ಬೆಂಗಳೂರಿನಲ್ಲಿ ಭೂ ಕಂಪನ ಆಗಿದೆ ಎಂಬ ಸುದ್ದಿ ಹರಿದಾಡ್ತಿದೆ. ಬುಧವಾರ ಮಧ್ಯಾಹ್ನದ ಹೊತ್ತಿಗೆ ಲಘುವಾಗಿ ಭೂಮಿ ಕಂಪಿಸಿದೆ ಎಂದು ಅಲ್ಲಲ್ಲಿ ಗುಲ್ಲು ಹಬ್ಬಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಬೆಂಗಳೂರಿನಲ್ಲಿ ಭೂ ಕಂಪನ ಆಗಿಲ್ಲ ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಭೂಕಂಪನ ಚಟುವಟಿಕೆಯನ್ನು ಒಂದು ಪ್ರದೇಶಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಅದು ವ್ಯಾಪಕವಾಗಿ ಹರಡುತ್ತದೆ. ನಾವು ನಮ್ಮ ಸಂವೇದಕಗಳನ್ನು ಪರಿಶೀಲಿಸಿದ್ದೇವೆ. ಇಂದು ಯಾವುದೇ ಭೂಕಂಪನ ಚಟುವಟಿಕೆ ನಮ್ಮ ಸಂವೇದಕದಲ್ಲಿ ದಾಖಲಾಗಿಲ್ಲ ಎಂದಿದ್ದಾರೆ.
ಇನ್ನು ಈ ಬಗ್ಗೆ ಬೆಂಗಳೂರು ಪೊಲೀಸ್ ನಗರ ಆಯುಕ್ತರಾದ ಭಾಸ್ಕರ್ ರಾವ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಭೂ ಕಂಪನ ಸುದ್ದಿ ನಮ್ಮ ಗಮನಕ್ಕೂ ಬಂದಿದೆ. ನಮಗೆ ಯಾವುದೇ ದೂರುಗಳು ಬಂದಿಲ್ಲ. ನಗರದಲ್ಲಿ ಯಾವುದೇ ದುರಂತಗಳು ನಡೆದಿಲ್ಲ. ಶಬ್ಧ ಕೇಳಿ ಬಂದಿದ್ದು ನಿಜ. ಅದು ನಗರದ ಹೆಬ್ಬಗೋಡಿಯಲ್ಲಿರುವ ವಿಮಾನ ನಿಲ್ದಾಣದಿಂದ ಬಂದ ಸದ್ದು ಎಂದು ಭಾವಿಸಿದ್ದೇವೆ. ಈ ಬಗ್ಗೆ ಸ್ಪಷ್ಟನೆಗಾಗಿ ವಾಯುಪಡೆಯ ನಿಯಂತ್ರಣಾಲಯಕ್ಕೆ ಕೇಳಿಕೊಂಡಿದ್ದೇವೆ. ಅವರ ಸ್ಪಷ್ಟನೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದ್ದಾರೆ.