ಇತಿಹಾಸದಿಂದ ಪಾಠ ಕಲಿಯಬೇಕು. ಕೆಟ್ಟದ್ದು ಆದಾಗಲಂತೂ ಜರೂರಾಗಿ ಕಲಿಯಬೇಕು. ಇದು ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನ್ವಯವಾಗುವ ಮಾತೇ ಆಗಿದ್ದರೂ ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೋಮು ಸಂಘರ್ಷದ ಹಿನ್ನಲೆಯಲ್ಲಿ ಮುಸ್ಲಿಮರಿಗೆ ಹೆಚ್ಚು ಸೂಕ್ತವಾದ ಸಲಹೆ.
ನವೀನ್ ಎಂಬ ವ್ಯಕ್ತಿ ಪ್ರವಾದಿ ಮೊಹಮದ್ ಅವರ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಬರೆದಿದ್ದರು. ಇದೇ ತಾನೇ ಸದ್ಯದ ವಿಷಯ ಅಥವಾ ವಿವಾದ? ನವೀನ್ ಯಾವುದೇ ಜಾತಿ, ಪಕ್ಷ, ಪಂಗಡ ಏನೇ ಇರಲಿ, ಅವರ ಪೋಸ್ಟ್ ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಅವರ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪೊಲೀಸರಿಗೆ ದೂರು ನೀಡಬೇಕಿತ್ತು. ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಬದ್ಧತೆ ಉಳಿಸಿಕೊಂಡು, ಪೂರಕ ದಾಖಲೆಗಳನ್ನು ಹೊಂದಿಸಿಕೊಂಡು ಕಾನೂನು ಹೋರಾಟ ಮಾಡಬೇಕಿತ್ತು. ಹಾಗೆ ಮಾಡಿದ್ದರೆ ಪ್ರಚಾರದ ತೆವಲಿಗೋ, ಧರ್ಮದ ಅಮಲಿಗೋ ಪೋಸ್ಟ್ ಹಾಕಿದ್ದ ನವೀನ್ ಸ್ವಲ್ಪ ತಡವಾಗಿಯಾದರೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತಿತ್ತು. ಆ ಮೂಲಕ ನ್ಯಾಯ ಸಿಗುತ್ತಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ ಈಗ ಆಗಿರುವುದೇನು? ಪ್ರತಿಭಟನೆ ಮಾಡಲು ಹೋದವರೇ ಜೈಲು ಪಾಲಾಗಿದ್ದಾರೆ. ಅದೂ ಒಬ್ಬಿಬ್ಬರಲ್ಲ, ನೂರಾರು ಮಂದಿ. ಮೂರು ಮಂದಿ ಪ್ರಾಣ ಬಿಟ್ಟಿದ್ದಾರೆ. ಗಲಭೆ ವೇಳೆ ಗೋಲಿಬಾರ್ ಗೆ ತುತ್ತಾದ ಯುವಕರ ತಾಯಿ, ತಂಗಿ, ಕುಟುಂಬದವರು ಅನಾಥರಾಗಿದ್ದಾರೆ. ಆಶ್ರಯದಾತನನ್ನು ಕಳೆದುಕೊಂಡಿದ್ದಾರೆ. ವಿಷಯವನ್ನು ಹೇಗೆ ನಿರ್ವಹಿಸಬೇಕೆಂಬ ತಿಳುವಳಿಕೆ ಇಲ್ಲದ ಕಾರಣಕ್ಕೆ ಇಂಥ ಅನಾಹುತ ಆಗಿದೆ. ಎಂಥದೇ ಅನ್ಯಾಯದ ವಿರುದ್ಧವೇ ಆಗಲಿ ಪ್ರಜಾಸತ್ತಾತ್ಮಕವಾಗಿಯೇ ಹೋರಾಟ ಮಾಡಬೇಕೆಂಬ ಜ್ಞಾನ ಇಲ್ಲದೆ ಈ ದುರ್ಘಟನೆಯಾಗಿದೆ. ಈ ಯುವಕರಿಗೆ ತಿಳಿಹೇಳಬೇಕಾದ ಧಾರ್ಮಿಕ ಮುಖಂಡರಿಗೇ ನಿಜವಾದ, ನೈಜವಾದ ಅರಿವಿಲ್ಲದಿರುವ ಕಾರಣಕ್ಕೆ ಈ ಅವಾಂತರವಾಗಿದೆ. ಸಮುದಾಯದ ರಾಜಕೀಯ ನೇತಾರರಿಗೆ ತಮ್ಮ ಸಮಾಜದ ಸ್ಥಿತಿ ಗತಿ ಬಗ್ಗೆ, ಭವಿಷ್ಯದ ಬಗ್ಗೆ, ಅದಕ್ಕಾಗಿ ತುಳಿಯಬೇಕಾದ ಹಾದಿಯ ಬಗ್ಗೆ ಮಾಹಿತಿ, ಸ್ಪಷ್ಟತೆ ಏನೇನೂ ಇಲ್ಲದ ಕಾರಣಕ್ಕೆ ಹೀಗಾಗಿದೆ.
