ಬುದ್ಧಿವಂತರ, ವಿದ್ಯಾವಂತರ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೇವಲ 93 ಕಿಲೋ ಮೀಟರ್ ಅಂತರಲ್ಲಿ ಇರುವ ಐದು ಟೋಲ್ ಗೇಟುಗಳಲ್ಲಿ ದಿನನಿತ್ಯ ಹಗಲು ದರೋಡೆ ನಡೆಯುತ್ತಿದೆ. ಭಾರತ ಸರಕಾರದ ಕಾನೂನು ಪ್ರಕಾರ ರಸ್ತೆ ನಿರ್ವಹಣಾ ಶುಲ್ಕ ಸಂಗ್ರಹಿಸುವ ಟೋಲ್ ಗೇಟುಗಳು 60 ಕಿಲೋ ಮೀಟರ್ ಅಂತರದಲ್ಲಿ ಇರಬಾರದು. ಹಾಗಿದ್ದರೂ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಐದು ಟೋಲ್ ಗೇಟುಗಳು ವಾಹನ ಚಾಲಕರಿಂದ ಹಣ ಸಂಗ್ರಹ ಮಾಡುತ್ತಿವೆ.
ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರಿದ್ದಾರೆ. ಅಕ್ರಮ ಟೋಲ್ ಗೇಟನ್ನು ತೆಗೆದು ಹಾಕುತ್ತೇನೆ ಎಂದು ಘೋಷಣೆ ಮಾಡಿದವರು ಇದೀಗ ಆಡಳಿತ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದಾರೆ. ಅಸಂಖ್ಯ ಚೌಕಿದಾರರಿದ್ದಾರೆ. ಹಾಗಿದ್ದರೂ ಹಗಲು ದರೋಡೆ ನಡೆಯುತ್ತಲೇ ಇದೆ. ಇದು ಹೇಗೆ ಸಾಧ್ಯ.
National Highways Fee (Determination of rates and collection) Rules, 2008, Sec 8(2) ಪ್ರಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಟೋಲ್‍ಗೇಟ್ ನಡುವಿನ ಕನಿಷ್ಟ ಅಂತರ ಅರವತ್ತು ಕಿಲೋ ಮೀಟರ್ ಇರಲೇಬೇಕು. ಆದರೆ, ಕರಾವಳಿ ಜಿಲ್ಲೆಗಳಲ್ಲಿ ಹಾದುಹೋಗುವ ಕೇರಳ- ಗೋವಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಲ್ಕು ಟೋಲ್ ಗೇಟುಗಳು ಇವೆ.
ಮೊದಲಿಗೆ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ. ಸಿ. ರೋಡ್ ಮತ್ತು ನಂತೂರು (ಮಂಗಳೂರು) ನಡುವೆ ಬ್ರಹ್ಮರಕೂಟ್ಲು (ತುಂಬೆ) ಎಂಬಲ್ಲಿ ಒಂದು ಗೋಲ್ ಗೇಟ್ ಸಿಗುತ್ತದೆ. ಇದು 2013ರಿಂದ ಟೋಲ್ ಸಂಗ್ರಹ ಆರಂಭಿಸಿದೆ. ಇದು ಸಂಪೂರ್ಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುದಾನ ಮತ್ತು ಬಂದರು ಸುತ್ತಮುತ್ತಲ ಅಭಿವೃದ್ಧಿ ಯೋಜನೆಯಡಿ ನಿರ್ಮಿತ (ನ್ಯೂ ಮಂಗಳೂರು ಪೋರ್ಟ್ ರೋಡ್ ಲಿಮಿಟೆಡ್) ರಸ್ತೆ.

