ಮುಂದಿನ ಆರು ವಾರಗಳಲ್ಲಿ ಬಿಬಿಎಂಪಿ ಚುನಾವಣೆಯನ್ನು ಘೋಷಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಬೋಪಣ್ಣ ಮತ್ತು ವಿ. ರಾಮ ಸುಬ್ರಮಣಿಯನ್ ನೇತೃತ್ವದ ನ್ಯಾಯಪೀಠ ಹೀಗೆ ಆದೇಶಿಸಿ ಅರ್ಜಿ ವಿಚಾರಣೆಯನ್ನು 2021ರ ಫೆಬ್ರವರಿ 5ಕ್ಕೆ ಮುಂದೂಡಿದೆ. ಈಗ ಸುಪ್ರೀಂಕೋರ್ಟ್ ಆದೇಶದಿಂದ ಬಿಬಿಎಂಪಿ ಚುನಾವಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದರ ನಡುವೆಯೇ ಶತಾಯಗತಾಯ ಈ ಬಾರಿ ಬಿಬಿಎಂಪಿ ಚುನಾವಣೆ ಗೆಲ್ಲಲು ಬಿಜೆಪಿ ಸದ್ದಿಲ್ಲದೆ ಕಾರ್ಯತಂತ್ರ ಆರಂಭಿಸಿದೆ.
ಹೌದು, ಬಿಬಿಎಂಪಿ ಚುನಾವಣೆ ಗೆಲ್ಲುವ ಸಂಬಂಧ ಚರ್ಚೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾರ ಆಪ್ತ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ದಿಢೀರ್ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಬಿಬಿಎಂಪಿ ಚುನಾವಣೆ ಸಂಬಂಧ ಆರ್‍ಎಸ್‍ಎಸ್ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಗುರುವಾರ ರಾತ್ರಿ ಸಭೆ ನಡೆಸಿ ಭೂಪೇಂದ್ರ ಯಾದವ್ ಸಂಘ ಪರಿವಾರದ ಹಿರಿಯ ನಾಯಕರಿಂದ ಬಿಬಿಎಂಪಿ ಚುನಾವಣೆ ಕುರಿತು ಸಲಹೆ ಸೂಚನೆಗಳನ್ನು ಪಡೆದಿದ್ದಾರೆ. ಅಮಿತ್ ಶಾ ಆದೇಶದ ಮೇರೆಗೆ ಭೂಪೇಂದ್ರ ಯಾದವ್ ಬಿಬಿಎಂಪಿ ಚುನಾವಣೆ ಉಸ್ತುವಾರಿಯಾಗುವ ಸಾಧ್ಯತೆ ಇದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭೂಪೇಂದ್ರ ಯಾದವ್ ಈ ಹಿಂದೆ ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯಗಳ ಚುನಾವಣಾ ಉಸ್ತುವಾರಿಯಾಗಿದ್ದರು. ಬಿಜೆಪಿಯಲ್ಲಿ ಅಮಿತ್ ಷಾ ನಂತರ ಭೂಪೇಂದ್ರ ಯಾದವ್ ಅತ್ಯಂತ ಪ್ರಭಾವಶಾಲಿ ರಾಜಕಾರಣಿ. ಇವರು ಯಾವ ರಾಜ್ಯದ ಚುನಾವಣಾ ಉಸ್ತುವಾರಿಯಾಗಿರುತ್ತಾರೋ ಅಲ್ಲಿ ಬಿಜೆಪಿಗೆ ಗೆಲುವು ಕಟ್ಟಿಟ್ಟ ಬುತ್ತಿ. ಹೀಗಾಗಿ, ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪ್ರಣಾಳಿಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು ಜನರಿಗೆ ಹೇಗೆ ತಲುಪಿಸಬೇಕು ಎನ್ನುವುದರ ಬಗ್ಗೆ ತಂತ್ರ ಹೆಣೆದಿದ್ದಾರೆ.
ಇನ್ನೊಂದೆಡೆ ಸಿಎಂ ಯಡಿಯೂರಪ್ಪರನ್ನು ಆದಷ್ಟು ಬೇಗ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟಿಸುವ ಮತ್ತು ಬಿಎಸ್‌ವೈಗೆ ಪರ್ಯಾಯ ನಾಯಕರ ಹುಡುಕಾಟ ನಡೆಸುವ ಜವಾಬ್ದಾರಿ ಯಾದವ್ ಅವರದ್ದು ಎನ್ನಲಾಗುತ್ತಿದೆ.
ನಾಯಕತ್ವ ಬದಲಾವಣೆಗೆ ಎದುರಾಗುವ ಸಮಸ್ಯೆಗಳು, ಮುಂದೆ ಸಿಎಂ ಯಾರನ್ನು ಆಯ್ಕೆ ಮಾಡಿದರೆ ಸೂಕ್ತ, ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಆರ್‌ಎಸ್‌ಎಸ್ ನಾಯಕರೊಂದಿಗೆ ಭೂಪೇಂದ್ರ ಯಾದವ್ ಮಾತುಕತೆ ನಡೆಸಿದ್ಧಾರೆ. ಹಾಗೆಯೇ ಸಚಿವ ಸಂಪುಟ ವಿಸ್ತರಣೆ ಗೊಂದಲ, ಬಿಜೆಪಿ ಹಿರಿಯ ನಾಯಕರಲ್ಲಿನ ಅಸಮಾಧಾನ, ನಾಯಕತ್ವ ಬದಲಾವಣೆ ಕುರಿತು ಆರ್‌ಎಸ್‌ಎಸ್ ನಾಯಕರು ನೀಡಿದ ಅಭಿಪ್ರಾಯ ಆಧಾರದ ಮೇರೆಗೆ ಭೂಪೇಂದ್ರ ಯಾದವ್ ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ ಎನ್ನಲಾಗಿದೆ.
ಪ್ರತೀ ಸಲ ಯಾವುದೇ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬಂದರೂ ಬಿಜೆಪಿ ಕಚೇರಿಯಿಂದ ಮಾಹಿತಿ ಸಿಗುತ್ತಿತ್ತು. ಆದರೀಗ, ಯಾರಿಗೂ ಮಾಹಿತಿ ನೀಡದೇ ರಾಜ್ಯಕ್ಕೆ ಭೇಟಿ ನೀಡಿ ಆರ್‌ಎಸ್‌ಎಸ್ ನಾಯಕರ ಜತೆ ಭೂಪೇಂದ್ರ ಯಾದವ್ ಚರ್ಚೆ ಮಾಡಿರುವುದು ಈಗ ಸಿಎಂ ಯಡಿಯೂರಪ್ಪಗೆ ತಲೆನೋವಾಗಿ ಪರಿಣಮಿಸಿದೆ.