ನಮ್ಮ ದೇಶದ ಶಿಕ್ಷಣ ಕ್ರಮವು ಮೊದಲಿನಿಂದಲೂ ಪರಿಣಾಮಕಾರಿಯಾಗಿದ್ದು ಸಾಕಷ್ಟು ಮಾನ್ಯತೆಯನ್ನೂ ಹೊಂದಿದೆ. ನಮ್ಮಲ್ಲಿ ತಯಾರಾದ ಪಧವೀಧರರು , ಉನ್ನತ ಶಿಕ್ಷಣ ಪಡೆದವರು ವಿದೇಶಗಳಲ್ಲಿ ಉತ್ತಮ ಹುದ್ದೆಗಳನ್ನು ಪಡೆದಿರುವುದೇ ಇದಕ್ಕೆ ಸಾಕ್ಷಿ. ಗುಣಮಟ್ಟದ ಶಿಕ್ಷಣ ನೀಡುವ ಸಾವಿರಾರು ಶಿಕ್ಷಣ ಸಂಸ್ಥೆಗಳ ತವರೂರು ಭಾರತ ಎನ್ನಲು ಯಾವುದೇ ಅಡ್ಡಿ ಇಲ್ಲ. ಆದರೆ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) ಈಗ ದೇಶವನ್ನು ಬಾಧಿಸುತ್ತಿರುವ ಕೋವಿಡ್ 19 ಕಾರಣದಿಂದ ತನ್ನ ಪಠ್ಯಕ್ರಮಗಳಲ್ಲಿ ಶೇಕಡಾ 30 ರಷ್ಟು ಪಠ್ಯವನ್ನು ಕೈ ಬಿಡಲು ತೀರ್ಮಾನಿಸಿದೆ. ಅದರಲ್ಲೂ ಪ್ರಮುಖ ವಿಷಯಗಳಾಧ ರಾಷ್ಟ್ರೀಯತೆ, ಜಾತ್ಯಾತೀತತೆ, ನೆರೆ ಹೊರೆಯವರೊಂದಿಗೆ ಭಾರತದ ಸಂಭಂದ, ಭಾರತದ ವಿದೇಶಾಂಗ ನೀತಿ ಮತ್ತು ನೋಟು ನಿಷೇಧದಂತಹ ಪಠ್ಯಗಳನ್ನೇ ಕೈ ಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಿಬಿಎಸ್‌ಇಯು 9 ರಿಂದ 12 ನೇ ತರಗತಿಯವರೆಗೆ ತನ್ನ ಪಠ್ಯಕ್ರಮವನ್ನು ಪರಿಷ್ಕರಿಸಿದ್ದು, 11ನೇ ತರಗತಿಯ ರಾಜಕೀಯ ವಿಜ್ಞಾನ ಪುಸ್ತಕಗಳಿಂದ ಫೆಡರಲಿಸಂ, ರಾಷ್ಟ್ರೀಯತೆ ಮತ್ತು ಜಾತ್ಯತೀತತೆಯಂತಹ ವಿಷಯಗಳನ್ನು ಬಿಟ್ಟುಬಿಟ್ಟಿದೆ.12 ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯದಿಂದ ಭಾರತವು ತನ್ನ ನೆರೆಹೊರೆಯವರೊಂದಿಗಿನ ಸಂಬಂಧದಂತಹ ವಿಷಯಗಳನ್ನು ಕೈ ಬಿಟ್ಟಿದೆ. ಸಾಮಾಜಿಕ ವಿಜ್ಞಾನದ ವ್ಯಾಪ್ತಿಗೆ ಬರುವ 10 ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಕ್ರಮಕ್ಕಾಗಿ, ‘ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ’, ‘ಲಿಂಗ, ಧರ್ಮ ಮತ್ತು ಜಾತಿ’, ‘ಜನಪ್ರಿಯ ಹೋರಾಟಗಳು ಮತ್ತು ಚಳುವಳಿಗಳು’, ಮತ್ತು ‘ಪ್ರಜಾಪ್ರಭುತ್ವಕ್ಕೆ ಸವಾಲುಗಳು’ ಎಂಬ ಸಂಪೂರ್ಣ ಅಧ್ಯಾಯಗಳನ್ನು ಅಳಿಸಲಾಗಿದೆ. ಈ ಎಲ್ಲ ಬದಲಾವಣೆಗಳು 2020-21 ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತವೆ.
