ನೇತಾಗಿರಿ, ಚೇಲಾಗಿರಿಯಿಂದ ಹೊರಬಂದು, ಬದಲಾದ ಸನ್ನಿವೇಶದಲ್ಲಿ ರಾಜಕೀಯ ಮಾಡಲು ಕಾಂಗ್ರೆಸ್ ಪಕ್ಷ ವಿಫಲ ಆಗುತ್ತಿರುವುದು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ. ದೇಶದಲ್ಲಿ ಕೇಂದ್ರ ಸರಕಾರ ಮತ್ತು ಆಡಳಿತ ಪಕ್ಷದ ನೀತಿಗಳ ವಿರುದ್ಧ ಜನಾಭಿಪ್ರಾಯ ಇದ್ದರೂ ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ.
ಮಹಾರಾಷ್ಟ್ರ ಮತ್ತು ವಿಧಾನಸಭಾ ಚುನಾವಣಾ ಫಲಿತಾಂಶ ಮೂಲಕ ಬಿಜೆಪಿಯ ಜನಪ್ರಿಯತೆ ಕುಸಿಯುತ್ತಿರುವುದು ಸ್ಪಷ್ಟವಾಗಿದೆ. ಹರಿಯಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಲಭವಾಗಿ ಜಯಗಳಿಸಬಹುದಿತ್ತು. ಅಲ್ಲಿಯ ರಾಜಕೀಯ ಪರಿಸ್ಥಿತಿ ಹಾಗಿತ್ತು. ಪಂಜಾಬ್ ರಾಜ್ಯದಿಂದ ಪ್ರತ್ಯೇಕವಾದ ಹರಿಯಾಣದಲ್ಲಿ ಜಾಟ್ ಸಮುದಾಯ ಬಿಜೆಪಿಯ ಮುಖ್ಯಮಂತ್ರಿ ಖಟ್ಟರ್ ವಿರುದ್ಧ ಅಸಮಾಧಾನಗೊಂಡಿದ್ದರು. ಬಿಜೆಪಿಯ ಮೈತ್ರಿ ಪಕ್ಷಗಳ ನಡುವೆ ಸಮಸ್ಯೆ ಇತ್ತು. ಚೌಟಾಲಾ ಕುಟುಂಬದಲ್ಲಿ ಸಮಸ್ಯೆ ಇತ್ತು. ಚೌಟಾಲಾ ಮೊಮ್ಮಗ 31ರ ಹರೆಯದ ದುಷ್ಯಂತ ಚೌಟಾಲಾ ಜೆಜೆಪಿ ಎಂಬ ಪಕ್ಷ ರಚಿಸಿ ಹತ್ತು ಶಾಸಕರನ್ನು ಗೆದ್ದುಕೊಂಡಿದ್ದಾರೆ.
ಹರಿಯಾಣದಲ್ಲಿ ಕಾಂಗ್ರೆಸ್ ಮೊದಲು ಎಡವಿದ್ದು ಪ್ರತಿಸಾರಿಯಂತೆ ನಾಯಕತ್ವ ವಹಿಸಿಕೊಡುವಲ್ಲಿ. ವಿಧಾನಸಭೆಯ ಪ್ರತಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡ ಅವರಿಗೆ ಚುನಾವಣೆಯ ಹೊಣೆಗಾರಿಕೆ ನೀಡಿದ್ದು ಕೇವಲ ಒಂದೆರಡು ತಿಂಗಳ ಹಿಂದೆ. ಆರು ತಿಂಗಳ ಹಿಂದೆಯೇ ಪಕ್ಷದ ಹೈಕಮಾಂಡ್ ಈ ತೀರ್ಮಾನ ಕೈಗೊಂಡಿದ್ದರೆ ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಬೇರೆ ತೆರನಾಗಿರುತ್ತಿತ್ತು. ಹರಿಯಾಣದಲ್ಲಿ ಬಹುತೇಕ ಬಿಜೆಪಿ ಸಚಿವರು, ಹಾಲಿ ಶಾಸಕರು ಸೋತಿರುವುದು ಆಡಳಿತ ವಿರೋಧಿ ಜನಾಭಿಪ್ರಾಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇಂತಹ ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ವಿಫಲ ಆಗಿದೆ.
