ವಿತ್ತೀಯ ಕೊರತೆ ಮಿತಿ ಕಾಯ್ದುಕೊಳ್ಳಲು ಹರಸಾಹಸ ಮಾಡುತ್ತಿರುವ ಕೇಂದ್ರ ಸರ್ಕಾರ ಈಗ ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೆಷನ್ ಲಿಮಿಟೆಡ್ (ಬಿಪಿಸಿಎಲ್) ಮಾರಾಟಕ್ಕೆ ಮುಂದಾಗಿದೆ. ಏರ್ ಇಂಡಿಯಾದ ಶೇ.100ರಷ್ಟುಪಾಲು ಮತ್ತು ಬಿಪಿಸಿಎಲ್ ನ ಶೇ.29 53. ಪಾಲನ್ನು ಕೇಂದ್ರ ಸರ್ಕಾರ ಹೊಂದಿದೆ. ಕೇಂದ್ರ ಸರ್ಕಾರ ಏರ್ ಇಂಡಿಯಾದ ಶೇ.76 ಮತ್ತು ಬಿಪಿಸಿಎಲ್ ನ ಪೂರ್ಣ ಪ್ರಮಾಣದ ಶೇ.53.29ರಷ್ಟು ಪಾಲನ್ನು ಮಾರಾಟ ಮಾಡಲು ಉದ್ದೇಶಿಸಿದೆ.
ಏರ್ ಇಂಡಿಯಾ ಮಾರಾಟದ ಪ್ರಸ್ತಾಪ ಹಳೆಯದೇನಲ್ಲ. ಆದರೆ, ಪ್ರಸಕ್ತ 58,351 ಕೋಟಿ ರುಪಾಯಿ ಸಾಲದ ಹೊರೆ ಹೊತ್ತಿರುವ ಮತ್ತು ಕಳೆದ ವಿತ್ತೀಯ ವರ್ಷದಲ್ಲಿ ಅಂದರೆ 2018-19ರಲ್ಲಿ 5,337 ಕೋಟಿ ನಷ್ಟ ಘೋಷಣೆ ಮಾಡಿರುವ ಏರ್ ಇಂಡಿಯಾವನ್ನು ಮಾರಾಟ ಮಾಡುವ ಯತ್ನ ಈಗಾಗಲೇ ಒಂದು ಬಾರಿ ವಿಫಲವಾಗಿದೆ. ಪ್ರಸ್ತುತ ಏರ್ ಇಂಡಿಯಾ ಮಾರಾಟದಿಂದ ಕೇಂದ್ರ ಸರ್ಕಾರ ಸುಮಾರು 7,000 ಕೋಟಿ ರುಪಾಯಿ ನಿರೀಕ್ಷಿಸಿದೆ. ಆದರೆ, ಏರ್ ಇಂಡಿಯಾ ಹೊಂದಿರುವ ಸಾಲದ ಹೊರೆಯನ್ನು ಬಹುಪಾಲು ಷೇರು ಖರೀದಿ ಮಾಡುವ ಕಂಪನಿ ಹೊರಬೇಕೆ ಅಥವಾ ಸರ್ಕಾರವೇ ಸಾಲಮುಕ್ತಗೊಳಿಸಿ ಏರ್ ಇಂಡಿಯಾ ಮಾರಾಟ ಮಾಡುತ್ತದೆಯೇ ಎಂಬುದರ ಬಗ್ಗೆ ಇನ್ನು ಅಂತಿಮ ನಿರ್ಧಾರವಾಗಿಲ್ಲ. ಸಾಲದ ಹೊರೆಯಿಂದಾಗಿಯೇ ಕಳೆದ ವರ್ಷ ಏರ್ ಇಂಡಿಯಾದಲ್ಲಿ ಶೇ.76ರಷ್ಟು ಪಾಲು ಮತ್ತು ಆಡಳಿತ ನಿಯಂತ್ರಣವನ್ನು ಪಡೆಯಲು ಆಸಕ್ತಿ ವ್ಯಕ್ತಪಡಿಸಲು ಕೋರಿ (ಎಕ್ಸ್ಪ್ರೆಷನ್ ಆಫ್ ಇಂಟರೆಸ್ಟ್) ಕರೆದಿದ್ದ ಜಾಗತಿಕ ಬಿಡ್ ಗೆ ಯಾರೊಬ್ಬರೂ ಸ್ಪಂದಿಸಿರಲಿಲ್ಲ. ಈಗ ಮತ್ತೆ ಕೇಂದ್ರ ಸರ್ಕಾರ ಏರ್ ಇಂಡಿಯಾ ಮಾರಾಟಕ್ಕೆ ಮುಂದಾಗಿದೆ. ಈಗ ಮತ್ತಷ್ಟು ನಿಯಮಗಳನ್ನು ಸಡಿಲಗೊಳಿಸಿದೆ. ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ಲೈನ್ಸ್ ವಿಲೀನಗೊಳಿಸಿದ ನಂತರ ನಷ್ಟದ ಹಾದಿಯಲ್ಲೇ ಸಾಗಿದೆ. ಸಾಲದ ಹೊರೆಯು ಹೆಚ್ಚುತ್ತಲೇ ಇದೆ. ಆಗಾಗ್ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಹಾಯಾನುದಾನದಿಂದ ಸಿಬ್ಬಂದಿ ವೇತನ ವಿಳಂಬವಾಗುವುದು ತಪ್ಪಿದೆ.
