ಕಳೆದ ವರ್ಷ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಸಾಮಾಜಿಕ ಮತ್ತು ಭಾವನಾತ್ಮಕ ಕಾರ್ಯಕ್ರಮಗಳನ್ನು ಪಠ್ಯಕ್ರಮದೊಂದಿಗೆ ಜೋಡಿಸುವುದರೊಂದಿಗೆ ‘ಹ್ಯಾಪಿನೆಸ್ ಕ್ಯರಿಕುಲಂ (happiness curriculum) ಎನ್ನುವ ಹೊಸ ವಿಚಾರವನ್ನು ಶೈಕ್ಷಣಿಕ ಪದ್ಧತಿಯೊಳಗೆ ಸೇರಿಸಲಾಗಿತ್ತು. ದೆಹಲಿಯ ಶಿಕ್ಷಣ ಮಂತ್ರಿ ಮತ್ತು ಉಪಮುಖ್ಯಮಂತ್ರಿಯಾದ ಮನೀಶ್ ಸಿಸೋಡಿಯಾ ಈ ಬಗ್ಗೆ ಮಾತಾಡುತ್ತಾ “ಮಕ್ಕಳು ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಶಾಲೆಗಳಲ್ಲಿ ಕಳೆಯುತ್ತಾರೆ. ನಾವು ಅವರನ್ನು ಒಬ್ಬ ಒಳ್ಳೆಯ ಇಂಜಿನಿಯರ್, ಡಾಕ್ಟರ್, ವಿಜ್ಞಾನಿ, ಮ್ಯಾನೇಜರ್ ಆಗಿ ರೂಪಿಸುತ್ತೇವೆ. ಆದರೆ ಅವರು ಒಬ್ಬ ಒಳ್ಳೆಯ, ಪ್ರಾಮಾಣಿಕ, ಜವಾಬ್ದಾರಿಯುತ ಮನುಷ್ಯನಾಗುತ್ತಾನಾ ಎನ್ನುವುದರ ಬಗ್ಗೆ ನಮಗೆ ಯಾವ ಖಾತರಿಯೂ ಇರುವುದಿಲ್ಲ.
ಹಾಗಾಗಿ ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆ (social and emotional learning) ಯನ್ನು ಪರಿಚಯಿಸಲಾಗಿದೆ” ಎಂದಿದ್ದರು. ಮಗುವಿನ ಬೌದ್ಧಿಕ ಬೆಳವಣಿಗೆಯಲ್ಲಿ ಧನಾತ್ಮಕ ಪರಿಣಾಮ ಬೀರುವಂತೆ SEL (social and emotional learning) ಅನ್ನು ರೂಪಿಸಲಾಗುತ್ತದೆ. ಸಾಂಪ್ರದಾಯಿಕ ಶಿಕ್ಷಣ ನೀತಿಯನ್ನು ಮಾತ್ರ ಹೊಂದಿರುವ ಭಾರತಕ್ಕೆ ಇದು ತೀರಾ ಹೊಸದು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
SEL ನಲ್ಲಿ ಹಲವಾರು ಜೀವನೋಪಯೋಗಿ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ತನ್ನ ಮತ್ತು ಇತರರ ಭಾವನೆಗಳನ್ನು ಅರ್ಥಮಾಡಿಕೊಂಡು ಅವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರ ಮೂಲಕ ಆರೋಗ್ಯಕರ ಸಂಬಂಧಗಳನ್ನೂ ಸಾಮಾಜಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಅವುಗಳಲ್ಲಿ ಪ್ರಮುಖವಾದದ್ದು. ಶೈಕ್ಷಣಿಕ ಕೌಶಲ್ಯಗಳೊಂದಿಗೆ ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯವನ್ನು ಸಾಂಪ್ರದಾಯಿಕ (ಶಾಲೆ ಮತ್ತು ಶಾಲೆಯ ನಂತರದ ಚಟುವಟಿಕೆಗಳು) ಮತ್ತು ಅಸಾಂಪ್ರದಾಯಿಕ (ಸಮುದಾಯ ಮಾತುಕತೆ) ರೀತಿಯಲ್ಲಿ ಕಲಿಸುವುದು ಮತ್ತು ಸ್ವತಃ ಕಲಿಯುವುದು SELನಲ್ಲಿ ಒಳಗೊಂಡಿದೆ. ಈ ಕೌಶಲ್ಯಗಳು, ವಿಭಿನ್ನ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯ ಯೋಚನೆ, ಭಾವನೆ ಮತ್ತು ವರ್ತನೆ ಹೇಗಿರಬೇಕು ಎಂಬುವುದನ್ನು ಕಲಿಸಿ ಕೊಡುತ್ತದೆ.
