ಮುಂದಿನ ಅಕ್ಟೋಬರ್ ನವೆಂಬರ್ ನಲ್ಲಿ ನಡೆಯಲಿರುವ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ವಿವಿಧ ರಾಜಕೀಯ ಪಕ್ಷಗಳು ಈಗಲೇ ಸಿದ್ದತೆ ಲೆಕ್ಕಾಚಾರದಲ್ಲಿ ತೊಡಗಿವೆ. ಅದರೆ ಬಿಜೆಪಿ ಮತ್ತು ಜನತಾದಳ (ಯು) ನಡುವಿನ ಸ್ಥಾನ ಹಂಚಿಕೆ ಮತ್ತು ಅಭ್ಯರ್ಥಿಗಳ ಆಯ್ಕೆ ಕುರಿತ ಭಿನ್ನಮತ ಭುಗಿಲೇಳುವ ಎಲ್ಲ ಸಾದ್ಯತೆಗಳಿವೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.
ಇತ್ತೀಚೆಗೆ ಜೆಡಿಯು ಪಕ್ಷವು ಆರು ರಾಷ್ಟ್ರೀಯ ಜನತಾದಳ (ಆರ್ಜೆಡಿ) ಶಾಸಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದರ ಕುರಿತು ಬಿಹಾರದ ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ಲೋಕಸಭಾ ಸಂಸದ ಡಾ.ಸಂಜಯ್ ಜೈಸ್ವಾಲ್ ಅವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಪಕ್ಷವು ಸಾಕಷ್ಟು ಅಭ್ಯರ್ಥಿಗಳನ್ನು ಹೊಂದಿದೆ ಮತ್ತು ಹೊರಗಿನವರ ಅಗತ್ಯವಿಲ್ಲ ಎಂದು ಜೈಸ್ವಾಲ್ ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಸಾಕಷ್ಟು ಉತ್ತಮ ಅಭ್ಯರ್ಥಿಗಳನ್ನು ಹೊಂದಿದ್ದೇವೆ ಆದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೆ ಹೊರಗಿನವರ ಅಗತ್ಯವಿಲ್ಲ. ನಾವು ಯಾವುದೇ ಹೊರಗಿನವರ ಪರವಾಗಿ ಪ್ರಚಾರ ಮಾಡಲು ಹೋಗುವುದಿಲ್ಲ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಸಾಂಪ್ರದಾಯಿಕ ಸ್ಥಾನಗಳಲ್ಲೂ ಸ್ಪರ್ಧೆ ನಡೆಸಲಿದೆ ಸಂಜಯ್ ಜೈಸ್ವಾಲ್ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೆಡಿಯು ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇತ್ತೀಚೆಗೆ ತಮ್ಮ ಪಕ್ಷಕ್ಕೆ ಆರು ಮಂದಿ ಆರ್ಜೆಡಿ ಶಾಸಕರನ್ನು ಸೇರಿಸಿಕೊಂಡಿದ್ದಾರೆ, 2015ರ ಚುನಾವಣೆಯಲ್ಲಿ ಅವರೆಲ್ಲರೂ ಬಿಜೆಪಿ ಮತ್ತು ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ ಅಯ್ಕೆ ಅಗಿದ್ದಾರೆ ಎಂಬುದು ಮಹತ್ವದ್ದಾಗಿದೆ. 