ಭಾನುವಾರ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಅಧ್ಯಕ್ಷ ಜೇರ್ ಮೆಸ್ಸಾಯಿಸ್ ಬೊಲ್ಸೋನಾರೋ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ದೆಹಲಿಯ ರಾಜಪಥದಲ್ಲಿ ನಡೆಯಲಿರುವ ಮನಮೋಹಕ ಪರೇಡ್ ಅನ್ನು ವೀಕ್ಷಿಸಲಿದ್ದಾರೆ.
ಆದರೆ, ಅವರನ್ನು ಅತಿಥಿಗಳನ್ನಾಗಿ ಆಹ್ವಾನಿಸಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಏಕೆಂದರೆ, ಅವರ ವೈಯಕ್ತಿಕ ಚಾರಿತ್ರ್ಯ ಮತ್ತು ಆಡಳಿತದ ವೈಖರಿ ಸಾಕಷ್ಟು ಜನರಿಗೆ ಆಕ್ರೋಶವನ್ನು ಉಂಟು ಮಾಡಿದೆ.
ಭಾರತೀಯರು ಬ್ರೆಜಿಲ್ ಅನ್ನು ವಿರೋಧಿಸುವುದಕ್ಕೆ ಪ್ರಮುಖವಾದ ಕಾರಣವೆಂದರೆ ವಿಶ್ವ ವಾಣಿಜ್ಯ ಸಂಸ್ಥೆಯ ವಿಚಾರದಲ್ಲಿ ಆ ದೇಶದ ನಮ್ಮ ವಿರುದ್ಧ ಕ್ಯಾತೆ ತೆಗೆದದ್ದು.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಜಾಗತಿಕ ಮಟ್ಟದಲ್ಲಿ ಸಕ್ಕರೆ ಮಾರುಕಟ್ಟೆಯಲ್ಲಿ ಭಾರತಕ್ಕೆ ಬ್ರೆಜಿಲ್ ಪ್ರತಿಸ್ಪರ್ಧಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಕಬ್ಬು ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ರೈತರಿಗೆ ಹಲವಾರು ರೀತಿಯಲ್ಲಿ ಬೆಂಬಲ ನೀಡುತ್ತಿದೆ. ಇಲ್ಲಿ ಹೆಚ್ಚು ಕಬ್ಬು ಬೆಳೆದಂತೆಲ್ಲಾ ತನಗೆ ಭಾರತ ಸಕ್ಕರೆ ಉತ್ಪಾದನೆಯಲ್ಲಿ ತನಗೆ ತೀವ್ರ ರೀತಿಯ ಪೈಪೋಟಿ ನೀಡುತ್ತದೆ ಎಂಬ ಕಾರಣದಿಂದ ಬ್ರೆಜಿಲ್ ರೈತರಿಗೆ ನೆರವು ನೀಡುತ್ತಿರುವ ಭಾರತ ಸರ್ಕಾರದ ಕ್ರಮಗಳಿಗೆ ಕೊಕ್ಕೆ ಹಾಕಲು ಪ್ರಯತ್ನ ನಡೆಸಿತ್ತು. ಇದಕ್ಕೆಂದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಅಪಪ್ರಚಾರವನ್ನೂ ಮಾಡಿತ್ತು.
ಭಾರತ ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಾವಳಿಗಳನ್ನು ಮೀರಿ ಕಬ್ಬನ್ನು ಬೆಳೆಯಲು ರೈತರಿಗೆ ಬೆಂಬಲ ನೀಡುತ್ತಿದೆ ಎಂದು ಬ್ರೆಜಿಲ್ ಕಳೆದ ವರ್ಷ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅಭಿಯಾನವನ್ನೇ ನಡೆಸಿತ್ತು. ಈ ಹಿನ್ನೆಲೆಯಲ್ಲಿ ರೈತ ಸಮುದಾಯ ಮತ್ತು ಎಡಪಂಥೀಯರು ಬ್ರೆಜಿಲ್ ಅಧ್ಯಕ್ಷರು ಭಾರತಕ್ಕೆ ಬರುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಭಾರತೀಯ ರೈತರಿಗೆ ಧಕ್ಕೆ ಆಗುವ ರೀತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ನಡೆಸಿದ್ದ ಬ್ರೆಜಿಲ್ ನ ಅಧ್ಯಕ್ಷರನ್ನು ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸುವ ಮೂಲಕ ರೈತರಿಗೆ ಅವಮಾನ ಮಾಡಿದಂತಾಗಿದೆ ಎಂದು ರೈತರು ದೂರಿದ್ದಾರೆ.
ಕಬ್ಬು ಬೆಳೆಯುವ ವಿಚಾರದಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ ವಿಧಿಸಿರುವ ಷರತ್ತುಗಳು ರೈತ ಸಮುದಾಯಕ್ಕೆ ಭಾರೀ ಹೊಡೆತವನ್ನುಂಟು ಮಾಡುತ್ತವೆ. ಆ ಷರತ್ತುಗಳನ್ನು ಪಾಲಿಸಿದ್ದೇ ಆದಲ್ಲಿ ರೈತ ಸಮುದಾಯದ ಜೀವನ ಅಡಕತ್ತರಿಯಲ್ಲಿ ಬೀಳುತ್ತದೆ ಎಂಬ ಆತಂಕ ರೈತರದ್ದಾಗಿದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಬೊಲ್ಸೊನಾರೋ ಬರುತ್ತಿರುವುದನ್ನು ವಿರೋಧಿಸುತ್ತಿರುವುದಕ್ಕೆ ಬಹುದೊಡ್ಡ ಕಾರಣವೂ ಇದೆ. ಅದೆಂದರೆ ಅವರ ವೈಯಕ್ತಿಕ ದುರ್ವರ್ತನೆ. ಬೊಲ್ಸೊನಾರೊ ಓರ್ವ ಮಾಜಿ ಸೈನಿಕ. ಹೆಣ್ಣು ಮಕ್ಕಳ ದ್ವೇಷಿ, ಹೋಮೋಫೋಬಿಯಾದ ವ್ಯಕ್ತಿಯಾಗಿದ್ದಾರೆ. ಇದಕ್ಕೆ ಹಲವಾರು ನಿದರ್ಶನಗಳಿವೆ.
