ಭಾನುವಾರ, ಮೇ 3 ಭಾರತ ಸರ್ಕಾರ ಘೋಷಣೆ ಮಾಡಿದ್ದು 2ನೇ ಲಾಕ್ಡೌನ್ ಅಂತ್ಯವಾಗಿತ್ತು. ಆದರೆ ಮೇ 17ರ ತನಕ ಕೇಂದ್ರ ಸರ್ಕಾರ 3ನೇ ಹಂತದ ಲಾಕ್ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ನಡುವೆ ಬಹುತೇಕ ಎಲ್ಲಾ ಕಾರ್ಯಚಟುವಟಿಕೆಗಳಿಗೂ ವಿನಾಯಿತಿ ನೀಡುವ ಮೂಲಕ ಲಾಕ್ಡೌನ್ ಅರ್ಥ ಕಳೆದುಕೊಳ್ಳುವಂತಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾನುವಾರ ಸಂಭ್ರಮಾಚಾರಣೆ ಮಾಡುವ ಮೂಲಕ ಕರೋನಾ ವೈರಸ್ ವಿರುದ್ಧ ಗೆಲುವು ದಾಖಲಿಸಿದ್ದೇವೆ ಎನ್ನುವ ಸಂಕೇತವನ್ನು ದೇಶದ ಜನರಿಗೆ ನೀಡುವುದಕ್ಕೆ ಪ್ರಯತ್ನ ಮಾಡಿದೆ. ಆದರೆ ಅಸಲಿಗೆ ಭಾನುವಾರದ ಈಚೆಗೆ ನಡೆದಿರುವ ಬೆಳವಣಿಗೆ ದೇಶವೇ ದುಃಖ ಪಡಬೇಕಾದ ಅಂಕಿ ಅಂಶಗಳು ಪ್ರಕಟವಾಗಿದೆ. ಈ ಸನ್ನಿವೇಶದಲ್ಲಿ ಭಾರತೀಯ ಸೇನೆ ಮಾಡಿದ್ದು ನಗೆಪಾಟಲು ಆಗಲಿಲ್ಲವೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಭಾರತದಲ್ಲಿ ಕರೋನಾ ಸೋಂಕಿತರ ಸಂಖ್ಯೆ 49 ಸಾವಿರ ತಲುಪಿದ್ದು, 1693 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 14000 ಜನರು ಕರೋನಾ ಸೋಂಕಿನಿಂದ ಚೇತರಿಸಿಕೊಂಡಿರುವುದು ಸಮಾಧಾನಕರ ವಿಚಾರವಾಗಿದೆ. ಆದರೆ ಕಳೆದ ಮೂರು ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಭಾರತ ಎಲ್ಲಾ ದೇಶಗಳನ್ನು ಹಿಂದಿಕ್ಕಿ ಮುಂದೆ ಸಾಗಿ ಬಿಡುತ್ತಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ. ಇಲ್ಲೀವರೆಗೂ 800 ರಿಂದ 1500ರ ಆಸುಪಾಸಿನಲ್ಲಿ ಏರಿಕೆಯಾಗುತ್ತಿದ್ದ ಸೋಂಕಿತರ ಸಂಖ್ಯೆ ಏಕಾಏಕಿ 2500ಕ್ಕೆ ತಲುಪಿದೆ. ಪ್ರತಿದಿನ 2500 ಸೋಂಕಿತರ ಹೆಚ್ಚಳವಾಗುತ್ತಾ ಸಾಗಿರುವುದು ಭಾರತ ಸರ್ಕಾರವನ್ನು ಕಂಗಾಲಾಗಿಸುವಂತೆ ಮಾಡಿ. ಆದರೂ 40 ದಿನಗಳ ಕಾಲ ಲಾಕ್ಡೌನ್ ಮಾಡಿಕೊಂಡಿದ್ದ ದೇಶವನ್ನು ಏಕಾಏಕಿ ವಿನಾಯ್ತಿ ಕೊಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಈ ನಡುವೆ ಭಾನುವಾರದ ಸಂಭ್ರಮ ಸದ್ಯಕ್ಕೆ ಅವಶ್ಯಕತೆ ಇತ್ತೆ ಎನ್ನುವ ಸಣ್ಣ ಅನುಮಾನವನ್ನು ಹುಟ್ಟುಹಾಕಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ದೇಶದ ಪ್ರಮುಖ ನಗರಗಳ ಆಸ್ಪತ್ರೆಗಳ ವೈದ್ಯರನ್ನು ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿ ಅವರ ಮೇಲೆ ವಾಯುಪಡೆಯ ಹೆಲಿಕಾಪ್ಟರ್ಗಳಲ್ಲಿ ಹೂವನ್ನು ಸುರಿಯುವ ಮೂಲಕ ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಇಡೀ ವೈದ್ಯಕೀಯ ಸಿಬ್ಬಂದಿಗೆ ಗೌರವ ಸಮರ್ಪಣೆ ಮಾಡಲಾಯ್ತು. ಜೊತೆಗೆ ನೌಕಾಪಡೆ ಹಡಗುಗಳಲ್ಲಿ ದೀಪ ಬೆಳಗುವ ಮೂಲಕ ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಕಷ್ಟಕರ ಸಮಯದಲ್ಲೂ ಜನರ ಹಿತಕ್ಕಾಗಿ ತಮ್ಮ ತನುಮನವನ್ನು ಅರ್ಪಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಗೌರವ ಸೂಚಿಸಬೇಕಾದ ಕರ್ತವ್ಯ ಇಡೀ ನಾಗರಿಕ ಸಮಾಜದ ಮೇಲಿದೆ. ಆದರೆ ಕರೋನಾ ಆರ್ಭಟ ಭೋರ್ಗರೆಯುವ ಈ ಸಮಯದಲ್ಲಿ ಸಂಭ್ರಮಿಸುವ ಮನಸ್ಥಿತಿ ಹೇಗೆ ಬರುತ್ತದೆ..? ಅಲ್ಲವೇ..! ವೈದ್ಯಕೀಯ ಸಿಬ್ಬಂದಿಗಳು ಹುದ್ದೆ ಕಾಯಂ ಮಾಡಿ ಎಂದು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ವೈದ್ಯರ ವೇತನವನ್ನು ಹೆಚ್ಚಳ ಮಾಡಬೇಕಾಗುತ್ತದೆ, ಸರ್ಕಾರದ ಸೌಲತ್ತುಗಳನ್ನು ನೀಡಬೇಕಾಗುತ್ತದೆ ಎನ್ನುವ ಏಕೈಕ ಕಾರಣಕ್ಕೆ ಕಾಯಂ ಮಾಡದೆ ಇದ್ದರೂ ತಲೆ ಮೇಲೆ ಹೆಲಿಕಾಪ್ಟರ್ನಲ್ಲಿ ಹೂಮಳೆ ಸುರಿಸುವ ಮೂಲಕ ಕಣ್ಣೊರೆಸುವ ತಂತ್ರ ಯಾಕೆ ಎಂದು ವೈದ್ಯರೇ ಪ್ರಶ್ನಿಸುತ್ತಿದ್ದಾರೆ.
