ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಮಂಗಳೂರು ಗಲಭೆಯ ಬಳಿಕ ಮತ್ತೊಮ್ಮೆ ರಾಜ್ಯದ ಪೊಲೀಸ್ ಮತ್ತು ಗುಪ್ತಚರ ಇಲಾಖೆಯ ಲೋಪಗಳನ್ನು ಬಯಲುಮಾಡಿದೆ. ಅದೇ ಹೊತ್ತಿಗೆ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳ ಹೊಣೆಗೇಡಿತನವನ್ನೂ ಅದು ಬೆತ್ತಲು ಮಾಡಿದೆ ಎಂಬುದು ವಾಸ್ತವ.
ಧರ್ಮ ಮತ್ತು ಧಾರ್ಮಿಕ ಗುರುಗಳ ಕುರಿತ ಯಾವುದೇ ಆಕ್ಷೇಪಾರ್ಹ ಸಂಗತಿಗಳನ್ನು ಎಂಥ ಸೂಕ್ಷ್ಮತೆಯಲ್ಲಿ ನಿಭಾಯಿಸಬೇಕು ಎಂಬುದು ಆಡಳಿತ ವ್ಯವಸ್ಥೆ ತಿಳಿಯದ ಸಂಗತಿಯೇನಲ್ಲ. ಆದರೆ, ಬೆಂಗಳೂರು ಗಲಭೆಯ ವಿಷಯದಲ್ಲಿ ಈ ವಿಷಯದಲ್ಲಿ ಪೊಲೀಸ್ ಮತ್ತು ಸ್ಥಳೀಯ ಶಾಸಕರಿಬ್ಬರೂ ಎಡವಿದ್ದಾರೆ ಎಂಬುದು ಘಟನೆಯ ವಿವರಗಳನ್ನು ಗಮನಿಸಿದರೆ ತಿಳಿಯುತ್ತದೆ. ಒಂದು ಸಮುದಾಯದ ಧರ್ಮಗುರುವಿಗೆ ಅಪಮಾನಕರ ಸಂಗತಿಯನ್ನು ಮತ್ತೊಂದು ಸಮುದಾಯದ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂಬುದೇ ಇವತ್ತಿನ ದೇಶದ ವಾಸ್ತವಿಕ ಸ್ಥಿತಿಯಲ್ಲಿ ಅತ್ಯಂತ ಸೂಕ್ಷ್ಮ ವಿಷಯ. ಅದರಲ್ಲೂ ಹಾಗೆ ಹಂಚಿಕೊಂಡ ವ್ಯಕ್ತಿಗೆ ರಾಜಕೀಯ ಹಿನ್ನೆಲೆ ಇದೆ ಮತ್ತು ಆತ ಸ್ವತಃ ರಾಜಕೀಯ ಮಹತ್ವಾಕಾಂಕ್ಷೆಯ ವ್ಯಕ್ತಿ ಎಂದರಂತೂ ವಿಷಯ ಇನ್ನಷ್ಟು ಸಂಕೀರ್ಣ. ಆದರೆ, ಆತನ ಬಗ್ಗೆ ದೂರು ನೀಡಿದ ಗಂಟೆಗಳ ಬಳಿಕವೂ ಬೆಂಗಳೂರು ಪೊಲೀಸರು ಈ ಸೂಕ್ಷ್ಮತೆ ಅರಿತು ಅದನ್ನು ಜಾಣ್ಮೆಯಿಂದ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮತ್ತೊಂದು ಕಡೆ, ಠಾಣೆಯಲ್ಲಿ ದೂರು ದಾಖಲಾದ ತಾಸಿನಲ್ಲೇ ಸಾವಿರಾರು ಮಂದಿ ಠಾಣೆಗೆ ಮುತ್ತಿಗೆ ಹಾಕಿದರು ಮತ್ತು ಅವರುಗಳು ಹಿಂಸಾ ಕೃತ್ಯ ಎಸಗಲು ಪೂರ್ವಯೋಜನೆಯೊಂದಿಗೆ ಎಲ್ಲಾ ಸಿದ್ಧತೆಯೊಂದಿಗೆ ಧಾವಿಸಿದ್ದರು. ಪೆಟ್ರೋಲ್, ಸೀಮೆಎಣ್ಣೆ, ಮಾರಕಾಸ್ತ್ರಗಳ ಸಹಿತ ದಾಳಿಗೆ ಸಜ್ಜಾಗಿಯೇ ಬಂದಿದ್ದರು ಎಂಬುದನ್ನು ಗುಪ್ತಚರ ಇಲಾಖೆ ಮತ್ತು ಠಾಣಾ ಪೊಲೀಸರು ಗ್ರಹಿಸುವಲ್ಲಿ ಯಾಕೆ ಎಡವಿದರು? ಅದರಲ್ಲೂ ಸ್ಥಳೀಯ ರಾಜಕೀಯ ಮುಖಂಡರ ನೇತೃತ್ವದಲ್ಲಿ ಅಷ್ಟೊಂದು ಜನ ಏಕಾಏಕಿ ಮುತ್ತಿಗೆ ಹಾಕಿದರು ಎಂದರೆ; ಆಕ್ಷೇಪಾರ್ಹ ಸಂಗತಿ ಜಾಲತಾಣದಲ್ಲಿ ಹಂಚಿದ ಬಳಿಕ ಆ ಕುರಿತು ಆ ಸಮುದಾಯದಲ್ಲಿ ಮತ್ತು ಆ ಪ್ರದೇಶದಲ್ಲಿ ಆ ಬಗ್ಗೆ ಭುಗಿಲೆದ್ದ ಆಕ್ರೋಶ ಮತ್ತು ಅದನ್ನು ಹಿಂಸೆಗೆ ತಿರುಗಿಸುವ ಕೆಲವರ ಹಕೀಕತ್ತಿನ ಬಗ್ಗೆ ಮಾಹಿತಿ ಪಡೆಯುವ ಮಟ್ಟಿಗಿನ ಮುನ್ನೆಚ್ಚರಿಕೆ ವಹಿಸುವ ಸೂಕ್ಷ್ಮತೆಯನ್ನು ನಮ್ಮ ಗುಪ್ತಚರ ಇಲಾಖೆ ಕಳೆದುಕೊಂಡುಬಿಟ್ಟಿದೆಯೇ? ಎಂಬ ಪ್ರಶ್ನೆಗಳಿಗೂ ಉತ್ತರವಿಲ್ಲ!
ಜೊತೆಗೆ, ಗಲಭೆಯ ಮುನ್ಸೂಚನೆ ಅರಿತು ಸ್ವತಃ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರೇ ಬೇರೆಡೆಗೆ ತೆರಳಿದ್ದರೂ, ಆ ವಿಷಯವನ್ನು ಅವರು ಪೊಲೀಸರಿಗೆ ಯಾಕೆ ತಿಳಿಸಿರಲಿಲ್ಲ? ಸ್ವತಃ ಆ ಭಾಗದ ಶಾಸಕರಿಗೆ ಸಿಕ್ಕ ಮಾಹಿತಿ ಆ ವ್ಯಾಪ್ತಿಯ ಪೊಲೀಸರು ಮತ್ತು ಗುಪ್ತಚರ ಸಿಬ್ಬಂದಿಗೆ ಯಾಕೆ ಸಿಗಲಿಲ್ಲ? ಎಂಬುದು ಕೂಡ ಕೇಳಬೇಕಾದ ಪ್ರಶ್ನೆಯೇ. ಪೂರ್ವಭಾವಿಯಾಗಿ ಸಮುದಾಯದ ಒಳಗೆ ಭುಗಿಲೆದ್ದ ಆಕ್ರೋಶ ಮತ್ತು ಅದು ಹಿಂಸಾದಾಳಿಯಾಗಿ ಬದಲಾಗುವ ಮುನ್ಸೂಚನೆ ತಿಳಿಯದೇ ಹೋದರೂ, ಕನಿಷ್ಟ ಠಾಣೆಗೆ ಅಧಿಕೃತ ದೂರು ನೀಡಿ ಕೂಡಲೇ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಜನ ಜಮಾವಣೆಯಾಗುತ್ತಿರುವಾಗಲಾದರೂ ಪೊಲೀಸರು ಎಚ್ಚರ ವಹಿಸಬೇಕಿತ್ತು. ಆ ದಿಢೀರ್ ಆಕ್ರೋಶದ ಹಿಂದೆ ಯಾರಿದ್ದಾರೆ? ಯಾವ ಸಂಘಟನೆ ಇದೆ? ಅವರ ಜಾಲ ಯಾವುದು? ಯಾವ ತಯಾರಿಯೊಂದಿಗೆ, ಯಾವ ಉದ್ದೇಶದೊಂದಿಗೆ ಅವರು ಠಾಣೆ ಮತ್ತು ಶಾಸಕರ ನಿವಾಸದ ಪ್ರದೇಶದಲ್ಲಿ ಜಮಾವಣೆಯಾಗುತ್ತಿದ್ದಾರೆ ಎಂಬುದನ್ನಾದರೂ ಗ್ರಹಿಸಬೇಕಿತ್ತು. ಕನಿಷ್ಠ ಗುಂಪು ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡಲು, ಬೆಂಕಿ ಹಚ್ಚಲು ಆರಂಭಿಸುತ್ತಲೇ ಬಿಗಿ ಕ್ರಮಗಳನ್ನು ಜರುಗಿಸಬೇಕಿತ್ತು. ಅದೂ ಆಗಲಿಲ್ಲ.
ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲೇ ಇಂತಹದ್ದೊಂದು ಭೀಕರ ಗಲಭೆ ನಡೆದು, ಸ್ವತಃ ಶಾಸಕರ ಮನೆ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರೂ ಸಾಕಷ್ಟು ಪೊಲೀಸರನ್ನು ನಿಯೋಜಿಸಿ, ಮುಂಜಾಗ್ರತೆಯ ಕ್ರಮವಾಗಿ ಲಾಠಿ ಚಾರ್ಜು, ಗಾಳಿಯಲ್ಲಿ ಗುಂಡು ಮುಂತಾದ ಕ್ರಮಗಳ ಮೂಲಕ ಗಲಭೆ ಹತೋಟಿಗೆ ಕ್ರಮ ವಹಿಸುವಲ್ಲಿ ಪೊಲೀಸ್ ಇಲಾಖೆ ಎಡವಿತೆ? ಮುಂಜಾಗ್ರತಾ ಕ್ರಮವಾಗಿ ರಾಜಕೀಯ ಹಿನ್ನೆಲೆಯ ಪ್ರಚೋದನೆಕೋರರ ಬಂಧನದ ವಿಷಯದಲ್ಲಿ ಯಾಕೆ ನಿರ್ಲಕ್ಷ್ಯ ವಹಿಸಲಾಯಿತು? ಎಂಬ ಪ್ರಶ್ನೆಗಳೂ ಎದ್ದಿವೆ.
ವಿಪರ್ಯಾಸ ನೋಡಿ; ಗುಪ್ತಚರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ಯಾವೊಬ್ಬ ರಾಜಕೀಯ ಪಕ್ಷಗಳ ಮುಖಂಡರೂ ಮಾತನಾಡಿಲ್ಲ. ಬದಲಾಗಿ ಪರಸ್ಪರ ಪಕ್ಷಗಳ ಮೇಲೆ ಕೆಸರೆರಚಾಟ ನಡೆಯುತ್ತಿದೆ. ಆದರೆ, ಮುಖ್ಯಮಂತ್ರಿಗಳು ಸ್ವತಃ ಪೊಲೀಸ್ ವೈಫಲ್ಯದ ಬಗ್ಗೆ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗುತ್ತಿದೆ. ಅದೇ ಹೊತ್ತಿಗೆ ಆಡಳಿತ ಪಕ್ಷದ ನಾಯಕ ಹಾಗೂ ಸಚಿವ ಆರ್ ಅಶೋಕ್ ಅವರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ನಡುವೆ, ಪರಿಸ್ಥಿತಿ ಕೈಮೀರುತ್ತಿರುವ ಬಗ್ಗೆ ಪೊಲೀಸ್ ಸಿಬ್ಬಂದಿಯೊಬ್ಬರು ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಕಣ್ಣೀರು ಹಾಕಿದ ಆಡಿಯೋ ಕೂಡ ಹರಿದಾಡುತ್ತಿದೆ.