ಈ ಮೊದಲು ಕೇಂದ್ರ ಸರ್ಕಾರ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ) ಮಾರಾಟ ಮಾಡಲು ಉದ್ದೇಶಿಸಿತ್ತು. ಆದರೆ, ಈಗ ಒಎನ್ಜಿಸಿ ಬದಲಿಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೆಷನ್ ಲಿಮಿಡೆಟ್ ಮಾರಾಟಕ್ಕೆ ಮುಂದಾಗಿದೆ. ಈ ಕಂಪನಿಯಲ್ಲಿರುವ ಕೇಂದ್ರ ಸರ್ಕಾರದ ಶೇ.53.29ರಷ್ಟು ಪಾಲನ್ನು ಖಾಸಗಿಯವರಿಗೆ ಮಾರಾಟ ಮಾಡಲಿದೆ. ಅಕ್ಟೋಬರ್ 3ರಂದು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಬಿಪಿಸಿಎಲ್ ನ ಶೇ.53.29, ಶಿಪ್ಪಿಂಗ್ ಕಾರ್ಪೊರೆಷನ್ ಆಫ್ ಇಂಡಿಯಾ (ಎಸ್ಸಿಐ) ಶೇ.63.75ರಷ್ಟು, ಕಂಟೈನರ್ ಕಾರ್ಪೊರೆಷನ್ (ಕಾನ್ ಕಾರ್ಡ್) ಶೇ.30ರಷ್ಟು ಮತ್ತು ಎನ್ಇಇಪಿಸಿಒ ದ ಶೇ.100ರಷ್ಟು ಮತ್ತು ಟಿಎಚ್ಡಿಸಿಯ ಶೇ.75ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರ 2019-20ನೇ ಸಾಲಿನಲ್ಲಿ 1.05 ಲಕ್ಷ ಕೋಟಿಯನ್ನು ಬಂಡವಾಳ ಹಿಂತೆಗೆತದಿಂದ ಸಂಗ್ರಹಿಸುವ ಗುರಿ ಹೊಂದಿದೆ. ಈ ಪೈಕಿ ಬಿಪಿಸಿಎಲ್ ಮಾರಾಟದಿಂದ ಸುಮಾರು 65,000 ಕೋಟಿ ರುಪಾಯಿ ಲಭಿಸಲಿದೆ. ಉಳಿದ ಕಂಪನಿಗಳಿಂದ ಬಾಕಿ ಪೈಕಿ ಶೇ.75ರಷ್ಟು ಸಂಗ್ರಹವಾಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರವು ಕಾರ್ಪೊರೆಟ್ ತೆರಿಗೆ ಕಡಿತ ಮಾಡಿ ಕಾರ್ಪೊರೆಟ್ ವಯಕ್ಕೆ ಕೊಡಮಾಡಿದ 1.45ಲಕ್ಷ ಕೋಟಿ ರುಪಾಯಿಗಳನ್ನು ಸರಿದೂಗಿಸಲು ಸಾರ್ವಜನಿಕ ವಲಯದ ಕಂಪನಿಗಳನ್ನು ಮಾರ್ಚ್ ಅಂತ್ಯದೊಳಗೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ, ವಿತ್ತೀಯ ಕೊರತೆ ಮಿತಿಯು ಈಗಿನ ಗುರಿಯಾಗಿರುವ ಜಿಡಿಪಿಯ ಶೇ.3.3 ರಿಂದ ಶೇ.3.8ಕ್ಕೆ ಜಿಗಿಯುವ ಅಪಾಯ ಇದೆ.
