ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಭಾರತದತ್ತ ಹೆಜ್ಜೆ ಇಟ್ಟಿದೆ. ಇದೇ ಫೆಬ್ರವರಿ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಮೇರಿಕದಲ್ಲಿ ನಡೆಸಿದ ಹೌಡಿ ಮೋದಿ ಕಾರ್ಯಕ್ರಮದ ರೀತಿಯಲ್ಲೇ ಗುಜರಾತ್‌ನಲ್ಲಿ ನಮಸ್ತೇ ಟ್ರಂಪ್ ಕಾರ್ಯಕ್ರಮ ನಡೆಸಲಾಗ್ತಾ ಇದೆ. ಈಗಾಗಲೇ ಅಮೆರಿಕದಿಂದ ಡೊನಾಲ್ಡ್ ಟ್ರಂಪ್‌ಗೆ ಸಂಬಂಧಿಸಿದ ಕಾರು ಸೇರಿದಂತೆ ಭದ್ರತಾ ಪಡೆಗಳು ಆಗಮಿಸಿ, ಸಿದ್ದತೆ ಮಾಡಿಕೊಳ್ಳುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗಿಯಾಗುವ 3 ಗಂಟೆಯ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 85 ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ.
ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರತದ ಕೊಳಗೇರಿಯ ಗುಡಿಸಲು ಕಾಣಿಸಬಾರದು ಎನ್ನುವ ಕಾರಣಕ್ಕೆ ಬರೋಬ್ಬರಿ ಆರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಚೀನಾದ ಮಹಾಗೋಡೆಯಂತೆ ಗೋಡೆಯನ್ನು ನಿರ್ಮಿಸಲಾಗಿದೆ. 1640 ಸ್ಕೈರ್ ಫೀಟ್ ಉದ್ದಕ್ಕೂ ತಡೆ ಗೋಡೆ ನಿರ್ಮಾಣ ಮಾಡಿದ್ದು, ಬಣ್ಣ ಬಣ್ಣದ ಚಿತ್ತಾರ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ತೋರಿಸುವ ಉದ್ದೇಶದಿಂದ 2 ಸಾವಿರ ಜನರು ವಾಸ ಮಾಡುವ ಸ್ಲಂ ರಸ್ತೆಯನ್ನೇ ಮುಚ್ಚಲಾಗಿದೆ. ನರೇಂದ್ರ ಮೋದಿ ಸರ್ಕಾರ, ಡೊನಾಲ್ಡ್ ಟ್ರಂಪ್ ಎದುರು ಭಾರತವನ್ನು ಉತ್ಕೃಷ್ಟ ಮಟ್ಟದಲ್ಲಿ ತೋರಿಸಲು ಏನು ತಯಾರಿ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ. ಆದರೆ ಅಮೆರಿಕ ದೊಡ್ಡಣ್ಣ ಮಾತ್ರ ಭಾರತದ ಮೇಲೆ ಕಿಡಿ ಕಾರುತ್ತಿದೆ.
ಫೆಬ್ರವರಿ 24ಕ್ಕೆ ಬಂದಿಳಿಯಲಿದ್ದು, 36 ಗಂಟೆಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ ಟ್ರಂಪ್. ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳುವುದಕ್ಕೂ ಮುನ್ನ ಮಗಳು, ಅಳಿಯ ಹಾಗು ಪತ್ನಿ ಸಮೇತ ಪ್ರೇಮ ಸ್ಮಾರಕ ತಾಜ್ ಮಹಲ್‌ಗೆ ಭೇಟಿ ನೀಡಲಿದ್ದಾರೆ. ವಿಶೇಷ ಅಂದರೆ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಬರುವ ಮೊದಲೇ ಭಾರತದ ಬಗ್ಗೆ ಅಸಹನೆಯ ಮಾತುಗಳನ್ನು ಆಡಿದ್ದಾರೆ. ಭಾರತ ನಮ್ಮ ಜೊತೆ ಯಾವಾಗಲೂ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡಿಲ್ಲ. ನಮ್ಮ ಬಗ್ಗೆ ಭಾರತ ಕಠಿಣ ನಿಲುವುಗಳನ್ನು ಹೊಂದಿದೆ. ನಮ್ಮನ್ನು ಉತ್ತಮವಾಗಿ ನಡೆಸಿಕೊಂಡಿಲ್ಲ ಎಂದು ಕಟುನುಡಿಗಳನ್ನು ಟ್ರಂಪ್ ಹೇಳಿದ್ದಾರೆ. ಆದರೆ ನಾನು ನರೇಂದ್ರ ಮೋದಿ ಬಗ್ಗೆ ಅಪಾರ ಗೌರವ ಹೊಂದಿದ್ದು ಭಾರತಕ್ಕೆ ಹೋಗಲು ಕಾತುರನಾಗಿದ್ದೇನೆ ಎಂದು ತೇಪೆ ಹಾಕುವ ಕೆಲಸ ಮಾಡಿದ್ದಾರೆ.
