತುವಾರಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಇನ್ನೂ ಉಡುಪಿಯಲ್ಲೂ ದುಬೈನಿಂದ ಬಂದಿದದ್ದ 49 ಮಂದಿಯಲ್ಲಿ 5 ಮಂದಿಗೆ ಕರೋನಾ ಪಾಸಿಟಿವ್ ಬಂದಿದೆ.
ಇನ್ನೂ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದಾಗಿ ಇಬ್ಬರಿಗೆ ಸೋಂಕು ತಗುಲಿದ್ದು, ಚೆನ್ನೈನಿಂದ ಬಂದಿದ್ದ ತಂದೆ, ಮಗಳು ಎಂದು ಗುರುತಿಸಲಾಗಿದೆ. ಹಾಸನಕ್ಕೆ ಮತ್ತೆ ಕರೋನಾ ಕಂಟಕ ಎದುರಾಗಿದ್ದು, ಇಂದು ಮೂವರಿಗೆ ಪಾಸಿಟಿವ್ ಬಂದಿದೆ. ಇವರೆಲ್ಲರೂ ಮೇ 13 ರಂದು ಮುಂಬೈನಿಂದ ಸ್ವಗ್ರಾಮಗಳಿಗೆ ಆಗಮಿಸಿದ್ದರು ಎನ್ನಲಾಗಿದೆ. ಚನ್ನರಾಯಪಟ್ಟಣದ 33 ವರ್ಷದ ತಂದೆ ಮತ್ತು 7 ವರ್ಷದ ಗಂಡು ಮಗುವಿಗೆ ಕರೋನಾ ಪಾಸಿಟಿವ್ ಬಂದಿದೆ. ಇವರಿಬ್ಬರು ಸ್ವಂತ ಕಾರಿನಲ್ಲಿ ಮುಂಬೈನಿಂದ ಬಂದಿದ್ದರು. ಇನ್ನೂ ಅರಕಲಗೂಡಿನಲ್ಲಿ 24 ವರ್ಷದ ಮಹಿಳೆಗೆ ಸೋಂಕು ಬಂದಿದೆ. ಈಕೆ ಕೂಡ ಮೇ 12 ರಂದು ಮುಂಬೈನಿಂದ ಬಸ್‌ನಲ್ಲಿ ಬಂದಿದ್ದರು. ಎಲ್ಲಾ ಸೋಂಕಿತರನ್ನು ಹಾಸನ ಹಿಮ್ಸ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಒಂದು ಕಡೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಸರ್ಕಾರ ಮಾತ್ರ ಲಾಕ್‌ಡೌನ್ ವಿಸ್ತರಣೆಗೆ ಮುಂದಾಗದೆ ಎಲ್ಲಾ ವ್ಯವಹಾರ ನಡೆಯಲು ಅವಕಾಶ ಕೊಡುತ್ತಿದೆ. ಡಾ.ಸುಧಾಕರ್ ಅವರು ಬೆಚ್ಚಿ ಬೀಳಿಸುವ ಮಾಹಿತಿ ಹೊರ ಹಾಕಿದ್ದಾರೆ. ಮುಂದೆ ಏನೇನು ಕಾದಿದೆಯೇ ಆ ಭಗವಂತನೇ ಬಲ್ಲ ಎನ್ನುವಂತಾಗಿದೆ ಜನರ ಸದ್ಯದ ಪರಿಸ್ಥಿತಿ.