ಹೋಂ ಕ್ವಾರಂಟೈನ್ ಭಾರತದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂದು ತಿಳಿಯಲು, ನಾವು ಮೊದಲು ಭಾರತದಲ್ಲಿನ ವಾಸಸ್ಥಾನದ ವ್ಯವಸ್ಥೆಯ ಕುರಿತು ಅರಿತುಕೊಳ್ಳಬೇಕಾಗುತ್ತದೆ. ನಿಜಕ್ಕೂ ಭಾರತದಲ್ಲಿ ಹೋಂ ಕ್ವಾರಂಟೈನ್ ಜಾರಿಗೆ ತರಲು ಸಾಧ್ಯವೇ? ವಿದೇಶದಿಂದ ಭಾರತಕ್ಕೆ ಬಂದಿರುವ ಎಲ್ಲರಿಗೂ 14 ದಿನಗಳ ಕಾಲ ವಾಸಿಸಲು ಪ್ರತಿ ಮನೆಗಳಲ್ಲಿ ಪ್ರತ್ಯೇಕ ಕೊಠಡಿಯ ಸೌಲಭ್ಯವಿದೆಯೇ? ಎಂಬುದನ್ನು ಗಮನಿಸಬೇಕು. ಅವಿಭಕ್ತ ಕುಟುಂಬಗಳಲ್ಲಿ ಈ ಹೋಂ ಕ್ವಾರಂಟೈನ್ ಎನ್ನುವ conceptಅನ್ನು ಯಾವ ರೀತಿ ಜಾರಿಗೊಳಿಸಲು ಸಾಧ್ಯ?
ಈ ಎಲ್ಲಾ ಪ್ರಶ್ನೆಗಳು ಭಾರತಕ್ಕೆ ಕರೋನಾ ವೈರಸ್ ದಾಂಗುಡಿ ಇಟ್ಟ ಸಮಯದಲ್ಲಿ ಮೂಡಿರುವಂತವು. ಸಾಮಾಜಿಕ ಜೀವನದಿಂದ ದೂರ ಉಳಿಯುವುದು ಕರೋನಾ ಸೋಂಕು ತಡೆಗಟ್ಟಲು ಇರುವಂತಹ ಉತ್ತಮ ಉಪಾಯ. ಈ ಮಹಾಮಾರಿಯ ಅಬ್ಬರ ತಗ್ಗುವವರೆಗೂ ಮನೆಯಲ್ಲಿಯೇ ಇದ್ದಷ್ಟು ಸೋಂಕು ಹರಡುವುದನ್ನು ತಡೆಗಟ್ಟಬಹುದು. ಆದರೆ, ಕುಟುಂಬದ ಎಲ್ಲಾ ಸದಸ್ಯರು ಮನೆಯಲ್ಲಿಯೇ ಇದ್ದರೆ ದುಡಿಯುವವರು ಯಾರು? ನಾವು ಕೇವಲ ಬೆಂಗಳೂರಿನನ್ನು ಪರಿಗಣನೆಗೆ ತೆಗೆದುಕೊಂಡರೆ 1BHK ಮನೆ ಇರುವವರು ಹೋಂ ಕ್ವಾರಂಟೈನ್ ಆಗಲು ಹೇಗೆ ಸಾಧ್ಯ? ಮನೆಯ ಒಳಗೆ ಇದ್ದವರು ಹಾಗೂ ಹೊರಗಿನಿಂದ ಬಂದವರು ಒಂದೇ ಕೊಠಡಿಯಲ್ಲಿ ವಾಸವಾಗಬೇಕಲ್ಲವೇ?
ಕರೋನಾ ವೈರಸ್ ಚೀನಾದ ವುಹಾನ್‌ನಲ್ಲಿ ಜನಿಸಿದ ಹೆಮ್ಮಾರಿ ವೈರಾಣು. ಚೀನಾದಿಂದ ಒಂದೊಂದೇ ದೇಶಕ್ಕೆ ಕಾಲಿಟ್ಟು ಜೀವಹಾನಿ ವೈರಸ್, ಇದೀಗ ವಿಶ್ವದ 160ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಪ್ರಪಂಚದಲ್ಲಿ ಎರಡೂವರೆ ಲಕ್ಷ ಜನರನ್ನು ಈ ವೈರಸ್ ಕಾಡುತ್ತಿದ್ದರೆ, ಕೇವಲ ಚೀನಾ ದೇಶವೊಂದರಲ್ಲೇ 81,000ಕ್ಕೂ ಹೆಚ್ಚು ಜನರಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ. ಇಲ್ಲೀವರೆಗೆ ಚೀನಾದಲ್ಲಿ 3250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಚೀನಾ ದೇಶದ ಜೊತೆ ಪೈಪೋಟಿ ನಡೆಸಿ ಸಾವಿನ ಸಂಖ್ಯೆಯನ್ನು ಹಿಂದಿಕ್ಕಿ ಮುಂದೋಡುತ್ತಿದೆ. ಇದಕ್ಕೆ ಕಾರಣ ಇಟಲಿ ಮಾಡಿಕೊಂಡಿರುವ ಸ್ವಯಂಕೃತ ಅಪರಾಧ. ಸುಮಾರು 45 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮೂರೂವರೆ ಸಾವಿರಕ್ಕೂ ಹೆಚ್ಚು ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಇಟಲಿಯ ಈ ದುಸ್ಥಿತಿಗೆ ಕಾರಣ ಅಲ್ಲಿನ ಕುಟುಂಬ ವ್ಯವಸ್ಥೆ ಎನ್ನುತ್ತದೆ ಒಂದು ಅಧ್ಯಯನ. ಒಂದೇ ಮನೆಯಲ್ಲಿ ಅಪ್ಪ, ಅಮ್ಮ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಒಂದೇ ಮನೆಯಲ್ಲಿ ಹತ್ತಾರು ಜನರು ವಾಸ ಮಾಡುತ್ತಾರೆ. ಭಾರತದ ಕುಟುಂಬದ ಪ್ರಕಾರ ಹೇಳಬೇಕಾದರೆ ಅವಿಭಕ್ತ ಕುಟುಂಬ. ಇಟಲಿಯಲ್ಲೂ ಅವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದು, ಮನೆ ಮಂದಿಯೆಲ್ಲಾ ಒಟ್ಟೊಟ್ಟಿಗೆ ಗುಂಪುಗುಂಪಾಗಿ ಮಲಗುವ ಪರಿಪಾಠವಿದೆ. ಪ್ರತ್ಯೇಕವಾಗಿ ಒಬ್ಬರಿಗೆ ಒಂದೊಂದು ಕೊಠಡಿಗಳ ವ್ಯವಸ್ಥೆ ಇಲ್ಲ. ಗುಂಪು ಗುಂಪಾಗಿ ಮಲಗುವ ವ್ಯವಸ್ಥೆ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಅಲ್ಲಿನ ಜನಸಂಖ್ಯೆಯ ಶೇಕಡ 65ರಷ್ಟು ಜನರು ಹಿರಿಯ ನಾಗರಿಕರಿದ್ದಾರೆ. ವಯಸ್ಸಿನ ಜನರು ಕರೋನಾ ವೈರಸ್ ಅನ್ನು ಎದುರಿಸುವ ಶಕ್ತಿ ಹೊಂದಿದ್ದಾರೆ. ಆದರೆ ವಯೋವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಕರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದೇ ಸ್ಥಿತಿ ಭಾರತದಲ್ಲೂ ಪುನರಾವರ್ತನೆ ಆಗುವ ಸಾಧ್ಯತೆಯಿದೆ ಎನ್ನುವ ಲೆಕ್ಕಾಚಾರಗಳು ಶುರುವಾಗಿದೆ.
ಕರೋನಾ ವೈರಸ್ ತಡೆಗಟ್ಟಲು ಹೋಂ ಕ್ವಾರಂಟೈನ್ ಅತ್ಯಗತ್ಯ ಎನ್ನುವುದನ್ನು ಈಗಾಗಲೇ ವೈದ್ಯಲೋಕ ಖಚಿತಪಡಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಒಂದು ದಿನದ ಕ್ವಾರಂಟೈನ್‌ಗೆ ಜನತಾ ಕರ್ಫ್ಯೂ ಎನ್ನುವ ಹೆಸರು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಇಟಲಿಗೆ ಎದುರಾಗಿರುವ ಸಮಸ್ಯೆ ಎದುರಾದರೆ ಭಾರತವನ್ನು ರಕ್ಷಿಸಲು ಮೊದಲ ಪ್ರಯೋಗ ಎನ್ನುವ ಮಾತುಗಳೂ ಕೇಳಿಬಂದಿವೆ. ಭಾರತದಲ್ಲೂ ಇಟಲಿಯಂತೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಕೊಠಡಿ ಸೌಲಭ್ಯಗಳಿಲ್ಲ. ಚಿಕ್ಕಮಕ್ಕಳ ಜೊತೆ ಅಪ್ಪ ಅಪ್ಪ ಮಲಗುವ ಅಭ್ಯಾಸವಿದೆ. ಭಾರತದಲ್ಲಿ ಕೇವಲ 4 ಕೋಟಿ ಮನೆಗಳಲ್ಲಿ ಮಾತ್ರ ಎಲ್ಲರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆಗಳಿವೆ. ಉಳಿವರು ಗುಂಪುಗುಂಪಾಗಿ ಮಲಗುತ್ತಾರೆ. ಹೀಗಾಗಿ ಹೋಂ ಕ್ವಾರಂಟೈನ್ ಮಾಡಲು ಸಾಧ್ಯವಿಲ್ಲ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬಹುತೇಕ ಎಲ್ಲರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆಗಳಿದ್ದು, ಕರೋನಾ ತಡೆಯಲು ಇದೇ ಬ್ರಹ್ಮಾಸ್ತ್ರವಾಗಿದೆ. ಆದರೆ ಇಟಲಿ, ಇರಾನ್, ಚೀನಾ, ಭಾರತದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆಯಿಲ್ಲ, ಸಾಮೂಹಿಕ ವಾಸ ವ್ಯವಸ್ಥೆ ಕರೋನಾ ಹರಡುವುದಕ್ಕೆ ಅನುಕೂಲ ಆಗಿದೆ.