ರೈತ ಪರ ಸಂಘಟನೆಗಳ ಪ್ರತಿಭಟನೆ ರಾಜ್ಯದಲ್ಲಿ ಬುಧವಾರವೂ ಮುಂದುವರೆದಿದೆ. ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಬಾರುಕೋಲು ಚಳವಳಿಯನ್ನು ನಡೆಸಲಾಯಿತು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ವಿಧಾನಸಭೆವರೆಗೂ ಬಾರುಕೋಲು ಚಳವಳಿಯನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರದ ರೈತ ವಿರೋಧಿ ಕಾನೂನು ತಿದ್ದುಪಡಿಗಳನ್ನು ವಿರೋಧಿಸಿ ಘೋಷಣೆಗಳನ್ನು ಕೂಗಲಾಯಿತು.
ರೈತರು ಬಾರುಕೋಲುಗಳನ್ನು ಬಾರಿಸಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಧ್ವನಿಯೊಂದಿಗೆ ಮಾತನಾಡಿರುವ TKMEU ನಾಯಕರಾದ ಗಂಗಾಧರ್ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಂಎನ್ಸಿ ಕಂಪೆನಿಗಳ ಕೈಗೆ ದೇಶವನ್ನು ನೀಡಲು ಹೊರಟಿದ್ದಾರೆ. ಈಗಾಗಲೇ ಹಲವು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಆದರೆ, ನಾವು ರೈತರನ್ನು ಬೀದಿಗೆ ಬೀಳಲು ಬಿಡುವುದಿಲ್ಲ. ನಾವು ರೈತರೊಂದಿಗೆ ಕೈಜೋಡಿಸುತ್ತೇವೆ. ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಕರ್ನಾಟಕ ರಕ್ಷಣಾ ವೇದಿಕೆ, ಒಂದು ವೇಳೆ ಸರ್ಕಾರಗಳು ತಿದ್ದುಪಡಿಯನ್ನು ವಾಪಾಸ್ ಪಡೆಯದಿದ್ದಲ್ಲಿ ಹೋರಾಟದ ಸ್ವರೂಪವನ್ನು ಉಗ್ರಗೊಳಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಜೆಡಿಎಸ್ ಬೆಂಬಲ ನೀಡಿರುವುದನ್ನು ವಿರೋಧಿಸಿರುವ ಕರವೇ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡ ಅವರು, ಮಣ್ಣಿನ ಮಕ್ಕಳು ಎಂದು ಹೇಳಿ ಜನರಿಂದ ಓಟು ಪಡೆಯುವ ಜೆಡಿಎಸ್ ನಾಯಕರ ನಿಜ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.