ಕೇರಳ ಗಡಿ ಪ್ರದೇಶ ತಲಪಾಡಿಯಿಂದ ಗೋವಾ ರಾಜ್ಯ ಗಡಿ ತನಕ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಲಪಾಡಿಯಿಂದ ಕುಂದಾಪುರ ತಾಲೂಕಿನ ಸಾಸ್ತಾನ ನಡುವೆ ನಾಲ್ಕು ಟೋಲ್ ಗೇಟುಗಳನ್ನು ಹಾಕಿ ಶುಲ್ಕ ಸಂಗ್ರಹಿಸಲಾಗುತ್ತಿದೆ. ನಂತೂರು ವೃತ್ತದಿಂದ ಸುರತ್ಕಲ್ ತನಕ ಹಳೆಯ ಗುತ್ತಿಗೆಯಲ್ಲಿ ನಾಲ್ಕು ಪಥಗಳ ರಸ್ತೆ ನಿರ್ಮಾಣ ಮಾಡಲಾಗಿದೆ. ಒಂದು ತುಂಡನ್ನು ಹೊರತು ಪಡಿಸಿದ ಗೋವಾ ಗಡಿ ತನಕದ ಹೆದ್ದಾರಿಯನ್ನು ನಾಲ್ಕು ಪಥಗಳ ಹೆದ್ದಾರಿಯಾಗಿ ಪರಿವರ್ತಿಸಿ ಸರ್ವೀಸ್ ರಸ್ತೆ ನಿರ್ಮಿಸುವ ಯೋಜನೆಯನ್ನು ಆಂಧ್ರಪ್ರದೇಶ ಮೂಲದ ನವಯುಗ್ ಉಡುಪಿ ಪ್ರೈವೆಟ್ ಲಿಮಿಟೆಡ್ ವಹಿಸಿಕೊಂಡಿದೆ. ಬಂಡವಾಳ ಹೂಡಿಕೆ ಮತ್ತು ಕಾಮಗಾರಿ ಅನುಷ್ಠಾನ ನಡೆಸಿ ಟೋಲ್ ಸಂಗ್ರಹಿಸುವ ಒಪ್ಪಂದದ ಮೇರೆಗೆ ಈ ಕಾಮಗಾರಿ ನಡೆಯುತ್ತಿದೆ.
ಪಂಪ್ ವೆಲ್ ಸರ್ಕಲ್ ಕಾಮಗಾರಿ ಸೇರಿದಂತೆ ಹೆದ್ದಾರಿ ಕಾಮಗಾರಿ ಶೇಕಡ 50ರಷ್ಟು ಮುಗಿಯುವ ಮುನ್ನವೇ ನವಯುಗ್ ಕಂಪೆನಿ ರಸ್ತೆ ಶುಲ್ಕ ಸಂಗ್ರಹಕ್ಕೆ ಟೋಲ್ ಗೇಟ್ ಪ್ಲಾಜ ಸ್ಥಾಪಿಸಿತ್ತು. ಟೋಲ್ ಸಂಗ್ರಹಿಸಬೇಕಾದರೆ ಹೆದ್ದಾರಿಯ ಕೆಲಸ ಕನಿಷ್ಟ 75% ಮುಗಿದಿರಬೇಕು. ಆದರೆ, ಸರಕಾರ ರಸ್ತೆ ಶುಲ್ಕ ಸಂಗ್ರಹಿಸಲು ಅನುಮತಿ ನೀಡಿತ್ತು. ಮೊದಲಿಗೆ ತಾತ್ಕಾಲಿಕ ಎಂಬ ನೆಲೆಯಲ್ಲಿ ಸುರತ್ಕಲ್ ಎನ್ ಐ ಟಿ ಕೆ ಬಳಿ ಮೊದಲ ಟೋಲ್ ಗೇಟ್, ಅನಂತರ ಪಡುಬಿದ್ರಿ ಸಮೀಪದ ಹೆಜಮಾಡಿ ಮತ್ತು ತಲಪಾಡಿಯಲ್ಲಿ ಹಾಗೂ ಅಂತಿಮವಾಗಿ ಕುಂದಾಪುರ ಸಾಸ್ತಾನ ಸಮೀಪದ ಗುಂಡ್ಮಿಯಲ್ಲಿ ಟೋಲ್ ಗೇಟ್ ಬಿತ್ತು. ಎಲ್ಲ ಟೋಲ್ ಗೇಟ್ ಸ್ಥಾಪನೆಗೂ ಮುನ್ನ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ಆರಂಭಕ್ಕೂ ಮುನ್ನ ಭಾರತೀಯ ಜನತಾ ಪಾರ್ಟಿ ಸ್ಥಳೀಯವಾಗಿ ವಿರೋಧಿಸುವ ಉದ್ದೇಶದಿಂದ ಸಭೆ ನಡೆಸಿತ್ತು. ಆದರೆ, ಆ ಸಭೆಯಲ್ಲಿ ಸ್ಥಾಪಿತ ಹಿತಾಸಕ್ತಿಗಳು ಟೋಲ್ ಗೇಟ್ ಸಂಗ್ರಹದ ಪರವಾಗಿ ಪರೋಕ್ಷ ವಕಾಲತ್ ಮಾಡಿದ ಪರಿಣಾಮ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಟೋಲ್ ಗೇಟ್ ವಿರೋಧಿಸಲು ಸಾಧ್ಯ ಆಗಲಿಲ್ಲ. ಅನಂತರ ಹಲವಾರು ಸಂಘಟನೆಗಳು ಉಡುಪಿ, ಸಾಸ್ತಾನ, ಹೆಜಮಾಡಿ, ಸುರತ್ಕಲ್, ತಲಪಾಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸುರತ್ಕಲ್ ಟೋಲ್ ಗೇಟ್ ತೆರವು ಮಾಡಲೇ ಬೇಕು ಎಂದು ಹಲವು ದಿನಗಳ ಕಾಲ ಪ್ರತಿಭಟನೆ ನಡೆಯಿತು. ಏಕೆಂದರೆ, ಸುರತ್ಕಲ್ NITK ಹಾಗೂ ಹೆಜಮಾಡಿ ನಡುವೆ ಹತ್ತು ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್‍ಗೇಟ್‍ಗಳಿವೆ. NITK ಸಮೀಪದ ಟೋಲ್ ಗೇಟ್ ತೆರವು ಮಾಡಲೇ ಬೇಕಾಗುತ್ತದೆ. ಕೇವಲ 10 ಕಿಲೋ ಮೀಟರ್ ಅಂತರಕ್ಕೆ 25 ರೂಪಾಯಿ ಶುಲ್ಕ ತೆರಬೇಕಾಗುತ್ತದೆ.

ತಲಪಾಡಿ ಹಾಗೂ ಗುಂಡ್ಮಿಯ ನಡುವಿನ ಅಂತರ 95 ಕಿಲೋಮೀಟರ್. ಕಾನೂನು ಪ್ರಕಾರ ಈ ಅಂತರದಲ್ಲಿ ಎರಡು ಟೋಲ್‍ಗೇಟ್‍ಗಳಿಗೂ ಅವಕಾಶವಿಲ್ಲ. ನಾಲ್ಕು ಟೋಲ್‍ಗೇಟ್‍ಗಳು ಶುಲ್ಕ ಸಂಗ್ರಹಿಸುತ್ತಿವೆ. ಅಂದರೆ ಸರಾಸರಿ ಇಪ್ಪತ್ತಮೂರು ಕಿಲೋಮೀಟರಿಗೊಂದು ಟೋಲ್‍ಗೇಟ್ ಇದ್ದಂತಾಯಿತು.
