ಬಹು ನಿರೀಕ್ಷೆಗಳೊಂದಿಗೆ ಮೂರು ದಶಕಗಳ ನಂತರ 2014ರಲ್ಲಿ ಭಾರತದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ ಸಾಧನೆ ಮಾಡಿತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಅಸಲಿಗೆ ಎರಡು ಅವಧಿಯ ಯುಪಿಎ ಸರ್ಕಾರಕ್ಕೆ ಭ್ರಷ್ಟಾಚಾರಕ್ಕೆ ಬೇಸತ್ತಿದ್ದ ಮತದಾರ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದರಲ್ಲೂ ಅಚ್ಚರಿ ಇರಲಿಲ್ಲವೇನೋ? ಆದರೆ, ಈ ಚುನಾವಣೆಯಲ್ಲಿ ಐತಿಹಾಸಿಕ ರಾಷ್ಟ್ರೀಯ ಪಕ್ಷವೊಂದು ಹೇಳ ಹೆಸರಿಲ್ಲದಂತಾಗಿದ್ದು ಮಾತ್ರ ನಿಜ!
1980ರಲ್ಲಿ ರಾಜಕೀಯ ಪಕ್ಷವಾಗಿ ಚಾಲ್ತಿಗೆ ಬಂದ ಜನಸಂಘ ಕೊನೆಗೂ ಮೋದಿ ನೇತೃತ್ವದಲ್ಲಿ 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಸಫಲವಾಗಿತ್ತು. ಈ ಮೂರು ದಶಕದ ಅವಧಿಯಲ್ಲಿ 01 ಸ್ಥಾನದಿಂದ 300 ಸ್ಥಾನಕ್ಕೆ ಏರುವಲ್ಲಿ ಬಿಜೆಪಿ ಶ್ರಮವನ್ನು ಅಲ್ಲಗೆಳೆಯುವಂತಿಲ್ಲ. ಹೀಗೆ ಅಧಿಕಾರಕ್ಕೆ ಬಂದ ಬಲಪಂಥೀಯ ಚಿಂತನೆಯುಳ್ಳ ಸರ್ಕಾರದ ಮೇಲೆ ದೇಶದ ಜನರಿಗೂ ಸಾಕಷ್ಟು ನಿರೀಕ್ಷೆಗಳಿದ್ದವು.
ನರೇಂದ್ರ ಮೋದಿ ಪ್ರಧಾನಿ ಗಾದಿಗೆ ಏರುವ ಹೊತ್ತಿಗಾಗಲೇ, ಕಪ್ಪು ಹಣ, ಭ್ರಷ್ಟಾಚಾರ, ನಿರುದ್ಯೋಗ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ, ಆರ್ಥಿಕ ಹಿಂಜರಿತ, ಭಯೋತ್ಪಾದನೆ ಎಂಬ ಹತ್ತಾರು ವಿಚಾರಗಳು ಚರ್ಚೆಯ, ಸುದ್ದಿ ಕೇಂದ್ರದ ಮುನ್ನೆಲೆಗೆ ಬಂದಿತ್ತು. ದೇಶದ ಅಭಿವೃದ್ಧಿ ಕುರಿತಾಗಿ ಹೊಸ ವ್ಯಾಖ್ಯಾನವೊಂದು ಅಸ್ಥಿತ್ವ ಪಡೆದುಕೊಂಡಿತ್ತು. ಆದರೆ, ಕಳೆದ 6 ವರ್ಷದ ಅವಧಿಯಲ್ಲಿ ಬಿಜೆಪಿ ನಿಜಕ್ಕೂ ಜನ ಸಾಮಾನ್ಯನ ಆಶೋತ್ತರಗಳಿಗೆ ಸ್ಪಂದಿಸಿತ್ತೇ? ದೇಶದ ಆರ್ಥಿಕತೆ ಸುಧಾರಿಸಿತೇ? ವಿದೇಶದಿಂದ ಕಪ್ಪು ಹಣ ಮರಳಿ ಬಂದಿತೇ? ನಿಜಕ್ಕೂ ದೇಶ ಅಭಿವೃದ್ಧಿಯ ಪಥದಲ್ಲೇ ಇದೆಯಾ? ಹೀಗೆ ಹತ್ತಾರು ಪ್ರಶ್ನೆಗಳು ದಿನನಿತ್ಯ ಮುಖ್ಯ ವಾಹಿನಿ ಮಾಧ್ಯಮದಲ್ಲಿ ಚರ್ಚೆಯಾಗುತ್ತಲೇ ಇವೆ.
