ಪ್ರತಿ ವರ್ಷದ ನವೆಂಬರ್ 11 ರಂದು ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. 1947 ರಿಂದ 1958 ರವರೆಗೆ ಭಾರತದ ಕೇಂದ್ರ ಶಿಕ್ಷಣ ಮಂತ್ರಿಯಾಗಿ, ಶಿಕ್ಷಣ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ ಮೌಲಾನ ಅಬುಲ್ ಕಲಾಮ್ ಆಝಾದ್ ರ ಜನ್ಮದಿನದ ನೆನಪಿಗೆ ಈ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಸಂಭ್ರಮಿಸಲಾಗುತ್ತದೆ.
ಸೌದಿ ಅರೇಬಿಯಾದ ಮೆಕ್ಕಾದಲ್ಲಿ 1888 ರಲ್ಲಿ ಹುಟ್ಟಿದ ಆಝಾದ್, ಪ್ರಾಥಮಿಕ ಶಿಕ್ಷಣವನ್ನು ತಮ್ಮ ಮನೆಯಲ್ಲಿಯೇ ಪಡೆದರು. ಭಾರತೀಯ ಮೂಲದ ಆಝಾದ್ರ ಕುಟುಂಬ, ಆಝಾದ್ರಿಗೆ ಉನ್ನತ ಶಿಕ್ಷಣ ನೀಡಲು ಮರಳಿ ಭಾರತಕ್ಕೆ ಆಗಮಿಸಿತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹಿಂದಿ, ಇಂಗ್ಲಿಷ್, ಅರಬಿಕ್, ಬಂಗಾಳಿ, ಪರ್ಷಿಯನ್ ಭಾಷೆಗಳಲ್ಲಿ ಪರಿಣತರಾಗಿದ್ದ ಆಝಾದ್, ಗಣಿತ ಶಾಸ್ತ್ರ, ತತ್ವಶಾಸ್ತ್ರ, ಜಾಗತಿಕ ಇತಿಹಾಸ, ವಿಜ್ಞಾನ, ಇಸ್ಲಾಮಿನ ಪ್ರಮುಖ ನಾಲ್ಕು ಮಝ್ಹಬ್ಗಳಾದ ಹನಫಿ, ಮಾಲಿಕಿ, ಹಂಬಲಿ, ಶಾಫಿ ಧರ್ಮಗಂಥಗಳನ್ನು, ಇಸ್ಲಾಮಿಕ್ ಷರಿಯಾಗಳನ್ನು ಆಳವಾಗಿ ಅಭ್ಯಸಿಸಿದ್ದರು.
1912 ರಲ್ಲಿ ಅಲ್ ಹಿಲಾಲ್ ಎಂಬ ವಾರ ಪತ್ರಿಕೆ ಆರಂಭಿಸಿದ ಆಝಾದ್, ಪತ್ರಿಕೆಯಲ್ಲಿ ಬ್ರಿಟೀಷ್ ವಿರೋಧಿ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಆಝಾದ್ ಎಂಬ ನಾಮಾಂಕಿತದಲ್ಲಿ ಬರೆಯಲು ಶುರು ಮಾಡಿದ ಅಬುಲ್ ಕಲಾಂ, ಬ್ರಿಟೀಷರ ನೀತಿಗಳನ್ನು ವಿಮರ್ಷಿಸುವ ಪರಿಗೆ, ಅವರ ಪತ್ರಿಕೆಗೆ ಬ್ರಿಟಿಷರು ನಿಷೇಧ ಹೇರಿದರು. ಬಳಿಕ ಅಲ್ ಬಾಗಾ ವಾರಪತ್ರಿಕೆಯನ್ನು ಪ್ರಾರಂಭಿಸಿದ ಆಝಾದ್, ಬ್ರಿಟೀಷರನ್ನು ಟೀಕಿಸುವ ಕಾರ್ಯ ಮುಂದುವರೆಸಿದರು. ಡಿಫೆನ್ಸ್ ಇಂಡಿಯಾ ರೆಗ್ಯುಲೇಷನ್ ಆಕ್ಟ್ 1916 ರ ಅಡಿಯಲ್ಲಿ ಈ ಪತ್ರಿಕೆಯನ್ನೂ ಬ್ರಿಟಿಷ್ ಪ್ರಭುತ್ವ ನಿಷೇಧಿಸಿತು.