ಮಕ್ಕಳ ಸಮಗ್ರ ಬೆಳವಣಿಗೆಗೆ SEL ಅಗ್ಯತವೆಂದು ರಾಷ್ಟ್ರೀಯ ಶಿಕ್ಷಣ ನೀತಿ-2020 ಒತ್ತಿ ಹೇಳಿದೆ. “ಶಿಕ್ಷಣ ವ್ಯವಸ್ಥೆಯು ಒಳ್ಳೆಯ ಮನುಷ್ಯನನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಬೇಕು’ ಎಂದು ಅದು ಹೇಳಿದೆ. ಪ್ರಿ ಸ್ಕೂಲ್, ಪ್ರಾಥಮಿಕ ಶಾಲೆ, ಹೈಸ್ಕೂಲ್ ಹೀಗೆ ಹಂತವಾಗಿ ಮಕ್ಕಳಲ್ಲಿ ಆಯಾ ವಯಸ್ಸಿಗೆ ಇರಬೇಕಾದ ಪ್ರಬುದ್ಧತೆ, ಯೋಚನೆ ಬೆಳೆಯುವಂತೆ ನೋಡಿಕೊಳ್ಳಲಾಬೇಕಾಗುತ್ತದೆ.
ದೆಹಲಿಯ ಶಾಲೆಯೊಂದರಲ್ಲಿ ಭಾವನೆಗಳನ್ನು ಗುರುತಿಸುವಂತೆ ನಡೆಸಲಾದ ಪರೀಕ್ಷೆಯೊಂದರಲ್ಲಿ ಆರು ವರ್ಷದೊಳಗಿನ ಕೇವಲ 50% ಮಕ್ಕಳು ಮಾತ್ರ ಪ್ರಾಥಮಿಕ ಭಾವನೆಗಳಾದ ಖುಶಿ, ದುಃಖ, ಕೋಪ ಮತ್ತು ಭಯವನ್ನು ಗುರುತಿಸಿದರು. ಶಾಲೆಯಂತಹ ನೂರಾರು ಮಕ್ಕಳು ಸೇರುವ ಸ್ಥಳದಲ್ಲಿ ಮಗುವೊಂದು ತನ್ನ ಸಹಪಾಠಿಯ ಭಾವನೆಯನ್ನು ಗುರುತಿಸಲು ಸೋಲುತ್ತದೆ ಅಂತಾದರೆ ಆ ಮಗುವಿಗೆ ಮುಂದೆ ಕೆಲ ಭಿನ್ನ ಸಾಮಾಜಿಕ ಸನ್ನಿವೇಶದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ASER (Anual status of education report)- 2019ರ ಭಾಗವಾಗಿ ನಡೆಸಿದ ಕಾರ್ಯಕ್ರಮವು ಕೆಲ ಆಸಕ್ತಿದಾಯಕ ವಿಷಯಗಳತ್ತ ಗಮನ ಸೆಳೆಯುತ್ತದೆ. ಮಕ್ಕಳನ್ನು ” ನಿಮ್ಮ ಗೆಳೆಯ ನಿಮ್ಮ ಆಟಿಕೆಯನ್ನು ಕಿತ್ತುಕೊಂಡರೆ ನೀವೇನು ಮಾಡುತ್ತೀರಿ” ಎಂದು ಕೇಳಿದಾಗ 8 ವರ್ಷ ವಯಸ್ಸಿನ ಕಾಲು ಭಾಗದಷ್ಟು ಮಕ್ಕಳು “ನಾವು ಜಗಳವಾಡಿ ಆಟಿಕೆ ಮತ್ತೆ ಕಿತ್ತುಕೊಳ್ಳುತ್ತೇವೆ” ಎಂದು ಹೇಳಿದ್ದರು. ಕೇವಲ 2.5% ಮಕ್ಕಳು ಮಾತ್ರ “ನಾವು ಮಾತಾಡಿ ಆಟಿಕೆ ವಾಪಾಸು ಕೊಡುವಂತೆ ಕೇಳುತ್ತೇವೆ” ಎಂದು ಹೇಳಿದ್ದರು. ಮಕ್ಕಳಲ್ಲಿ ಇರುವ ಸಂವಹನ ಸಾಮರ್ಥ್ಯದ ಕೊರತೆಯನ್ನು ಎತ್ತಿ ತೋರಿಸಲು ಇದೊಂದೇ ಉದಾಹರಣೆ ಸಾಕು.
ಸಹಪಾಠಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಮತ್ತೊಂದು ಚಟುವಟಿಕೆಯಲ್ಲಿ ಕೇವಲ 58% ಮಕ್ಕಳು ಮಾತ್ರ ಸಫಲರಾಗಿದ್ದರು. ಹೀಗೆ ಸಫಲಾರದ ಮಕ್ಕಳು ಮಾತ್ರ ತಮ್ಮ ಅರ್ಥೈಸುವಿಕೆಯನ್ನು ಬಳಸಿಕೊಂಡು ಮತ್ತೊಬ್ಬರ ಭಾವನೆಯನ್ನು ಗ್ರಹಿಸಿ, ಅದಕ್ಕೆ ತಕ್ಕುದಾಗಿ ನಡೆದುಕೊಳ್ಳಲು ಸಾಧ್ಯ. ಸಾಮಾನ್ಯ, ಪ್ರಾಥಮಿಕ ಭಾವನೆಗಳನ್ನೇ ಅರ್ಥಮಾಡಿಕೊಳ್ಳದ ಮಕ್ಕಳು ಸನ್ನಿವೇಶಕ್ಕೆ ತಕ್ಕಂತೆ ವರ್ತಿಸಬೇಕು ಅಂತ ಬಯಸುವುದೇ ತಪ್ಪಾಗುತ್ತದೆ.
ಮುಂದೆ ಈ ದೇಶದ ಪ್ರಬುದ್ಧ ನಾಗರಿಕರಾಗಲಿರುವ, ದೇಶದ ಭವಿಷ್ಯವನ್ನು ನಿರ್ಧರಿಸಲಿರುವ ಮಕ್ಕಳ ಸಮಗ್ರ ಅಭಿವೃದ್ಧಿಗೆ ದೇಶಾದ್ಯಂತ SELನಂತಹ ಯೋಜನೆ ಜಾರಿಗೊಳಿಸುವುದು ರಾಷ್ಟ್ರೀಯ ಆದ್ಯತೆಯಾಗಬೇಕು. ಹೀಗೆ ಬದುಕಿನ ಮೊದ ಮೊದಲ ಘಟ್ಟದಲ್ಲಿರುವ ಮಕ್ಕಳ ಮೇಲೆ ಹೂಡುವ ಹಣ ಯಾವತ್ತೂ ವ್ಯರ್ಥವಾಗಲಾರದು. ರಾಜಕಾರಣಕ್ಕೆ, ಅಬ್ಬರದ ಪ್ರಚಾರಕ್ಕೆ, ತೆವಲಿಗೆ ಬಳಸಲಾಗುವ ದುಡ್ಡನ್ನು ಇಂತಹ ಅತ್ಯಗತ್ಯ ಕಾರ್ಯಗಳಿಗೆ ಬಳಸುವುದರಿಂದ ಜವಾಬ್ದಾರಿಯುತ ಮತ್ತು ಸಾಮುದಾಯಿಕ ಭಾದ್ಯತೆಯುಳ್ಳ ನಾಗರಿಕರನ್ನು ಸೃಷ್ಟಿಸಿದಂತಾಗುತ್ತದೆ.