ಅಂದರೆ; ಈ ವಿಷಯವನ್ನು ಆರಂಭದಲ್ಲೇ ತಣ್ಣಗೆ ಮಾಡುವ ಎಲ್ಲಾ ಅವಕಾಶಗಳನ್ನು ಆಡಳಿತ ವ್ಯವಸ್ಥೆ ಕೈಚೆಲ್ಲಿದೆ ಮತ್ತು ಆ ಮೂಲಕ ಪರೋಕ್ಷವಾಗಿ ಗಲಭೆ ಉದ್ವಿಗ್ನ ಸ್ವರೂಪಕ್ಕೆ ಹೋಗಲು ಅವಕಾಶ ನೀಡಲಾಗಿದೆ. ಆದರೆ, ಯಾವ ಉದ್ದೇಶಕ್ಕಾಗಿ ಹಾಗೆ ಮಾಡಲಾಯಿತು? ಯಾರ ರಾಜಕೀಯ ಲಾಭಕ್ಕಾಗಿ ಇಂತಹ ಹೇಯ ಪರಿಸ್ಥಿತಿ ನಿರ್ಮಾಣವಾಯಿತು ಎಂಬುದು ಕೂಡ ತೀರಾ ರಹಸ್ಯವೇನಲ್ಲ.
ಹಾಗಾಗಿಯೇ ಮೂರೂ ಪಕ್ಷಗಳು ಈ ವಿಷಯದಲ್ಲಿ ಪರಸ್ಪರರತ್ತ ಬೆರಳು ತೋರಿಸುತ್ತಿವೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರತಿಪಕ್ಷಗಳಾಗಿ ಗಲಭೆ ತಡೆಯುವಲ್ಲಿ ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವುದು ಸರಿಯೇ. ಅದೇ ಹೊತ್ತಿಗೆ, ಸ್ಥಳೀಯ ಶಾಸಕರು ತಮ್ಮ ಹತ್ತಿರದ ಸಂಬಂಧಿಯ ಕಾರಣಕ್ಕೆ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ, ಆ ಭಾವನಾತ್ಮಕ ಸಂಗತಿ ಆಕ್ರೋಶವಾಗಿ ಭುಗಿಲೇಳುತ್ತಿದೆ ಎಂಬುದನ್ನು ಅರಿತು, ಸಮುದಾಯದ ನಾಯಕರನ್ನು ಕರೆದು ಸಮಾಲೋಚನೆ ನಡೆಸಿ ಅವರಿಗೆ ಸಮಾಧಾನ ಹೇಳಿ, ತಮ್ಮ ಕಿಡಿಗೇಡಿ ಸಂಬಂಧಿಯ ವಿರುದ್ಧ ಕೂಡಲೇ ಕಾನೂನು ಕ್ರಮ ಖಾತ್ರಿಪಡಿಸಬೇಕಿತ್ತಲ್ಲವೇ? ಅಥವಾ ಪೊಲೀಸರಿಗೆ ಸಕಾಲಿಕ ಮಾಹಿತಿ ನೀಡಿ ಪೊಲೀಸ್ ಮಧ್ಯಸ್ಥಿಕೆಯಲ್ಲಾದರೂ ಪ್ರಕರಣದ ಇತ್ಯರ್ಥಕ್ಕೆ ಪ್ರಯತ್ನಿಸಬೇಕಿತ್ತು. ಆದರೆ, ಆ ಯಾವುದನ್ನೂ ಮಾಡದ ಶಾಸಕರ ವಿಷಯದಲ್ಲಿ ಪ್ರತಿಪಕ್ಷಗಳೆರಡೂ ಮೌನವಾಗಿರುವುದು ಯಾಕೆ?
ಹಾಗೆ, ಆಡಳಿತ ಪಕ್ಷ ಬಿಜೆಪಿ, ಗಲಭೆಯ ಹಿಂದೆ ಪ್ರತಿಪಕ್ಷಗಳ ಕೈವಾಡವಿದೆ. ಅಲ್ಪಸಂಖ್ಯಾತ ಸಮುದಾಯದ ಓಲೈಕೆಯ ದಶಕಗಳ ಇತಿಹಾಸವಿದೆ ಎಂಬ ಮಾತುಗಳನ್ನು ಆಡುವುದು ತೀರಾ ನಾಚಿಕೆಗೇಡಿನ ವರಸೆ. ನಿಮ್ಮ ಬಳಿ ಅಧಿಕಾರದ ದಂಡವಿರುವುದು ಹೀಗೆ ಕ್ಷುಲ್ಲಕ ರಾಜಕಾರಣ ದಾಳ ಉರುಳಿಸುವ ಶೋಕಿಗಾಗಿ ಅಲ್ಲ; ಬದಲಾಗಿ ನಿಜಕ್ಕೂ ಅಂತಹ ಕುಮ್ಮಕ್ಕು, ಕೈವಾಡಗಳು ಇದ್ದರೆ, ಅಂತಹವರನ್ನು ಕಾನೂನಿನ ಕಟಕಟೆಗೆ ತರಲು ಮತ್ತು ಆ ಮೂಲಕ ಸಮಾಜಕ್ಕೆ ನೆಮ್ಮದಿ ಮತ್ತು ಸೌಹಾರ್ದತೆಯನ್ನು ಖಾತ್ರಿಪಡಿಸಲು ಅಲ್ಲವೆ? ಅದರಲ್ಲೂ ಈ ಪ್ರಕರಣದ ಹಿಂದೆ ರಾಜಕೀಯ ಷಢ್ಯಂತ್ರವಿದೆ ಎಂದು ಗೊತ್ತಾದ ಬಳಿಕವೂ ಯಾಕೆ ಸರ್ಕಾರ ಅದರ ಅಪಾಯವನ್ನು ಗ್ರಹಿಸಿ ತತಕ್ಷಣದ ಕ್ರಮಕೈಗೊಂಡು ತಡೆಯುವ ಯತ್ನ ಮಾಡಲಿಲ್ಲ? ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗಿದ್ದರೂ ಆಡಳಿತ ಪಕ್ಷ ಕೂಡ ಈ ಗಲಭೆಯಿಂದ ಯಾವುದೋ ಲಾಭದ ನಿರೀಕ್ಷೆಯಲ್ಲಿತ್ತೆ? ಎಂಬ ಅನುಮಾನ ಕೂಡ ಸಹಜ.
