ಭಾರತದ ಪೋಲಿಸ್ ವ್ಯವಸ್ಥೆ ಮೇಲ್ನೋಟಕ್ಕೆ ಒಂದೇ ತೆರನಾಗಿ ಕಂಡರೂ ಉತ್ತರ, ದಕ್ಷಿಣ, ಈಶಾನ್ಯ ರಾಜ್ಯಗಳಲ್ಲಿ ಬೇರೆ ಬೇರೆ ತರಹದ ಮುಖಗಳನ್ನ ಹೊಂದಿದೆ. ಇವು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಬರುವುದರಿಂದ ಒಂದೊಂದು ರಾಜ್ಯದ ಪೋಲಿಸ್ ಗಿರಿಗಳು ಬೇರೆ ಬೇರೆ ತರಹದ ಕಾರ್ಯ ವೈಖರಿಯನ್ನು ಹೊಂದಿರುವುದರ ಜೊತೆಗೆ ಆಯಾ ಸರ್ಕಾರಗಳ ಸುಪರ್ದಿಯಲ್ಲಿ ಸಾಂವಿಧಾನಿಕ ಚೌಕಟ್ಟು ಮತ್ತು ಕಾನೂನುಗಳನ್ನು ಮೀರಿ ದೌರ್ಜನ್ಯದ ಕೆಲಸಗಳನ್ನು ಮಾಡಿವೆ. ಪ್ರಾಮಾಣಿಕವಾದ ಮಾಡುವ ಕೆಲಸಗಳನ್ನು ನಾವು ಹೊಗಳಿ ಅಟ್ಟಕ್ಕೆರಿಸಬೇಕಾದ ಅಗತ್ಯವಿಲ್ಲ, ಅದು ಅವರು ಮಾಡಲೇಬೇಕಾದ ಕೆಲಸ. ಅದಕ್ಕಾಗಿಯೇ ನಿಯೋಜಿತವಾಗಿರುವುದು. ಆದರೆ ಯಾವಾಗ ಪ್ರಾಮಾಣಿಕತೆಯು ಭ್ರಷ್ಟತೆಯೊಂದಿಗೆ ನಿಯೋಗ ಮಾಡಿಕೊಳ್ಳುತ್ತದೋ ಅಲ್ಲಿಗೆ ಎಲ್ಲ ಮೌಲ್ಯಗಳು ಕೂಡ ಮಣ್ಣಾಗುತ್ತವೆ. ಜನಪರವಾದ ಕಾಳಜಿಗಳು ಗೌಣವಾಗುತ್ತವೆ.
ಲಾಕ್ಡೌನ್ ಘೋಷಣೆಯಾಗಿದ್ದರೂ ತೂತ್ತುಕುಡಿಯ ಅಪ್ಪ ಮಗ ಇಬ್ಬರೂ ನಿಯಮ ಮೀರಿ ತಮ್ಮ ಮೊಬೈಲ್ ಅಂಗಡಿ ಮಳಿಗೆಯನ್ನು ತೆರೆದಿದ್ದ ಕಾರಣವಾಗಿ ಪೊಲೀಸರು ಬಂಧಿಸುತ್ತಾರೆ. ತಪ್ಪಿಗೆ ವಿಚಾರಣೆ ನಡೆದು ಶಿಕ್ಷೆಯಾಗಬೇಕಿದ್ದ ಈ ಕೇಸಿನಲ್ಲಿ ಅದೊಂದು ಸಣ್ಣ ಅಪರಾಧಕ್ಕೆ ಪೊಲೀಸರು ಮನಸೋ ಇಚ್ಛೆ ಹಿಂಸೆ ನೀಡಿ (ಆ ಹಿಂಸೆಯ ವಿಧಗಳನ್ನು ಹಂಚಿಕೊಳ್ಳಲು ಕೂಡ ಅಳುಕಾಗುತ್ತದೆ. ಅಂತ ಕ್ರೌರ್ಯ!) ಕಡೆಗೆ ಅವರಿಬ್ಬರೂ ಸಾಯುತ್ತಾರೆ. ಇಡಿ ಪ್ರಕರಣದಲ್ಲಿ ಅಷ್ಟು ಹಿಂಸೆ ನೀಡಿ ವಿಚಾರಣೆ ಮಾಡಬೇಕಾದ ಅಗತ್ಯ ಏನಿತ್ತು. ಎಂಬುದನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಅಮೆರಿಕೆಯಲ್ಲಿ ಪೋಲೀಸರ ದುರ್ನಡತೆಯ ಕಾರಣಕ್ಕೆ ರಸ್ತೆಯಲ್ಲೇ ಅಸುನೀಗಿದ ಆಫ್ರಿಕನ್ ಅಮೇರಿಕನ್ ಜಾರ್ಜ್ ಫ್ಲಾಯ್ದ್ ಪರವಾದ ಪ್ರತಿಭಟನೆಗಳು ನಮ್ಮಲ್ಲೂ ನಡೆಯುತ್ತಿದ್ದವು.
