ಪಿಯುಸಿ ಓದುತ್ತಿದ್ದಾಗಲೇ ನನಗೆ ಸಿನಿಮಾ ಗೀಳು ಹತ್ತಿತ್ತು. ಬೆಂಗಳೂರು ಬಸ್ ಹತ್ತಿದವನೇ ಚಾಮುಂಡೇಶ್ವರಿ ಸ್ಟುಡಿಯೋಗೆ ಹೋದೆ. ನಿರ್ದೇಶಕ ಸಿದ್ದಲಿಂಗಯ್ಯನವರಲ್ಲಿ ಸಹಾಯಕನಾಗಿ ಕೆಲಸ ಮಾಡಬೇಕೆನ್ನುವುದು ನನ್ನ ಆಸೆಯಾಗಿತ್ತು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅವರು `ದೂರದ ಬೆಟ್ಟ’ ಸಿನಿಮಾಗೆ ಶೂಟಿಂಗ್ ನಡೆಸುತ್ತಿದ್ದರು. ಬಿಡುವಿನ ವೇಳೆಯಲ್ಲಿ ಅವರಲ್ಲಿಗೆ ಹೋಗಿ ನನ್ನ ಆಸೆ ನಿವೇದಿಸಿಕೊಂಡೆ. ಸಿದ್ದಲಿಂಗಯ್ಯನವರು ಹೆಗಲ ಮೇಲೆ ಕೈಹಾಕಿ, `ಹೊತ್ತಿಗೆ ಸರಿಯಾಗಿ ಊಟ ಮಾಡ್ತಿದೀಯಾ?’ ಎಂದು ಕೇಳಿದರು. `ಮಾಡ್ತಿದೀನಿ ಸಾರ್…’ ಅಂದೆ. `ಸಿನಿಮಾ ಸೇರಿದ್ರೆ ಮುಂದೆ ಅದು ಸಿಗಲ್ಲ ನೋಡು!’ ಅಂದರು. `ಪರವಾಗಿಲ್ಲ ಸಾರ್, ಮನೆಯಲ್ಲಿ ಅನುಕೂಲ ಇದೆ. ಹೊಲ, ತೋಟ, ಗದ್ದೆ ಇದೆ. ಅಲ್ಲೇ ಇದ್ರೆ ಮದ್ವೆ ಆಗಿ ನಾಲ್ಕು ಮಕ್ಕಳನ್ನು ಮಾಡ್ಬಹುದು. ಕೊನೆಗೆ ಪಂಚಾಯಿತಿ ಮೆಂಬರ್ ಆಗಿ ಸಾಯ್ತೀನಿ ಅಷ್ಟೆ. ಜೀವನದಲ್ಲಿ ಏನಾದ್ರೂ ಸಾಸಬೇಕು’ ಎಂದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನನ್ನ ಧೈರ್ಯದ ಮಾತುಗಳಿಗೆ ತಲೆದೂಗಿದ ಸಿದ್ದಲಿಂಗಯ್ಯ, `ನನ್ನಲ್ಲಿ ಈಗಾಗಲೇ ಸಹಾಯಕರಿದ್ದಾರೆ. ಮುಂದಿನ ಚಿತ್ರಕ್ಕೆ ಕೆಲಸ ಮಾಡೋವಂತೆ..’ ಎಂದರು. `ಈಗ್ಲೇ ಸೇರಿಸಿಕೊಳ್ಳಿ ಸಾರ್. ಸಹಾಯಕ ನಿರ್ದೇಶಕರು ಹೇಗೆ ಕೆಲಸ ಮಾಡ್ತಾರೆ ಅನ್ನೋದನ್ನು ಸುಮ್ನೆ ನೋಡಿ ತಿಳ್ಕೋತೀನಿ’ ಅಂದೆ. `ನೀನೂ ಹೇಳೋದು ಸರಿ ಕಣಯ್ಯ. ಶೂಟಿಂಗ್ನಲ್ಲಿ ಯಾರು ಏನೇನು ಮಾಡ್ತಾರೆ ಅನ್ನೋದನ್ನು ದೂರದಿಂದಲೇ ನಿಂತು ನೋಡುತ್ತಿರಬೇಕು. ಕ್ಯಾಮೆರಾ ಓಡುತ್ತಿದ್ದಾಗ ಸದ್ದು ಮಾಡಕೂಡದು’ ಎಂದು ಸೂಚನೆ ನೀಡಿದರು. ಅಂದಿನಿಂದ ಸಿದ್ದಲಿಂಗಯ್ಯನವರು ಸೇರಿದಂತೆ ಚಿತ್ರದ ತಂತ್ರಜ್ಞರು ನನಗೆ `ಅಬ್ಸರ್ವರ್’ ಎಂದು ಹೆಸರಿಟ್ಟರು.
