ಬೆಂಗಳೂರಿನ ಶಾಸಕರು ಹಾಗೂ ಸಂಸದರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಸಿರುವುದು ವಿಪಕ್ಷ ನಾಯಕ ಸಿದ್ಧರಾಮಯ್ಯನವರ ಅಸಮಾಧಾನಕ್ಕೆ ಗುರಿಯಾಗಿದೆ. ರಾಜ್ಯ ಮುಖ್ಯಮಂತ್ರಿ ಸರ್ವ ಪಕ್ಷ ಸಭೆ ಕರೆಯದೆ ಕೇವಲ ಬೆಂಗಳೂರು ಜನಪ್ರತಿನಿಧಿಗಳೊಂದಿಗೆ ಮಾತ್ರ ಯಾಕೆ ಸಭೆ ನಡೆಸಿದ್ದಾರೆಂದು ಪ್ರಶ್ನಿಸಿದ್ದಾರೆ.
ಕರೋನಾ ಸೋಂಕು ತಡೆಯಲು ಸರ್ಕಾರ ವಿಫಲವಾಗಿದೆ ಎಂದಿರುವ ಸಿದ್ಧರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನೂ ಟೀಕಿಸಿದ್ದಾರೆ. ಕರೋನಾ ಸೋಂಕು ತಡೆಯಲು ಅಗತ್ಯ ಇರುವ ಮುಂಜಾಗೃತಾ ಕ್ರಮವನ್ನು ತೆಗೆಯದ ಕಾರಣ ಸೋಂಕು ಈ ಮಟ್ಟಿಗೆ ಹರಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಾಸ್ತವವಾಗಿ ಈಗ ಲಾಕ್‌ಡೌನ್ ಜಾರಿಗೊಳಿಸಬೇಕಾಗಿತ್ತು. ಆದರೆ ಈಗ ಲಾಕ್‌ಡೌನ್ ತೆರೆದಿದ್ದಾರೆ, ಅಕಾಲಿಕವಾಗಿ ಘೋಷಿಸಿದ ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ ಎಂದು ಪ್ರಧಾನಿ ನಡೆಯನ್ನು ಮುಂಜಾಗ್ರತೆ ಕ್ರಮದ ಕೊರತೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಮುಖ್ಯಮಂತ್ರಿ ಈಗ ರಾಜ್ಯ ಮಟ್ಟದ ಸಭೆ ಕರೆಯಬೇಕಿತ್ತು. ಕೇವಲ ಬೆಂಗಳೂರು ಜನ ಪ್ರತಿನಿಧಿಗಳ ಸಭೆ ಕರೆದಿದ್ದಾರೆ, ಈ ಸಮಯದಲ್ಲಿ ಸರ್ವ ಪಕ್ಷ ಸಭೆ ಕರೆಯಬೇಕು ಎಂದಿರುವ ಸಿದ್ಧರಾಮಯ್ಯ, ರಾಜ್ಯ ಸರ್ಕಾರ ಆಸ್ಪತ್ರೆಗಳ ನಿರ್ವಹಣೆಯಲ್ಲಿ ಸೋತಿದೆ, ಕರೋನಾ ಹೊರತು ಪಡಿಸಿ ಉಳಿದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಲಭಿಸುತ್ತಿಲ್ಲ ಎಂದು ಹೇಳಿದ್ದಾರೆ.
ಕರೋನಾ ಪತ್ತೆ ಹಚ್ಚಲು ರ‌್ಯಾಂಡಮ್ ಪರೀಕ್ಷೆ ನಡೆಸಬೇಕು ಎಂದಿರುವ ಮಾಜಿ ಮುಖ್ಯಮಂತ್ರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವಾಗ ವಿದ್ಯಾರ್ಥಿಗಳಿಗೆ ಕರೋನಾ ತಗುಲಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದಿದ್ದಾರೆ.