ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವ ಸಂದರ್ಭದಲ್ಲಿ ಸುಮಾರು 4.15ಕೋಟಿಯಷ್ಟು ಅವ್ಯವಹಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಾಗಿ FIR ದಾಖಲಾದ ಒಂದು ವಾರದೊಳಗೆ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬೆಂಗಳೂರು ಮೆಟ್ರೊಪಾಲಿಟನ್ ಟಾಸ್ಕ್ ಫೋರ್ಸ್ (BMTF) ಅಧಿಕಾರಿಗಳು ಬಂಧಿಸಿದ್ದಾರೆ.
ಈ ಅವ್ಯವಹಾರವನ್ನು ಕಂಡುಹಿಡಿದ BBMPಯ ಮುಖ್ಯ ಲೆಕ್ಕಾಧಿಕಾರಿಯಾದ ಡಾ. ಗೋವಿಂದರಾಜು ಅವರು ಫೆಬ್ರುವರಿ 12, 2020ರಂದು ಈ ಕುರಿತಾಗಿ ದೂರು ದಾಖಲಿಸಿದ್ದರು. ತಮ್ಮ ಕಚೇರಿಯಲ್ಲಿ ಲೆಕ್ಕಾಧಿಕಾರಿಗಳಾಗಿರುವ ಕಾರ್ಯ ನಿರ್ವಹಿಸುತ್ತಿರುವ ರಾಮಮೂರ್ತಿ ಆರ್ ಮತ್ತು ಅನಿತಾ, ಎರಡನೇ ದರ್ಜೆ ಗುಮಾಸ್ತ ರಾಘವೇಂದ್ರ ಹಾಗೂ HDFC ಮತ್ತು ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ನ ಮ್ಯಾನೇಜರ್‌ಗಳ ಮೇಲೆ ದೂರು ಸಲ್ಲಿಸಿದ್ದರು.
ಈ ಐವರ ಮೇಲೆ ಅಕ್ರಮವಾಗಿ ಲಾಭ ಮಾಡುವ ಉದ್ದೇಶದಿಂದ ಕಾಮಗಾರಿಯ ಬಿಲ್ಲುಗಳ ಪಾವತಿಯಲ್ಲಿ ಅಕ್ರಮವೆಸಗಿ ಪಾಳಿಕೆಗೆ ನಷ್ಟ ಉಂಟು ಮಾಡಿರುವ ಆರೋಪವನ್ನು ದಾಖಲಿಸಲಾಗಿತ್ತು. ಅಷ್ಟಕ್ಕೂ ಈ ಐವರು ಸೇರಿ ಮಾಡಿದ್ದೇನೆಂದರೆ, ಆನ್ಲೈನ್ ಮೂಲಕ ಹಣ ಪಾವತಿ ಮಾಡುವ ಉದ್ದೇಶದಿಂದ ತೆರೆಯಲಾಗಿರುವ IFMS ತಂತ್ರಾಂಶದಲ್ಲಿ ಅಪ್‌ಲೋಡ್ ಆಗಿದ್ದ Cancelled Cheque ಅನ್ನು ತಿದ್ದಿ, ತಮಗೆ ಬೇಕಾಗಿರುವ ರೀತಿಯಲ್ಲಿ ಬದಲಾಯಿಸಿಕೊಂಡಿದ್ದಾರೆ ಹಾಗೂ ಗುತ್ತಿಗೆದಾರನ ಖಾತೆಯ ಬದಲಿಗೆ ಬೇರೆಯವರ ಖಾತೆಗೆ ಹಣ ವರ್ಗಾಯಿಸಿದ್ದಾರೆ. IFMS ತಂತ್ರಾಂಶದಲ್ಲಿ ಈ ತಿದ್ದುಪಡಿಯನ್ನು ಗಮನಿಸಿದ ಗೊವಿಂದರಾಜು ಅವರು ತಕ್ಷಣವೇ ಈ ಕುರಿತಾಗಿ ದೂರನ್ನು ಸಲ್ಲಿಸಿದ್ದಾರೆ. ಯಾರ ಖಾತೆಗೆ ಹಣ ಜಮಾ ಆಗಿದೆಯೋ, ಅವರು ಖಾತೆಯಿಂದ ಹಣವನ್ನು withdraw ಮಾಡಿರುವುದಾಗಿ ಬ್ಯಾಂಕಿನ ಸಿಬ್ಬಂದಿ ಧೃಡಪಡಿಸಿದ್ದಾರೆ.
ಈ ಅವ್ಯವಹಾರದ ಕುರಿತು ದೂರು ದಾಖಲಾಗುತ್ತಿದ್ದಂತೆ ವಿಚಾರಣೆ ಆರಂಭಿಸಿದ BMTF ಅಧಿಕಾರಿಗಳು, ಒಂದೇ ವಾರದೊಳಗೆ ರಾಮಮೂರ್ತಿ, ಅನಿತಾ, ನಾಗೇಶ್ ಹಾಗೂ ಗಂಗಾಧರ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಈಗಾಗಲೇ 3.86 ಕೋಟಿ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನು 29 ಲಕ್ಷ ರೂಪಾಯಿ ಕುರಿತು ತನಿಖೆ ನಡೆಸಲಾಗುತ್ತಿದೆ. ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಇನ್ನೋರ್ವ ವ್ಯಕ್ತಿ ರಾಘವೇಂದ್ರ ತಲೆಮರೆಸಿಕೊಂಡಿದ್ದು ಅವರನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದು, BMTF ಮುಖ್ಯ ಅಧೀಕ್ಷಕರಾದ ಓಬಳೇಶ್ ತಿಳಿಸಿದ್ದಾರೆ.