ಅದೊಂದು ದಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರಸ್ತೆಯಲ್ಲಿ ನಡೆಯುವ ಸನ್ನಿವೇಶವೊಂದರ ಚಿತ್ರಣ ನಡೆಯುತ್ತಿತ್ತು. ಸ್ಪಾಟ್ ರೆಕಾರ್ಡಿಂಗ್ ಆದ್ದರಿಂದ ಆಗ ಶೂಟಿಂಗ್ ವೇಳೆ ನಿಶ್ಯಬ್ಧ ಕಾಪಾಡಿಕೊಳ್ಳಬೇಕಿತ್ತು. ರಾಜಕುಮಾರ್, ಎಂ.ಪಿ.ಶಂಕರ್, ರಮಾದೇವಿ ಇತರರು ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಹಾಸ್ಯ ದೃಶ್ಯ ನೋಡುತ್ತಲೇ ನಾನು ಖುಷಿಯಿಂದ ಚಪ್ಪಾಳೆ ಹೊಡೆಯುತ್ತಾ ಶಿಳ್ಳೆ ಹಾಕಿದೆ! ಸಿದ್ದಲಿಂಗಯ್ಯನವರು `ಕಟ್’ ಹೇಳಿದರು. ತಂತ್ರಜ್ಞರೆಲ್ಲರೂ ನನ್ನನ್ನು ನೋಡಿ ನಗತೊಡಗಿದಾಗಲೇ ನನಗೆ ಇದರ ಅರಿವಾಗಿದ್ದು. ಈ ಹಿಂದೆ ಕೂಡ ಎರಡು-ಮೂರು ಬಾರಿ ಶೂಟಿಂಗ್ನಲ್ಲಿ ಹೀಗೆಯೇ ಮಾಡಿದ್ದೆ. ಹತ್ತಿರ ಬಂದ ಸಿದ್ದಲಿಂಗಯ್ಯನವರು ನನ್ನ ಕೆನ್ನೆ ಹಿಂಡುತ್ತಾ, `ಸೈಲೆಂಟ್ ಆಗಿರ್ಬೇಕು ಅಂತ ನಿನಗೆ ನಾನು ಹೇಳಿರ್ಲಿಲ್ವಾ ಮಗಾ… ಎಗ್ಸೈಟ್ ಆಗದೆ ಶೂಟಿಂಗ್ ನೋಡ್ಬೇಕು’ ಅಂದರು. ಅಂದಿನಿಂದ ಕೂಗಬೇಕು ಅನಿಸಿದಾಗೆಲ್ಲಾ ಬಾಯಿಗೆ ಅಂಗೈ ಒತ್ತಿ ಹಿಡಿದು ತಡೆದುಕೊಳ್ಳುತ್ತಿದ್ದೆ!
ಹೀಗೆ, ಒಳ್ಳೇ ಐಡಿಯಾ ಕೊಡ್ತಿರು…!
`ಹೇಮಾವತಿ’ ಚಿತ್ರೀಕರಣದ ಸಂದರ್ಭ. ಸನ್ನಿವೇಶವೊಂದರಲ್ಲಿ ರೈತನೊಬ್ಬ ಎತ್ತು ಹಿಡಿದುಕೊಂಡು ಹೋಗುತ್ತಿರುತ್ತಾನೆ. ಅಲ್ಲೇ ಹಳ್ಳಿ ಕಟ್ಟೆಯೊಂದರ ಮೇಲೆ ಇಬ್ಬರು ಬ್ರಾಹ್ಮಣ ಯುವಕರು ಕುಳಿತಿರುತ್ತಾರೆ. ಆಕಸ್ಮಾತಾಗಿ ಎತ್ತಿನ ಬಾಲ ಯುವಕರಿಗೆ ತಾಕುತ್ತದೆ. ಇದರಿಂದ ಕುಪಿತರಾದ ಅವರು ರೈತನತ್ತ ಕಲ್ಲು ಬೀಸುತ್ತಾರೆ. ಹಣೆಗೆ ಕಲ್ಲು ತಾಗುತ್ತಿದ್ದಂತೆ ರೈತ ಕುಸಿಯುತ್ತಾನೆ. ಅಲ್ಲೇ ಪಕ್ಕದ ಹೊಳೆಯಲ್ಲಿ ಹೀರೋ ಉದಯಕುಮಾರ್ ಸ್ನಾನ ಮಾಡುತ್ತಿರುತ್ತಾರೆ. ರೈತನ ಆರ್ತನಾದ ಕೇಳುತ್ತಿದ್ದಂತೆ ಅಲ್ಲಿಗೆ ಬರುತ್ತಾರೆ. `ಇವನಿಗೆ ಕಲ್ಲಲ್ಲಿ ಹೊಡೆಯೋಕೆ ಬರುತ್ತೆ, ಆರೈಕೆ ಮಾಡೋಕೆ ಆಗೋಲ್ವೆ?’ ಎಂದು ಪ್ರಶ್ನಿಸುವ ಸನ್ನಿವೇಶ ಅದು.