ಅಮೇರಿಕೆಯಲ್ಲಿ ಕಪ್ಪು ಜನರ ಮೇಲೆ ಅಲ್ಲಿನ ಬಿಳಿಯರ ವರ್ಣದ್ವೇಷ ಶತಮಾನಗಳಷ್ಟು ಹಳೆಯದು. ಆದರೆ ನಮಗಿಂತಲೂ ಹೆಚ್ಚು ಮುಂದುವರಿದ ದೇಶದಲ್ಲಿ ಕೂಡ ಪೋಲಿಸ್ ದೌರ್ಜನ್ಯವು ಹೇಗೆ ಪೂರ್ವಾಗ್ರಹ ಉಳ್ಳದ್ದು ಆಗಿರುತ್ತದೆ ಎಂಬುದಕ್ಕೆ ಜಾರ್ಜ್ ಫ್ಲಾಯ್ದ್ ಕೇಸು ಉತ್ತಮ ನಿದರ್ಶನ. ಇಂತಹ ಬೇಕಾದಷ್ಟು ಕೇಸುಗಳು ಇದುವರೆಗೂ ಅಮೇರಿಕೆಯಲ್ಲಿ ಆಗಿವೆ. ಆಗೆಲ್ಲ ಜನ ಅದನ್ನು ಪ್ರಶ್ನಿಸಿದ್ದಾರೆ, ಆದರೆ ಯಾವಾಗ ಬರೀ ಪ್ರಶ್ನಿಸಲಿಲ್ಲ ನೇರವಾಗಿ ಪ್ರತಿಭಟನೆಗೆ ನಿಂತರು, ಅಲ್ಲಿನ ಅಧ್ಯಕ್ಷ ಟ್ರಂಪ್ ಹೆದರಿ ಅಧ್ಯಕ್ಷರ ನಿವಾಸದ ಬಂಕರ್ ನಲ್ಲಿ ಅಡಗುವ ಮಟ್ಟಿಗೆ ದೇಶದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಸ್ವತಃ ಪೊಲೀಸರು ಕಪ್ಪು ಜನರ ವಿರುದ್ದ ನಡೆದುಕೊಂಡ ರೀತಿಗೆ ಸಾರ್ವಜನಿಕವಾಗಿ ಮಂಡಿಯೂರಿ ನಿಂತು ಕ್ಷಮೆ ಕೇಳಿದರು. ಪೋಲಿಸ್ ಅಧಿಕಾರಿಗಳು ಅಧ್ಯಕ್ಷರು ಆಡಿದ ಬಾಲಿಶ ಮಾತುಗಳನ್ನು ನೇರಾನೇರ ಖಂಡಿಸಿದರು. ಕಡೆಗೆ ಈ ಬಿಸಿಯು ಯುರೋಪ್, ಆಫ್ರಿಕಾ ದೇಶಗಳಿಗೂ ಹಬ್ಬಿತು, ಎಲ್ಲೆಡೆಯೂ ವರ್ಣಭೇದ ದೌರ್ಜನ್ಯಗಳನ್ನು ವಿರೋಧಿಸಿ ಎಲ್ಲ ರೀತಿಯ ಜನರು ಪ್ರತಿಭಟನೆಗಿಳಿದರು, ಘೋಷಣೆಕೂಗಿದರು, ಜನಾಂಗೀಯ ವಾದಿಗಳಾಗಿದ್ದ ನಾಯಕರ ಪ್ರತಿಮೆಗಳನ್ನು ಧರೆಗುರುಳಿಸಿದರು. ದೌರ್ಜನ್ಯವೆಸಗುವ ಪೊಲೀಸರಿಗೆ ಒಂದು ಬಿಗಿಯಾದ ಪ್ರತಿರೋಧವನ್ನು ತೋರಿದರು.
