ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಯು ಹಾಗೂ ಎಲ್ಜೆಪಿ ಪಕ್ಷಗಳ ಮೈತ್ರಿ ಮುಂದುವರೆಯುವುದು ನಿಶ್ಚಿತ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜೊತೆಯಲ್ಲಿಯೇ ಸ್ಪರ್ಧೆ ಮಾಡಿ ಗೆಲ್ಲುವುದು ಕೂಡಾ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಹಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಜೆಪಿ ನಡ್ಡಾ, ಬಿಹಾರ ವಿಧಾನಸಭೆಯ ಮುಕ್ಕಾಲು ಭಾಗ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.
“ನಮ್ಮ ಮೈತ್ರಿ ವಿಧಾನಸಭೆಯ ಮೂರನೇ ನಾಲ್ಕರಷ್ಟು ಸ್ಥಾನಗಳನ್ನು ಗೆಲ್ಲುವತ್ತ ಶ್ರಮಿಸಲಿದೆ. ಈ ಬಾರಿಯ ಚುನಾವಣೆಯನ್ನು ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿಯೇ ಎದುರಿಸಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಬಿಹಾರ್ಗೆ ಘೋಷಿಸಿರುವ ಪ್ಯಾಕೇಜ್ ಅಕ್ಷರಶಃ ಅನುಷ್ಟಾನಗೊಂಡಿದೆ,” ಎಂದು ಅವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿದ್ದು, ಈ ಸೀಟುಗಳ ಹಂಚಿಕೆ ಯಾವ ರೀತಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈಗಿರುವ ವಿಧಾನಸಭೆಯ ಅವಧಿಯು ನವೆಂಬರ್ 29ಕ್ಕೆ ಮುಗಿಯಲಿದ್ದು, ಕೋವಿಡ್ ಸಂಕಷ್ಟದಲ್ಲಿ ಚುನಾವಣೆ ಎದುರಿಸಲಿರುವ ಪ್ರಥಮ ರಾಜ್ಯವಾಗಿ ಬಿಹಾರ್ ಹೊರಹೊಮ್ಮಲಿದೆ. ಆದರೆ, ಈ ವರ್ಷ ಚುನಾವಣೆ ನಡೆಸುವುದು ಸರಿಯಲ್ಲ ಎಂಬ ಅಪಸ್ವರಗಳು ಕೂಡಾ ಕೇಳಿ ಬರುತ್ತಿರುವುದರಿಂದ, ಚುನಾವಣಾ ಆಯೋಗದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.