ಈ ಸನ್ನಿವೇಶದ ಟೇಕ್ ಓಕೆ ಆಗುತ್ತಿದ್ದಂತೆ ಸಿದ್ದಲಿಂಗಯ್ಯನವರು ನನ್ನತ್ತ ಒಮ್ಮೆ ನೋಡಿದರು. ಚಿತ್ರಣದ ಬಗ್ಗೆ ನನ್ನಲ್ಲೇನೋ ಗೊಂದಲ ಇರುವಂತಿದೆ ಎಂದು ಅವರಿಗನಿಸಿದೆ. `ಯಾಕೆ, ನಿನಗೆ ಸೀನ್ ಸರಿ ಎನಿಸಲಿಲ್ಲವೇ?’ ಎಂದು ಕೇಳಿದರು. `ರೈತನ ಆರ್ತನಾದ ಕೇಳಿ ಹೊಳೆಯಲ್ಲಿದ್ದ ಹೀರೋ ಉದಯಕುಮಾರ್ ಓಡಿ ಬರುವುದೇನೋ ಸರಿ. ಆದರೆ ರೈತನಿಗೆ ಯುವಕರು ಕಲ್ಲಲ್ಲೇ ಹೊಡೆದಿದ್ದಾರೆ ಎಂದು ಹೀರೋಗೆ ಹೇಗೆ ಗೊತ್ತಾಗುತ್ತದೆ?’ ಎಂದು ನನ್ನಲ್ಲಿ ಮೂಡಿದ ಗೊಂದಲ ಹೇಳಿಕೊಂಡೆ.
ಸಿದ್ದಲಿಂಗಯ್ಯನವರಿಗೂ ಸರಿ ಎನಿಸಿತೇನೋ, ಇದರ ಬಗ್ಗೆ ಚರ್ಚಿಸಿದರು. ಕೊನೆಗೆ ಮತ್ತೊಮ್ಮೆ ದೃಶ್ಯ ಚಿತ್ರಿಸಲಾಯ್ತು. ಈ ಬಾರಿ `ಕಲ್ಲು’ ತೆಗೆದು `ಇವನಿಗೆ ಹೊಡೆಯೋಕೆ ಬರುತ್ತೆ, ಆರೈಕೆ ಮಾಡೋಕೆ ಆಗೋಲ್ವೆ?’ ಎಂದು ಡೈಲಾಗ್ ಬದಲಿಸಿದರು. `ಸೂಕ್ಷ್ಮವಾಗಿ ಗಮನಿಸಿದ್ದೀಯ. ಹೀಗೆ, ಒಳ್ಳೆಯ ಐಡಿಯಾಗಳನ್ನು ಕೊಡುತ್ತಿರು…’ ಎಂದು ನನ್ನ ಬೆನ್ನು ತಟ್ಟಿದರು. ಸಿನಿಮಾ ಮೇಕಿಂಗ್ನಲ್ಲಿ ಚಿಕ್ಕ ವಿಷಯಗಳ ಬಗೆಗೂ ಅವರು ಮುತುವರ್ಜಿ ವಹಿಸುತ್ತಿದ್ದರು ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೆ. ಆಗಷ್ಟೇ ಸಿನಿಮಾ ಬಗ್ಗೆ ಕಲಿಯುತ್ತಿದ್ದ ನನ್ನ ಮಾತನ್ನು ಸಿದ್ದಲಿಂಗಯ್ಯನವರು ಗಂಭೀರವಾಗಿ ಪರಿಗಣಿಸಿದ್ದರು! ಸರಿ ಎನಿಸಿದ ಯಾವುದೇ ಸಂಗತಿಗಳನ್ನಾದರೂ ಅವರು ಎಲ್ಲರಿಂದಲೂ ಪಡೆಯುತ್ತಿದ್ದರು.
