ಇಡೀ ದೇಶದಲ್ಲಿ ಎಲ್ಲಿ ನೋಡಿದರೂ ಭೂಮಿ ಲಪಟಾಯಿಸಲು ಹೊಂಚು ಹಾಕಿ ಕುಳಿತಿರುವ ಖದೀಮರಿಗೆ ಈ ದೇಶದಲ್ಲಿ ಏನೂ ಕೊರತೆಯಿಲ್ಲ. ಅದರಲ್ಲೂ ಒಂದೇ ಭೂಮಿಯನ್ನು ಹಲವು ಜನರಿಗೆ ಮಾರಿದ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಇಂತಹ ಖದೀಮರಿಗೆ ಸರ್ಕಾರದ ನಿಯಮಗಳು ಪೂರಕವಾದರೆ ಪರಿಸ್ಥಿತಿ ಹೇಗಿರಬೇಡ? ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ರಾಜ್ಯ ರಾಜಧಾನಿಯಲ್ಲಿ ಜಾರಿಗೆ ತಂದಿರುವ ʼAnywhere Registration’ ಎಂಬ ಯೋಜನೆ ಭೂಗಳ್ಳರಿಗೆ ವರವಾಗಿ ಪರಿಣಮಿಸಿದೆ.
ಏನಿದು ʼAnywhere Registration’ ಯೋಜನೆ?
ನೀವು ಸೈಟು ಅಥವಾ ಇತರ ಭೂಮಿಯನ್ನು ಬೆಂಗಳೂರಿನಲ್ಲಿ ಖರೀದಿಸಿದರೆ ಬೆಂಗಳೂರಿನ ಯಾವುದೇ ಸಬ್-ರಿಜಿಸ್ಟ್ರಾರ್ ಕಚೇರಿಯ ವ್ಯಾಪ್ತಿಯಲ್ಲಿ ಅದನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಬಹುದು. ಈ ಹಿಂದೆ ಇದ್ದ ನಿಯಮದ ಪ್ರಕಾರ ಯಾವ ಸಬ್ ರಿಜಿಸ್ಟ್ರಾರ್ ಕಚೇರಿಯ ವ್ಯಾಪ್ತಿಯಲ್ಲಿ ಭೂಮಿಯನ್ನು ಖರೀದಿಸುತ್ತೀರೋ ಅದೇ ವ್ಯಾಪ್ತಿಯಲ್ಲಿ ನೋದಣಿಯೂ ಮಾಡಿಸಬೇಕಿತ್ತು. ಹೀಗಾಗಿ ಒಂದೇ ಸರ್ವೇ ನಂಬರ್ ಹೊಂದಿರುವ ಭೂಮಿಯನ್ನು ಹಲವು ಬಾರಿ ನೋಂದಣಿ ಮಾಡುವುದು ತಪ್ಪುತ್ತಿತ್ತು.
ಬಹಳಷ್ಟು ವಿರೋಧ ವ್ಯಕ್ತವಾದ ನಂತರವೂ ಕರ್ನಾಟಕದಲ್ಲಿ ʼAnywhere Registration’ ಯೋಜನೆಯನ್ನು ಅನುಷ್ಟಾನಗೊಳಿಸಲು ಸರ್ಕಾರ ಅನುಮೋದನೆ ನೀಡಿತು. ಸಂಪೂರ್ಣ ಕರ್ನಾಟಕದಲ್ಲಿ ಈ ಯೋಜನೆ ಜಾರಿಗೆ ತರುವ ಆಲೋಚನೆ ಇದ್ದರೂ, ವಿರೋಧ ಹೆಚ್ಚಾಗುವ ಸಂಭವವಿದ್ದರಿಂದ ಯೋಜನೆಯನ್ನು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಲಾಯಿತು. ಈ ಯೋಜನೆಯು 20-7-2011ರಂದು ಅಧಿಕೃತವಾಗಿ ಜಾರಿಯಾಗುವಂತೆ 19-7-2011ರಲ್ಲಿ ಸರ್ಕಾರವು ರಾಜಪತ್ರ ಹೊರಡಿಸಿತು.
ಯೋಜನೆಯಲ್ಲಿನ ಲೋಪದೋಷಗಳೇನು?
ʼAnywhere Registration’ ಯೋಜನೆ ಜಾರಿಯಾದಾಗಿಂದ ಸಾಕಷ್ಟು ಜನರು ತೊಂದರೆಗೆ ಒಳಗಾಗಿದ್ದಾರೆ. ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಈ ಯೋಜನೆಯ ರೂಪು ರೇಷೆಗಳನ್ನು ತಯಾರಿಸಲಾಗಿದೆ ಎಂಬ ಆರೋಪವೂ ಇದೆ. ಈ ಯೋಜನೆಯನ್ನು ಸರ್ಕಾರವು ಜನ ಸಾಮಾನ್ಯರ ಒಳಿತಿಗಾಗಿ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿತ್ತು. ಜನಸಾಮಾನ್ಯರಿಗೆ ಉಪಯೋಗವಾಗಿದೆಯೋ ಇಲ್ಲವೋ ಆದರೆ, ರಿಯಲ್ ಎಸ್ಟೇಟ್ ಬ್ರೋಕರ್‌ಗಳಿಗೆ, ಬಿಲ್ಡರ್‌ಗಳಿಗೆ, ಮಧ್ಯವರ್ತಿಗಳಿಗಂತೂ ಸಾಕಷ್ಟು ಉಪಯೋಗವಾಗಿದೆ.
ಒಂದು ಕಡೆ ಮಾರಾಟ ಮಾಡಿ ನೋಂದಣಿ ಮಾಡಿದ ಭೂಮಿಯನ್ನು ಅದೇ ದಿನ ಇನ್ನೊಂದು ಕಡೆಯಲ್ಲಿ ಇನ್ನೊಬ್ಬರಿಗೆ ನೋಂದಣಿ ಮಾಡಿ ಮಾರಾಟ ಮಾಡಿರುವ ಘಟನೆಗಳು ಈ ಯೋಜನೆ ಅಸ್ಥಿತ್ವಕ್ಕೆ ಬಂದ ನಂತರ ನಡೆಯಲು ಆರಂಭವಾಗಿದೆ ಎಂಬ ದೂರುಗಳು ಸಾಕಷ್ಟು ಕೇಳಿ ಬರುತ್ತಿವೆ. ಹೀಗಾಗಿ ಈ ಯೋಜನೆಯ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿದವರೂ ಇದ್ದಾರೆ.
ಯೋಜನೆಯ ವಿರುದ್ದ ಕಾನೂನು ಸಮರ
ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ ಎಂಬ ಸಂಸ್ಥೆಯು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದೆ. 2016ರಲ್ಲಿ ಅರ್ಜಿ ದಾಖಲಿಸಲಾಗಿದ್ದು ಅರ್ಜಿಯಲ್ಲಿ ದಾಖಲೆಗಳ ಸಮೇತ ʼAnywhere Registration’ ಯೋಜನೆಯು ಯಾವ ರೀತಿ 1908ರ ನೋಂದಣಿ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂಬುದನ್ನು ಸವಿವರವಾಗಿ ವಿವರಿಸಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಕಮಿಟಿಯ ಶಿವಕುಮಾರ್ ಎಸ್ ಅವರು “ಈ ಯೋಜನೆಯನ್ನು ಜಾರಿಗೆ ತರುವ ಹಿಂದೆ ಹಲವು ಜನರ ಕೈವಾಡವಿದೆ. ತಮ್ಮ ಸ್ವಹಿತಾಸಕ್ತಿಗಾಗಿ ಈ ಯೋಜನೆಯನ್ನು ಕೈಬಿಡಲು ಮೀನಾಮೇಷ ಎಣಿಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.