ಹೈಕಮಾಂಡಿಗೆ ಸನಿಹ ಇರುವ ಮುಖಂಡರು ಲಾಬಿ ಮಾಡಿ ಟಿಕೆಟ್ ಹಂಚಿಕೆ ಮಾಡುತ್ತಿರುವುದರಿಂದ ಕಾಂಗ್ರೆಸ್ ಸುಲಭದ ಗೆಲುವನ್ನು ಕೈ ಚೆಲ್ಲಿದೆ. ಬಿಜೆಪಿ ಕೂಡ ಹಿನ್ನಡೆ ಅನುಭವಿಸಲು ಇದೇ ಮಾದರಿಯ ಟಿಕೆಟ್ ಹಂಚಿಕೆ ಕಾರಣ ಎನ್ನಲಾಗುತ್ತಿದೆ. ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಯ ಆಯ್ಕೆಗೆ ಗಮನ ನೀಡದ ಕಾರಣ ಕನಿಷ್ಟ ಹತ್ತು ಶಾಸಕ ಸ್ಥಾನಗಳನ್ನು ಬಿಜೆಪಿಗೆ ನೀಡಿದಂತಾಗಿದೆ.
ಹಿನ್ನಡೆಯ ಹೊರತಾಗಿಯು ಬಿಜೆಪಿ 36 ಶೇಕಡ ಮತಗಳನ್ನು ಗಳಿಸಿಕೊಂಡಿದೆ. ಕಾಂಗ್ರೆಸ್ ಶೇಕಡ 26 ಮತಗಳನ್ನು ಗಳಿಸಿದರೆ ಇತರರು ಶೇಕಡ 27 ಮತಗಳನ್ನು ಗಳಿಸಿದ್ದಾರೆ. ಉಳಿದ ಮತಗಳನ್ನು ಚಿಕ್ಕ ಪುಟ್ಟ ಪಕ್ಷಗಳು ಗಳಿಸಿವೆ. ಬಿಜೆಪಿ ವಿರೋಧಿ ಮತಗಳನ್ನು ಒಂದೆಡೆ ಸೇರಿಸಲು ಕಾಂಗ್ರೆಸ್ ಪಕ್ಷದಲ್ಲಿ ಯಾವ ಕಾರ್ಯತಂತ್ರವೂ ಇರಲಿಲ್ಲ. ಹರಿಯಾಣ ಯುವ ಕಾಂಗ್ರೆಸ್ ನಾಯಕ ಮತ್ತು ರಾಷ್ಟ್ರೀಯ ವಕ್ತಾರ ಸುರ್ಜೀವಾಲ ಕಡಿಮೆ ಮತಗಳ ಅಂತರದಿಂದ ಸೋಲಲು ಕಾಂಗ್ರೆಸ್ ಪಕ್ಷದಲ್ಲಿ ವೃತ್ತಿಪರ ಚುನಾವಣಾ ನಿರ್ವಹಣೆಯ ಕೊರತೆ ಕಾರಣವಾಗಿದೆ.
ಮಹಾ ಸಮಸ್ಯೆ:
ಮಹಾರಾಷ್ಟ್ರದಲ್ಲಿ ಕೂಡ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ 20 ರಿಂದ 30 ಸ್ಥಾನಗಳನ್ನು ಕಳಕೊಂಡಿದೆ ಎನ್ನುತ್ತಾರೆ ರಾಜಕೀಯ ವೀಕ್ಷಕರು. ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಕೂಡ ಈ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗಾಗಿ ಹೇಳಿಕೊಂಡಿದ್ದರು. ರೈತರು, ಗಿರಿಜನ ಮತ್ತು ದಲಿತರ ಆಕ್ರೋಶದ ನಡುವೆ ಕೂಡ ಬಿಜೆಪಿ – ಶಿವಸೇನಾ ಮೈತ್ರಿ ವಿರುದ್ಧ ಸಮಬಲದ ಹೋರಾಟ ಸಂಘಟಿಸಲು ಕೂಡ ಕಾಂಗ್ರೆಸ್ – ಎನ್ ಸಿ ಪಿ ಮೈತ್ರಿ ಕೂಟಕ್ಕೆ ಸಾಧ್ಯವಾಗಿಲ್ಲ. ಪರಿಸರ ಹೋರಾಟ, ರೈತರ ಆತ್ಮಹತ್ಯೆಗಳು ಆಡಳಿತ ಪಕ್ಷಗಳ ವಿರುದ್ಧ ಜನಾಭಿಪ್ರಾಯ ರೂಪಿಸುವಂತೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ.