ಆದರೆ ನಮ್ಮಲ್ಲಿ ಇಂತಹ ಪ್ರತಿರೋಧಗಳು ಕೇವಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾದುವುದು. ಸುದ್ದಿ ಮಾಧ್ಯಮಗಳಂತು ಸರ್ಕಾರದ ವಂಧಿಮಾಗಧಿ ಸೇವೆ ಸಲ್ಲಿಸುತ್ತಾ ಕೃತಾರ್ಥರಾಗಿವೆ. ಅವುಗಳೇನಿದ್ದರು ಈಗ “ಜನರ ವಿರುದ್ದ ಮಾತಾಡುವುದು ಮತ್ತು ಜನರಿಗೇ ಜನರ ಬಗ್ಗೆ ಪಾಪಪ್ರಜ್ಞೆ ಬರಿಸುವುದು ಹೇಗೆ” ಎಂದು ಸಂಶೋಧನಗಳಲ್ಲಿ, ಪ್ರಯೋಗಗಳಲ್ಲಿ ತೊಡಗಿಕೊಂಡಂತೆ ಕಾಣುತ್ತದೆ. ಈಚೆಗೆ ಲಾಕ್ಡೌನ್ ಅತ್ತು ಚೀನಾ ಗಾಲ್ವನ್ ಕಣಿವೆ ಅತಿಕ್ರಮಣ ಕುರಿತಾದ ವಿಚಾರಗಳಲ್ಲಿ ಅವು ಜನರು ಮತ್ತು ಸೈನ್ಯದ ವಿರುದ್ದ ಮಾತಾಡಲು ಶುರು ಮಾಡಿದನ್ನು ನೆನೆಪಿಸಿಕೊಳ್ಳಬಹುದು. ಎಂತಹದ್ದೇ ಘಟಿಸಿದರೂ ಇವು ಮೋದಿ ಸರ್ಕಾರವನ್ನು ಹೊಣೆ ಮಾಡಲು ಸಿದ್ದವಿಲ್ಲ, ಬದಲಿಗೆ ಕೆಟ್ಟದ್ದು ಸಂಭವಿಸಿದರೆ ಅದಕ್ಕೆ ಜನರೇ ಕಾರಣ ಎಂದು ಬಿಂಬಿಸಲು ಮತ್ತು ಪಾಪ ಪ್ರಜ್ಞೆ ಉಂಟುಮಾಡಲು ಇವು ಶಕ್ಯವಾಗಿವೆ.
ಈಗ ಮಾಧ್ಯಮಗಳಲ್ಲಿ ಜನಪರವಾದ ವಿಚಾರಗಳು ಕಾಣೆಯಾಗಿ ಬರಿಯ ಕಾರ್ಪೊರೇಟ್ ಮತ್ತು ಸರ್ಕಾರದ ವಿಚಾರಗಳು ಮಾತ್ರ ಉಳಿದಿಕೊಂಡಿವೆ. ಅದಕ್ಕಾಗಿ ಸಲ್ಲಬೇಕಾದ ಪಾವತಿಗಳು ಅವರಿಗೆ ಸಲ್ಲುತ್ತಿವೆ. ಜನರು ಮತ್ತು ಜನಚಳುವಳಿ ದಿನನಿತ್ಯವೂ ಇಂತದನ್ನು ಕಂಡುಕಂಡು ಮಂಕಾದಂತೆ ಕಾಣುತ್ತಿದ್ದಾರೆ. ಆದರೆ ಈಗ ಮಂಕಾಗಿ ಕುಳಿತುಬಿಟ್ಟರೆ ಮುಂದಿನದಿನಗಳು ಬಹಳ ಕಷ್ಟವಾಗಲಿವೆ. ಪ್ರಜಾಪ್ರಭುತ್ವದ ಒಂದೊಂದೇ ಇಟ್ಟಿಗೆಗಳನ್ನು ಇರಿಯಲು ಮೋದಿ ಸರ್ಕಾರ ಶುರು ಮಾಡಿದೆ. ಮತ್ತು ಇದು ಇಂಡಿಯಾದಲ್ಲಿ ಮಾತ್ರ ಪ್ರಪಂಚದ ಹಲವು ರಾಷ್ಟ್ರಗಳು ಪ್ರಜಾಪ್ರಭುತ್ವದಲ್ಲೂ ಸಂಭವಿಸುತ್ತಿದೆ.