ಇತರ ವಿಷಯಗಳ ಪೈಕಿ, ಸಿಬಿಎಸ್‌ಇ 12 ನೇ ತರಗತಿಯ ವ್ಯವಹಾರ ಅಧ್ಯಯನ ಪುಸ್ತಕಗಳಿಂದ ನೋಟು ನಿಷೇಧ ಪಠ್ಯವನ್ನು ತೆಗೆದುಹಾಕಿದೆ. ಬಹುತೇಕ ಎಲ್ಲ ವಿಷಯಗಳಲ್ಲಿ ಅಧ್ಯಾಯಗಳ ಅಳಿಸುವಿಕೆ ಮತ್ತು ವಿಷಯಗಳ ಕಡಿತ ಕಂಡುಬಂದಿದೆ. ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ, ಪ್ರಾಯೋಗಿಕ ಭಾಗಗಳನ್ನು ಸಹ ಕಡಿಮೆ ಮಾಡಲಾಗಿದೆ. 10 ನೇ ತರಗತಿಯಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಕಡಿಮೆ ಮಾಡುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (ಎನ್‌ಸಿಇಆರ್‌ಟಿ) ಸೂಚಿಸಿದೆ ಎಂದು ಈ ಹಿಂದೆಯೇ ವರದಿ ಆಗಿತ್ತು. ಈ ಪರಿಷ್ಕೃತ ಪಠ್ಯಕ್ರಮವನ್ನು ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದೆ. ಜೂನ್‌ನಲ್ಲಿ ಎನ್‌ಸಿಇಆರ್‌ಟಿ ಸಿಬಿಎಸ್‌ಇಗೆ ಸಲ್ಲಿಸಿದ ಸಲಹೆಗಳ ಫಲಿತಾಂಶವೇ ಈ ಬದಲಾವಣೆಗಳು. 9 ರಿಂದ 12 ನೇ ತರಗತಿಗಳ ಪಠ್ಯಕ್ರಮವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಂಗಳವಾರ ಹೇಳಿದ್ದಾರೆ. ಕಲಿಕೆಯ ಸಾಧನೆಯ ಮಹತ್ವವನ್ನು ಪರಿಗಣಿಸಿ, ಪ್ರಮುಖ ಪರಿಕಲ್ಪನೆಗಳನ್ನು ಉಳಿಸಿಕೊಳ್ಳುವ ಮೂಲಕ ಪಠ್ಯಕ್ರಮವನ್ನು 30 ಪ್ರತಿಶತದವರೆಗೆ ತರ್ಕಬದ್ಧಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸಿಬಿಎಸ್‌ಇ ಸಹ ಪತ್ರಿಕಾ ಹೇಳಿಕೆಯನ್ನು ನೀಡಿ, ಪಠ್ಯಕ್ರಮ ಪರಿಷ್ಕರಣೆಗಾಗಿ ಕೋವಿಡ್ 19 ರೋಗವನ್ನು ಉಲ್ಲೇಖಿಸಿದೆ. ಪಠ್ಯಕ್ರಮದ ಪರಿಷ್ಕರಣೆ ದೇಶದಲ್ಲಿ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಅಸಾಧಾರಣ ಪರಿಸ್ಥಿತಿಯಿಂದ ತೆಗೆದುಕೊಳ್ಳಲಾದ ಕ್ರಮವಾಗಿದೆ. ಕಲಿಕೆಯ ಮಟ್ಟವನ್ನು ಸಾಧಿಸುವ ಪ್ರಾಮುಖ್ಯತೆಯನ್ನು ಪರಿಗಣಿಸಿ, ಪಠ್ಯಕ್ರಮವನ್ನು ಪ್ರಮುಖ ಪರಿಕಲ್ಪನೆಗಳನ್ನು ಉಳಿಸಿಕೊಳ್ಳುವ ಮೂಲಕ ಸಾಧ್ಯವಾದಷ್ಟು ಮಟ್ಟಿಗೆ ತರ್ಕಬದ್ಧಗೊಳಿಸಲಾಗಿದೆ, ಎಂದು ಅದು ಹೇಳಿದೆ. ಬೇರೆ ಬೇರೆ ವಿಷಯಗಳನ್ನು ಸಂಪರ್ಕಿಸಲು ಅಗತ್ಯವಿರುವ ಮಟ್ಟಿಗೆ ವಿದ್ಯಾರ್ಥಿಗಳಿಗೆ ತಿಳಿಸಲಾದ ವಿಷಯಗಳನ್ನು ವಿವರಿಸುವಂತೆ ಶಾಲೆಗಳ ಮುಖ್ಯಸ್ಥರನ್ನು ಕೇಳಿದೆ ಎಂದು ಮಂಡಳಿ ಹೇಳಿದೆ. ಕಡಿಮೆಯಾದ ಪಠ್ಯಕ್ರಮವು ಆಂತರಿಕ ಮೌಲ್ಯಮಾಪನ ಮತ್ತು ವರ್ಷಾಂತ್ಯದ ಮಂಡಳಿಯ ಪರೀಕ್ಷೆಗಳ ವಿಷಯಗಳ ಭಾಗವಾಗಿರುವುದಿಲ್ಲ.
ಸಿಬಿಎಸ್‌ಇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಪಠ್ಯಕ್ರಮದ ಪ್ರಕಾರ, ಇತರ ವಿಷಯಗಳ ಜೊತೆಗೆ, 12 ನೇ ತರಗತಿಯ ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನದಲ್ಲಿ ಭಾರತದಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಬಗ್ಗೆ ವಿಶೇಷ ಉಲ್ಲೇಖದೊಂದಿಗೆ ವ್ಯವಹಾರದ ಮೇಲೆ ಸರ್ಕಾರದ ನೀತಿ ಬದಲಾವಣೆಗಳ ಪ್ರಭಾವವನ್ನು ಅಧ್ಯಯನ ಮಾಡುವುದಿಲ್ಲ. 12 ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಕ್ರಮದಲ್ಲಿ, ಭಾರತದ ವಿದೇಶಾಂಗ ನೀತಿಯ ವಿಷಯಗಳ ಬಗ್ಗೆ ಇತರ ವಿಷಯಗಳನ್ನು ತೆಗೆದುಹಾಕಲಾಗಿದೆ. ಈ ವರ್ಷ ನೆರೆಹೊರೆಯವರೊಂದಿಗೆ ಭಾರತದ ಸಂಬಂಧಗಳು: ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಮ್ಯಾನ್ಮಾರ್ ಎಂಬ ವಿಷಯವನ್ನೂ ತೆಗೆದು ಹಾಕಲಾಗಿದೆ. ಇತರ ವಿಷಯಗಳ ಪೈಕಿ, 11 ನೇ ತರಗತಿಯ ರಸಾಯನಶಾಸ್ತ್ರ ಪುಸ್ತಕಗಳಿಂದ ಪರಿಸರ ರಸಾಯನಶಾಸ್ತ್ರ ಕುರಿತ ಸಂಪೂರ್ಣ ಅಧ್ಯಾಯವನ್ನು ಅಳಿಸಲಾಗಿದೆ.