ಈ ಅರ್ಜಿಯನ್ನು ವಿರೋಧಿಸಿ ಬಿಲ್ಡರ್ಸ್‌ಗಳ ತಂಡವೊಂದು ಕೋರ್ಟ್ ಮೊರೆ ಹೋಗಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿರೋಧಿಸಿ ಸರ್ಕಾರದ ನಿರ್ಧಾರವು ಸರಿಯಾಗಿದೆ ಎಂದು ಹೇಳಿತ್ತು. ಈ ಅಂಶವನ್ನು ಗಮನಿಸಿದಾಗ ಯೋಜನೆಯನ್ನು ಜಾರಿಗೆ ತಂದಿರುವುದರ ಹಿಂದೆ ಬಿಲ್ಡರ್ಸ್‌ಗಳ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್‌ಗಳ ಲಾಬಿ ಇದೆ ಎಂಬ ಗುಮಾನಿ ಹುಟ್ಟುತ್ತದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿವರವಾಗಿ ಪರಿಶೀಲಿಸಿದ ನ್ಯಾಯಾಲಯವು, ಅರ್ಜಿದಾರರಿಗೆ ಸಂಬಂಧಪಟ್ಟ ಇಲಾಖೆಯಾದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಗಮನಕ್ಕೆ ಈ ವಿಷಯವನ್ನು ತರುವಂತೆ ಕೇಳಿಕೊಂಡಿತು. ಒಂದು ವೇಳೆ, ಅರ್ಜಿದಾರರು ಇಲಾಖೆಯ ಗಮನಕ್ಕೆ ತಂದ ನಂತರ ಮೂರು ತಿಂಗಳುಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಆದೇಶವನ್ನು ನೀಡಿತ್ತು.
ದಪ್ಪಕಿವಿಯ ಇಲಾಖೆಗಳು
ಹೈಕೋರ್ಟ್‌ನ ಆದೇಶದಂತೆ ವರದಿಯನ್ನು ಸಲ್ಲಿಸಿದ್ದ ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿಯ ಸದಸ್ಯರು, ಯಾವ ಕ್ರಮ ಜರುಗಿಸಲಾಗುವುದು ಎಂದು ಎದುರು ನೋಡುತ್ತಿದ್ದರು. ಕಂದಾಯ ಸಚಿವ ಆರ್ ಅಶೋಕ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಂದಾಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಇಲಾಖೆಗೆ ಸವಿವರವಾಗಿ ದಿನಾಂಕ 06/01/2020ರಲ್ಲಿ ಮನವಿಯನ್ನು ಮಾಡಕೊಂಡಿದ್ದರು.
ಮನವಿ ಮಾಡಿ ಮೂರು ತಿಂಗಳಾದರೂ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಮಾರ್ಚ್ 18ರಂದು ಮರು ಮನವಿಯನ್ನೂ ಸಲ್ಲಿಸಿದ್ದರು. ಆದರೂ, ಮೂರೂ ಇಲಾಖೆಗಳ ಅಧಿಕಾರಿಗಳು ಈ ಸಂಬಂಧ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿಲ್ಲ.
ಕರೋನಾ ನೆಪ
ನೋಂದಣಿ ಉಪ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಆಗಿರುವ ಕೆ.ಪಿ.ಮೋಹನ್ ರಾಜ್ ಅವರನ್ನು ʼಪ್ರತಿಧ್ವನಿʼಯು ಸಂಪರ್ಕಿಸಿದಾಗ ಅವರು ನೀಡಿದ ಉತ್ತರ ಹೀಗಿತ್ತು “ನಾನು ಈ ಹುದ್ದೆಯನ್ನು ಸ್ವೀಕರಿಸಿ ಕೇವಲ ಒಂದು ತಿಂಗಳಷ್ಟೇ ಆಗಿದೆ. ಹಾಗಾಗಿ ಕೋರ್ಟ್‌ನ ಆದೇಶದ ಕುರಿತಾಗಿ ಅಥವಾ ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ ನೀಡಿರುವ ಮನವಿಯ ಕುರಿತಾಗಿ ಯಾವುದೇ ಮಾಹಿತಿ ಇಲ್ಲ. ಇನ್ನು ಕರೋನಾ ಡ್ಯೂಟಿಯಲ್ಲಿದ್ದರಿಂದ ಆ ಕುರಿತು ಗಮನವೂ ಹರಿಸಲಾಗಲಿಲ್ಲ. ಆದಷ್ಟು ಬೇಗ ಈ ವಿಷಯದ ಕುರಿತು ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.”