ಎಲ್ಲರಿಗೂ ಒಂದೇ ಅಚ್ಚರಿ ಎರಡು ದೇಶಗಳು ಒಟ್ಟಿಗೆ ಸಂಧಿಸುತ್ತಿವೆ ಎಂದರೆ ಸ್ನೇಹದ ಹಸ್ತ ಚಾಚುತ್ತಿದ್ದಾರೆ ಎಂದರ್ಥ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುವ ಮುನ್ನ ಭಾರತದ ಬಗ್ಗೆ ಅಲ್ಪ ಸ್ವಲ್ಪ ಕಟು ನುಡಿಗಳನ್ನಾಡುವ ಮೂಲಕ ವ್ಯಾಪಾರ ಮಾರ್ಗವನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಚೀನಾದಿಂದ ಗಂಟು ಮೂಟೆ ಕಟ್ಟಿಕೊಂಡು ಹೊರಟಿರುವ ದೊಡ್ಡಣ್ಣ, ಮಾರುಕಟ್ಟೆ ವಿಸ್ತರಣೆ ಮಾಡಲು ತಿಣುಕಾಡುತ್ತಿದೆ. ಒಂದು ವೇಳೆ ಜಾಗತಿಕ ಮಟ್ಟದಲ್ಲಿ ವಿಸ್ತಾರ ಮಾರುಕಟ್ಟೆ ಹೊಂದಿರುವ ಭಾರತದ ಮಾರುಕಟ್ಟೆ ದೊಡ್ಡಣ್ಣನ ತನ್ನ ಕೈಗೆ ತೆಗೆದುಕೊಳ್ಳಲು ಮಾಡುತ್ತಿರುವ ತಂತ್ರಗಾರಿಕೆ ಎನ್ನಲಾಗಿದೆ. ಇಲ್ಲೀವರೆಗೂ ಅಮೆರಿಕದಿಂದ ಭಾರತ ಹಲವಾರು ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಕೆಲವೊಂದು ಪದಾರ್ಥಗಳನ್ನು ರಫ್ತು ಮಾಡಿದೆ. ಮುಂದಿನ ದಿನಗಳಲ್ಲಿ ತನ್ನ ಸಿದ್ಧ ವಸ್ತುಗಳ ಮಾರುಕಟ್ಟೆ ಮಾಡಿಕೊಳ್ಳಲು ಉದ್ದೇಶ ಮಾಡಿರುವ ಅಮೆರಿಕ, ಭಾರತದ ಕಡೆಗೆ ನೇರ ದೃಷ್ಟಿಯಿಟ್ಟುದ್ದು, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇದು ಸಾಧ್ಯ ಎನ್ನುವಂತಾ ಭರವಸೆ ಇದೆ. ಸದ್ಯಕ್ಕೆ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ವ್ಯಾಪಾರ ಒಪ್ಪಂದ ನಡೆಯುತ್ತೆ ಎನ್ನುವ ಭರವಸೆ ಇಟ್ಟುಕೊಂಡಿದ್ದಾರೆ ಡೊನಾಲ್ಡ್ ಟ್ರಂಪ್.
ವ್ಯಾಪಾರ ಒಪ್ಪಂದದ ಕುದುರಿಸಲು ಅಮೆರಿಕ ಅಧ್ಯಕ್ಷರು ಭಾರತಕ್ಕೆ ಬರುವ ಮೊದಲೇ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಟ್ರಂಪ್ ಉರುಳಿಸಿರುವ ದಾಳ ಸ್ವತಃ ಬಿಜೆಪಿ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್ ಕಳವಳ ವ್ಯಕ್ತಪಡಿಸಿದೆ ಎನ್ನಲಾಗಿದೆ. ಡೊನಾಲ್ಡ್ ಟ್ರಂಪ್ ಎರಡು ದಿನಗಳ ಬೇಟಿ ವೇಳೆ ಯಾವುದೇ ವ್ಯಾಪಾರ ಒಪ್ಪಂದಕ್ಕೆ ನಾನು ಸಹಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ವ್ಯಾಪಾರ ಒಪ್ಪಂದ ನಡೆಯುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಆದರೆ ಅಮೆರಿಕದಿಂದ ಹಾಲು ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಆಮದು ಮಾಡಿಕೊಳ್ಳದಂತೆ ಆರ್‌ಎಸ್‌ಎಸ್ ಆಗ್ರಹ ಮಾಡಿದೆ. ನಾವು ಭಾರತದಲ್ಲಿ ಹಸುಗಳನ್ನು ತಾಯಿಯಂತೆ ಭಾವಿಸುತ್ತೇವೆ. ಅಮೆರಿಕ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಅಮೆರಿಕದಿಂದ ಬೆಣ್ಣೆ, ತುಪ್ಪ ಸೇರಿದಂತೆ ಯಾವುದೇ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಸ್ವದೇಶಿ ಜಾಗರಣಾ ಮಂಚ್‌ನ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಮಹಾಜನ್ ತಿಳಿಸಿದ್ದಾರೆ. ಒಟ್ಟಾರೆ ವ್ಯಾಪಾರ ವಹಿವಾಟು ವೃದ್ಧಿಸುವುದು. ಮುಂಬರುವ ಅಮೆರಿಕ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳು ಜಯಭೇರಿ ಭಾರಿಸಲು ಭಾರತೀಯ ಮೂಲದ ಜನರನ್ನು ಸೆಳೆಯುವ ಉದ್ದೇಶದಿಂದ ಭಾರತಕ್ಕೆ ಬರುತ್ತಿರುವ ಡೊನಾಲ್ಡ್ ಟ್ರಂಪ್‌ಗೆ ಯಾವ ಮಟ್ಟದ ಯಶಸ್ಸು ಸಿಗಲಿದೆ ಕಾದು ನೋಡ್ಬೇಕು.