ಮಹಾರಾಷ್ಟ್ರದಲ್ಲಿ ಕೂಡ ನಾಯಕತ್ವ ವಿಚಾರ, ಗುಂಪುಗಾರಿಕೆ, ಹೈಕಮಾಂಡ್ ಉದಾಸೀನತೆ, ವಿಳಂಬ ನೀತಿಯಿಂದಾಗಿ ಚುನಾವಣೆಗೆ ಮುನ್ನವೇ ಮತ್ತೆ ದೇವೇಂದ್ರ ಫಡ್ನಾವಿಸ್ ಮುಖ್ಯಮಂತ್ರಿ ಆಗುವುದು ಖಚಿತವಾಗಿತ್ತು. ಶರದ್ ಪವಾರ್ ನೇತೃತ್ವದ ಎನ್ ಸಿ ಪಿ ಸ್ಪಲ್ಪ ಮಟ್ಟಿಗೆ ಆಡಳಿತ ಪಕ್ಷಗಳ ವಿರುದ್ಧ ಹೋರಾಟ ನಡೆಸಿದೆ. ಮರಾಹಾಷ್ಟ್ರದಲ್ಲಿ ಕೂಡ ಚುನಾವಣೋತ್ತರ ಸರ್ವೇ ವರದಿಯಂತೆ ಫಲಿತಾಂಶ ಬಂದಿಲ್ಲ. ಕಳೆದ ಬಾರಿ ಅಭೂತ ಪೂರ್ವ ಜಯಗಳಿಸಿದ್ದ ಬಿಜೆಪಿಗೆ ಈ ಬಾರಿ ಹಲವು ಸ್ಥಾನಗಳು ನಷ್ಟ ಆಗಿವೆ.
ರಾಹುಲ್ ಗಾಂಧಿ ಸ್ಥಾನವನ್ನು ಸೋನಿಯಾ ಗಾಂಧಿ ತುಂಬಿದ ಅನಂತರ ಹಳೇ ಚಾಳಿ ಬದಲಾಗದಿದ್ದರೂ ಅಲ್ಪಸ್ವಲ್ಪ ಬದಲಾವಣೆಯಾಗಿದೆ. ಹರಿಯಾಣದಲ್ಲಿ ಹೂಡ ಬದಲು ಅಶೋಕ್ ತನ್ವರ್ ಅವರನ್ನು ಬೆಳೆಸಲು ರಾಹುಲ್ ಗಾಂಧಿ ಆಸಕ್ತಿ ವಹಿಸಿದ್ದರು. ಭೂಪಿಂದರ್ ಹೂಡ ಒಂದು ಬಹಿರಂಗ ಹೇಳಿಕೆ ನೀಡಿದ ಅನಂತರ ಅವರ ಪ್ರಭಾವ ಪಕ್ಷದಲ್ಲಿ ಎಂದಿನಂತೆ ಮುಂದುವರಿದಿತ್ತು. ಸೋನಿಯಾ ಗಾಂಧಿಯೂ ಕೂಡ ಹೂಡ ಅವರಂತಹ 72ರ ಹರೆಯದ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಹಿರಿಯ ಮುಖಂಡನನ್ನು ಕಡೆಗಣಿಸುವಂತೆ ಇರಲಿಲ್ಲ.
