ರಾಜಕೀಯ ಸಮಸ್ಯೆಗಳಿಗೆ ಭಾರತದ ಮುಖ್ಯವಾಹಿನಿಯ ಬಹುತೇಕ ಸೆಲೆಬ್ರಿಟಿಗಳು ಹೆಚ್ಚಾಗಿ ತಲೆ ಹಾಕುವುದಿಲ್ಲ. ಅದರಲ್ಲೂ ಮೋದಿ ವಿರುದ್ಧ ಮಾತಾಡಲು ಘಟಾನುಘಟಿ ಸೆಲೆಬ್ರಟಿಗಳೇ ಹಿಂದೇಟು ಹಾಕುತ್ತಾರೆ. ಅನುಪಮ್ ಖೇರ್ , ಪರೇಶ್ ರಾವಲ್ ಮುಂತಾದ ಹಿರಿಯ ನಟರು ಮೋದಿ ಪರವಾಗಿ ಮಾತನಾಡಲು ತೋರಿಸುವ ಧೈರ್ಯ ಮೋದಿಯನ್ನು ಟೀಕೆ ಮಾಡಲು ಯಾವ ಹಿರಿಯ ನಟರೂ ತೋರಿಸುತ್ತಿಲ್ಲ. ಅಷ್ಟರ ಮಟ್ಟಿಗೆ ಸರ್ಕಾರವನ್ನು ಭಯಪಡುತ್ತಿದ್ದಾರೆ.
ಮೋದಿ ಸರ್ಕಾರದ ನೀತಿಗಳ ವಿರುದ್ಧ ದನಿಯೆತ್ತುವುದರಲ್ಲಿ ಬಾಲಿವುಡ್‌ನ ಕಿರಿಯ ನಟ-ನಟಿಯರ ಹೆಚ್ಚಿನವರು. ಅನುರಾಗ್ ಕಶ್ಯಪ್, ಸಿದ್ದಾರ್ಥ್, ಸ್ವರಾ ಭಾಸ್ಕರ್, ತಾಪ್ಸಿ ಪನ್ನು ಮುಂತಾದ ಯುವ ಪ್ರತಿಭಾವಂತರು ಮೋದಿ ಸರ್ಕಾರದ ಕೆಲವೊಂದು ನೀತಿಗಳನ್ನು ಟೀಕಿಸಿದ ಉದಾಹರಣೆಗಳಿವೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದ ದೆಹಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಗೂಂಡಾಗಳು ರಾತ್ರೋ ರಾತ್ರಿ ಹಲ್ಲೆ ನಡೆಸಿರುವುದನ್ನು ಹಲವು ನಟರು ಖಂಡಿಸಿದ್ದರು.

ಆದರೂ ನೇರವಾಗಿ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಬಳಿ ತೆರಳಿ ನೈತಿಕ ಸ್ಥೈರ್ಯ ತುಂಬಿದ್ದ ದೀಪಿಕಾ ಪಡುಕೋಣೆಯವರನ್ನು ಸಾಮಾಜಿಕ ಜಾಲತಾಣದಲ್ಲಿ ಮೋದಿ ಭಕ್ತರು ಅವ್ಯಾಚ್ಯವಾಗಿ ನಿಂದಿಸಿದ್ದರು. ಇದಾಗಿ ಕೆಲವು ದಿನಗಳ ಬಳಿಕ ಮೋದಿ ದೀಪ ಬೆಳಗಿಸಲು ಕರೆ ನೀಡಿದಾಗ ಪಡುಕೋಣೆ ದಂಪತಿ ಮೋದಿ ಕರೆಗೆ ಬೆಂಬಲಿಸಿ ದೀಪ ಬೆಳಗಿಸಿ ಫೋಟೋ ಹಾಕಿದ್ದರು.

ಸಿಎಎ-ಎನ್‌ಆರ್‌ಸಿ ಕಾಯ್ದೆ ವಿರುದ್ಧ ಮೊದಲಿನಿಂದಲೂ ಬಲವಾಗಿ ಧ್ವನಿಯೇರಿಸುತ್ತಾ ಬಂದಿರುವ ಬಾಲಿವುಡ್ ಮಂದಿಯಲ್ಲಿ ಯುವ ನಟಿ ಸ್ವರಾ ಭಾಸ್ಕರ್ ಒಬ್ಬರು. ಅಮೇರಿಕಾದಲ್ಲಿ ಜನಾಂಗೀಯ ಹತ್ಯೆ ನಡೆದ ಬೆನ್ನಿಗೆ ಬುಗಿಲೆದ್ದ ಬೃಹತ್ ಪ್ರತಿಭಟನೆಯಂತೆ ದೆಹಲಿಯ ಜನರೂ ರಸ್ತೆಗಿಳಿಯಬೇಕೆಂದು ಸ್ವರಾ ಭಾಸ್ಕರ್ ತಮ್ಮ ಟ್ವಿಟರ್‌ನಲ್ಲಿ ಹೇಳಿದ್ದರು.
ಇದು ಮೋದಿ ಅಭಿಮಾನಿಗಳಿಗೆ ಸ್ವರಾ ಭಾಸ್ಕರ್ ಅವರನ್ನು ನಿಂದಿಸಲು ಮುಖ್ಯ ವಿಷಯವಾಗಿಬಿಟ್ಟಿತು. ಸಾಮಾಜಿಕ ಜಾಲತಾಣದಲ್ಲಿ ಸ್ವರಾ ವಿರುದ್ಧ ಹಲವು ಅಪಮಾನಕಾರಿ ಟ್ರಾಲ್‌ಗಳು ಹರಿದಾಡುತ್ತಿವೆ. ಜೊತೆಗೆ ಸ್ವರಾರನ್ನು ಬಂಧಿಸಬೇಕೆಂದು ಕ್ಯಾಂಪೈನ್ ಶುರು ಮಾಡಿದ್ದಾರೆ.

ಸದ್ಯ ಟ್ರೆಂಡಿಂಗ್‌ಲ್ಲಿರುವ #ArrestSwaraBhaskar ನ ಸ್ಕ್ರೀನ್ ಶಾಟ್ ಹಾಕಿರುವ ಸ್ವರಾ ಭಾಸ್ಕರ್ “ಈ ಕಾರಣಕ್ಕೆ ಭಾರತದ ಹೆಚ್ಚಿನ ಸೆಲೆಬ್ರಿಟಿಗಳು ಮೌನವಹಿಸುತ್ತಾರೆ. ಕೇವಲ ಗರ್ಭಿಣಿ ಆನೆ ಸತ್ತ ಕುರಿತು ಮಾತನಾಡುತ್ತಾರೆ” ಎಂದು ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ಸಿಎಎ ವಿರೋಧಿ ಹೋರಾಟದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಗರ್ಭಿಣಿ ಸಫೂರಾ ಹೆಸರು ಉಲ್ಲೇಖಿಸಿದ್ದಾರೆ.
And that my friends.. is why most celebrities in India only raise their voices for elephants! #safoorazargar #ArrestSwaraBhaskar #bizarrebuttrue pic.twitter.com/Nn3k3x8Nlv
— Swara Bhasker (@ReallySwara) June 6, 2020