ಸಾಲಿಗ್ರಾಮದಿಂದ ಅಥವಾ ಕುಂದಾಪುರದಿಂದ ಮಂಗಳೂರು ಸಮೀಪದ ತಲಪಾಡಿಯವರೆಗೆ ಖಾಸಗಿ ಕಾರಿನಲ್ಲಿ ಹೋಗಿ ಬರಲು ಒಂದು ದಿನಕ್ಕೆ 390 ರೂಪಾಯಿ ರಸ್ತೆ ಶುಲ್ಕ ತೆರಬೇಕಾಗುತ್ತದೆ. ಮಾಸಿಕ ಪಾಸ್ ಮಾಡಿದರೂ 9,000 ರೂಪಾಯಿ ಬೇಕಾಗುತ್ತದೆ. ಹೀಗಿದೆ ಕರ್ನಾಟಕ ಕರಾವಳಿಯ ಕಾನೂನು ನಿಯಮಗಳು. ದೇಶದ ಎಲ್ಲಿಯೂ ಇಲ್ಲದ ಕಾನೂನು ಕರಾವಳಿ ಕರ್ನಾಟಕದಲ್ಲಿ ಚಲಾವಣೆಯಲ್ಲಿ ಇವೆ.
ರಸ್ತೆ ಶುಲ್ಕ ಪಾವತಿಸುವ ರಸ್ತೆ ಪೂರ್ಣ ಆಗಿಲ್ಲ ಎಂಬುದು ಒಂದೆಡೆಯಾದರೆ, ಕಳೆದ ಮಳೆಗಾಲದ ಅನಂತರ ಹೆದ್ದಾರಿಯಲ್ಲಿ ವಾಹನ ಚಲಾಯಿಸುವುದು ಅಪಾಯಕಾರಿಯಾಗಿದೆ. ಹೆದ್ದಾರಿ ಸಂಪೂರ್ಣ ಕೆಟ್ಟು ಹೋಗಿದೆ. ಇಂತಹ ರಸ್ತೆಗೆ ಜನರು ಶುಲ್ಕ ಪಾವತಿಸುವಂತಾಗಿದೆ ಎಂಬುದು ವಿಪರ್ಯಾಸ. 1999ರಲ್ಲಿ ಬಂಟ್ವಾಳ – ಮಂಗಳೂರು – ಸುರತ್ಕಲ್ ನಡುವೆ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈ ಯೋಜನೆ ಅನುಷ್ಠಾನ ಆದಾಗ ಹತ್ತು ವರ್ಷಗಳು ಕಳೆಯಿತು. ಅನಂತರ 2010ರಲ್ಲಿ ತಲಪಾಡಿ – ಕುಂದಾಪುರ ನಾಲ್ಕು ಪಥಗಳ ಹೆದ್ದಾರಿ ಖಾಸಗಿ ಹೂಡಿಕೆಯಿಂದ ನಡೆಸಲು ಅನುಮತಿ ನೀಡಲಾಗಿತ್ತು. ಹೆದ್ದಾರಿ ಕಾಮಗಾರಿ ಇಂದಿರೂ ಪೂರ್ಣಗೊಂಡಿಲ್ಲ.
ರಾಜ್ಯದಲ್ಲಿ ಎರಡು ಹೆದ್ದಾರಿಗಳನ್ನು ನಿರ್ವಹಿಸುತ್ತಿರುವ ನವಯುಗ ಕಂಪೆನಿ ಹಣಕಾಸು ಸಂಕಷ್ಟದಲ್ಲಿ ಸಿಲುಕಿರುವುದು ಮತ್ತು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆದ ವಿಳಂಬದಿಂದ ಕಾಮಗಾರಿ ಕೂಡ ವಿಳಂಬ ಆಗಲು ಕಾರಣವಾಗಿದೆ. ಇದರಲ್ಲಿ ಸ್ಥಳೀಯ ರಾಜಕೀರಣಿಗಳ ಇಚ್ಛಾಶಕ್ತಿಯ ಕೊರತೆ, ದೂರದೃಷ್ಟಿಯ ಕೊರತೆ, ರಾಜಕೀಯ ಅಪಕ್ವತೆ ಕೂಡ ಕಾರಣವಾಗಿದೆ. ಇವೆರಡು ಯೋಜನೆಗಳ ಅವ್ಯವಸ್ಥೆ, ವೈಫಲ್ಯಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಮಾನ ಪಾಲುದಾರರು.