ಗಾಂಧೀಜಿಯೊಂದಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಆಝಾದ್, ಹಿಂದೂ-ಮುಸ್ಲಿಂ ಐಕ್ಯತೆಗೆ ಸಾಕಷ್ಟು ಪ್ರಯತ್ನಿಸಿದರು. ಭಾರತ ಸ್ವಾತಂತ್ರ್ಯಕ್ಕಾಗಿ ಹಿಂದೂ ಮುಸ್ಲಿಮರು ಒಟ್ಟಿಗೆ ಕೈಜೋಡಿಸಬೇಕೆಂದು ತಮ್ಮ ಪತ್ರಿಕೆಗಳ ಮೂಲಕ ಕರೆ ನೀಡಿದರು.
1923 ರಲ್ಲಿ ಕಾಂಗ್ರೆಸ್ನ ಕಿರಿಯ ಅಧ್ಯಕ್ಷರಾಗಿ ಆಯ್ಕೆಯಾದ ಆಝಾದ್, ಒಮ್ಮೆ ಹೀಗೆ ಹೇಳುತ್ತಾರೆ. ʼಒಂದು ವೇಳೆ, ಸ್ವರ್ಗದಿಂದ ದೇವದೂತ ಇಳಿದು ಹಿಂದೂ ಮುಸ್ಲಿಂ ಐಕ್ಯತೆಗೆ ಬದಲಾಗಿ ಸ್ವರಾಜ್ಯ ನೀಡುವುದೆಂದರೆ ನಾನು ಅದನ್ನು ನಿರಾಕರಿಸುತ್ತೇನೆ. ಶೀಘ್ರವಾಗಿಯೋ, ತಡವಾಗಿಯೋ ನಾವು ಸ್ವರಾಜ್ಯವನ್ನು ಪಡೆದೇ ಪಡೆಯುತ್ತೇವೆ, ಸ್ವರಾಜ್ಯ ತಡವಾದಷ್ಟು ಭಾರತಕ್ಕೆ ನಷ್ಟ, ಆದರೆ ಒಮ್ಮೆ ಹಿಂದೂ-ಮುಸ್ಲಿಮರ ಐಕ್ಯತೆ ನಷ್ಟವಾದರೆ ಅದು ಮಾನವಕುಲಕ್ಕೆ ಆಗುವ ನಷ್ಟʼ ಮಾನವೀಯ ಪರಿಕಲ್ಪನೆಯ ಈ ನಿಲುವಿನಲ್ಲಿ ಅವರು ತಮ್ಮ ಜೀವನದುದ್ದಕ್ಕೂ ಧೃಡವಾಗಿ ನಿಂತಿದ್ದಾರೆ.
