ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಾಂತ್ಯದಲ್ಲಿ ನಡೆದ ಗಲಭೆ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬಿಬಿಎಂಪಿ ಚುನಾವಣೆಯ ಹಿನ್ನಲೆಯಲ್ಲಿ, ಫೇಸ್‌ಬುಕ್ ಪೋಸ್ಟ್ ವಿಚಾರ ದೊಂಬಿ ಸ್ವರೂಪ ಪಡೆಯಲು ರಾಜಕೀಯ ಶಕ್ತಿಗಳು ಕಾರಣವಾಗಿರಬಹುದೆಂಬ ಗುಮಾನಿ ಸಾರ್ವಜನಿಕ ವಲಯದಲ್ಲಿದೆ.
ಗಲಭೆಯ ಬಳಿಕ, ʼಹೆಣ ರಾಜಕೀಯʼ ಮಾಡುವಲ್ಲಿ ನುರಿತವಾಗಿರುವ ಬಿಜೆಪಿ ಗಲಭೆಯನ್ನು ʼದಲಿತರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಹೆಣಗುತ್ತಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ʼಅಖಂಡ ಶ್ರೀನಿವಾಸ್ ಅವರು ದಲಿತಾರಗಿರುವುದರಿಂದ ಕಾಂಗ್ರೆಸ್ ಅವರಿಗೆ ಬೆಂಬಲ ನೀಡುತ್ತಿಲ್ಲʼ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ʼಅಲ್ಪಸಂಖ್ಯಾತರು ಮಾಡುವ ದೊಂಬಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆʼ ಎಂದಿದ್ದಾರೆ.
ಬಿ ಎಲ್ ಸಂತೋಷ್ ಈ ನಡೆ, ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಚಿತ್ತಾಪುರ್ ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಬಿ ಎಲ್ ಸಂತೋಷ್ ಹಾಗೂ ಅವರ ಸಂಘಟನೆ ಯಾವತ್ತಿಗೂ ಬೆಂಕಿಗೆ ಇಂಧನ ಸುರಿಯುವ ಕೆಲಸವನ್ನು ಮಾಡುತ್ತದೆ. ಅವರು ಸಾಮಾಜಿಕ ಜಾಲತಾಣವನ್ನು ಸಮಾಜಕ್ಕೆ ವಿಷ ಹಂಚಲು ಬಳಸುತ್ತಾರೆ ಎಂದಿದ್ದಾರೆ.
ಇನ್ನು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಈ ವರಸೆಗೆ ಪ್ರತಿಕ್ರಿಯಿಸಿದ ಚಾಮರಾಜಪೇಟೆ ಶಾಸಕ ಝಮೀರ್ ಅಹಮದ್ ಖಾನ್, ರಾಜ್ಯದ 224 ಶಾಸಕರಿಗೂ ರಕ್ಷಣೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ನಿಮ್ಮದೇ ಸರ್ಕಾರಗಳಿವೆ, ಪೊಲೀಸ್ ಇಲಾಖೆ ನಿಮ್ಮ ಅಧೀನದಲ್ಲಿದೆ. ನಿಮ್ಮ ವೈಫಲ್ಯಕ್ಕೆ ಬೇರೆಯವರನ್ನು ಪ್ರಶ್ನಿಸಿದರೆ ಹೇಗೆ ಸ್ವಾಮಿ? ಎಂದು ಬಿ ಎಲ್ ಸಂತೋಷ್ ಗೆ ಪ್ರಶ್ನಿಸಿದ್ದಾರೆ.
ಅಖಂಡ ಶ್ರೀನಿವಾಸ ಮೂರ್ತಿಯವರು ದಲಿತ ಎಂಬ ಕಾರಣಕ್ಕೆ ನಮ್ಮ ಪಕ್ಷದಲ್ಲಿ ರಕ್ಷಣೆ ನೀಡುತ್ತಿಲ್ಲ ಎಂಬ ಬಿ ಎಲ್ ಸಂತೋಷ್ ಅವರ ಆರೋಪ ಕೇವಲ ರಾಜಕೀಯ ಲಾಭಕ್ಕಷ್ಟೇ ಸೀಮಿತ. ಸಾಮಾಜಿಕ ನ್ಯಾಯ, ಜಾತ್ಯತೀತತೆ, ಸೋದರತೆ, ಸಮಾನತೆ ಸಾರುವ ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವವರು ನೀವೇ ಅಲ್ಲವೇ?