ಮೊದಲು ಈ ಧಾರ್ಮಿಕ ಗುರುಗಳು ಮತ್ತು ರಾಜಕಾರಣಿಗಳು ಸರಿಯಾಗಬೇಕು. ಬಳಿಕ ಸಮುದಾಯದ ಎಲ್ಲರೂ ಸರಿ ದಾರಿಗಳನ್ನು ಹುಡುಕಿಕೊಳ್ಳಬೇಕು. ಸರಿಯಾಗಬೇಕು ಎಂದರೆ ಈ ಘಟನೆಯಿಂದಲೇ ಪಾಠ ಕಲಿಯಲು ಆರಂಭಿಸಬೇಕು. ನಿರ್ಧಾರ ಕೈಗೊಳ್ಳುವಾಗ ಅದು ಸರಿಯೇ ಎಂದು ಎನಿಸಿದರೂ ‘ಕಾಲ’ ಹೇಗಿದೆ? ಎಂಬುದನ್ನು ನೋಡಬೇಕು. ಪರಿಸ್ಥಿತಿಗೆ ತಕ್ಕಂತೆ ಕಾರ್ಯತಂತ್ರ ರೂಪಿಸಬೇಕು. ಸದ್ಯದ ಸಂದರ್ಭ ಮುಸ್ಲಿಮರು ಹೆಚ್ಚು ಸೂಕ್ಷ್ಮಮತಿಗಳಾಗಬೇಕಾದ ಸಂದರ್ಭ. ಅತ್ಯಂತ ಸಂಕೀರ್ಣವಾಗಿರುವ ಸಂದರ್ಭವೂ ಹೌದು. ಆದುದರಿಂದ ಮುಸ್ಲಿಮರು ‘ಅಂಬೇಡ್ಕರ್ ಮಾದರಿಯನ್ನೇ’ ಅನುಸರಿಸಬೇಕು.
ಅಂಬೇಡ್ಕರ್ ಮಾದರಿ ಎಂದರೆ ಎಲ್ಲಾ ತರಹದ ದೌರ್ಜನ್ಯ, ಶೋಷಣೆ, ಅವಮಾನಗಳನ್ನು ಸಹಿಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರುವುದು. ರಾಜಕೀಯವಾಗಿ ಒಂದಾಗುವುದು. ಈ ಎರಡೂ ಸಂಗತಿಗಳು ಏಕೆ ಬಹಳ ಮುಖ್ಯ ಮತ್ತು ನಿರ್ಣಾಯಕವಾದವು ಎಂಬುದಕ್ಕೆ ಈ ವಾಸ್ತವಾಂಶಗಳು ಕನ್ನಡಿ ಹಿಡಿಯುತ್ತವೆ. ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ (NSO) ಪ್ರಕಾರ ಮುಸ್ಲಿಂರ ಶೈಕ್ಷಣಿಕ ಸ್ಥಿತಿ ದಲಿತರು ಹಾಗೂ ಆದಿವಾಸಿಗಳಿಗಿಂತಲೂ ಧಾರುಣವಾಗಿದೆ. ಗ್ರಾಸ್ ಅಟೆಂಡೆನ್ಸ್ ರೇಷಿಯೋ (GAR) ಪ್ರಕಾರ ಶೈಕ್ಷಣಿಕವಾಗಿ ಪ್ರಾಥಮಿಕ ಹಂತದಲ್ಲಿ ಶೇಕಡಾ 90ರ ಪ್ರಮಾಣಕ್ಕಿಂತ ಕಡಿಮೆ ಇರುವ ಏಕೈಕ ಸಮುದಾಯ ಮುಸ್ಲಿಂ. ಇದರಿಂದ ಪ್ರಾಥಮಿಕ ಶಿಕ್ಷಣ ಸಂಪೂರ್ಣವಾಗಿ ಉಚಿತವಾಗಿದ್ದರೂ ಮುಸ್ಲಿಂ ಸಮುದಾಯದ ಮಕ್ಕಳನ್ನು ನೂರಕ್ಕೆ ನೂರರಷ್ಟು ಶಾಲೆಗೆ ಸೇರಿಸಲಾಗುತ್ತಿಲ್ಲ. ಎರಡನೇ ಹಂತದಲ್ಲಿ 71.9ರಷ್ಟು ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಂತರ ಎಬೋ ದಿ ಹೈಯರ್ ಸೆಕೆಂಡರಿ ಲೆವೆಲ್ ನಲ್ಲಿ ಕೇವಲ ಶೇಕಡಾ 14.5ರಷ್ಟು ಮಕ್ಕಳು ಮಾತ್ರ ವ್ಯಾಸಂಗ ಮುಂದುವರೆಸಿದ್ದಾರೆ. ಮಕ್ಕಳನ್ನು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ದುಡಿಯಲು ಹಚ್ಚಲಾಗುತ್ತದೆ. ವಿದ್ಯಾಭ್ಯಾಸದಿಂದ ದೂರ ಮಾಡಲಾಗುತ್ತಿದೆ ಎಂಬುದನ್ನು ಈ ಅಂಕಿ ಅಂಶಗಳು ಸಾರಿ ಸಾರಿ ಹೇಳುತ್ತವೆ.
