ಭಾರತದಲ್ಲಿ ಈವರೆಗೂ 1.45 ಲಕ್ಷ ಕರೋನಾ ಧೃಡಪಟ್ಟಿದೆ. ಅತೀ ಹೆಚ್ಚು ಕರೋನಾ ಪೀಡಿತ ರಾಷ್ಟ್ರಗಳ ಸಾಲಿನಲ್ಲಿ ಅಗ್ರ 10 ರಳೊಗೆ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಚೀನಾ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ನಿರ್ಧರಿಸಿದೆ. ಕರೋನಾ ಹಿನ್ನಲೆಯಲ್ಲಿ ಭಾರತದೊಳಗೆ ಸಿಲುಕಿಕೊಂಡು ತೊಂದರೆ ಅನುಭವಿಸುತ್ತಿರುವ ಹಾಗೂ ಮನೆಗೆ ಮರಳಲು ಬಯಸುವ ವಿದ್ಯಾರ್ಥಿಗಳು, ಪ್ರವಾಸಿ ಹಾಗೂ ಉದ್ಯಮಿಗಳು ಸೇರಿದಂತೆ ತನ್ನ ನಾಗರಿಕರನ್ನು ತಾಯ್ನಾಡಿಗೆ ಕರೆಸಿಕೊಳ್ಳಲು ಚೀನಾ ನಿರ್ಧಾರ ಮಾಡಿದೆ.
ಮನೆಗೆ ಮರಳಲು ಬಯಸುವವರು ವಿಶೇಷ ವಿಮಾನದ ಟಿಕೇಟ್ ಕಾಯ್ದಿರಿಸಲು ಚೈನಾ ರಾಯಭಾರಿ ಕಛೇರಿ ತನ್ನ ವೆಬ್‌ಸೈಟಿನಲ್ಲಿ ತಿಳಿಸಿದೆ.
ಚೈನಾದ ವುಹಾನ್ ನಗರದಲ್ಲಿ ಡಿಸೆಂಬರ್‌ನಲ್ಲಿ ಕಾಣಿಸಿಕೊಂಡ ಕರೋನಾ ವೈರಸ್ ಇದೀಗ ಸುಮಾರು 190 ಕ್ಕೂ ಅಧಿಕ ದೇಶಗಳಿಗೆ ಹಬ್ಬಿದೆ. ಸರಿಸುಮಾರು 54 ಲಕ್ಷ ಜನರಿಗೆ ಸೋಂಕು ತಗುಲಿದ್ದು, 3.45 ಲಕ್ಷ ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಫೆಬ್ರವರಿ ತಿಂಗಳಲ್ಲಿ ವುಹಾನ್ ನಗರದಲ್ಲಿದ್ದ ಸುಮಾರು 700 ರಷ್ಟು ಭಾರತೀಯರನ್ನು ಭಾರತ ಸರ್ಕಾರ ವಾಪಾಸ್ ಕರೆಸಿಕೊಂಡಿತ್ತು.

ಕೊನೆಯ ಹದಿನಾಲ್ಕು ದಿನಗಳಲ್ಲಿ ಕರೋನಾ ಸಂಬಂಧಿತ ಚಿಕಿತ್ಸೆ ಪಡೆದಿರುವವರು ಹಾಗೂ ಕೆಮ್ಮು,ಜ್ವರ ಮುಂತಾದ ಲಕ್ಷಣಗಳಿರುವವರು ವಿಶೇಷ ವಿಮಾನದಲ್ಲಿ ಪ್ರಯಾಣಿಸಕೂಡದು ಎಂದು ಚೀನಾ ಹೇಳಿದೆ. ತಾಯ್ನಾಡಿಗೆ ಮರಳಲು ಬಯಸುವವರು ಪ್ರಯಾಣದ ಸಂಧರ್ಭದಲ್ಲಿ ಹಾಗೂ ಚೈನಾ ತಲುಪಿದ ಬಳಿಕ ಕ್ವಾರಂಟೈನ್ ಹಾಗೂ ಸಾಂಕ್ರಾಮಿಕ ರೋಗ ತಡೆಯಲು ಬೇಕಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಸ್ವೀಕರಿಸಬೇಕೆಂದು ಚೀನಾ ರಾಯಭಾರ ಕಛೇರಿ ನೀಡಿದ ನೋಟೀಸ್‌ನಲ್ಲಿ ಸೂಚಿಸಲಾಗಿದೆ.
ವಿಮಾನ ಪ್ರವೇಶಿಸುವ ಸಂಧರ್ಭದಲ್ಲಿ ದೇಹದ ಉಷ್ಣತೆ 37 ಡಿಗ್ರಿಗಿಂತ ಹೆಚ್ಚಿದ್ದರೆ ವಿಮಾನಯಾನಕ್ಕೆ ಅನುವು ಮಾಡಲಾಗುವುದಿಲ್ಲ ಎಂದೂ ರಾಯಭಾರಿ ಕಛೇರಿ ತಿಳಿಸಿದೆ.
ಪೂರ್ವ ಲಡಾಖ್‌ನ ಪಂಗಾಂಗ್ ತ್ಸೊ ಮತ್ತು ಗಲ್ವಾನ್ ಕಣಿವೆ ಪ್ರದೇಶದಲ್ಲಿ ಉಭಯ ಸೇನೆಗಳ ನಡುವೆ ಉದ್ವಿಗ್ನ ಪರಿಸ್ಥಿತಿ ತೋರಿಬಂದಿರುವ ಬೆನ್ನಲ್ಲೇ ಚೀನಾ ತನ್ನ ನಾಗರಿಕರನ್ನು ವಾಪಾಸ್ ಕರೆಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೆ ಚೀನಾ ನೇಪಾಳವನ್ನು ಮುಂದಿಟ್ಟುಕೊಂಡು ಭಾರತದೊಂದಿಗೆ ಗಡಿ ತಕರಾರೆತ್ತಿದೆ.