ದೇಶದಲ್ಲಿ ಕರೋನಾ ನಿಯಂತ್ರಣಕ್ಕೆ ಬಂದಿಲ್ಲ. ಮೇ 01 ರಂದು ಭಾರತದಲ್ಲಿ 1755, ಮೇ 02 ರಂದು 2411 ಮಂದಿ, ಮೇ 03 ರಂದು 2487, ಮೇ 04 ರಂದು 2573 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಲಾಕ್ಡೌನ್ ದೇಶದಲ್ಲಿ ಅನುಕೂಲ ಆಗಿದೆಯೋ ಇಲ್ಲವೋ ಎಂದರೆ ಸರ್ಕಾರ ಹೇಳುತ್ತಿರುವುದು ಲಾಕ್ಡೌನ್ ಮಾಡಿದ್ರಿಂದಲೇ ಸೋಂಕು ನಿಯಂತ್ರಣ ಆಗಿದ್ದು ಎನ್ನಲಾಗ್ತಿದೆ. ಲಾಕ್ಡೌನ್ ವೇಳೆಯಲ್ಲಿ ನಗರ ಪಟ್ಟಣ ಪ್ರದೇಶದಲ್ಲಿ ರಣಕೇಕೆ ಹಾಕಿದ್ದ ಕರೋನಾ ಸೋಂಕು, ಇದೀಗ ಹಳ್ಳಿ ಪ್ರದೇಶದಲ್ಲಿ ಆರ್ಭಟ ಶುರು ಮಾಡಿದೆ. ಸದ್ಯ ಇದೀಗ ಭಾರತದಲ್ಲಿ ಕರೋನಾ ಸೋಂಕಿತರ ಸಂಖ್ಯೆ 46437ಕ್ಕೆ ಏರಿಕೆಯಾಗಿದೆ. ಇನ್ನೂ ಮಹಾರಾಷ್ಟ್ರದಲ್ಲಿ 13 ಸಾವಿರ ಆಸುಪಾಸಿನಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ತವರು ಗುಜರಾತ್ 2ನೇ ಸ್ಥಾನದಲ್ಲಿದ್ದು 5428 ಜನರಲ್ಲಿ ಸೋಂಕಿದೆ. ರಾಷ್ಟ್ರ ರಾಜಧಾನಿ ದೆಹಲಿ ಮೂರನಮೇ ಸ್ಥಾನದಲ್ಲಿದ್ದು 4549 ಸೋಂಕಿತರನ್ನು ಹೊಂದಿದೆ. ವಿಶ್ವದ ಎದುರು ಭಾರತದಲ್ಲಿ ಕರೋನಾ ಸೋಂಕು ಕಡಿಮೆ ಆಗುವುದಕ್ಕೆ ಕಾರಣ ಇಲ್ಲಿನ ಪರಿಸರತ ಜನರಲ್ಲಿರುವ ರೋಗನಿರೋಧಕ ಶಕ್ತಿ ಎನ್ನುವ ಮಾತುಗಳೂ ಇವೆ. ಇದೀಗ ಲಾಕ್ಡೌನ್ ವಿನಾಯ್ತಿ ಕೊಟ್ಟು ಜನರನ್ನು ಬೀದಿಗೆ ಬಿಟ್ಟಿರುವ ಉದ್ದೇಶವಾದರೂ ಏನು ಎಂದು ಜನರೇ ಆಕ್ರೋಶಿತರಾಗಿದ್ದಾರೆ. ಉತ್ತರಿಸಬೇಕಾದವರು ಮಾತ್ರ ಚಕಾರ ಎತ್ತುವ ಮನಸ್ಸು ಮಾಡ್ತಿಲ್ಲ. ಆರ್ಥಿಕ ಪರಿಸ್ಥಿತಿಗಾಗಿ ಮದ್ಯದಂಗಡಿ ಓಪನ್ ಮಾಡಿಕೊಂಡು ಕಾಸು ಎಣಿಸುತ್ತಿದ್ದಾರೆ.