ಚಟ್ಟದ ಮೇಲೆ ಮಲಗಿದೆ…
`ಭೂತಯ್ಯನ ಮಗ ಅಯ್ಯು’ ಚಿತ್ರೀಕರಣದ ಸಂದರ್ಭ. ಆಗ ನಾನು ಸಿದ್ದಲಿಂಗಯ್ಯನವರಿಗೆ ಸಹಾಯಕ ನಿರ್ದೇಶಕ. ಸನ್ನಿವೇಶವೊಂದರಲ್ಲಿ ನಟ ಬಿ.ಎಂ.ವೆಂಕಟೇಶ್ ಅವರ ತಂದೆ ಪಾತ್ರಧಾರಿ ತೀರಿಕೊಂಡಿರುತ್ತಾರೆ. ಅದಕ್ಕಾಗಿ ಸುಮಾರು 65ರಿಂದ 70 ವಯಸ್ಸಿನೊಳಗಿನ ವ್ಯಕ್ತಿಯೊಬ್ಬರು ಬೇಕಿತ್ತು. ಹಳ್ಳಿಯಲ್ಲಿದ್ದ ಯಾರೂ `ಹೆಣ’ವಾಗಲು ಸುತಾರಾಂ ಒಪ್ಪಲಿಲ್ಲ. `ಯಾರೂ ಒಪ್ಪುತ್ತಿಲ್ಲ, ನೀನೇ ಮಾಡಿಬಿಡು’ ಎಂದು ಸಿದ್ದಲಿಂಗಯ್ಯನವರು. ಮೇಕಪ್ಮ್ಯಾನ್ 25ರ ಹರೆಯದ ನನ್ನ ತಲೆಗೂದಲಿಗೆ ಬಿಳಿ ಬಣ್ಣ ಹಾಕಿದರು. 70ರ ವಯಸ್ಸಿನ ವ್ಯಕ್ತಿಯಾಗಿ ನಾನು ಚಟ್ಟದ ಮೇಲೆ ಮಲಗಿದೆ!
ಬೂದಾಳು ಕೃಷ್ಣಮೂರ್ತಿ
ಚಿತ್ರನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ (71 ವರ್ಷ) ಅವರ ಹುಟ್ಟೂರು ಹುಳಿಯಾರು ಸಮೀಪದ ಬೂದಾಳು. ಸಿದ್ದಲಿಂಗಯ್ಯ ನಿರ್ದೇಶನದ ‘ದೂರದ ಬೆಟ್ಟ’ ಚಿತ್ರದಲ್ಲಿ ಅಪ್ರೆಂಟಿಸ್ ಆಗಿ ಸಿನಿಮಾರಂಗ ಪ್ರವೇಶಿಸಿದರು. ಮುಂದೆ ಸಿದ್ದಲಿಂಗಯ್ಯನವರ ‘ಬೂತಯ್ಯನ ಮಗ ಅಯ್ಯು’, ‘ಹೇಮಾವತಿ’ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಅವರು ಸ್ವತಂತ್ರ್ಯ ನಿರ್ದೇಶಕರಾದ ಚೊಚ್ಚಲ ಸಿನಿಮಾ ‘ಎರಡು ದಂಡೆಯ ಮೇಲೆ’. ‘ಒಲವಿನ ಕಾಣಿಕೆ’, ‘ಸೀತಾ ಆಂಜನೇಯ’, ‘ಶುಭಲಗ್ನ’, ‘ಲಂಚಸಾಮ್ರಾಜ್ಯ’ ಅವರ ನಿರ್ದೇಶನದ ಸಿನಿಮಾಗಳು. ಅವರ ನಿರ್ದೇಶನದ ಕೊನೆಯ ಸಿನಿಮಾ ‘ಇದೊಳ್ಳೆ ಮಹಾಭಾರತ’ ತೆರೆಕಾಣಬೇಕಿದೆ.
ನಿರ್ದೇಶನದ ಜೊತೆಗೆ ನಟನೆಯಲ್ಲೂ ಸಕ್ರಿಯರಾಗಿದ್ದ ಕೃಷ್ಣಮೂರ್ತಿ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಓದು ಅವರ ನೆಚ್ಚಿನ ಹವ್ಯಾಸವಾಗಿತ್ತು. ಬರವಣಿಗೆ ಬಗ್ಗೆ ಅಪಾರ ಹಿಡಿತ ಹೊಂದಿದ್ದರು’ ಎಂದು ಅವರ ಸಮಕಾಲೀನ ತಂತ್ರಜ್ಞರು ಕೃಷ್ಣಮೂರ್ತಿಯವರನ್ನು ಸ್ಮರಿಸುತ್ತಾರೆ. ತಮ್ಮ ನಿರ್ದೇಶನದ ಸಿನಿಮಾಗಳಿಗೆ ಅವರು ಹಾಡುಗಳನ್ನು ಬರೆದಿದ್ದರು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.