ಇಷ್ಟು ಮುಂದುವರಿದ ಕಾಲದಲ್ಲಿ ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ದೊಡ್ಡ ಮಟ್ಟದಲ್ಲಿ ಆಕ್ಟಿವ್ ಆಗಿರುವ ಹೊತ್ತಿನಲ್ಲಿ ಪೋಲಿಸ್ ದೌರ್ಜನ್ಯಗಳು ಹೇಗೆ ಸಂಭವಿಸಬಲ್ಲವು ಎಂದು ಹುಡುಕಿ ನೋಡುತ್ತಾ ಹೋದರೆ ನಾವು ಎಂತಹ ನರಕದ ಸುಳಿಗೆ ಸಿಲುಕಿದ್ದೇವೆ ಎಂಬುದು ಸ್ವಲ್ಪ ಮಟ್ಟಿಗೆ ಅರ್ಥವಾಗುತ್ತದೆ. ಆದರೆ ನಾವಿರುವುದು ಪ್ರಜಾಪ್ರಭುತ್ವದಲ್ಲಿ ತಾನೇ? ಪೋಲಿಸ್ ಗಿರಿಯು ಹೇಗೆ ದೌರ್ಜನ್ಯ ಮಾಡಲು ಸಾಧ್ಯ? ಸ್ವಲ್ಪ ವಿವರವಾಗಿ ನಾವು ಆಲೋಚಿಸಬೇಕು. ಈ ಹೊತ್ತಿಗೂ ದಲಿತರು ನೀಡುವ ಎಷ್ಟೋ ದೂರುಗಳು ದಾಖಲಾಗುವುದಿಲ್ಲ. ದೂರು ಕೊಡಲು ಬರುವ ಹೆಣ್ಣುಮಕ್ಕಳಿಗೆ ಬೆದರಿಕೆಗಳು ಬರುತ್ತವೆ, ಬಡವರು ದೂರು ಕೊಡಲಾರದಷ್ಟು ದುರ್ಬಲರಾಗುತ್ತಿದ್ದಾರೆ, ಇವುಗಳೊಂದಿಗೆ ನಮ್ಮನ್ನು ಇನ್ನು ಚಿಂತೆಗೀಡು ಮಾಡುವುದು, ಧಾರ್ಮಿಕ ನಿರಪೇಕ್ಷತೆಯನ್ನು ಹೊಂದಿರಬೇಕಾದ ಕಾನೂನುಬದ್ದವಾದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಒಳಗೊಳಗೇ ಹಿಂದುತ್ವದ ರಾಜಕಾರಣದೊಂದಿಗೆ ಶಾಮೀಲು ಆಗುತ್ತಿರುವುದು.