ಈ ಅಭಿವೃದ್ಧಿ ವಿಚಾರಗಳ ಕುರಿತ ಚರ್ಚೆ ಒಂದೆಡೆ ಇದ್ದರೂ, ಮೋದಿ ಸರ್ಕಾರ ಅಪಾರ ಜನ ಮನ್ನಣೆ ಗಳಿಸಿದ್ದಾಗ್ಯೂ ಈ ಸರ್ಕಾರದ ವಿರುದ್ಧ ಕಳೆದ 6 ವರ್ಷಗಳಲ್ಲಿ ಸಾಕಷ್ಟು ಪ್ರತಿಭಟನೆಗಳು ದಾಖಲಾಗಿವೆ. ಯುಪಿಎ ಸರ್ಕಾರದ ವಿರುದ್ಧ ಸ್ವತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ದಾಖಲಿಸಿದ ಭ್ರಷ್ಟಾಚಾರಿ ವಿರೋಧಿ ಹೋರಾಟದಂತೆಯೇ ಮೋದಿ ಸರ್ಕಾರದ ಕಾರ್ಯ ವೈಕರಿ ವಿರುದ್ಧವೂ ಹತ್ತಾರು ಪ್ರಮುಖ ಹೋರಾಟಗಳು ದಾಖಲಾಗಿವೆ.
ಹಾಗಾದರೆ ಕಳೆದ 6 ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಾಖಲಾಗಿರುವ ಪ್ರಮುಖ ಹೋರಾಟಗಳು ಯಾವುವು? ಈ ಹೋರಾಟದ ಕಣ ಎಲ್ಲಿ? ಹೋರಾಟಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ವರದಿ
2016 ಕೇಂದ್ರದ ಪಿಎಫ್ ನೀತಿಯ ವಿರುದ್ಧ ಬೀದಿಗಳಿದ ನೌಕರರು
ದೇಶದಲ್ಲಿ ಮೊದಲ ಬಾರಿಗೆ 2014ರಲ್ಲಿ ಬಹುಮತದ ಅಧಿಕಾರ ಹಿಡಿದಿದ್ದ ಬಿಜೆಪಿ ಮೊದಲ 2 ವರ್ಷಗಳಲ್ಲಿ ಉತ್ತಮ ಆಡಳಿತ ನೀಡುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಭರವಸೆ ನೀಡಿತ್ತಾದರೂ 2016ರಲ್ಲಿ ಕೇಂದ್ರದ ಆ ಒಂದು ನೀತಿಯ ವಿರುದ್ಧ ದೇಶದೆಲ್ಲೆಡೆ ಮಧ್ಯಮ ವರ್ಗ ನೌಕರರು ಬೀದಿಗಿಳಿದಿದ್ದರು. ಅದರಲ್ಲೂ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನೌಕರರು ಬೀದಿಗಳಿದ ಕಾರಣ ಈ ಪ್ರತಿಭಟನೆ ತಾರಕಕ್ಕೆ ಏರಿತ್ತು.
ಅಸಲಿಗೆ ಆರಂಭದಲ್ಲಿ ತಮ್ಮ ಸರ್ಕಾರ ಬಡವರ ಪರ ಎನ್ನುತ್ತಿದ್ದ ಕೇಂದ್ರ ಸರ್ಕಾರ 2016ರಲ್ಲಿ ಹೊಸ ಪಿಎಫ್ ನೀತಿಯನ್ನು ಜಾರಿಗೆ ತರುವ ಮೂಲಕ ಬಡ ಜನರ ಶೋಷಣೆಗೆ ಇಳಿದಿತ್ತು. ಕಾರ್ಮಿಕ ಭವಿಷ್ಯ ನಿಧಿ ವಿಥ್ ಡ್ರಾ ನಿಯಮಗಳಿಗೆ ತಡೆ ನೀಡಿತ್ತು.