ಇದೂ ಅಲ್ಲದೆ ಮುಸ್ಲಿಂ ಸಮುದಾಯದ ಒಟ್ಟು ಪ್ರಮಾಣದಲ್ಲಿ 3ರಿಂದ 35ವರ್ಷ ಇರುವವರ ಪ್ರಮಾಣವೇ ಹೆಚ್ಚು. ಅದರಲ್ಲಿ ಔಪಚಾರಿಕವಾದ ಶೈಕ್ಷಣಿಕ ವ್ಯವಸ್ಥೆಯ ವ್ಯಾಪ್ತಿಗೆ ದಾಖಲಾಗುತ್ತಿರುವವರು ಕೇವಲ ಶೇಕಡಾ 17ರಷ್ಟು ಪುರುಷರು ಮತ್ತು ಶೇಕಡಾ 21.9ರಷ್ಟು ಮಹಿಳೆಯರು. ಶೈಕ್ಷಣಿಕವಾಗಿ ಮುಸ್ಲಿಮರಿಗೆ ಸಿಗುವ ಸಿಹಿ ಸುದ್ದಿ ಇದೊಂದೆ. ಪುರಷರಿಗಿಂತ ಮಹಿಳೆಯರ ಶಿಕ್ಷಣದ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಇದೇ ವೇಳೆ ಮುಸ್ಲಿಂ ಯುವಕರು ವಿದ್ಯಾಭ್ಯಾಸ ತ್ಯಜಿಸಿ ದಾರಿ ತಪ್ಪುತ್ತಿದ್ದಾರೆ ಎಂಬ ಕಹಿ ವಾಸ್ತವವೂ ಇದೆ. ಇದು ಸಮುದಾಯದ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ.
ಮುಸ್ಲಿಂ ಸಮುದಾಯ ಸದ್ಯ ಮುತ್ಸದಿ ನಾಯಕತ್ವ ಇಲ್ಲದೆ ರಾಜಕೀಯವಾಗಿ ಕೂಡ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. ವಿಧಾನ ಸಭೆ ಮತ್ತು ಲೋಕಸಭೆಯಲ್ಲಿ ದಿನ ಕಳೆದಂತೆ ಮುಸ್ಲಿಮರ ಪ್ರಾತಿನಿಧ್ಯ ಕ್ಷೀಣಿಸುತ್ತಿದೆ. ರಾಜಕೀಯದಲ್ಲಿ ಮುಸ್ಲಿಂ ಧಾರ್ಮಿಕ ಗುರುಗಳು ಪರೋಕ್ಷವಾಗಿ ಪ್ರಭಾವ ಸ್ಥಾಪಿಸುತ್ತಾ ತಮ್ಮದೇ ಸಮುದಾಯದ ನಾಯಕರನ್ನು ಅಣಿಯುತ್ತಾ ಒಟ್ಟಾರೆ ಸಮುದಾಯದ ಹಿತಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಎಸ್ ಡಿ ಪಿ ಐ, ಪಿ ಎಫ್ ಐ ಮತ್ತು ಕೆ ಎಫ್ ಡಿಗಳಂತಹ ಮೂಲಭೂತವಾದಿ ಸಂಘಟನೆಗಳು ಮೈದೆಳೆದು ನಿಂತಿವೆ. ಇಂಥ ಮೂಲಭೂತವಾದಿ ಸಂಘಟನೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಕೆಲವರು ತಮಗೆ ತಾವೇ ಹಳ್ಳ ತೋಡಿಕೊಳ್ಳುತ್ತಿದ್ದಾರೆ.
ಎಲ್ಲಿಯವರೆಗೆ ಮುಸ್ಲಿಂ ಸಮುದಾಯ ಈ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಆಲೋಚಿಸುವುದಿಲ್ಲವೋ, ತಿಳಿವಳಿಕೆ ಪಡೆಯುವುದಿಲ್ಲವೋ ಅಲ್ಲಿಯವರೆಗೆ ತಮ್ಮ ಮೇಲಿನ ದಾಳಿ, ದೌರ್ಜನ್ಯಗಳಿಗೆ ತಮಗೆ ತಾವೇ ಎಡಮಾಡಿಕೊಡುತ್ತಲೇ ಇರಬೇಕಾಗುತ್ತದೆ. ಇದು ಮುಸ್ಲಿಮರು ಕೂತು ಯೂಚಿಸಬೇಕಾದ ಕಾಲ. ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ. ಬೆಳಕಿನೆಡೆಗೆ ತಿರುಗಬೇಕಾದ ಕಾಲ