ಆದರೆ ತೆಗೆದು ಹಾಕಲಾಗಿರುವ ಈ ಪಠ್ಯ ವಿಷಯಗಳ ಕುರಿತು ಶಿಕ್ಷಣ ತಜ್ಞರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೇಂಧ್ರ ಎನ್‌ಡಿಎ ಸರ್ಕಾರದ ಪ್ರಧಾನ ಮಂತ್ರಿ ನರೇಂಧ್ರ ಮೋದಿ ಅವರು 2016 ರಲ್ಲಿ ನೋಟು ನಿಷೇಧವನ್ನು ದೇಶಾಧ್ಯಂತ ಜಾರಿಗೊಳಿಸಿದುದರ ದುಷ್ಪರಿಣಾಮದಿಂದಾಗಿ ಸಾವಿರಾರು ಕೈಗಾರಿಕೆಗಳು ಬಾಗಿಲು ಮುಚ್ಚಿದವು. ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದರು. ಬ್ಯಾಂಕುಗಳ ಮುಂದೆ ಹಣಕ್ಕಾಗಿ ಕ್ಯೂ ನಿಂತು ನೂರಾರು ಮಂದಿ ಪ್ರಾಣ ಬಿಟ್ಟರು. ಕೇಂದ್ರ ಸರ್ಕಾರದ ಪ್ರಕಾರ ನೋಟು ಅಮಾನ್ಯೀಕರಣದಿಂದ ಎರಡು ಲಕ್ಷ ಕೋಟಿಗಳಷ್ಟು ಕಪ್ಪು ಹಣ ಚಲಾವಣೆಯಿಂದ ಹೊರಗುಳಿಯಲಿದೆ ಎಂದು ಹೇಳಿಕೊಂಡಿತ್ತು. ಆದರೆ ಮಾರನೇ ವರ್ಷ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಚಲಾವಣೆಯಲ್ಲಿದ್ದ 18 ಲಕ್ಷ ಕೋಟಿ ಹಣವೂ ಕೂಡ ವಾಪಾಸ್ ಬಂದಿತ್ತು. ಅಂದರೆ ಅಮಾನ್ಯೀಕರಣದಿಂದಾಗಿ ಎಷ್ಟು ಕೋಟಿ ಕಪ್ಪು ಹಣ ಪತ್ತೆ ಅಯಿತು ಎಂಬ ಬಗ್ಗೆ ಸ್ವತಃ ಕೇಂದ್ರ ಸರ್ಕಾರವೂ ಈತನಕ ಮಾಹಿತಿಯನ್ನು ನೀಡಿಲ್ಲ. ಆರ್ಥಿಕ ತಜ್ಞರ ಪ್ರಕಾರ ನೋಟು ಅಮಾನ್ಯೀಕರಣವು ಅತ್ಯಂತ ಕೆಟ್ಟ ನಿರ್ಧಾರವಾಗಿದ್ದು ಇದರಿಂದ ದೇಶ 5 ವರ್ಷಗಳಷ್ಟು ಹಿಂದೆ ಹೋಗಿದೆ. ದೇಶದ ಆರ್ಥಿಕತೆಯ ಮೇಲೆ ಅಮಾನ್ಯೀಕರಣವು ಮಾಡಿರುವ ದುಷ್ಪರಿಣಾಮವು ನಿಜಕ್ಕೂ ಅಧ್ಯಯನ ಯೋಗ್ಯವಾಗಿದೆ. ಆದರೆ ಸಿಬಿಎಸ್‌ಇ ಯು ಕೋವಿಡ್ 19 ಕಾರಣದಿಂದ ಪ್ರಮುಖ ವಿಷಯಗಳನ್ನು ಕೈ ಬಿಡುವ ಮೂಲಕ ಕೇಂದ್ರ ಸರ್ಕಾದ ವೈಫಲ್ಯಗಳನ್ನು ಮುಚ್ಚಿ ಹಾಕಲು ಅನುವು ಮಾಡಿಕೊಡುತ್ತಿದೆ ಎಂದು ದೆಹಲಿಯ ಶಿಕ್ಷಣ ತಜ್ಞ ಪ್ರೊಫೆಸರ್ ಬಲರಾಮ್ ಯಾದವ್ ಹೇಳುತ್ತಾರೆ. ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಇತರ ವಿಷಯಗಳನ್ನು ಕೈ ಬಿಡಬಹುದಿತ್ತು ಎಂದು ಅವರು ಅಭಿಪ್ರಾಯಿಸಿದ್ದಾರೆ.