2014 ರಲ್ಲಿ ಬ್ರೆಜಿಲ್ ಪಾರ್ಲಿಮೆಂಟಿನಲ್ಲಿ ಬೊಲ್ಸೊನಾರೋ ಅಲ್ಲಿನ ಪ್ರತಿಪಕ್ಷದ ಸಾಲಿನಲ್ಲಿ ಕುಳಿತ್ತಿದ್ದ ಸಂಸದೆ ಮಾರಿಯಾ ಡೊ ರೊಸಾರಿಯೋ ಅವರನ್ನು ಉದ್ದೇಶಿಸಿ “ನಾನು ನಿಮ್ಮ ಮೇಲೆ ಅತ್ಯಾಚಾರ ಮಾಡುವುದಿಲ್ಲ, ಏಕೆಂದರೆ ಅದಕ್ಕೆ ನೀವು ಅರ್ಹರಲ್ಲ’’ ಎಂದು ವಿವಾದಾಸ್ಪದ ಹೇಳಿಕೆಯನ್ನು ನೀಡಿದ್ದರು.
ಈ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು ಮತ್ತು ಇದಕ್ಕೆ ಕ್ಷಮೆ ಯಾಚಿಸುವಂತೆ ಒತ್ತಡಗಳು ಬಂದಿದ್ದವು. ಆದರೆ, ಈ ಒತ್ತಡಗಳಿಗೆ ಸೊಪ್ಪು ಹಾಕದ ಅಧ್ಯಕ್ಷ, ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ್ದಲ್ಲದೇ, ನೀವು ಕೆಟ್ಟದಾಗಿ ಕಾಣುವುದರಿಂದ ನಿಮ್ಮ ಮೇಲೆ ಅತ್ಯಾಚಾರ ಮಾಡುವುದಿಲ್ಲ ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದರು.
ಈ ಅಧ್ಯಕ್ಷನ ಮಹಿಳಾ ದ್ವೇಷದ ವರ್ತನೆ ತನ್ನ ಸ್ವಂತ ಮಕ್ಕಳನ್ನೂ ಬಿಡಲಿಲ್ಲ. 2017 ರಲ್ಲಿ ಭಾಷಣ ಮಾಡಿದ್ದ ಬೊಲ್ಸೊನಾರೋ ನನಗೆ ಐವರು ಮಕ್ಕಳಿದ್ದಾರೆ. ಇವರಲ್ಲಿ ನಾಲ್ವರು ಗಂಡು ಮತ್ತು ನನ್ನ ದೌರ್ಬಲ್ಯದ ಕ್ಷಣದಿಂದಾಗಿ ಐದನೇಯದು ಹೆಣ್ಣು ಮಗುವಾಯಿತು ಎಂದಿದ್ದರು. ಇನ್ನು 2002 ರಲ್ಲಿ ಅಂದಿನ ಅಧ್ಯಕ್ಷ ಫೆರ್ನಾಂಡೋ ಹೆನ್ರಿಕ್ ಕಾರ್ಡೊಸೋ ತೃತೀಯ ಲಿಂಗಿಗಳ ಹಕ್ಕುಗಳ ಪರವಾಗಿ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬೊಲ್ಸೊನಾರೋ ನಾನು ಇದರ ಪರವಾಗಿಯಾಗಲೀ ಅಥವಾ ವಿರೋಧವಾಗಿಯಾಗಲೀ ಹೋರಾಟ ಮಾಡುವುದಿಲ್ಲ. ಆದರೆ, ರಸ್ತೆಯಲ್ಲಿ ಇಬ್ಬರು ಗಂಡಸರು ಪರಸ್ಪರ ಮುತ್ತಿಡುತ್ತಿರುವುದನ್ನು ನೋಡಿದರೆ ಕೂಡಲೇ ಅವರನ್ನು ಹೊಡೆಯುತ್ತೇನೆ ಎಂದಿದ್ದರು.
ಇನ್ನು ದೇಶದಲ್ಲಿನ ನಿರಾಶ್ರಿತರ ಬಗ್ಗೆ ಬೊಲ್ಸೊನಾರೋ ನಿರಾಶ್ರಿತರು ಭೂಮಿ ಮೇಲಿನ ಕಲ್ಮಷವಿದ್ದಂತೆ ಎಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.
ಬೊಲ್ಸೊನಾರೋರ ಈ ಎಲ್ಲಾ ಅವಗುಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ದೇಶದ ಹೋರಾಟಗಾರರು ಇಂತಹ ವ್ಯಕ್ತಿತ್ವ ಇರುವವರನ್ನು ನಮ್ಮ ದೇಶದ ಹೆಮ್ಮೆಯಾಗಿರುವ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳನ್ನಾಗಿ ಆಮಂತ್ರಿಸುತ್ತಿರುವುದು ಸಮಂಜಸವಲ್ಲ ಎಂಬ ವಾದವನ್ನು ಮುಂದಿಟ್ಟಿದ್ದಾರೆ.