ತೂತ್ತುಕುಡಿಯ ಕೇಸ್ ಆರಂಭದಲ್ಲಿ ಎಲ್ಲ ಕಡೆಯಿಂದಲೂ ವಿಪರೀತ ಟೀಕೆಗೆ ಆಕ್ರೋಶಕ್ಕೆ ತುತ್ತಾಯಿತು, ನಿಧಾನಕ್ಕೆ ಅದು ಮರೆಯಾಗುತ್ತಾ ಬಂದಿದೆ. ಇದೆ ಸಮಯದಲ್ಲಿ ಮತ್ತೊಬ್ಬ ಯುವಕ ಇಂತಹದೆ ಕಾರಣದಿಂದ ಸತ್ತಿದ್ದಾನೆ. ಉತ್ತರಪ್ರದೇಶ, ಬಿಹಾರ ಸರಿದಂತೆ ಹಲವೆಡೆ ಇವುಗಳ ಸಂಖ್ಯೆ ದಾಖಲಿಸಲು ಸಾಧ್ಯವಿಲ್ಲದಷ್ಟು ಭಯಾನಕವಾಗಿ ನಡೆಯುತ್ತಿವೆ.. ಇದೆಲ್ಲಾ ಮಾತಾಡುವ ಹೊತ್ತಿನಲ್ಲಿ 2020 ಫೆಬ್ರವರಿಯಲ್ಲಿ ನಡೆದ ದೆಹಲಿ ಹಿಂಸಾಚಾರ ಎದೆಯನ್ನು ಇರಿಯುತ್ತಿದೆ. ಇಷ್ಟು ಮುಂದುವರಿದ ಪ್ರಜಾಪ್ರಭುತ್ವ ದೇಶದಲ್ಲಿ ಎಷ್ಟೆಲ್ಲಾ ಆದರ್ಶ, ಹೋರಾಟಗಳು ಬದುಕಿರುವ ಕಾಲಘಟ್ಟದಲ್ಲೇ ಬಲಪಂಥಿಯರು ಮುಸ್ಲಿಮರ ಮೇಲೆ ನಡೆಸಿದ ಭರ್ಭರ ಹಿಂಸಾಚಾರ ಅದನ್ನು ಕುಮ್ಮಕ್ಕು ಕೊಡುವವರಂತೆ ಸುಮ್ಮನೆ ನೋಡುತ್ತ ನಿಂತಿದ್ದ ಪೋಲೀಸರ ದೃಶ್ಯಗಳು ಮನಸ್ಸನ್ನು ತಲ್ಲಣಿಸಿ ಬಿಡುತ್ತಿವೆ. ಇನ್ನೊಂದೆಡೆ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದ ಸುಧಾ ಭಾರದ್ವಾಜ್, ವರವರರಾವ್, ಆನಂದ್ ತೆಲ್ತುಂಬ್ಡೆ ಮುಂತಾದವರನ್ನು ಪ್ರಧಾನಿ ಕೊಲೆಯ ಸಂಚು ಎಂದು ಆರೋಪ ಹೊರಿಸಿ ಬಂಧಿಸಿ ವರ್ಷವೇ ಆಗಿದೆ.
ನಮ್ಮಲ್ಲಿ ಬೆಳೆದುಕೊಂಡಿರುವ ಸಿನಿಕ ಪ್ರವೃತ್ತಿಗಳು ದೂರು, ಮೊಕದ್ದಮೆ, ವಾದ –ಪ್ರತಿವಾದ ನ್ಯಾಯದಾನ ಕುರಿತು ಪ್ರಜಾಸತ್ತಾತ್ಮಕ ವಿಧಾನಗಳನ್ನೇ ಅಣಕಿಸುತ್ತಾ ಅವುಗಳ ಬಗ್ಗೆ ಜೋಕ್ ಮಾಡುತ್ತ ಕುಳಿತುಬಿಟ್ಟೆವು. ಆ ಬಗೆಗಿನ ನಮ್ಮ ಕಾಳಜಿಗಳು ಸಾರ್ವತ್ರಿಕವಾಗದೆ ಕೆಲವೇ ಜನ ಆಕ್ಟಿವಿಸ್ಟ್ ಗಳು ದನಿ ಎತ್ತುವಂತೆ ಆಯಿತು. ಆದರೆ ಅವರೆಲ್ಲಾ ಈಗ ಸರಕಾರಗಳ ಪ್ರಭಾವಿ ವ್ಯಕ್ತಿಗಳ ದೆಸೆಯಿಂದ ಸುಳ್ಳು ಕೇಸುಗಳ ಮೇಲೆ ಸರಿಯಾದ ವಿಚಾರಣೆಗಳು ಕೂಡ ಇಲ್ಲದೇ ಜೈಲು ವಾಸ ಅನುಭವಿಸುತ್ತಿದ್ದಾರೆ
