ಆಡಳಿತ ಪಕ್ಷ ಬಿಜೆಪಿಗೂ ಹಾಗೂ ಅತ್ಯಾಚಾರ ಪ್ರಕರಣಗಳಿಗೂ ಅವಿನಾಭಾವ ನಂಟಿದೆಯೇ ಎಂಬ ಜಿಜ್ಞಾಸೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ. ಇಂಥ ಚರ್ಚೆ ಮುನ್ನೆಲೆಗೆ ಬರಲು ಕಾರಣ ಉತ್ತರ ಪ್ರದೇಶದ ಬಿಜೆಪಿ ಪ್ರಭಾವಿ ನಾಯಕ, ಮಾಜಿ ಸಚಿವ ಹಾಗೂ ಸಂಸದ ಚಿನ್ಮಯಾನಂದ.
ಕಾನೂನು ವಿದ್ಯಾರ್ಥಿನಿಯ ಮೇಲೆ ಚಿನ್ಮಯಾನಂದ ಎಸಗಿದ ಲೌಂಗಿಕ ದೌರ್ಜನ್ಯಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣದ ಹಿನ್ನಲೆಯಲ್ಲಿ ಕೊನೆಗೂ ಚಿನ್ಮಯಾನಂದನನ್ನು ಪೊಲೀಸರು ಬಂಧಿಸಿದ್ದು, ಯುವತಿಯನ್ನೂ ಸುಲಿಗೆ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದೆ. ಇದೀಗ ಅತ್ಯಾಚಾರ ಆರೋಪಿ ಚಿನ್ಮಯಾನಂದ ಆಸ್ಪತ್ರೆಯಲ್ಲಿದ್ದರೆ, ಸಂತ್ರಸ್ತೆ ಜೈಲು ಪಾಲಾಗಿದ್ದಾರೆ.
ಅಂದಹಾಗೆ, ಬಿಜೆಪಿಯ ನಾಯಕರು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಸಂಸ್ಕೃತಿ, ಪರಂಪರೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಬಿಜೆಪಿಯ ನಾಯಕರು ವ್ಯಾಪಕವಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ಮನದಲ್ಲಿದೆ.
ಬೇಟಿ ಬಚಾವೋ:
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿ ಬರ್ಬರ ಹತ್ಯೆ ಮಾಡಲಾಗಿತ್ತು. ಇದರ ಪರವಾದ ಹೋರಾಟದಲ್ಲಿ ಬಿಜೆಪಿ ನಾಯಕರು ಬಹಿರಂಗವಾಗಿ ಭಾಗವಹಿಸಿ, ಆರೋಪಿಗಳ ಸಮರ್ಥನೆಗೆ ಇಳಿಯುವ ಮೂಲಕ ಬೆತ್ತಲಾಗಿದ್ದರು. ಉತ್ತರ ಪ್ರದೇಶದ ಸದ್ಯ ಉಚ್ಚಾಟಿತ ಉನ್ನಾವ್ ಬಿಜೆಪಿ ಶಾಸಕ ಕುಲದೀಪ್ ಶೆಂಗಾರ್, ಯುವತಿಯ ಮೇಲೆ ನಡೆಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಇಡೀ ದೇಶದ ಗಮನಸೆಳೆದಿತ್ತು. ಸಾರ್ವಜನಿಕವಾಗಿ ತೀವ್ರ ಮುಜುಗರಕ್ಕೆ ಒಳಗಾದ ಬಿಜೆಪಿ ಅಂತಿಮವಾಗಿ ಕುಲದೀಪ್ ಶೆಂಗಾರ್ ನನ್ನು ಪಕ್ಷದಿಂದ ಉಚ್ಚಾಟಿಸಿದೆ. ಇದಾದ ಕೆಲವೇ ತಿಂಗಳ ಅಂತರದಲ್ಲಿ ಸಂತ್ರಸ್ತೆಯ ಕುಟುಂಬದ ಹಲವರು ಅನುಮಾನಾಸ್ಪದವಾಗಿ ಹತ್ಯೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಹೇಳಿಕೆ ದಾಖಲಿಸಲು ಹೊರಟಿದ್ದ ಯುವತಿ ಹಾಗೂ ಆಕೆಯ ಕುಟುಂಬ ಸದಸ್ಯರು, ವಕೀಲರು ಇದ್ದ ವಾಹನವನ್ನು ಅಪಘಾತಕ್ಕೆ ಈಡುಮಾಡಲಾಗಿದೆ. ಸಂತ್ರಸ್ಥೆಯ ವಕೀಲ ವಿಧಿವಶರಾಗಿದ್ದಾರೆ. ಕುಟುಂಬ ಸದಸ್ಯರು ಹಾಗೂ ಯುವತಿಗೆ ಗಾಯವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಜೆಪಿ ನಾಯಕರ ಪುಂಡಾಟ ಇದು ಮೊದಲೇನಲ್ಲ. 2017ರಲ್ಲಿ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲ ಪುತ್ರ ವಿಕಾಸ್ ಬರಾಲ, ಹಿರಿಯ ಐಎಎಸ್ ಅಧಿಕಾರಿಯ ಪುತ್ರಿಯನ್ನು ಹಿಂಬಾಲಿಸುತ್ತಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ. ಯುವತಿಯೊಬ್ಬಳನ್ನು ಅನುಮಾನಾಸ್ಪದವಾಗಿ ಗೃಹ ಸಚಿವ ಅಮಿತ್ ಶಾ ಹಿಂಬಾಲಿಸಿದ್ದರು. ಈ ಸಂಬಂಧ ಪೊಲೀಸರಿಗೆ ಸೂಚನೆ ನೀಡಿದ್ದರು ಎಂಬ ಸುದ್ದಿ 2013ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರಿ ಸುದ್ದಿಯಾಗಿತ್ತು. ಸಾಹೇಬ್ ಸೂಚನೆಯ ಮೇರೆಗೆ ಯುವತಿಯನ್ನು ಹಿಂಬಾಲಿಸಲಾಗುತ್ತಿದೆ ಎಂವ ಸಂಭಾಷಣೆಯ ಆಡಿಯೋ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಇಡೀ ಪ್ರಕರಣ ಪ್ರಧಾನಿ ನರೇಂದ್ರ ಮೋದಿ-ಅಮಿತ್ ಶಾ ಸುತ್ತಲೇ ಹರಡಿಕೊಂಡಿತ್ತು. ಅಧಿಕಾರ ಮೋದಿ-ಶಾ ಜೋಡಿ ಕೈಗೆ ದೊರೆಯುತ್ತಿದ್ದಂತೆ ಅವರ ಮೇಲಿನ ಎಲ್ಲಾ ಆರೋಪಗಳು ಹೇಳ ಹೆಸರಿಲ್ಲದಂತಾಗಿವೆ.
ಕರ್ನಾಟಕವೂ ಹೊರತಲ್ಲ:
ಕರ್ನಾಟಕದಲ್ಲಿಯೂ ಹಲವು ಬಿಜೆಪಿ ನಾಯಕರು ಅನೈತಿಕ ಚಟುವಟಿಕೆಗಳ ಭಾಗವಾಗುವ ಮೂಲಕ ತೀವ್ರ ಮುಜುಗರ ಅನುಭವಿಸಿದ್ದಾರೆ. 2008-2013ರಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿದಿದ್ದ ಕಮಲ ಪಾಳೆಯದ ಮೂವರು ಸಚಿವರು ಪ್ರಜಾಪ್ರಭುತ್ವದ ದೇವಾಲಯ ಎನ್ನಲಾಗುವ ಸದನದಲ್ಲಿ ನೀಲಿ ಚಿತ್ರ ವೀಕ್ಷಣೆಯಲ್ಲಿ ತೊಡಗಿದ್ದ ಸುದ್ದಿ ವ್ಯಾಪಕವಾಗಿ ಸದ್ದು ಮಾಡಿತ್ತು.ಸಾರ್ವಜನಿಕವಾಗಿ ತೀವ್ರ ಮುಜುಗರ ಅನುಭವಿಸಿದ್ದ ಬಿಜೆಪಿ ಅವರಿಂದ ರಾಜಿನಾಮೆ ಪಡೆದಿತ್ತು. ದುರಂತವೆಂದರೆ, ಈ ಮೂವರ ಪೈಕಿ ಒಬ್ಬರು – ಲಕ್ಷಣ ಸವದಿ ಸದ್ಯ ಉಪಮುಖ್ಯಮಂತ್ರಿಯಾಗಿದ್ದಾರೆ. ಇನ್ನೊಬ್ಬ ಶಾಸಕ ಸಿ ಸಿ ಪಾಟೀಲ್ ಸಚಿವರಾಗಿದ್ದಾರೆ. ರಾಮಕಥಾ ಗಾಯಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಹೊಸನಗರ ಮಠದ ರಾಘವೇಶ್ವರ ಸ್ವಾಮೀಜಿ ಪರವಾಗಿ ಬಿಜೆಪಿ ವಕಾಲತ್ತು ವಹಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಗೆಳೆಯನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದ ಖುಲಾಸೆಯಾಗಿರುವ ಹರತಾಳು ಹಾಲಪ್ಪ ಶಾಸಕರಾಗಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯುವತಿಯರು ಲೈಂಗಿಕ ಕಿರುಕುಳ ಹಾಗೂ ವಂಚನೆ ಆರೋಪ ಮಾಡಿದ್ದರು. ಯುವ ಸಂಸದ ತೇಜಸ್ವಿ ಸೂರ್ಯ ಅವರು ಒಂದು ಹಂತ ಮುಂದೆ ಹೋಗಿ ಇಂಥ ಸುದ್ದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಆದೇಶ ಪಡೆದಿದ್ದದ್ದೂ ವಿವಾದಕ್ಕೆ ಕಾರಣವಾಗಿತ್ತು.
ಇಂಥ ಸಾಕಷ್ಟು ಉದಾಹರಣೆಗಳಿವೆ. ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾರಿಸುತ್ತಿದ್ದಾರೆ ಎಂಬ ಸಂಕಥನವನ್ನು ಬಿಜೆಪಿಯ ಕಾರ್ಯಕರ್ತರಿಂದ ಹಿಡಿದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎಲ್ಲರೂ ಕಟ್ಟುತ್ತಿದ್ದಾರೆ. ಪೂರಕವಾಗಿ ಮೋದಿಯವರೂ ಇತ್ತೀಚೆಗೆ ಅಮೆರಿಕದ ಹ್ಯೂಸ್ಟನ್ ನಲ್ಲಿ ಭಾಷಣ ಮಾಡುತ್ತಾ ವಿವಿಧ ಭಾಷೆಗಳಲ್ಲಿ ಭಾರತದಲ್ಲಿ `ಎಲ್ಲವೂ ಚೆನ್ನಾಗಿದೆ’ ಎಂದು ಸಾರಿದ್ದರು.
ಇದಕ್ಕೂ ಮುನ್ನ ಹೆಣ್ಣು ಮಕ್ಕಳನ್ನೇ ಉದ್ದೇಶವಾಗಿಟ್ಟುಕೊಂಡು ಬೇಟಿ ಬಚಾವೋ, ಬೇಟಿ ಪಢಾವೋ ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಮೋದಿ ಜಾರಿಗೊಳಿಸಿದ್ದರು. ಆದರೆ, ಯಾವ ಪಕ್ಷ ಹಾಗೂ ನಾಯಕ ಬೇಟಿ ಬಚಾವೋ, ಬೇಟಿ ಪಢಾವೋ ಮೂಲಕ ಸ್ತ್ರೀ ಸಮುದಾಯದ ಮನ ಗೆಲ್ಲಲು ಪ್ರಯತ್ನಿಸಿದ್ದರೋ ಅದೇ ಪಕ್ಷದ ನಾಯಕರು ಹೆಣ್ಣು ಮಕ್ಕಳು, ಯುವತಿಯರು ಹಾಗೂ ಮಹಿಳೆಯರನ್ನು ಭೋಗದ ವಸ್ತುವಿನಂತೆ ನೋಡುತ್ತಿರುವುದು ವಿಪರ್ಯಾಸ. ಹೀಗಾಗಿಯೇ ಬಿಜೆಪಿ ನಾಯಕರಿಂದ ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂಬ ವ್ಯಂಗ್ಯ ಹಾಗೂ ಆಕ್ರೋಶದ ನುಡಿಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಆದರೆ, ಎಂದಿನಂತೆ ಇದ್ಯಾವುದಕ್ಕೂ ಬಿಜೆಪಿಯ ನಾಯಕತ್ವ ತಲೆಕೆಡಿಸಿಕೊಂಡಿಲ್ಲ.