ಕರ್ನಾಟಕದಲ್ಲಿ ಇಂದು 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಫಲಿತಾಂಶ ಹಲವು ರಾಜ್ಯಗಳಲ್ಲಿನ ರಾಜಕೀಯ ಸಮೀಕರಣವನ್ನು ಬದಲಿಸುವ ಸಾಧ್ಯತೆ ಇದೆ. ಸ್ವಾರ್ಥ ಸಾಧನೆ ಹಾಗೂ ವೈಯಕ್ತಿಕ ತೆವಲುಗಳನ್ನು ತೀರಿಸಿಕೊಳ್ಳಲು ಪಕ್ಷಾಂತರ ಮಾಡಿ ಮತಭಿಕ್ಷೆ ಬೇಡುತ್ತಿರುವ, ಬಿಜೆಪಿಯಿಂದ ಕಣಕ್ಕಿಳಿದು ಗೆಲುವಿನ ಕನಸು ಕಾಣುತ್ತಿರುವ ಅನರ್ಹ ಶಾಸಕರು ಸೋಲನುಭವಿಸಿದಲ್ಲಿ ಬಿಜೆಪಿಯು ವಿವಿಧ ರಾಜ್ಯಗಳಲ್ಲಿ ಭಾರಿ ಬೆಲೆ ತೆರಬೇಕಾಗಲಿದೆ. ಹೀಗಾದಲ್ಲಿ ರಾಜಕಾರಣದ ಸಭ್ಯತೆಯನ್ನು ನಾಶಪಡಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸದ್ಯದ ರಾಜಕಾರಣದ ಪ್ರಭಾವಿ ಸಚಿವ ಅಮಿತ್ ಶಾ ಅವರ ಪತನದ ವೇಗ ದ್ವಿಗುಣಗೊಳ್ಳಲಿದೆ. ಕರ್ನಾಟಕ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಬಿಜೆಪಿಗೆ ವಿರುದ್ಧವಾದರೆ ಕಳೆದ ಕೆಲವು ವರ್ಷಗಳಿಂದ ಮೋದಿ-ಶಾರನ್ನು ನಾನಾ ಕಾರಣಗಳಿಗಾಗಿ ಸಹಿಸಿಕೊಂಡು ಬಂದಿರುವ ಸ್ವಪಕ್ಷೀಯರು ಹಾಗೂ ಮಿತ್ರ ಪಕ್ಷಗಳ ನಾಯಕರು ಅವರ ವಿರುದ್ಧವೇ ತಿರುಗಿಬಿದ್ದರೆ ಆಶ್ಚರ್ಯವಿಲ್ಲ.
ಕಳೆದ ಕೆಲವು ವರ್ಷಗಳಲ್ಲಿ ಸಿಕ್ಕಿಂ, ಮಣಿಪುರ, ಗೋವಾದಲ್ಲಿ ವಿರೋಧ ಪಕ್ಷಗಳು ಅತಿದೊಡ್ಡ ಪಕ್ಷಗಳಾಗಿ ಹೊರಹೊಮ್ಮಿದರೂ ಕುತಂತ್ರದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿಯು ಅಲ್ಲಿ ಭಿನ್ನಮತ ಎದುರಿಸಬೇಕಾಗಬಹುದು. ಇದನ್ನು ಶಮನ ಮಾಡಬಲ್ಲ ಚಾಣಾಕ್ಷರ ಕೊರತೆ ಬಿಜೆಪಿಗೆ ಇದೆ. ಅರುಣ್ ಜೇಟ್ಲಿ, ಅನಂತ್ ಕುಮಾರ್ ನಂತರ ಬಿಕ್ಕಟ್ಟು ಶಮನ ಮಾಡಬಲ್ಲ ಛಾತಿಯುಳ್ಳ ನಾಯಕರನ್ನು ಬಿಜೆಪಿ ರೂಪಿಸಿಲ್ಲ. ಮೋದಿ-ಶಾ ಕೇಂದ್ರಿತವಾದ ರಾಜಕಾರಣಕ್ಕೆ ಪ್ರಾಶಸ್ಯ್ತ ನೀಡಿದ್ದರಿಂದ ರಾಜಕೀಯ ತಂತ್ರ ಹೆಣೆಯಬಲ್ಲ ನಾಯಕರು ಬಿಜೆಪಿಯಲ್ಲಿ ಬೆಳೆಯಲಿಲ್ಲ. ಈ ಪೈಕಿ ಬಿಜೆಪಿಗೆ ಮೊದಲಿಗೆ ಸಂಭಾವ್ಯ ಹೊಡೆತ ಎದುರಾಗುವುದು ಬಿಹಾರದಲ್ಲಿ ಎನ್ನುವ ಗುಮಾನಿಯಿದೆ.