ಇಷ್ಟು ವರ್ಷ ಚಾಲ್ತಿಯಲ್ಲಿದ್ದ ಪಿಎಫ್ ನೀತಿಯಲ್ಲಿ ಉದ್ಯೋಗಿಯೂ ತನ್ನ ಇಪಿಎಫ್ ತೆರಿಗೆ ಮುಕ್ತ ಮೊತ್ತವನ್ನು ಸಂಪೂರ್ಣವಾಗಿ ವಿಥ್ ಡ್ರಾ ಮಾಡಿಕೊಳ್ಳಬಹುದಾಗಿತ್ತು. ಆದರೆ, ಫೆಬ್ರವರಿ 10, 2016ರಂದು ಪಿಎಫ್ ನಿಯಮಾವಳಿಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಉದ್ಯೋಗಿಯೊಬ್ಬನು ತಾನು ಇಪಿಎಫ್ ಗೆ ನೀಡುತ್ತಿರುವ ತನ್ನ ಪಾಲಿನ ಮೊತ್ತ(ಬಡ್ಡಿ ಸಮೇತ) ವನ್ನು ಮಾತ್ರ ವಿಥ್ ಡ್ರಾ ಮಾಡಿಕೊಳ್ಳಬಹುದು,. [ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುತ್ತಿಲ್ಲ] ಉದ್ಯೋಗದಾತರ ಸಂಸ್ಥೆ ಎಪಿಎಫ್ ಗೆ ನೀಡುವ ಪಾಲು ಹಾಗೂ ಅದಕ್ಕೆ ಸಿಗುವ ಬಡ್ಡಿದರ ಎಲ್ಲವೂ 58 ವರ್ಷ (ನಿವೃತ್ತಿ ವಯಸ್ಸು) ವಾದ ಬಳಿಕವಷ್ಟೇ ಉದ್ಯೋಗಿಗೆ ಸಿಗಲಿದೆ ಎಂದು ಆದೇಶಿಸಿತ್ತು.
ಕೇಂದ್ರ ಸರ್ಕಾರದ ಈ ಹೊಸ ಆದೇಶ ಸಾಮಾನ್ಯವಾಗಿ ಕಾರ್ಮಿಕ ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಣಾಮ ದೇಶದಾದ್ಯಂತ ಚಳುವಳಿ ದೊಡ್ಡ ಮಟ್ಟದ ರೂಪ ತಳೆದಿತ್ತು. ಬೆಂಗಳೂರಿನ ಪ್ರತಿಭಟನೆ ಅಕ್ಷರಶಃ ಗಲಭೆ ರೂಪ ಪಡೆದಿತ್ತು.
2017 ತಮಿಳುನಾಡು ಜಲ್ಲಿಕಟ್ಟು ಹೋರಾಟ
ಮೂಖ ಪ್ರಾಣಿಗಳ ರಕ್ಷಣೆಗೆ ನಿಂತಿರುವ ಅಂತಾರಾಷ್ಟ್ರೀಯ peeta (ಪೀಟಾ) ಸಂಸ್ಥೆ ತಮಿಳುನಾಡಿನಲ್ಲಿ ಸಂಕ್ರಾಂತಿಯ ದಿನ ನಡೆಯುವ ಸಾಂಪ್ರದಾಯಿಕ ಜಲ್ಲಿಕಟ್ಟು ಆಚರಣೆಗೆ ಕೇಂದ್ರ ಸರ್ಕಾರದ ಮೂಲಕ ತಡೆ ನೀಡಿಸಿತ್ತು. ಈ ಆಚರಣೆಯ ಮೂಲಕ ಮೂಖ ಪ್ರಾಣಿಗಳನ್ನು ಹಿಂಸಿಸಲಾಗುತ್ತಿದೆ ಎಂಬ ಆರೋಪವನ್ನು ಮುಂದಿಟ್ಟ ಕೇಂದ್ರ ಸರ್ಕಾರ ಸಹ ಜಲ್ಲಿಕಟ್ಟುವಿಗೆ ತಡೆ ನೀಡಿತ್ತು.
ಪರಿಣಾಮ ಇಡೀ ದ್ರಾವಿಡ ನಾಡು ಕೇಂದ್ರದ ವಿರುದ್ದ ಸಿಡಿದೆದ್ದಿತ್ತು. ವಾರಗಳ ಕಾಲ ಜಲ್ಲಿಕಟ್ಟು ಹೋರಾಟಗಾರರು ಚೆನ್ನೈನ ಮರೀನಾ ಕಡಲ ಕಿನಾರೆಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಹೂಡಿದ್ದರು. ಕಾಲಾನಂತರದಲ್ಲಿ ಇದು ವಿದ್ಯಾರ್ಥಿಗಳ ಹೋರಾಟವಾಗಿ ಬದಲಾಗಿ ಯಶಸ್ವಿಯಾದದ್ದು ಇಂದು ಇತಿಹಾಸ.
2019 ಕಾಶ್ಮೀರ ಕಲಂ 370 ರದ್ಧತಿ ವಿರೋಧಿ ಹೋರಾಟ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತಾನು ನೀಡಿದ ಆಶ್ವಾಸನೆಯಂತೆ ಜಮ್ಮು-ಕಾಶ್ಮೀರಕ್ಕೆ ಕಲಂ 370 ಅಡಿಯಲ್ಲಿ ನೀಡಲಾಗಿರುವ ವಿಶೇಷ ಸ್ಥಾನಮಾನಕ್ಕೆ ಕೊನೆಗೂ 2019 ಆಗಸ್ಟ್ 5 ರಂದು ಕತ್ತರಿ ಹಾಕಿತ್ತು. ಕಲಂ 370 ರದ್ದು ಮಾಡುವ ಮಸೂದೆ ಲೋಕಸಭೆ, ರಾಜ್ಯಸಭೆಯಲ್ಲಿ ಬಹುಮತದೊಂದಿಗೆ ಅಂಗೀಕಾರವಾಗಿತ್ತು. ಪರಿಣಾಮ ಇಡೀ ಕಾಶ್ಮೀರದಲ್ಲಿ ಯುದ್ಧದ ವಾತಾವರಣವೇ ನಿರ್ಮಾಣವಾಗಿತ್ತು.
ಏನಿದು ಕಲಂ 370?:
ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಾಗೂ ಕಲಂ 370ರ ಹುಟ್ಟಿನ ಹಿಂದೆ ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ರೂಪಪಡೆದಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೆ ಒಂದಾಗದೆ ಸ್ವತಂತ್ರ್ಯವಾಗಿ ಉಳಿಯುವ ಭಯಕೆಯನ್ನು ಹೊಂದಿದ್ದರು.
ಆದರೆ, ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ್ದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೇಳುತ್ತಾರೆ. ಅಲ್ಲದೆ ಭಾರತದ ಜೊತೆ ವಿಲೀನಗೊಳ್ಳಲು ಒಪ್ಪಿ ಕೆಲವು ಷರತ್ತುಗಳನ್ನು ಮುಂದಿಡುತ್ತಾನೆ. ಹೀಗೆ ಹುಟ್ಟುಪಡೆದದ್ದೇ ಕಲಂ 370. ಕಾಲಾನಂತರದಲ್ಲಿ ಕಲಂ 35ಎ ನ್ನು ಸೇರ್ಪಡೆಗೊಳಿಸಲಾಯಿತು.ಸಂವಿಧಾನದ 370 ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಆರು ವಿಶೇಷ ಸವಲತ್ತುಗಳನ್ನು, ಉಪಕ್ರಮಗಳನ್ನು ಹಾಗೂ ವಿನಾಯಿತಿಗಳನ್ನು ನೀಡಲಾಗಿದೆ.
1. ಜಮ್ಮು ಮತ್ತು ಕಾಶ್ಮೀರ ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು.
2. ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಈ ಖಾತೆಗಳಿಗೆ ಮಾತ್ರ ಭಾರತದ ಕಾನೂನು ಹಾಗೂ ಸಂವಿಧಾನ ಕಾಶ್ಮೀರಕ್ಕೆ ಅನ್ವಯವಾಗುತ್ತದೆ.
3. ಭಾರತದ ಸಂವಿಧಾನದ ಎಲ್ಲಾ ವಿಧಿ-ವಿಧಾನಗಳನ್ನು ಅನುಷ್ಠಾನಗೊಳಿಸಬೇಕು ಎಂದರೆ ಜಮ್ಮು-ಕಾಶ್ಮೀರದ ಅನುಮತಿ ಪಡೆಯಬೇಕು
4. ಜಮ್ಮು-ಕಾಶ್ಮೀರ ಭಾರತದೊಳಗೆ ವಿಲೀನಗೊಳಿಸಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದರೆ, ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯ ಮುಂದೆ ಮಂಡಿಸಬೇಕು.
5. ವಿಧಾನಸಭೆ ಅದಕ್ಕೆ ಅನುಮೋದನೆ ನೀಡಿದರೆ ಅದನ್ನು ಮಧ್ಯಂತರ ಅಧಿಕಾರ ಎಂದು ಪರಿಗಣಿಸಲಾಗುವುದು. ಅಂದರೆ ವಿಲೀನಗೊಳಿಸುವ ಪರಮಾಧಿಕಾರ ಅಲ್ಲಿನ ವಿಧಾನಸಭೆಗೂ ಇಲ್ಲ ಅಂದಂಗಾಯಿತು.
