ಮಾರಕ ಕರೋನಾ ವೈರಸ್ ರೋಗ ನಿಗ್ರಹಕ್ಕಾಗಿ ಲಸಿಕೆಗಳು ಯಾವಾಗ ಬೇಕಾದರೂ ಬರಬಹುದು ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಸುಳಿವು ನೀಡಿದ್ದರು. ಕರೋನಾ ಲಸಿಕೆ ವಿತರಣೆಗೆ ಪ್ರತಿಯೊಂದು ರಾಜ್ಯವೂ ಸನ್ನದ್ಧವಾಗಿರಬೇಕು. ಲಸಿಕೆ ವಿತರಣೆಯೂ ಅತೀದೊಡ್ಡ ಪ್ರಕ್ರಿಯೆ, ಎಲ್ಲರೂ ಚುನಾವಣೆ ಮಾದರಿಯಲ್ಲೇ ಇದಕ್ಕೂ ಸಜ್ಜಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳಿಗೆ ಕರೆ ನೀಡಿದ್ದರು. ಈ ಬೆನ್ನಲ್ಲೇ ಯಾವಾಗ ಕರೋನಾಗೆ ಲಸಿಕೆ ಲಭ್ಯವಾಗಬಹುದು ಎಂಬ ಚರ್ಚೆಗೆ ಬ್ರೇಕ್ ಬಿದ್ದಿತ್ತು. ಹೀಗಿರುವಾಗಲೇ ಜನವರಿಯಿಂದಲೇ ದೇಶದ ಜನತೆಗೆ ಲಸಿಕೆ ನೀಡಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಕರೋನಾ ಲಸಿಕೆ ಕುರಿತು ಮಾತಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಕೇಂದ್ರ ಸರ್ಕಾರದ ಮೊದಲ ಆದ್ಯತೆ ಲಸಿಕೆಯ ಸುರಕ್ಷತೆ. ಜನರಿಗೆ ಲಸಿಕೆ ನೀಡುವ ಮೊದಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತೇವೆ. ಜನವರಿಯಿಂದಲೇ ದೇಶದ ಜನತೆಗೆ ಕರೋನಾ ಲಸಿಕೆ ನೀಡಬಹುದು, ಮುಂದಿನ ತಿಂಗಳು ಮೊದಲ ವಾರದಲ್ಲಿ ಈ ಪ್ರಕ್ರಿಯೆ ಶುರುವಾಗಲಿದೆ ಎಂದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಡೀ ವಿಶ್ವದಲ್ಲಿ ಹಲವು ಕಡೆ ಲಸಿಕೆ ತಯಾರಾಗುತ್ತಿದೆ. 50 ಲಸಿಕೆಗಳು ಕ್ಲಿನಿಕಲ್ ರಿಸರ್ಚ್ ಹಂತದಲ್ಲಿವೆ. 25 ಲಸಿಕೆಗಳು ಅಡ್ವಾನ್ಸ್ ಟ್ರಯಲ್ನಲ್ಲಿವೆ. 5 ಲಸಿಕೆಗಳು ಕ್ಲಿನಿಕಲ್ ಟ್ರಯಲ್ನಲ್ಲಿವೆ. ಭಾರತದಲ್ಲಿ 24 ಸಂಸ್ಥೆಗಳಿಗೆ ಲಸಿಕೆ ತಯಾರಿಸುವ ಸಾಮರ್ಥ್ಯ ಇದೆ.
ಸದ್ಯ ಭಾರತದಲ್ಲಿ ಆರು ಲಸಿಕೆಗಳನ್ನು ತಯಾರು ಮಾಡಲಾಗುತ್ತಿದೆ. ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಸಹಭಾಗಿತ್ವದಲ್ಲಿ ಒಂದು ಲಸಿಕೆ, ಜ್ಯುಡಿಸ್ ಸ್ಕ್ಯಾಡಿಲಾ ಎರಡನೇ ಲಸಿಕೆ ತಯಾರಿಸುತ್ತಿದೆ. ಹಾಗೆಯೇ ಜಿನೇವಾ-ಆಕ್ಸ್‌ಫರ್ಡ್ ಸಂಸ್ಥೆ, ಸೆರೆಂ ಇನ್ಸ್‌ಟ್ಯೂಟ್ ಆಫ್ ಇಂಡಿಯಾ, ಡಾ. ರೆಡ್ಡಿಸ್ ಲ್ಯಾಬ್ ಸ್ಪುಟ್ನಿಕ್, ಬಯೋಲಾಜಿಕಲ್ ಇ-ಲಿಮಿಟೆಡ್ ಸಂಸ್ಥೆ ಲಸಿಕೆ ತಯಾರಿಸುವ ಜವಾಬ್ದಾರಿ ಹೊತ್ತಿವೆ. ಈ ಎಲ್ಲಾ ಲಸಿಕೆಗಳು ಹಲವು ಸುತ್ತಿನ ಪ್ರಯೋಗಗಳಿಗೆ ಒಳಪಡಲಿವೆ. ಸುರಕ್ಷತೆಯ ಬಗ್ಗೆ ಖಾತ್ರಿಯಾದ ಬಳಿಕವಷ್ಟೇ ಜನರಿಗೆ ನೀಡಲಾಗುತ್ತದೆ.
ಮೊದಲ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ಕರೋನಾ ಹೋರಾಟದಲ್ಲಿ ಮುಂಚೂಣಿಯಲ್ಲಿ ಹೋರಾಟ ಮಾಡುವವರ ಆತ್ಮವಿಶ್ವಾಸ ಹೆಚ್ಚಿಸಲು ಮೊದಲ ಹಂತದಲ್ಲಿ ಅವರಿಗೆ ಲಸಿಕೆ ನೀಡಲಾಗುತ್ತದೆ. ಅರ್ಹರು ಆನ್‍ಲೈನ್ ನೋಂದಣಿ ಮಾಡಿಕೊಂಡ ಬಳಿಕ ಅವರ ಮೊಬೈಲ್‍ಗೆ ಲಸಿಕೆ ನೀಡುವ ದಿನಾಂಕ, ಸಮಯ, ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ಕಳುಹಿಸಲಾಗುವುದು. ನಿರ್ದಿಷ್ಟ ಗುರುತಿನ ಪತ್ರಗಳನ್ನು ಪಡೆದು ಲಸಿಕೆ ಹಾಕಲಾಗುವುದು ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ತಿಳಿಸಿದೆ.