ಇದೆಲ್ಲ ನೋಡುತ್ತಾ ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ಮೊನ್ನೆ ಪಾತಕಿ ವಿಕಾಸ್ ದುಬೆಯ ಎನ್ ಕೌಂಟರ್ ಆಯಿತು, ಆದರೆ ಅದು ಹೀಗಾಗುತ್ತದೆ ಎಂದು ದೇಶದ ಜನತೆ ಹಿಂದಿನ ದಿನ ಆತ ಉಜ್ಜಯಿನಿಯಲ್ಲಿ ಶರಣಾಗತಿ ಅದಾಗಲೇ ಎಣಿಸಿತ್ತು. ಆತನ ವಿಚಾರಣೆಯಿಂದ ಎಷ್ಟು ಹಗರಣ ಎಷ್ಟು ಜನ ರಾಜಕಾರಣಿಗಳ ಭ್ರಷ್ಟತೆ ಹೊರಗೆ ಬರ್ತಿತ್ತೋ. ಆದರೆ ಅದನ್ನು ಹೊರಗೆ ಬಾರದ ಹಾಗೆ ಎನ್ಕೌಂಟರ್ ಮಾಡಲಾಯಿತು. ನ್ಯಾಯಾಲಯದಲ್ಲಿ ಹಾಜರು ಪಡಿಸಲಿಲ್ಲ, ವಿಚಾರಣೆ ನಡೆಯಲಿಲ್ಲ. ನೆಪವೊಂದನ್ನು ಹುಡುಕಿ ಸಾಯಿಸಲಾಯಿತು. ಇದು ಪ್ರಜಾಸತ್ತಾತ್ಮಕ ಮೌಲ್ಯಗಳ ಎನ್ಕೌಂಟರ್ ಕೂಡ ಎಂಬುದು ಅರಿವಾಗಲು ಬಹಳ ದಿನಗಳು ಬೇಕಿಲ್ಲ.
ನಿರಂಕುಶ ಪ್ರಭುತ್ವಗಳು, ವಸಾಹತುಶಾಹಿ ಕಂಪನಿಯ ಸ್ವಾಮ್ಯಗಳಿಂದ ಈ ದೇಶವನ್ನು ಬಿಡಿಸಿಕೊಂಡು ಪ್ರಜಾಪ್ರಭುತ್ವವನ್ನು ನಮ್ಮ ಹಿರಿಯರು ಸ್ಥಾಪಿಸಿ ಅದರ ಕೀಲಿಯನ್ನು ನಮಗೆ ಕೊಟ್ಟು ಹೋಗಿದ್ದಾರೆ ಅದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಆ ನಿಟ್ಟಿನಲ್ಲಿ ಮುಖ್ಯವಾಗಿ ಸಮಾಜವನ್ನು ಕಾಪಾಡುವ ಹೊಣೆ ‘ಪೋಲಿಸರಿಗೇ’ ಇರುವುದು. ಆ ಸಂವಿಧಾನಿಕ ಕರ್ತವ್ಯವನ್ನು ನಿಭಾಯಿಸುವಾಗ ನಮ್ಮ ಮನಸ್ಸಿನಲ್ಲಿರಬೇಕಾದ್ದು ಪ್ರಜಾಸತ್ತಾತ್ಮಕ ಕಾನುನುಗಳೇ ಹೊರತು ಭ್ರಷ್ಟ ರಾಜಕಾರಣಿಗಳ ಬಾಯಿ ಮಾತಿನ ಆಜ್ಞೆಗಳಲ್ಲ. ರಾಜ್ಯ-ಕೇಂದ್ರ ಸರ್ಕಾರಗಳ ಪ್ರತಿನಿಧಿಗಳ ನುಡಿಗಟ್ಟು, ನಡೆಗಟ್ಟುಗಳೇ ದವಲತ್ತು, ದೌರ್ಜನ್ಯದ ಮಾತುಗಳಿಂದ ಕೂಡಿರುವಾಗ ಪೋಲಿಸ್ ವ್ಯವಸ್ತೆಯನ್ನು ತಹಬಂದಿಗೆ ಬತರುವವರು ಯಾರು?ಪ್ರಜಾಸತ್ತಾತ್ಮಕ ಮೌಲ್ಯಗಳಕುರಿತು ಪಾಠ ಹೇಳುವವರು ಯಾರು? ಇದೆಲ್ಲವೂ ಯಕ್ಷಪ್ರಶ್ನೆಗಳಾಗಿ ಉಳಿದಿವೆ.