6. ರಾಷ್ಟ್ರಪತಿ ಏನಾದರು ಈ ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವುದಕ್ಕೆ ಮುಂದಾದರೆ ರಾಜ್ಯ ಸರಕಾರದ ಶಿಫಾರಸು ಅಗತ್ಯ.
ಹೀಗೆ ಕಲಂ 370 ರ ಅಡಿಯಲ್ಲಿ ಆರು ಪ್ರಮುಖ ಸವಲತ್ತುಗಳನ್ನು ಸಂವಿಧಾನದ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದೆ. ಇದಲ್ಲದೆ ಕಲಂ 35(ಎ) ಅಡಿಯಲ್ಲಿ.
1. ಭಾರತ ಸರಕಾರದ ಕಾಯ್ದೆ ತಿದ್ದುಪಡಿಗಳು ಕಣಿವೆ ರಾಜ್ಯಕ್ಕೆ ಸಂಬಂಧಿಸುವುದಿಲ್ಲ.
2. ಕಾಶ್ಮೀರಿಗಳಿಗೆ ಮೂಲ ಹಾಗೂ ಶಾಶ್ವತ ನಿವಾಸಿಗಳು ಎಂಬ ಗುರುತು.
3. ಈ ಕಾನೂನಿನ ಅನ್ವಯ ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಕಣಿವೆ ರಾಜ್ಯದಲ್ಲಿ ಸ್ಥರಾಸ್ತಿ ಚರಾಸ್ತಿಗಳನ್ನು ಹೊಂದುವ ಹಕ್ಕಿಲ್ಲ.
4. ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿಲ್ಲ.
5. ಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯ ಸರಕಾರ ನಡೆಸುವ ವೃತ್ತಿಪರ ಕೋರ್ಸ್ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವಂತಿಲ್ಲ. ಹಾಗೂ ಸರಕಾರದ ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ.
6. ರಾಜ್ಯ ಸರಕಾರದ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಅವಕಾಶವಿಲ್ಲ.
7. ಬೇರೆ ರಾಜ್ಯದವರು ಇಲ್ಲಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ.
ಈ ಎಲ್ಲಾ ಸವಲತ್ತುಗಳು ಕೇವಲ ಕಾಶ್ಮೀರದ ಮೂಲ ಹಾಗೂ ಶಾಶ್ವತ ನಿವಾಸಿಗಳಿಗೆ ಮಾತ್ರ ಕಲ್ಪಿಸಲಾಗಿದೆ. ಇದಕ್ಕೆ ಸಂವಿಧಾನದ ಕಲಂ 370 ಹಾಗೂ 45 (ಎ) ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಕೋನದಲ್ಲಿ ತೀರಾ ಹಿಂದುಳಿದಿರುವ ಕಾರಣ ಜಮ್ಮು-ಕಾಶ್ಮೀರಕ್ಕೆ ಸಂವಿಧಾನ ಬದ್ಧವಾಗಿ ಈ ಸವಲತ್ತುಗಳನ್ನು ನೀಡಲಾಗಿದೆ.
ಕಾಶ್ಮೀರ ಮಾತ್ರವಲ್ಲದೆ 371(ಎ) ವಿಧಿಯ ಅಡಿಯಲ್ಲಿ ನಾಗಾಲ್ಯಾಂಡ್, 371(ಜಿ) ವಿಧಿಯ ಅನ್ವಯ ಮಿಝೋರಾಮ್ ರಾಜ್ಯಗಳಿಗೂ ಸಹ ಇದೇ ರೀತಿಯ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ. ಈ ರಾಜ್ಯಗಳಿಗಿರುವ ಇತಿಹಾಸದ ಕಾರಣಕ್ಕಾಗಿಯೇ ಈ ವಿಶೇಷ ಸವಲತ್ತುಗಳನ್ನು ನೀಡಲಾಗಿರುವುದು ಉಲ್ಲೇಖಾರ್ಹ.