ಮುಸ್ಲಿಮರನ್ನು ಪ್ರತ್ಯೇಕವಾಗಿ ನಿಲ್ಲಿಸುವುದರ ವಿರುದ್ಧ, ಧರ್ಮಾಧರಿತ ದೇಶ ಕಟ್ಟುವುದನ್ನು ಖಡಾಖಂಡಿತವಾಗಿ ವಿರೋಧಿಸಿದ್ದ ಆಝಾದ್, ಮುಸ್ಲಿಂ ಲೀಗ್ನ ದಾರಿ ತಪ್ಪಿದ ನಾಯಕತ್ವವು ಮಾಡಿದ ಮಹತ್ತರವಾದ ತಪ್ಪುಗಳ ಪರಿಣಾಮವಾಗಿ ಭಾರತೀಯ ಮುಸ್ಲಿಮರ ಸೋಲು ಹೇಗೆ ಸಂಭವಿಸಿದೆ ಎಂಬ ಬಗ್ಗೆ ಅವರು ಸ್ಪಷ್ಟವಾಗಿ ಮಾತನಾಡಿದರು. ಇದು ಜಿನ್ನಾ ಅವರ ವಿರೋಧ ಕಟ್ಟಿಕೊಳ್ಳಲೂ ಕಾರಣವಾಯಿತು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯ ಒಡನಾಡಿಯಾಗಿದ್ದ ಆಝಾದ್, ಅಸಹಕಾರ ಚಳುವಳಿಯಲ್ಲಿ ಅತ್ಯಂತ ಕ್ರಿಯಾಶೀಲ ಯುವಕ ಎಂಬ ಮೆಚ್ಚುಗೆಗೆ ಪಾತ್ರರಾದರು. 1931ರ ವರ್ಷದಲ್ಲಿ ‘ದರ್ಶನ ಸತ್ಯಾಗ್ರಹ’ದ ಪ್ರಮುಖ ಆಯೋಜಕರಾಗಿದ್ದ ಮೌಲಾನ ಹಲವಾರು ಕಠಿಣ ಸೆರೆವಾಸಗಳನ್ನು ಕಂಡರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ಸತತವಾಗಿ ಸೆರೆಯಲ್ಲಿಯೇ ಇದ್ದರು. ದೇಶದ ವಿಭಜನೆಯ ಕೂಗನ್ನು ಬೆಂಬಲಿಸದಿದ್ದ ಆಝಾದ್ ಭಾರತ ಇಬ್ಭಾಗವಾಗುವುದರ ವಿರುದ್ಧ ನಿಂತಿದ್ದರು.
ವಿಧ್ವಾಂಸ ,ಸಂಗೀತಗಾರ, ಕವಿ, ಕ್ರಾಂತಿಕಾರಿ ಪತ್ರಕರ್ತರಾಗಿ ಜನಪ್ರಿಯರಾಗಿದ್ದ ಮೌಲಾನಾ ಆಝಾದ್ ಭಾರತದ ಸ್ವಾತಂತ್ಯ ಹೋರಾಟಕ್ಕೆ ಹಾಗೂ ಭಾರತೀಯ ಶೈಕ್ಷಣಿಕ ಲೋಕಕ್ಕೆ ನೀಡಿರುವ ಕೊಡುಗೆ ಅಮೂಲ್ಯವಾದದ್ದು. ಸ್ವಾತಂತ್ರ್ಯೋತ್ತರ ಭಾರತದ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವಲ್ಲಿ ಮೌಲಾನಾ ಆಝಾದ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಸ್ವಾತಂತ್ರ್ಯದ ನಂತರದ ಇಡೀ ರಾಷ್ಟ್ರವು ವ್ಯಾಪಕ ಅನಕ್ಷರತೆಯಿಂದ ಬಳಲುತ್ತಿರುವಾಗ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪ್ರಬಲವಾಗಿಸುವ ಮೂಲಕ ಆಝಾದ್ ಭಾರತದ ಸಾಕ್ಷರತೆಯ ಪ್ರಮಾಣವನ್ನು ಸುಧಾರಿಸಿದರು. ಅವರು ದೇಶದ ಎಲ್ಲಾ ನಾಗರಿಕರಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿಪರ ತರಬೇತಿಗೆ ಒತ್ತು ನೀಡಿದರು.
ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ನಿಯಂತ್ರಕ ಸಂಸ್ಥೆಯಾಗಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸ್ಥಾಪನೆಯಲ್ಲಿ ಮೌಲಾನಾ ಆಝಾದ್ ಪ್ರಮುಖ ಪಾತ್ರ ವಹಿಸಿದ್ದರು. ದೇಶದಲ್ಲಿ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪಿಸುವ ಜವಾಬ್ದಾರಿಯೂ ಅವರ ಮೇಲಿತ್ತು.
ಅಕ್ಟೋಬರ್ 1920 ರಲ್ಲಿ ಅವರನ್ನು ‘ಜಾಮಿಯಾ ಮಿಲಿಯಾ ಇಸ್ಲಾಮಿಯಾ’ ಸ್ಥಾಪನಾ ಸಮಿತಿಗೆ ಆಯ್ಕೆ ಮಾಡಲಾಯಿತು. ಆಲೀಘಡದಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾನಿಲಯವನ್ನು ಬಳಿಕ ದಿಲ್ಲಿಗೆ ಸ್ಥಳಾಂತರಿಸಲಾಗಿದೆ. ಈ ವಿಶ್ವವಿದ್ಯಾಲಯದ ಮುಖ್ಯ ದ್ವಾರಕ್ಕೆ ಇವರ ಹೆಸರನ್ನೇ ಇಡಲಾಗಿದೆ.
ಮೌಲಾನಾ ಅಬುಲ್ ಕಲಾಂ ಆಝಾದ್ ನಾಯಕತ್ವದಲ್ಲಿ ಮೊದಲ ಐಐಟಿ – ಐಐಟಿ ಖರಗ್ಪುರವನ್ನು1951 ರಲ್ಲಿ ಸ್ಥಾಪಿಸಲಾಯಿತು. ಅಬುಲ್ ಕಲಾಂ ಆಝಾದ್ ಶಿಕ್ಷಣ ತಜ್ಞರಾಗಿ ನೀಡಿದ ಕೊಡುಗೆಗಾಗಿ 1992 ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ʼʼಕನಿಷ್ಠ ಮೂಲಭೂತ ಶಿಕ್ಷಣವನ್ನು ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕು, ಅದಿಲ್ಲದೇ ಅವನು ನಾಗರಿಕನಾಗಿ ತನ್ನ ಕರ್ತವ್ಯವನ್ನು ಸಂಪೂರ್ಣವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಎನ್ನುವುದನ್ನು ನಾವು ಒಂದು ಕ್ಷಣವೂ ಮರೆಯಬಾರದು ” ಎಂದು ಹೇಳಿದ ಆಝಾದ್, ಶಿಕ್ಷಣಕ್ಕೆ ಎಷ್ಟು ಮಹತ್ವ ನೀಡಿದ್ದರೆಂದು ಅರಿವಾಗುತ್ತದೆ.
ಆಝಾದ್ ಗೌರವಾರ್ಥವಾಗಿ ಭಾರತದಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಅವರ ಹೆಸರಿಡಲಾಗಿದೆ. ಅವುಗಳಲ್ಲಿ ಕೆಲವು;-
ನವದೆಹಲಿಯ ಮೌಲಾನಾ ಆಝಾದ್ ವೈದ್ಯಕೀಯ ಕಾಲೇಜು
ಭೋಪಾಲ್ನ ಮೌಲಾನಾ ಆಝಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಹೈದರಾಬಾದ್ನ ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ
ಮೌಲಾನಾ ಆಝಾದ್ ಸೆಂಟರ್ ಫಾರ್ ಎಲಿಮೆಂಟರಿ ಅಂಡ್ ಸೋಶಿಯಲ್ ಎಜುಕೇಶನ್ (MACESE ದೆಹಲಿ ವಿಶ್ವವಿದ್ಯಾಲಯ)
ಮೌಲಾನಾ ಅಬುಲ್ ಕಲಾಂ ಆಝಾದ್ ಇನ್ಸ್ಟಿಟ್ಯೂಟ್ ಆಫ್ ಏಷ್ಯನ್ ಸ್ಟಡೀಸ್
ಕೋಲ್ಕತ್ತಾದ ಮೌಲಾನಾ ಅಬುಲ್ ಕಲಾಂ ಆಝಾದ್ ಟೆಕ್ನಾಲಜಿ ವಿಶ್ವವಿದ್ಯಾಲಯ
ಬಾಬ್-ಎ – ಮೌಲಾನಾ ಅಬುಲ್ ಕಲಾಂ ಆಝಾದ್ (ಗೇಟ್ ನಂ. 7) ಜಾಮಿಯಾ ಮಿಲಿಯಾ ಇಸ್ಲಾಮಿಯಾ
ಅಲಿಗಢದ ಮುಸ್ಲಿಂ ವಿಶ್ವವಿದ್ಯಾಲಯದ ಮೌಲಾನಾ ಆಝಾದ್ ಗ್ರಂಥಾಲಯ
ಜಮ್ಮುವಿನ ಮೌಲಾನಾ ಆಝಾದ್ ಕ್ರೀಡಾಂಗಣ