ಹಾಗಾದರೆ, ಈ ಹಿಂದೆ ಇವರ ಸ್ಥಾನದಲ್ಲಿ ಇದ್ದಂತಹ ತ್ರಿಲೋಕಚಂದ್ರ ಅವರು ಯಾಕೆ ಈ ವಿಚಾರದ ಕುರಿತು ಗಮನ ಹರಿಸಲಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇವರಷ್ಟೇ ಅಲ್ಲದೇ, ಉಳಿದ ಇಲಾಖೆಗಳ ಅಧಿಕಾರಿಗಳು ಕೂಡಾ ಇದರ ಕುರಿತು ಗಮನ ಹರಿಸದೇ ಇದ್ದದು ರಿಯಲ್ ಎಸ್ಟೇಟ್ ಲಾಬಿಯ ಕುರಿತಾದ ಗುಮಾನಿಗೆ ಇನ್ನಷ್ಟು ಬಲ ತುಂಬುತ್ತದೆ.
ಇನ್ನು ಕರೋನಾ ಸಂಕಷ್ಟ ನಿಜಕ್ಕೂ ಅಚಾನಕ್ ಆಗಿ ಬಂದಿರುವುದರಿಂದ ಅಧಿಕಾರಿಗಳ ಮೇಲೆ ಹೆಚ್ಚಿನ ಹೊರೆ ಬಂದಿರುವುದು ನಿಜ. ಆದರೆ, ಓರ್ವ ಅಧಿಕಾರಿ ಇನ್ನೊಂದು ಕಡೆ ವರ್ಗಾವಣೆಯಾಗಿ ಹೋದಾಗ ಅಲ್ಲಿ ತಾನು ಮಾಡಬೇಕಾದ ಮೂಲ ಕೆಲಸಗಳ ಕುರಿತಾಗಿ ಅವರಿಗೆ ಮಾಹಿತಿಯನ್ನು ನೀಡಿರುವುದಿಲ್ಲವೇ? ಬಾಕಿಯುಳಿದಿರುವ ಅರ್ಜಿಗಳ ಅಥವಾ ಕೆಲಸಗಳ ಕುರಿತು ಮೊದಲೇ ಅಧಿಕಾರಿಗಳು ತಿಳಿದುಕೊಳ್ಳಬೇಕಾದುದು ಅವರ ಧರ್ಮ. ಅದಲ್ಲದೇ, ಮೊದಲನೇ ಅರ್ಜಿ ನೀಡಿ ಆರು ತಿಂಗಳು ಕಳೆದರೂ, ಎರಡನೇ ಅರ್ಜಿ ನೀಡಿ ಮೂರು ತಿಂಗಳು ಕಳೆದರೂ ಯಾವುದೇ ಮಾಹಿತಿ ತನಗಿಲ್ಲ ಎಂದು ಓರ್ವ ಅಧಿಕಾರಿ ಹೇಳುವುದು ಎಷ್ಟರ ಮಟ್ಟಿಗೆ ಸಮಂಜಸ?
ಒಟ್ಟಿನಲ್ಲಿ, ಸರ್ಕಾರಿ ಅಧಿಕಾರಿಗಳು ಹಾಗೂ ಸಂಬಂದಪಟ್ಟ ಇಲಾಖೆಯ ಸಚಿವರು ʼAnywhere Registration’ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲು ಒಪ್ಪುವ ಲಕ್ಷಣಗಳು ಕಾಣಿಸುತ್ತಿಲ್ಲ. ಸತತವಾಗಿ ಅರ್ಜಿ ನೀಡಿದ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ ಮತ್ತೆ ಕೋರ್ಟ್ ಮೆಟ್ಟಿಲೇರಲಿದೆಯೆಂದು ಅಧ್ಯಕ್ಷರಾದ ಶಿವಕುಮಾರ್ ಎಸ್ ಹೇಳಿದ್ದಾರೆ. ಹೀಗಾಗಿ, ನ್ಯಾಯಾಲಯದಲ್ಲಿ ಮುಂದಿನ ಸಮರ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.