ದಲಿತರನ್ನು ಹೀನಾಯವಾಗಿ ಬೈಯ್ಯುವ, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದಿರುವ, ಸದಾ ಮೀಸಲಾತಿಯನ್ನು ವಿರೋಧಿಸುತ್ತಾ ಹೇಳಿಕೆ ನೀಡುವ ಅನಂತ ಕುಮಾರ್ ಹೆಗಡೆ ನಿಮ್ಮ ಪಕ್ಷದ ಸಂಸದರಲ್ಲವೇ? ಅವರಿಗೆ ಒಮ್ಮೆಯಾದರೂ ತಾವು ಬುದ್ದಿ ಹೇಳಿದ್ದೀರಾ?
ನಿಮ್ಮ ಪಕ್ಷದಿಂದ ಎಷ್ಟು ಜನ ದಲಿತರಿಗೆ ವಿಧಾನಸಭೆ, ವಿಧಾನ ಪರಿಷತ್, ಬಿಬಿಎಂಪಿ, ಪಂಚಾಯತ್ ರಾಜ್ ಚುನಾವಣೆಗಳಲ್ಲಿ ಟಿಕೆಟ್ ನೀಡಿದ್ದೀರ? ಹೋಗಲಿ ಸಾಮಾಜಿಕ ನ್ಯಾಯದ ಪರವಾಗಿ ಒಮ್ಮೆಯಾದರೂ ಮಾತಾಡಿದ್ದೀರ? ದಲಿತರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳುವುದು ಒಳಿತು ಎಂದು ಝಮೀರ್ ಖಾನ್ ಮಾತಿನ ಚಾಟಿ ಬೀಸಿದ್ದಾರೆ.
ಕಾಂಗ್ರೆಸ್ ಪಕ್ಷ ಎಂದಿಗೂ ಧರ್ಮಾಧಾರಿತ, ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ. ನಮ್ಮದು ಸಮಾನತೆ, ಜಾತ್ಯತೀತತೆಯಲ್ಲಿ ನಂಬಿಕೆಯಿರುವ ಪಕ್ಷ. ಕಳೆದ 60 ವರ್ಷಗಳಲ್ಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂಬುದು ಜನರ ಮನಸ್ಸಿನಲ್ಲಿದೆ. ಯಾವ ಪಕ್ಷ ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯತೀತತೆಯ ಪರವಿದೆ ಎಂಬುದು ಜನತೆಗೆ ಚೆನ್ನಾಗಿಯೇ ಗೊತ್ತು. ಕೋಮು ಗಲಭೆಗಳ ಮೂಲಕ ಮತ ಧ್ರುವೀಕರಣ ಮಾಡುವ ಬಿಜೆಪಿಗೆ ನಮ್ಮ ಪಕ್ಷವನ್ನು ಪ್ರಶ್ನಿಸುವ ನೈತಿಕತೆ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಅಲ್ಲದೆ, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ, ಜನರಿಗೆ ರಕ್ಷಣೆ ನೀಡಬೇಕಾಗಿರುವುದು ಆಡಳಿತದಲ್ಲಿರುವ ನಿಮ್ಮ ಪಕ್ಷದ ಕೆಲಸ. ಶಾಂತಿ ಸ್ಥಾಪನೆಗಾಗಿ ನಾನು ಶಕ್ತಿಮೀರಿ ಪ್ರಯತ್ನ ಮಾಡಿದ್ದೇನೆ. ಇನ್ನಾದರೂ ನಿಮ್ಮ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಬದಿಗಿಟ್ಟು, ನಮ್ಮೊಂದಿಗೆ ನೆರವಾಗಿ ಎಂದು ಬಿ ಎಲ್ ಸಂತೋಷ್ ಅವರಿಗೆ ಝಮೀರ್ ಖಾನ್ ಮನವಿ ಮಾಡಿಕೊಂಡಿದ್ದಾರೆ.