ಬಿಪಿಸಿಎಲ್ ಪ್ರಸ್ತುತ ಮಾರುಕಟ್ಟೆ ಬಂಡವಾಳವು 1,09,742.50 ಕೋಟಿ ರುಪಾಯಿಗಳು (ನವೆಂಬರ್ 14 ರಂದು ಶುಕ್ರವಾರ ವಹಿವಾಟು ಮುಗಿದ ನಂತರ ಇದ್ದಂತೆ). ಮಾರುಕಟ್ಟೆ ಬಂಡವಾಳವು ಷೇರುದರ ಏರಿಳಿತಕ್ಕನುಗುಣವಾಗಿ ಏರಿಳಿಯುತ್ತದೆ. ಕೇಂದ್ರ ಸರ್ಕಾರವು ಬಿಪಿಸಿಎಲ್ ನಲ್ಲಿ ಗರಿಷ್ಠ ಪಾಲನ್ನು ಮಾರಾಟ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಷೇರುದರವೂ ಏರುಹಾದಿಯಲ್ಲೇ ಸಾಗಿದ್ದು ಮಾರಾಟ ನಡೆಯುವ ಹೊತ್ತಿಗೆ ಕೇಂದ್ರ ನಿರೀಕ್ಷೆ ಮಾಡಿದ್ದಕ್ಕಿಂತಲೂ(ಅಂದಾಜು 65,000 ಕೋಟಿ) ಹೆಚ್ಚಿನ ಹಣಬರುವ ಸಾಧ್ಯತೆ ಇದೆ.
ಏರ್ ಇಂಡಿಯಾದಂತೆಯೇ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಮೇಲೆ ಭಾರಿ ಸಾಲದ ಹೊರೆ ಇದೆ. ಐಒಸಿ, ಬಿಪಿಸಿಎಲ್, ಎಚ್ಪಿಸಿಎಲ್ ಈ ಮೂರು ಕಂಪನಿಗಳ ಒಟ್ಟಾರೆ ಸಾಲದ ಮೊತ್ತವು 1.62 ಲಕ್ಷ ಕೋಟಿ ರುಪಾಯಿಗಳಾಗಿದೆ. ಕಳೆದ ಸಾಲಿನಲ್ಲಿ ಈ ಸಾಲದ ಮೊತ್ತವು 1.25 ಲಕ್ಷ ಕೋಟಿ ಇತ್ತು. ಒಂದೇ ವರ್ಷದಲ್ಲಿ ಶೇ.30ರಷ್ಟು ಸಾಲ ಏರಿಕೆಯಾಗಿದೆ. ಈಪೈಕಿ ಐಒಸಿ 92,712 ಕೋಟಿ ಸಾಲ ಹೊತ್ತಿದ್ದರೆ, ಈಗ ಬಿಕರಿಗೆ ಇಟ್ಟಿರುವ ಬಿಪಿಸಿಎಲ್ ಮೇಲೆ 42,915 ಕೋಟಿ ರುಪಾಯಿ ಸಾಲದ ಹೊರೆ ಇದೆ. ಎಚ್ಪಿಸಿಲ್ ಮೇಲಿರುವ ಸಾಲದ ಮೊತ್ತ 26,036 ಕೋಟಿ ರುಪಾಯಿಗಳು.
