ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (BDA) ಜಮೀನನ್ನು ಅಕ್ರಮವಾಗಿ ರೀಕನ್ವೇ ಮಾಡಿರುವ ಆರೋಪದ ಕುರಿತಾಗಿ ಸ್ಪಷ್ಟೀಕರಣ ನೀಡಲು ಐಎಎಸ್ ಅಧಿಕಾರಿ ವಸಂತ ಕುಮಾರ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಪ್ರಸ್ತುತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ವಸಂತ ಕುಮಾರ್ ಅವರು, ಬೆಂಗಳೂರು ದಕ್ಷಿಣ ತಾಲೂಕಿನ ಸರ್ವೆ ನಂ. 53ರಲ್ಲಿ BDA ಸ್ವಾಧೀನಪಡಿಸಿಕೊಂಡಿದ್ದ 1 ಎಕ್ರೆ 20 ಗುಂಟೆ ಜಮೀನನ ಪೈಕಿ 33 ಗುಂಟೆ ಜಮೀನನ್ನು ಅಕ್ರಮವಾಗಿ ರೀಕನ್ವೇ ಮಾಡಿರುವ ಆರೋಪ ಇವರ ಮೇಲಿದೆ.
ಈ ಕುರಿತಾಗಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರು ಕೂಡಾ ತನಿಖೆ ನಡೆಸಿದ್ದು, 2015ರಲ್ಲಿ ಬಿಡಿಎ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವಸಂತ್ ಕುಮಾರ್ ಅವರು ಬಿಡಿಎ ಜಮೀನನ್ನು ಬೇರೆಯವರ ಹೆಸರಿಗೆ ವರ್ಗಾಯಿಸಿ ಸುಮಾರು ರೂ. 50 ಕೋಟಿಯಷ್ಟು ನಷ್ಟ ಉಂಟುಮಾಡಿದ್ದಾರೆಂದು ವರದಿ ನೀಡಿದ್ದರು. ಈ ವರದಿ ಬಂದ ಬೆನ್ನಲ್ಲೇ ವಸಂತ್ ಕುಮಾರ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನೋಟಿಸ್ನಲ್ಲಿ ದಾಖಲಾದ ಪ್ರಕಾರ, ಬಿಟಿಎಂ ಲೇಔಟ್ನಲ್ಲಿರುವ 33 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವಾಗ, ಅಲ್ಲಿದ್ದ ಇಬ್ಬರು ಮೂಲ ನಿವಾಸಿಗಳಿಗೆ HBR Layout, HRBR Layout, ಕೋರಮಂಗಲ ಮತ್ತು ಬನಶಂಕರಿಯಲ್ಲಿ ಬದಲಿ ಭೂಮಿಯನ್ನು ನೀಡಲಾಗಿತ್ತು. ಈ ಪ್ರದೇಶಗಳಲ್ಲಿ ಒಂದು ಚದರ ಅಡಿ ಜಾಗಕ್ಕೆ ಸುಮಾರು ರೂ. 15,000ದಷ್ಟು ಬೆಲೆಯಿತ್ತು.
1992ರಲ್ಲಿ ಬಿಟಿಎಂ ಲೇಔಟ್ ಬಳಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾದಾಗ, ರಾಮಯ್ಯ ರೆಡ್ಡಿ ಮತ್ತು ಗುಲ್ಲಮ್ಮ ಎಂಬುವವರು, ಬಿಡಿಎ ನೀಡಿದ ಪರಿಹಾರ ಮೊತ್ತ ಸಾಕಾಗುವುದಿಲ್ಲವೆಂದು ಹೇಳಿ, ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು. ಇದರ ತೀರ್ಪು ನೀಡಿದ್ದ ಸಿವಿಲ್ ಕೋರ್ಟ್ ಇವರಿಬ್ಬರಿಗೂ ತಲಾ ರೂ. 60,000 ಹೆಚ್ಚುವರಿ ಮೊತ್ತವನ್ನು ಪರಿಹಾರವಾಗಿ ನೀಡುವಂತೆ ತಿಳಿಸಿತ್ತು.
ಹೆಚ್ಚುವರಿ ಪರಿಹಾರ ಮೊತ್ತವನ್ನು ನೀಡದ ನಂತರ ಇವರಿಬ್ಬರಿಗೆ ಮತ್ತೆ ಪರಿಹಾರವಾಗಿ ಬದಲಿ ಭೂಮಿಯನ್ನು ನೀಡುವ ಅಗತ್ಯವಿಲ್ಲದಿದ್ದರೂ, ಪ್ರತಿಷ್ಟಿತ ಪ್ರದೇಶಗಳಲ್ಲಿ ಭೂಮಿಯನ್ನು ನೀಡಲಾಗಿದೆ. ಇವರು, ಅಂದಿನ ಡೆಪ್ಯುಟಿ ಕಮಿಷನರ್ (ಭೂಸ್ವಾಧಿನ) ವಸಂತ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, ಅವರು ಈ ವಿಚಾರಕ್ಕೆ ಸಂಬಂಧಿಸಿದ ಕಡತಗಳನ್ನು ಅಂದಿನ ಆಯುಕ್ತರಾದ ಶಾಂ ಭಟ್ ಅವರಿಗೆ ವರ್ಗಾಯಿಸಿದ್ದರು.
ಈ ಕಡತಗಳು ಹಲವು ಮೇಜುಗಳನ್ನು ದಾಟಿ ಬಂದರೂ, ಎಲ್ಲಿಯೂ ಯಾರೂ ಪ್ರಶ್ನಿಸಲಿಲ್ಲ. ಅಕ್ರಮ ನಡೆಯದೇ, ಈ ರೀತಿ ಆಗಲು ಸಾಧ್ಯವೇ ಇಲ್ಲ ಎಂದು ಟಾಸ್ಕ್ಫೊರ್ಸ್ ನೀಡಿದ ವರದಿಯಲ್ಲಿ ಹೇಳಲಾಗಿದೆ. ಈ ಹಗರಣದ ವಿಚಾರವಾಗಿ ಆಯುಕ್ತರಾದ ಹೆಚ್ ಆರ್ ಮಹಾದೇವ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿತ್ತು.
ಈ ಕುರಿತಾಗಿ ಪ್ರತಿಕ್ರಿಯೆ ಕೇಳಲು ಪ್ರತಿಧ್ವನಿ ವಸಂತ್ ಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.