ಸಮಕಾಲೀನ ಭಾರತದ ರಾಜಕಾರಣದಲ್ಲಿ ಸುಶಾಸನ್ ಬಾಬು (ಸಮರ್ಥ ಆಡಳಿತಗಾರ) ಎಂದು ಗುರುತಿಸಿಕೊಂಡಿರುವ ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ. ರಾಜಕೀಯ ಬದುಕಿನುದ್ದಕ್ಕೂ ಅನುಕೂಲ ಸಿಂಧು ಹಾಗೂ ಅವಕಾಶವಾದಿ ರಾಜಕಾರಣವನ್ನು ನಾಜೂಕಾಗಿ ಮಾಡುತ್ತಿರುವ ನಿತೀಶ್ 2005ರಿಂದ ಬಿಹಾರ ಮುಖ್ಯಮಂತ್ರಿಯಾಗಿದ್ದಾರೆ.
2015ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಹಾಗೂ ಅಮಿತ್ ಶಾ ಗೆ ಸೋಲಿನ ರುಚಿಯುಣಿಸಿ ಬಿಜೆಪಿ ಅಶ್ವಮೇಧ ಕುದುರೆಗೆ ಲಗಾಮು ಹಾಕಬಲ್ಲ ಪ್ರತಿಪಕ್ಷಗಳ ಸಮರ್ಥ ಮುಖ ಎಂಬ ಹೆಸರು ಗಳಿಸಿದ್ದ ನಿತೀಶ್, ಎರಡೇ ವರ್ಷಗಳ ಅಂತರದಲ್ಲಿ ಆರ್ ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿ ತೊರೆದು ಬಿಜೆಪಿಯ ಜೊತೆಗೂಡಿ ಸರ್ಕಾರ ರಚಿಸುವ ಮೂಲಕ ಇಡೀ ದೇಶವನ್ನು ನಿಬ್ಬೆರಗಾಗಿಸಿದ್ದರು.
ಇದೇ ಸಂದರ್ಭದಲ್ಲಿ ಹಲವು ರಾಜ್ಯಗಳಲ್ಲಿ ಗೆಲುವಿನ ಸಿಹಿಯುಣ್ಣಲಾರಂಭಿಸಿದ ಬಿಜೆಪಿಯು ನಿತೀಶ್ ಅವರನ್ನು ದ್ವಿತೀಯ ದರ್ಜೆಯ ಪ್ರಜೆಯಂತೆ ನೋಡಿರುವುದು ವಾಸ್ತವ. ಇದಲ್ಲದೇ 2019ರ ಲೋಕಸಭಾ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನ ಗೆದ್ದರೂ ನಿತೀಶ್ ನೇತೃತ್ವದ ಜೆಡಿಯುಗೆ ಬಿಜೆಪಿ ನ್ಯಾಯಯುತ ಮಂತ್ರಿ ಸ್ಥಾನ ನೀಡಿಲ್ಲ. ಇದರಿಂದ ಬೇಸರಗೊಂಡ ನಿತೀಶ್, ಜೆಡಿಯುವಿನ ಯಾರೊಬ್ಬರೂ ಮೋದಿ ಮಂತ್ರಿಮಂಡಲ ಸೇರುವುದಿಲ್ಲ ಎಂದು ಘೋಷಿಸಿದ್ದರು.
ಅದಾಗಲೇ ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ತಾಳಮೇಳ ತಪ್ಪುತ್ತಿರುವ ಸೂಚನೆ ರವಾನೆಯಾಗಿತ್ತು. ಇದಾದ ಬಳಿಕ ಆಮ್ಲಜನಕ ಕೊರತೆಯಿಂದ ಹಸುಗೂಸುಗಳು ಬಿಹಾರ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಮುಜಾಫ್ಫರ್ ನಗರ ಹಾಸ್ಟೆಲ್ ನಲ್ಲಿ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣವು ಇಡೀ ದೇಶದ ಮುಂದೆ ನಿತೀಶ್ ಸರ್ಕಾರದ ಮಾನ ಹರಾಜು ಹಾಕಿತ್ತು. ಇದಾದ ಬಳಿಕ ಬಿಹಾರದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನೂ ನಿತೀಶ್ ನೇತೃತ್ವದ ಎನ್ ಡಿಎ ಮೈತ್ರಿ ಸರ್ಕಾರ ಸಮರ್ಥವಾಗಿ ನಿಭಾಯಿಸಲಿಲ್ಲ.
ಇದರ ಬೆನ್ನಿಗೆ ನಡೆದ ವಿಧಾನ ಸಭಾ ಉಪಚುನಾವಣೆಯಲ್ಲಿ ಜೆಡಿಯು ಹಾಗೂ ಬಿಜೆಪಿ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವ ನಿತೀಶ್ ಗೆ ಅಗತ್ಯ ಬೆಂಬಲ ನೀಡಿಲ್ಲ. ರಾಜ್ಯಮಟ್ಟದ ನಾಯಕರು ಅವಕಾಶ ಸಿಕ್ಕಲೆಲ್ಲಾ ನಿತೀಶ್ ಮುಖ್ಯಮಂತ್ರಿ ಸ್ಥಾನವನ್ನು ಒಮ್ಮೆ ಬಿಜೆಪಿಗೆ ಬಿಟ್ಟುಕೊಡುವ ಮನಸು ಮಾಡಬೇಕು ಎಂದು ಹೇಳುವ ಮೂಲಕ ಸೌಮ್ಯ ಸ್ವಭಾವದ ನಿತೀಶ್ ಅವರನ್ನು ಕೆಣಕುವ ಕೆಲಸ ಮಾಡಿದ್ದಾರೆ. ಇದೆಲ್ಲವನ್ನೂ ಉಸಿರು ಬಿಗಿ ಹಿಡಿದು ತಡೆದಿರುವ ನಿತೀಶ್ ಗೆ ಬಿಜೆಪಿಯ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಮಸೂದೆಗಳು ಮತ್ತಷ್ಟು ಗಂಡಾಂತರ ತಂದಿಟ್ಟಿವೆ.