ಕೇಂದ್ರಸರ್ಕಾರ ನೀತಿಯಂತೆ ಸಬ್ಸಿಡಿ ದರದಲ್ಲಿ ತೈಲೋತ್ಪನ್ನಗಳನ್ನು ಈ ಕಂಪನಿಗಳು ಮಾರಾಟ ಮಾಡುತ್ತಿರುವುದರಿಂದ ಸಾಲದ ಮೊತ್ತ ಹೆಚ್ಚಿದೆ. ಆದರೆ, ತೈಲಮಾರಾಟ ಕಂಪನಿಗಳು ಲಾಭದ ಹಾದಿಯಲ್ಲಿವೆ. ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸಬ್ಸಡಿಯನ್ನು ಪೂರ್ಣ ಪ್ರಮಾಣದಲ್ಲಿ ತಗ್ಗಿಸಿದ ನಂತರ ಲಾಭದ ಪ್ರಮಾಣ ಹೆಚ್ಚಿದೆ. ಅಡುಗೆ ಅನಿಲದ ಮೇಲಿನ ಸಬ್ಸಿಡಿ ಪೂರ್ಣ ರದ್ದಾದರೆ ಮತ್ತಷ್ಟು ಲಾಭದತ್ತ ಸಾಗಲಿವೆ. ಕೇಂದ್ರ ಸರ್ಕಾರದ ಯೋಜನೆಯಂತೆ ಸಬ್ಸಿಡಿ ದರದಲ್ಲಿ ತೈಲೋತ್ಪನ್ನಗಳನ್ನು ಮಾರಾಟ ಮಾಡುವ ಈ ಕಂಪನಿಗಳಿಗೆ ಸಕಾಲದಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ಮೊತ್ತವನ್ನು ಪಾವತಿಸುವುದಿಲ್ಲ. ಕೆಲವು ಬಾರಿ ಈ ಮೊತ್ತವನ್ನು ತನ್ನ ಲಾಭಕ್ಕೆ ಹೊಂದಾಣಿಕೆ ಮಾಡಿಕೊಂಡರೆ, ಕೆಲವು ಬಾರಿ ಬಾಂಡ್ ಗಳನ್ನು ವಿತರಿಸಿ ಸರಿದೂಗಿಸುತ್ತದೆ.
ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಹೆಚ್ಚುಕಮ್ಮಿ ಸ್ಥಿರವಾಗಿದ್ದು, ಬರುವ ದಿನಗಳಲ್ಲಿ ದರ ಇಳಿಯುವ ಮುನ್ಸೂಚನೆ ಇರುವುದರಿಂದ ಬಿಪಿಸಿಎಲ್ ಸೇರಿದಂತೆ ತೈಲ ಮಾರಾಟ ಕಂಪನಿಗಳಿಗೆ ಭಾರಿ ಲಾಭದ ನಿರೀಕ್ಷೆ ಇದೆ. ಹೀಗಾಗಿ ಬಿಪಿಸಿಎಲ್ ಮಾರಾಟ ಮಾಡಲು ಯಾವುದೇ ತೊಡಕು ಇರುವುದಿಲ್ಲ. ಸದ್ಯ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಬಿಪಿಸಿಎಲ್ ಖರೀದಿಗೆ ಆಸಕ್ತಿ ತೋರಿದೆ. ಸೌದಿಯ ಅರಾಮ್ಕೊ ಕಂಪನಿಯು ರಿಲಯನ್ಸ್ ನಲ್ಲಿ ಪಾಲು ಖರೀದಿಸಲಿದೆ. ಹೀಗಾಗಿ ಪರೋಕ್ಷವಾಗಿ ವಿಶ್ವದ ಅತಿ ದೊಡ್ಡ ತೈಲೋತ್ಪನ್ನ ಸಂಸ್ಕರಣ ಮತ್ತು ಮಾರಾಟ ಕಂಪನಿಯಾಗಿರುವ ಅರಾಮ್ಕೊ ಬಿಪಿಸಿಎಲ್ ಖರೀದಿಸಿದಂತಾಗುತ್ತದೆ. ಬಿಪಿಸಿಎಲ್ ಮೂಲಕ ಅರಾಮ್ಕೊ ಭಾರತದಲ್ಲಿ ನೇರವಾಗಿ ತೈಲ ಮಾರಾಟ ಮಾಡಲು ಸಾಧ್ಯವಾಗಲಿದೆ. ಇನಿಷಿಯಲ್ ಪಬ್ಲಿಕ್ ಆಫರ್ (ಐಪಿಒ) ಮೂಲಕ ಸಾರ್ವಜನಿಕರಿಗೆ ತನ್ನ ಕಂಪನಿಯ ಶೇ.1.5ರಷ್ಟು ಷೇರು ಮಾರಾಟ ಮಾಡಲು ಮುಂದಾಗಿರುವ ಅರಾಮ್ಕೊ ಕಂಪನಿಯ ಪ್ರಸ್ತುತ ಮಾರುಕಟ್ಟೆ ಮಾಲ್ಯವನ್ನು 1.70 ಟ್ರಿಲಿಯನ್ ಡಾಲರ್ (ಪ್ರಸ್ತುತ ರುಪಾಯಿ ಮೌಲ್ಯದಲ್ಲಿ 122.40 ಲಕ್ಷ ಕೋಟಿ) ಗಳಷ್ಟು ಎಂದು ಅಂದಾಜಿಸಲಾಗಿದೆ.
ಏರ್ ಇಂಡಿಯಾ ಮಾರಾಟ ಮಾತ್ರ ಕೇಂದ್ರ ಸರ್ಕಾರಕ್ಕೆ ಅಂದುಕೊಂಡಷ್ಟು ಸುಲಭವಲ್ಲ. ಒಂದು ಕಡೆ ಕಾರ್ಮಿಕರನ್ನು ಒಪ್ಪಿಸಬೇಕು, ಮತ್ತು ಕಾರ್ಮಿಕರ ಹಿತಾಸಕ್ತಿಯನ್ನೂ ಕಾಪಾಡಬೇಕು. ಆದರೆ, ಏರ್ ಇಂಡಿಯಾ ಖರೀದಿಗೆ ಬರುವ ಕಂಪನಿಗಳು ಸಿಬ್ಬಂದಿಗಳ ಹೊರೆಯನ್ನು ತಗ್ಗಿಸಿಕೊಳ್ಳುವ ಹವಣಿಕೆಯಲ್ಲಿರುತ್ತಾರೆ. ಏಕೆಂದರೆ ಏರ್ಲೈನ್ ಕಂಪನಿಗಳಿಗೆ ಸಿಬ್ಬಂದಿ ಸಂಬಳ ಮತ್ತು ಇಂಧನ ವೆಚ್ಚವೇ ದೊಡ್ಡದಾಗಿರುತ್ತದೆ. ಹೀಗಾಗಿ ಏರ್ ಇಂಡಿಯಾದಲ್ಲಿರುವ ಎಲ್ಲಾ ಸಿಬ್ಬಂದಿ ಸಮೇತ ಖರೀದಿಗೆ ಯಾವ ಕಂಪನಿಯೂ ಒಪ್ಪುವ ಸಾಧ್ಯತೆ ಇಲ್ಲ. ಇದನ್ನು ಕೇಂದ್ರ ಸರ್ಕಾರ ಹೇಗೆ ನಿರ್ವಹಿಸುತ್ತದೆ ನೋಡಬೇಕಿದೆ.