2015 ರಲ್ಲಿ ಜೆಡಿಯು ಮತ್ತು ಆರ್ಜೆಡಿ ಒಟ್ಟಾಗಿ ಮಹಾಘಟಬಂದನದ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ, ಎಲ್ಜೆಪಿ, ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್ಎಲ್ಎಸ್ಪಿ) ಮತ್ತು ಜಿತಾನ್ ರಾಮ್ ಮಾಂಜಿ ನೇತೃತ್ವದ ಹಿಂದೂಸ್ತಾನಿ ಅವಂ ಮೋರ್ಚಾ (ಎಚ್ಎಎಂ) ಎನ್ಡಿಎ ಭಾಗವಾಗಿ ಒಟ್ಟಿಗೆ ಸ್ಪರ್ಧಿಸಿದ್ದವು. ಚುನಾವಣೆಯ ನಂತರ ಸಾಕಷ್ಟು ಆರ್ಜೆಡಿ ಶಾಸಕರು ಜೆಡಿಯು ಸೇರಿದರು. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗಣನೀಯ ಮತಗಳನ್ನು ಗಳಿಸಿ ಎರಡನೇ ಸ್ಥಾನವನ್ನು ಪಡೆದಿತ್ತು. ಆರ್ಜೆಡಿಯ ಇನ್ನೂ ಕೆಲವು ಶಾಸಕರನ್ನು ಮತದಾನದ ಮೊದಲು ಜೆಡಿಯುಗೆ ಸೇರಿಸಲಾಗುವುದು ಎಂದು ಹೇಳಿಕೊಂಡಿದೆ. ಇದು ಜೆಡಿಯು, ಬಿಜೆಪಿ ಮತ್ತು ಎಲ್ಜೆಪಿ ನಡುವೆ ಸ್ಥಾನ ಹಂಚಿಕೆಯ ಬಿಕ್ಕಟ್ಟನ್ನು ಸೃಷ್ಟಿಸಲು ಕಾರಣವಾಗಲಿದೆ.
ಬಿಹಾರದಲ್ಲಿ ಬಿಜೆಪಿ ಪಕ್ಷದ ಸದಸ್ಯರಾಗಿಯೇ 76 ಲಕ್ಷ ಕಾರ್ಮಿಕರಿದ್ದಾರೆ ಮತ್ತು ನಾವು ಬಿಜೆಪಿ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಗಿನವರನ್ನು ಟಿಕೇಟ್ ನೀಡುವುದಿಲ್ಲ ನಮ್ಮ ಪಕ್ಷವು ರಾಜ್ಯದಲ್ಲಿ ಎಷ್ಟು ಪ್ರಬಲವಾಗಿದೆ ಎಂದರೆ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹೊರಗಿನವರ ಅಗತ್ಯವೇ ಇಲ್ಲ ಎಂದು ರಾಜ್ಯ ಬಿಜೆಪಿ ಅದ್ಯಕ್ಷ ಸಂಜಯ್ ಜೈಸ್ವಾಲ್ ಹೇಳುತ್ತಾರೆ. 2015 ರಲ್ಲಿ ಬಿಜೆಪಿ 157 ಸ್ಥಾನಗಳು, ಎಲ್ಜೆಪಿ 42 ಸ್ಥಾನಗಳು, ಆರ್ಎಲ್ಎಸ್ಪಿ 23 ಸ್ಥಾನಗಳು ಮತ್ತು ಎಚ್ಎಎಂಗೆ 21 ಸ್ಥಾನಳಲ್ಲಿ ಸ್ಪರ್ಧಿಸಿತ್ತು. ಎನ್ಡಿಎ ಆಗ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಬಿಜೆಪಿ 53 ಸ್ಥಾನಗಳಲ್ಲಿ, ಎಲ್ಜೆಪಿ ಮತ್ತು ಆರ್ಎಲ್ಎಸ್ಪಿ ತಲಾ ಎರಡು ಸ್ಥಾನಗಳಲ್ಲಿ ಮತ್ತು ಎಚ್ಎಎಂ ಕೇವಲ ಒಂದು ಸ್ಥಾನದಲ್ಲಿ ಜಯ ಗಳಿಸಿದ್ದವು. ಬಿಹಾರದಲ್ಲಿ ಒಟ್ಟು ಮತದಾರರ ಸಂಕ್ಯೆ 6,62,43,193 ಆಗಿದ್ದು ಚಲಾವಣೆಯಾದ 3,76,96,978 ಮತಗಳಲ್ಲಿ ಬಿಜೆಪಿ 93,08,015 ಮತಗಳನ್ನು ಗಳಿಸಿತ್ತು. ಎಚ್ಎಎಂ ಅಧ್ಯಕ್ಷ ಜೀತಾನ್ ರಾಮ್ ಮಾಂಜಿ ಅವರು ಗಯಾ ಮತ್ತು ಇಮಾಮ್ಗಂಜ್ ಎಂಬ ಎರಡು ಸ್ಥಾನಗಳಿಂದ ಸ್ಪರ್ಧಿಸಿದ್ದರು ಆದರೆ ಗಯಾ ಸ್ಥಾನದಲ್ಲಿ ಪರಾಭವಗೊಂಡರು.
ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿರುವ ಆರು ವಿಧಾನಸಭಾ ಸ್ಥಾನಗಳಲ್ಲಿ, ಪಾರ್ಸಾ ಸ್ಥಾನವನ್ನು ಎಲ್ಜೆಪಿ ಈಗಲೇ ತನಗೆ ಬೇಕೆಂದು ಹಠ ಹಿಡಿದಿದೆ. ಹಿಂದಿನ ಚುನಾವಣೆಯಲ್ಲಿ ಎಲ್ಜೆಪಿ ಅಭ್ಯರ್ಥಿ ಚೋಟೆಲಾಲ್ ರಾಯ್ ಅವರನ್ನು ಆರ್ಜೆಡಿಯ ಪಕ್ಷದ ಚಂದ್ರಿಕಾ ರಾಯ್ ಅವರು ಸೋಲಿಸಿದ್ದರು, ರಾಯ್ ಅವರು ಆರ್ಜೆಡಿ ಮುಖ್ಯಸ್ಥ ಲಾಲು ಅವರ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್.ಅವರ ಮಾವ ಅಗಿದ್ದಾರೆ. ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರ ಕಠಿಣ ನಿಲುವು ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧದ ಇತ್ತೀಚಿನ ಆಕ್ರೋಶಗಳನ್ನು ಗಮನಿಸಿದರೆ, ಎಲ್ಜೆಪಿ ಪಾರ್ಸಾ ಸ್ಥಾನದ ಮೇಲಿನ ತನ್ನ ಹಕ್ಕನ್ನು ತ್ಯಜಿಸುವ ಸಾಧ್ಯತೆಯಿಲ್ಲ. ಸುಮಾರು 100 ಸ್ಥಾನಗಳಿಗೆ ಸ್ಪರ್ಧಿಸಲು ಸಿದ್ಧ ಎಂದು ಎಲ್ಜೆಪಿ ಈಗಾಗಲೇ ಘೋಷಿಸಿದೆ. ಅದೇ ರೀತಿ ಪಾಲಿಗಂಜ್ನಲ್ಲಿ ಆರ್ಜೆಡಿಯ ಜಯವರ್ಧನ್ ಯಾದವ್ ಅವರು ಬಿಜೆಪಿಯ ರಾಮ್ ಜನಮ್ ಶರ್ಮಾ ಅವರನ್ನು ಸೋಲಿಸಿದ್ದರು.