ಪೊಲೀಸ್, ರಾಜಕೀಯ ಪಕ್ಷಗಳಷ್ಟೇ ಈ ಪ್ರಕರಣದಲ್ಲಿ ಮಾಧ್ಯಮಗಳ ಪಾತ್ರವೂ ದೊಡ್ಡದಿದೆ. ಅದರಲ್ಲೂ ವಿಶೇಷವಾಗಿ ಕನ್ನಡ ಸುದ್ದಿ ವಾಹಿನಿಗಳ ಪ್ರಚೋದನಕಾರಿ ಭಾಷೆ ಮತ್ತು ವರಸೆಗಳು ಧರ್ಮ, ಧರ್ಮಗಳ ನಡುವೆ, ಸಮುದಾಯಗಳ ನಡುವೆ ಹಚ್ಚುವ ದ್ವೇಷದ ಬೆಂಕಿ ಕೂಡ ಇಂತಹ ಘಟನೆಗಳನ್ನು ಪ್ರಚೋದಿಸಿವೆ ಎಂಬುದು ಉತ್ಪ್ರೇಕ್ಷೆಯಲ್ಲ. ಧಾರ್ಮಿಕ ಸಂಗತಿಗಳನ್ನು ವರದಿ ಮಾಡುವ ಸೂಕ್ಷ್ಮತೆಯಾಗಲೀ, ವಿವೇಚನೆಯಾಗಲೀ ಇಂತಹ ಮಾಧ್ಯಮಗಳಲ್ಲಿ ಈಗ ಉಳಿದಿಲ್ಲ. ಒಂದು ಧಾರ್ಮಿಕ ಮೂಲಭೂತವಾದಿ ಮನಸ್ಥಿತಿ, ಒಂದು ರಾಜಕೀಯ ಸಿದ್ಧಾಂತದ ಕಟ್ಟಾ ಬೆಂಬಲಿಗರು, ಒಬ್ಬ ನಾಯಕರ ಆರಾಧಕರು, ಮತ್ತೊಂದು ಧರ್ಮದ ಪರಮ ದ್ವೇಷಿಗಳು, ಮತ್ತೊಂದು ಸಂಸ್ಕೃತಿಯ ಅವಹೇಳನಕಾರರೇ ಸುದ್ದಿಮನೆಗಳಲ್ಲಿ ತುಂಬಿರುವಾಗ, ಮಾಧ್ಯಮ ಸಂಸ್ಥೆಗಳಲ್ಲಿ ಭಿನ್ನ ರಾಜಕೀಯ ಚಿಂತನೆ, ಸಿದ್ಧಾಂತ, ಭಿನ್ನ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯವರಿಗೆ ಅವಕಾಶವೇ ಇಲ್ಲದಿರುವಾಗ, ಒಂದು ಜಾತಿ, ಒಂದು ಒಳಪಂಗಡದವರೇ ಸುದ್ದಿಮನೆಗಳಲ್ಲಿ ತುಂಬಿತುಳುಕುವಾಗ ಅಲ್ಲಿ ಯಾವ ಸಂಯಮ, ಸಂವೇದನೆಯನ್ನೂ ನಿರೀಕ್ಷಿಸಲಾಗದು.
ಇದು ಪ್ರಚೋದನಕಾರಿ ಮಾಧ್ಯಮಗಳ ಮೂಲ ಸಮಸ್ಯೆ. ಹಾಗಾಗಿ ಕೋಮು ಗಲಭೆ, ಧಾರ್ಮಿಕ ಸಂಗತಿಗೆ ಸಂಬಂಧಿಸಿದ ಸಂಘರ್ಷಗಳ ಹೊತ್ತಲ್ಲಿ ಈ ಮಾಧ್ಯಮಗಳು ಇಡಿಯಾಗಿ ಒಂದು ಧರ್ಮ, ಒಂದು ಸಮುದಾಯದ ಸಮರಸೇನಾನಿಗಳಾಗಿ, ಧರ್ಮ ರಕ್ಷಕ ಆತ್ಮಾಹುತಿ ದಳಗಳಾಗಿ ವರ್ತಿಸತೊಡಗುತ್ತವೆ. ಅದು ಕೇವಲ ವರದಿಗಾರಿಕೆ, ವರದಿಯ ಪ್ರಸ್ತುತಿಗಳಿಗೆ ಮಾತ್ರ ಸೀಮಿತವಾಗದೆ, ಕನ್ನಡದ ಕೆಲವು ಪ್ರಮುಖ ಟಿವಿ ವಾಹಿನಿಗಳ ಆನ್ ಲೈನ್ ಲೈವ್ (ಯೂಟ್ಯೂಬ್) ಚಾನೆಲ್ ನೊಂದಿಗೆ ಮುಫತ್ತಾಗಿ ಸಿಗುವ ಲೈವ್ ಚಾಟ್ ಗೂ ವಿಸ್ತರಿಸುತ್ತದೆ. ಎರಡು ಗುಂಪುಗಳ ನಡುವಿನ ವಿಷ ಕಾರುವ ವೇದಿಕೆಯಾಗಿಯೇ ಆ ಲೈವ್ ಚಾಟ್ ಬಳಕೆಯಾಗುತ್ತವೆ. ಬಹುತೇಕ ಗಲಭೆ- ಸಂಘರ್ಷಗಳು ಹುಟ್ಟುವುದೇ ಈ ಲೈವ್ ಚಾಟ್ ಕಾರ್ಕೋಟಕ ವಿಷದಿಂದ. ದ್ವೇಷ- ಸೇಡಿನ ಬೆಂಕಿಯನ್ನು ಕ್ಷಣಾರ್ಧದಲ್ಲಿ ಸ್ಫೋಟಿಸುವ ಮಟ್ಟಿಗೆ ಅಲ್ಲಿನ ಭಾಷೆ ಇರುತ್ತದೆ. ಬೆಂಗಳೂರು ಗಲಭೆ ವಿಷಯದಲ್ಲಿಯೂ ಕನ್ನಡದ ಕೆಲವು ವಾಹಿನಿಗಳ ಲೈವ್ ಚಾಟ್ ಸಂಭಾಷಣೆಗಳ ಕುಮ್ಮಕ್ಕು ಇರದೇ ಇರದು.
ಆದರೆ, ನಮ್ಮ ಯಾವ ಪೊಲೀಸರು, ಯಾವ ಆಡಳಿತವೂ ಈ ಸಮಾಜಘಾತುಕ ಕೃತ್ಯಗಳ ಬಗ್ಗೆ ಕ್ರಮಕೈಗೊಳ್ಳುವುದೂ ಇಲ್ಲ. ಕನಿಷ್ಟ ರಾಜಕಾರಣಿಗಳು ಕೂಡ ಕೆಲ ಮಾಧ್ಯಮಗಳು ಪರೋಕ್ಷವಾಗಿ ಕಾರುವ ಈ ವಿಷದ ಬಗ್ಗೆ ಮಾತನಾಡುವುದಿಲ್ಲ. ಸಂಘರ್ಷದ ಹೊತ್ತಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಯುವ, ಚಿಕಿತ್ಸಕ ಧೋರಣೆ ತಳೆಯುವ ಹೊಣೆ ಮರೆತು, ಬೆಂಕಿಗೆ ತುಪ್ಪ ಸುರಿಯುವ ಜನದ್ರೋಹಿ ಮಾಧ್ಯಮಗಳ ಬಗ್ಗೆ ತುಟಿಬಿಚ್ಚುವುದಿಲ್ಲ.
ಹೀಗೆ ಒಂದು ಗಲಭೆಯ ಹಿಂದೆ, ಒಂದು ಸಂಘರ್ಷದ ಹಿಂದೆ ಬೆಂಕಿ ಹಚ್ಚುವವರು, ಬೆಂಕಿ ನೋಡಿಯೂ ಕಣ್ಣು ಮುಚ್ಚಿ ಕೂತವರು ಮತ್ತು ಬೆಂಕಿಯಲ್ಲಿ ರಾಜಕೀಯ ಲಾಭನಷ್ಟದ ಚಳಿ ಕಾಯಿಸುವವರೂ ಇದ್ದಾರೆ. ಯಾರದೋ ಲಾಭಕ್ಕೆ, ಯಾರದೋ ತೃಷೆಗೆ, ಯಾರದೋ ದೂರಗಾಮಿ ಯೋಜನೆಗಳಿಗೆ ಅಂತಿಮವಾಗಿ ಬಲಿಯಾಗುವುದು ಬಡ ಜೀವಗಳು ಮತ್ತು ಶ್ರೀಸಾಮಾನ್ಯನ ನೆಮ್ಮದಿ!