ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಹೊಸ ಪ್ರಭೇದದ ಕರೋನಾ ವೈರಸ್ ಶರ ವೇಗವಾಗಿ ಹರಡುತ್ತಿದೆ. ಈ ನೂತನ ತಳಿಯ ಕರೋನಾ ವೈರಸ್ ವೇಗವಾಗಿ ಹರಡುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಗಳಿವೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ತೀವ್ರ ಆತಂಕಕ್ಕೀಡಾಗಿರುವ ಸಾರ್ವಜನಿಕರು ಅತ್ಯಂತ ಜಾಗರೂಕತೆಯಿಂದ ವರ್ತಿಸುತ್ತಿದ್ದಾರೆ. ಈ ಮಧ್ಯೆ ಇದರ ಹೊಸ ರೋಗದ ಹಾವಳಿ ತಡೆಯಲು ರಾಜಧಾನಿ ಲಂಡನ್‌ನಲ್ಲಿ ಲಾಕ್‌ಡೌನ್ ಹೇರುವ ಕುರಿತು ಸರ್ಕಾರ ಚಿಂತಿಸಿದೆ. ಹೀಗಾಗಿ, ಲಂಡನ್‌ನ ಸಾವಿರಾರು ನಾಗರಿಕರು, ಬೇರೆ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ.
ಕರೋನಾ ವೈರಸ್‌ನ ನೂತನ ಪ್ರಭೇದ ಹರಡದಂತೆ ನೋಡಿಕೊಳ್ಳಲು ಬ್ರಿಟನ್ ಸರ್ಕಾರ ಸಾಕಷ್ಟು ಸರ್ಕಸ್ ನಡೆಸುತ್ತಿದೆ. ಒಂದಡೆ ಇದರ ತಡೆಗೆ ಸರ್ಕಾರ ಹರಸಾಹಸ ನಡೆಸುತ್ತಿದ್ದರೇ, ಮತ್ತೊಂದೆಡೆ ಜೀವ ಭಯದಲ್ಲಿ ಬದುಕುತ್ತಿರುವ ಸಾರ್ವಜನಿಕರು ರಾಜಧಾನಿಯಿಂದ ಗುಳೆ ಹೋಗುತ್ತಿದ್ದಾರೆ. ಹೀಗೆ ಗುಳೆ ಹೋಗುತ್ತಿರುವ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆರೋಗ್ಯ ಕಾರ್ಯದರ್ಶಿ ಮ್ಯಾಟ್ಟ್ ಹಾನ್‌ಕಾಕ್, ಯಾವುದೇ ಕಾರಣಕ್ಕೂ ಲಂಡನ್‌ನಿಂದ ಹೊರ ಹೋಗುವಂತಿಲ್ಲ ಎಂದು ಆದೇಶಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶಾದ್ಯಂತ ಕರೋನಾ ಹರಡುವುದನ್ನು ತಪ್ಪಿಸಲು ವಲಸೆ ಹೋಗುತ್ತಿರುವ ಸಾರ್ವಜನಿಕರನ್ನು ತಡೆಯಲಾಗುತ್ತಿದೆ. ಇದಕ್ಕಾಗಿ ಪೊಲೀಸರು ಎಲ್ಲೆಡೆ ರಸ್ತೆ ತಡೆಗಳನ್ನು ನಿರ್ಮಿಸಿದ್ದಾರೆ. ಜತೆಗೆ ರೈಲು ಹತ್ತಲು ಮುಂದಾದ ಪ್ರವಾಸಿ ಕುಟುಂಬಗಳನ್ನು ತಡೆದಿದ್ದಾರೆ.
ಲಂಡನ್‌ನಿಂದ ಬೇರೆ ಕಡೆ ವಲಸೆ ಹೋಗತ್ತಿರುವ ಜನರಿಗೆ ಜವಾಬ್ದಾರಿ ಇಲ್ಲ. ಇವರು ಈಗ ಹೊರಗೆ ಹೋದಲ್ಲಿ ದೇಶದಲ್ಲಿ ಮತ್ತೆ ಕರೋನಾ ವೈರಸ್ ಹರಡುವ ಸಾಧ್ಯತೆ ಇದೆ. ಕರೋನಾದಿಂದ ಈ ಮೂರ್ಖರು ಸಾಯುವುದಲ್ಲದೇ ಬೇರೆಯವರನ್ನು ಬಲಿ ಕೊಡಲಿದ್ದಾರೆ ಎಂದು ಮ್ಯಾಟ್ಟ್ ಹಾನ್‌ಕಾಕ್ ಅಸಮಾಧಾನ ಹೊರಹಾಕಿದ್ದಾರೆ.
ಡಿಸೆಂಬರ್ ತಿಂಗಳಿನಿಂದ ಮತ್ತೆ ಬ್ರಿಟನ್‌ನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಏರಿಕೆಯಾಗಿವೆ. ಕಳೆದ ವಾರ ಸೋಂಕಿನ ಪ್ರಕರಣಗಳಲ್ಲಿ ಹಿಂದಿನ ವಾರಕ್ಕಿಂತ ಶೇ. 40.9ರಷ್ಟು ಹೆಚ್ಚಳವಾಗಿದೆ. ಈ ಬೆನ್ನಲ್ಲೇ ಇಂಗ್ಲೆಂಡ್‌ನಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಹೇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ತಿಳಿಸಿದ್ದಾರೆ.
ಸದ್ಯ ಹೊಸ ಕರೋನಾ ವೈರಸ್ ಕಾಣಿಸಿಕೊಂಡ ಪ್ರದೇಶಗಳನ್ನು 4ನೇ ಸ್ತರದ ಪ್ರಾಂತಗಳು ಎಂದು ಗುರುತಿಸಲಾಗಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಲಂಡನ್‌ನಿಂದ ಯಾರು ಹೊರಗೆ ಹೋಗಬಾರದು ಎಂದು ಸರ್ಕಾರ ಆದೇಶಿಸಿದೆ.