ಆದ್ದರಿಂದ, ಜೆಡಿಯು ಮತ್ತು ಬಿಜೆಪಿ ನಡುವೆ ಘರ್ಷಣೆ ಸನ್ನಿಹಿತವಾಗಿದೆ. ಜಯವರ್ಧನ್ ಅವರು ಕೇಂದ್ರದ ಮಾಜಿ ಸಚಿವರು ಮತ್ತು ರಾಜ್ಯದ ಪ್ರಮುಖ ಯಾದವ್ ಸಮುದಾಯದ ಮುಖಂಡ ದಿವಂಗತ ರಾಮ್ ಲಖನ್ ಸಿಂಗ್ ಯಾದವ್ ಅವರ ಮೊಮ್ಮಗ ಆಗಿದ್ದಾರೆ. ಕಿಯೋಟಿ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಎಂ ಎ ಎ ಫಾತಿಮಿ ಅವರ ಪುತ್ರ ಫರಾಜ್ ಫಾತಿಮಿ ಬಿಜೆಪಿಯ ಅಶೋಕ್ ಕುಮಾರ್ ಯಾದವ್ ಅವರನ್ನು ಸೋಲಿಸಿದ್ದರು. ನಂತರ ಅಶೋಕ್ ಯಾದವ್ ಲೋಕಸಭೆಗೆ ಆಯ್ಕೆಯಾಗಿದ್ದರೂ, ಬಿಜೆಪಿ ತನ್ನ ಸಾಂಪ್ರದಾಯಿಕ ಭದ್ರಕೋಟೆ ಆಗಿರುವ ಈ ಸ್ಥಾನದ ಮೇಲೆ ಹಕ್ಕು ಸಾಧಿಸುವುದು ಖಚಿತವೇ ಆಗಿದೆ. ಗೈಘಾಟ್ನಲ್ಲಿ ಆರ್ಜೆಡಿಯ ಮಹೇಶ್ವರ ಯಾದವ್ ಬಿಜೆಪಿಯ ವೀಣಾ ದೇವಿಯನ್ನು ಸೋಲಿಸಿದ್ದರು. ವೀಣಾ ಈಗ ಎಲ್ಜೆಪಿಯಿಂದ ಸಂಸದರಾಗಿದ್ದಾರೆ. ಪಾಟೆಪುರದಲ್ಲಿ ಆರ್ಜೆಡಿಯ ಪ್ರೇಮಾ ಚೌಧರಿ ಬಿಜೆಪಿಯ ಮಹೇಂದ್ರ ಬೈಥಾ ಅವರನ್ನು ಸೋಲಿಸಿದ್ದರೆ, ಸಸಾರಂನಲ್ಲಿ ಡಾ.ಅಶೋಕ್ ಕುಮಾರ್ ಬಿಜೆಪಿಯ ಜವಾಹರ್ ಪ್ರಸಾದ್ ಅವರನ್ನು ಸೋಲಿಸಿದ್ದರು. ಆದ್ದರಿಂದ, ಈ ಎರಡು ಸ್ಥಾನಗಳಲ್ಲಿ ಮಿತ್ರ ಪಕ್ಷಗಳು ಸ್ಪರ್ದಿಸಲು ಸಂಘರ್ಷ ಖಚಿತವೇ ಆಗಿದೆ.
ಜೆಡಿಯು ಜೊತೆ ಇದೇ ರೀತಿಯ ಸಂಘರ್ಷ ಸಮಷ್ಟಿಪುರ ಮತ್ತು ರಕ್ಸೌಲ್ ವಿಧಾನಸಭಾ ಸ್ಥಾನಗಳಲ್ಲಿ ಸಂಭವಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಹಿಂದಿನ ಚುನಾವಣೆಯಲ್ಲಿ ರಾಜ್ಯದ 102 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಎರಡನೇ ಸ್ಥಾನ ಪಡೆದಿದ್ದರೆ, ಎಲ್ಜೆಪಿ 36 ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಹಿಂದಿನ ಚುನಾವಣೆಗಳಲ್ಲಿ ಈ ಸ್ಥಾನಗಳಿಂದ ಬಿಜೆಪಿ ಜಯಗಳಿಸಿತ್ತು. ಹೀಗಾಗಿ, ಬಿಜೆಪಿ 2015 ರಲ್ಲಿ ಎರಡನೇ ಸ್ಥಾನ ಗಳಿಸಿದ ಸ್ಥಾನಗಳನ್ನು ಮಿತ್ರ ಪಕ್ಷಕ್ಕೆ ಬಿಟ್ಟು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಈಗಾಗಲೇ ಹೇಳಿದ್ದಾರೆ. 