ಅಶೋಕ್ ತನ್ವರ್ ಬದಲು ಮಾಜಿ ಕೇಂದ್ರ ಸಚಿವೆ ಕುಮಾರಿ ಶೆಲ್ಜಾ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕ ಮಾಡಿತ್ತು. ಇದೂ ಕೂಡ ಉತ್ತಮ ಆಯ್ಕೆ ಆಗಿರಲಿಲ್ಲ. ಪಕ್ಷ ಎರಡು ಗುಂಪಾಯಿತು. ಡ್ಯಾಮೇಜ್ ಆದ ನಂತರವೇ ಕಾಂಗ್ರೆಸ್ ಹೈಕಮಾಂಡ್ ಹೂಡ ಅವರನ್ನು ಶಾಸಕಾಂಗ ಪಕ್ಷದ ಮುಖಂಡ ಮತ್ತು ಚುನಾವಣಾ ಸಮಿತಿ ಅಧ್ಯಕ್ಷನಾಗಿ ನೇಮಿಸಿತು.
ಕರ್ನಾಟಕದಲ್ಲೂ ಆಗಿದ್ದು ಇದೇ ರೀತಿ. ಮೈತ್ರಿ ಸರಕಾರ ಉರುಳಿದ ಮೇಲೆ ಸಹಜವಾಗಿ ಶಾಸಕಾಂಗ ಪಕ್ಷದ ಮುಖಂಡರಾಗಿದ್ದ ಸಿದ್ದರಾಮಯ್ಯ ಪ್ರತಿಪಕ್ಷದ ಮುಖಂಡ ಆಗಬೇಕಾಗಿತ್ತು. ಆದರೆ, ಹೈಕಮಾಂಡ್ ಮೂಗಿನ ನೇರಕ್ಕೆ ಪ್ರತಿಪಕ್ಷ ನಾಯಕನ ಆಯ್ಕೆ ಕುರಿತ ಅನಗತ್ಯ ಸರ್ಕಸ್ ಮಾಡಲಾಯಿತು. ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕವಾಗಿ ಅನಗತ್ಯವಾಗಿ ಚರ್ಚೆಗೆ ಅವಕಾಶ ನೀಡಲಾಯಿತು. ಇದರಿಂದ ಸಹಜವಾಗಿ ಸಿದ್ದರಾಮಯ್ಯ ಅವರ ಇಮೇಜಿಗೆ ಧಕ್ಕೆ ತರುವ ಯತ್ನ ನಡೆಯಿತು. ಇಂತಹದೊಂದು ಪ್ರಹಸನದಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವ ಲಾಭವೂ ಆಗಲಿಲ್ಲ. ಆದರೆ, ವಿರೋಧ ಪಕ್ಷಗಳಿಗೆ ಮಾತ್ರ ಇದರಿಂದ ಆಹಾರ ದೊರೆಯಿತು.
ತಮ್ಮ ಪ್ರಾದೇಶಿಕ ಮುಖಂಡರನ್ನು ಗೌರವಿಸಿದೇ ಅವರನ್ನು ತುಳಿಯುತ್ತಲೇ ಪಕ್ಷವನ್ನು ಅವಸಾನದತ್ತ ಕೊಂಡೊಯ್ಯುವ ಕಾಂಗ್ರೆಸ್ಸಿನಂತಹ ರಾಜಕೀಯ ಪಕ್ಷ ಮತ್ತೊಂದಿಲ್ಲ. ಹೈಕಮಾಂಡಿನ ತಪ್ಪು ನೀತಿಗಳಿಂದಾಗಿಯೇ ಇಂದು ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಗುಜರಾತ್, ಓಡಿಶಾ, ಬಿಹಾರ ಮುಂತಾದ ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೊಬ್ಬ ಸಮರ್ಥ ಮುಖಂಡನಿಲ್ಲ. ಪಕ್ಷದ ಪ್ರಭಾವವೂ ಇಲ್ಲ. ಇಂದು ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿ ಆಗಿರುವವರು ಇದೇ ಕಾಂಗ್ರೆಸ್ ಪಕ್ಷದ ಒಂದು ಕಾಲದ ಮುಖಂಡರು.