ಕೋಮುವಾದದ ಹಣೆಪಟ್ಟಿಕಟ್ಟಿಕೊಂಡಿರುವ ಬಿಜೆಪಿಯ ಜೊತೆ ದಶಕಗಳಿಂದ ಮಧುರ ಸಂಬಂಧ ಬೆಳೆಸಿ ಅಧಿಕಾರ ಅನುಭವಿಸಿರುವ ನಿತೀಶ್ ನೇತೃತ್ವದ ಜೆಡಿಯುವನ್ನು ಮುಸ್ಲಿಮರು ಇಡಿಯಾಗಿ ಬೆಂಬಲಿಸಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಹೊಂದಿದ್ದರೂ ಮುಸ್ಲಿಮರು ನಿತೀಶ್ ಕೈಬಿಟ್ಟಿರಲಿಲ್ಲ. ಜಾತ್ಯತೀತ ಹಾಗೂ ಸಮಾಜವಾದಿ ಸಿದ್ಧಾಂತದ ಮೇಲೆ ನಿಂತಿರುವ ಜೆಡಿಯುಗೆ ಇರಿಸು ಮುರುಸಾದ ನಿರ್ಧಾರಗಳು ಮೋದಿ ಸರ್ಕಾರದಿಂದ ಹೊರಹೊಮ್ಮಿವೆ.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಮಾನ್ಯತೆಯ ರದ್ದತಿ, ರಾಷ್ಟ್ರೀಯ ಪೌರತ್ವ ನೀತಿ ಜಾರಿ, ತ್ರಿವಳಿ ತಲಾಖ್ ಅಪರಾಧೀಕರಣದ ಬಗ್ಗೆ ನಿತೀಶ್ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ವಿವಾದಾತ್ಮಕ ವಿಚಾರಗಳು ನಿತೀಶ್ ವೋಟ್ ಬ್ಯಾಂಕ್ ಮೇಲೆ ನೇರ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗಿದೆ. ಬಿಜೆಪಿಯ ದಮನಕಾರಿ ಆಡಳಿತ, ನಾಯಕರ ತಿಕ್ಕಲು ಹೇಳಿಕೆಗಳು, ಸರಣಿ ಹಿನ್ನಡೆಯನ್ನು ಸಹಿಸಿಕೊಂಡಿರುವ ನಿತೀಶ್, ಮತಬ್ಯಾಂಕ್ ಅನ್ನು ಕಳೆದುಕೊಂಡು ಬಿಜೆಪಿ ಜೊತೆ ನಿಲ್ಲುತ್ತಾರೆ ಎಂದು ಭಾವಿಸಲಾಗದು.
ಇದೇ ಕಾರಣಕ್ಕೆ ಮೂರು ದಶಕಗಳ ಬಿಜೆಪಿಯ ಮಿತ್ರಪಕ್ಷವಾದ ಶಿವಸೇನಾ ಕಮಲ ಪಾಳೆಯದ ಸಂಗಡ ತೊರೆದಿದೆ ಎಂಬುದು ಗಮನಾರ್ಹ. ಗಾಳಿಯ ಸುಳಿ, ಒಳಸುಳಿಗಳನ್ನು ಚೆನ್ನಾಗಿ ಬಲ್ಲ ನಿತೀಶ್ ಮಹಾಮೈತ್ರಿ ತೊರೆದು ಬಿಜೆಪಿ ಜೊತೆ ಕೈಜೋಡಿಸುವಾಗ “ರಾಜಕಾರಣದಲ್ಲಿ ಯಾರೂ ಅಸ್ಪ್ರಶ್ಯರಲ್ಲ. ಹಾಗೆಯೇ ಯಾರೂ ಶಾಶ್ವತ ಶತ್ರು ಅಥವಾ ಮಿತ್ರರೂ ಅಲ್ಲ” ಎಂಬ ಸಮಕಾಲೀನ ರಾಜಕಾರಣದ ಜನಜನಿತ ಅಣಿಮುತ್ತನ್ನು ಹೊರಡಿಸಿದ್ದರು. ಇದು ಮತ್ತೊಮ್ಮೆ ನಿತೀಶ್ ಬಾಯಿಂದ ಹೊರಟರೆ ಆಶ್ಚರ್ಯವಿಲ್ಲ.