2010 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ 141 ಮತ್ತು 102 ಸ್ಥಾನಗಳಲ್ಲಿ ಸ್ಪರ್ಧಿಸಿ ಕ್ರಮವಾಗಿ 115 ಮತ್ತು 91 ಸ್ಥಾನಗಳನ್ನು ಗೆದ್ದಿದ್ದವು. ಆಗ ಎಲ್ಜೆಪಿ ಎನ್ಡಿಎಯ ಭಾಗವಾಗಿರಲಿಲ್ಲ. ನವೆಂಬರ್ 2005ರ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ 139 ಮತ್ತು 102 ಸ್ಥಾನಗಳಿಂದ ಸ್ಪರ್ಧಿಸಿ ಕ್ರಮವಾಗಿ 88 ಮತ್ತು 55 ಸ್ಥಾನಗಳಿಂದ ಗೆದ್ದಿದ್ದವು. ಈಗ ತಾನು ಸ್ಪರ್ದಿಸಿದ್ದ 102 ಸ್ಥಾನಗಳನ್ನು ಬಿಜೆಪಿ ತನ್ನದೇ ಎಂದು ಪರಿಗಣಿಸುತ್ತಿದೆ ಮತ್ತು ಅದಕ್ಕೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆ ಮಾಡಲು ಯೋಜಿಸುತ್ತಿದೆ. ಆದ್ದರಿಂದ, ರಾಜ್ಯ ಬಿಜೆಪಿ ಅಧ್ಯಕ್ಷರ ಕಠಿಣ ನಿಲುವನ್ನು ಗಮನಿಸಿದರೆ ಸುಮಾರು ಒಂದು ಡಜನ್ ಹಾಲಿ ಶಾಸಕರನ್ನು ಜೆಡಿಯುಗೆ ಸೇರಿಸಿಕೊಂಡು ಅವರಿಗೆ ಸ್ಪರ್ಧಿಸಲು ಟಿಕೇಟ್ ನೀಡುವುದು ಅಸಾಧ್ಯವೇ ಆಗಿದೆ. ಈ ಬಾರಿ ನಾವು 2015 ರ ಚುನಾವಣೆಯಲ್ಲಿ ಸೋತ ಅಂತಹ ಅನೇಕ ಸ್ಥಾನಗಳಿಂದ ಗೆಲ್ಲುತ್ತೇವೆ ಎಂದು ರಾಜ್ಯ ಬಿಜೆಪಿ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ಅವಧಿಗೆ ಕಣ್ಣಿಟ್ಟಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್ಡಿಎಯಲ್ಲಿಯೇ ಇದ್ದರೂ ಸಹ ಏಕೈಕ ಅತಿದೊಡ್ಡ ಪಕ್ಷ ಎಂಬ ಹೆಗ್ಗಳಿಕೆಯನ್ನು ಮತ್ತೆ ಉಳಿಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ. ಬಿಜೆಪಿಯೂ ಸಹ ಪ್ರಧಾನಿ ಮೋದಿ ಅವರ ನಾಮಬಲದಿಂದ ಅತೀ ದೊಡ್ಡ ಪಕ್ಷವಾಗುವತ್ತ ಗಮನ ಹರಿಸಿದೆ. ಚುನಾವಣೆಗಳಲ್ಲಿ, ಗೆಲ್ಲುವ ಸಾಮರ್ಥ್ಯವು ಮುಖ್ಯ ವಾಗಿದೆ ಮತ್ತು ಅದು ಸ್ಥಾನಗಳು ಮತ್ತು ಅಭ್ಯರ್ಥಿಗಳನ್ನು ನಿರ್ಧರಿಸುತ್ತದೆ. ಅನೇಕ ಆಕಾಂಕ್ಷಿಗಳು ಮೈತ್ರಿಕೂಟಕ್ಕೆ ಸೇರಲು ಬಯಸುತಿದ್ದಾರೆ. ಚುನಾವಣೆಯ ಮೊದಲು ಉಭಯ ಪಕ್ಷಗಳ ಹಿರಿಯ ನಾಯಕರು ಒಟ್ಟಿಗೆ ಕುಳಿತುಕೊಂಡು ಸೀಟು ಹಂಚಿಕೆ ವಿಷಯಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳುತ್ತೇವೆ ಎಂದು ಪಕ್ಷದ ವಕ್ತಾರ ಪ್ರೇಮ್ ರಂಜನ್ ಪಟೇಲ್ ಹೇಳಿದ್ದಾರೆ.