ಆದರೆ, ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿರುವ ಈ ವಿಶೇಷ ಸೌಲಭ್ಯವನ್ನು ರದ್ದುಗೊಳಿಸಿದ್ದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಆರೋಪಿಸಿದ್ದ ಪ್ರಜಾ ಪ್ರಭುತ್ವ ಪ್ರವಾದಕರು ಕಾಶ್ಮೀರಿಗರು ಇಡೀ ದೇಶದಾದ್ಯಂತ ಕೇಂದ್ರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನಗೆ ಮುಂದಾಗಿದ್ದರು. ಕಾಶ್ಮೀರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಕೆಲ ಕಾಲ ಕರ್ಪ್ಯೂ ವಿಧಿಸಲಾಗಿತ್ತು. ಅಲ್ಲದೆ, ಅಂತಾರ್ಜಾಲ ವ್ಯವಸ್ಥೆಯನ್ನು ಕಡಿತ ಮಾಡಲಾಗಿತ್ತು.
2019 CAA-NRC ವಿರೋಧಿ ಹೋರಾಟ;
ಕಳೆದ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗುತ್ತಿದ್ದ ಕಲಂ 370 ಹಾಗೂ 35 (ಎ) ಅನ್ನು ರದ್ದುಗೊಳಿಸಿ ಅಚ್ಚರಿಗೆ ಕಾರಣವಾಗಿದ್ದ ಕೇಂದ್ರ ಸರ್ಕಾರ, ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆದಿತ್ತು. ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ 2016ರಿಂದ ಪ್ರಯತ್ನಿಸುತ್ತಿದೆಯಾದರೂ ಅದಕ್ಕೆ ಕಾಲ ಕೂಡಿ ಬಂದದ್ದು ಮಾತ್ರ 2019ರಲ್ಲಿ.
ಆದರೆ, ಕೇಂದ್ರ ಸರ್ಕಾರದ ಈ ನೂತನ ಮಸೂದೆ ಈಶಾನ್ಯ ರಾಜ್ಯಗಳಿಗೆ ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಮಾರಕ ಎಂದು ಆರೋಪಿಸಿದ್ದ ಜನ ಬೀದಿಗೆ ಇಳಿದು ಹೋರಾಡಲು ಮುಂದಾದರು. ಈಶಾನ್ಯದ 7 ರಾಜ್ಯಗಳ ಜನ ಇಂದು ರಸ್ತೆಗಿಳಿದು ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು. ಅಲ್ಲದೆ, ಈಶಾನ್ಯದ 40 ಕ್ಕೂ ಹೆಚ್ಚು ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳು ಬಂದ್ಗೂ ಕರೆ ನೀಡಿದ್ದವು. ಈಶಾನ್ಯ ಭಾಗದಲ್ಲಿ ಆರಂಭವಾದ ಈ ಚಳುವಳಿ ಮೆಲ್ಲನೆ ಇಡೀ ದೇಶದಾದ್ಯಂತ ವಿಸ್ತರಿಸಿದ್ದು, ವಿದ್ಯಾರ್ಥಿಗಳ ಚಳುವಳಿಯಾಗಿ ರೂಪ ಪಡೆದಿದ್ದು ಇಂದು ಇತಿಹಾಸ.
ಏನಿದು ಭಾರತೀಯ ಪೌರತ್ವ ಮಸೂದೆ?
ಸ್ವಾತಂತ್ರ್ಯ ನಂತರದ ಭಾರತದಲ್ಲಿ ನೆಹರು ಪ್ರಧಾನಿಯಾಗಿದ್ದ ಕಾಲದಲ್ಲಿ 1955ರಲ್ಲೇ ಭಾರತೀಯ ಪೌರತ್ವ ಮಸೂದೆಯನ್ನು ಮಂಡಿಸಿದ್ದ ಅಂದಿನ ಸರ್ಕಾರ ಅದಕ್ಕೆ ಅನುಮತಿಯನ್ನೂ ಪಡೆದಿತ್ತು.
ದೇಶ ವಿಭಜನೆ ಮತ್ತು ಕೋಮು ಗಲಭೆ ಸಂದರ್ಭದಲ್ಲಿ ಭಾರತದಿಂದ ಅನಿವಾರ್ಯವಾಗಿ ಬೇರೆ ದೇಶಗಳಿಗೆ ವಲಸೆ ಹೋಗಿದ್ದ, ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರಾದ ಮೂಲ ಭಾರತೀಯರಿಗೆ ಮತ್ತೆ ದೇಶದಲ್ಲಿ ನೆಲೆ ಕಲ್ಪಿಸುವ ಮತ್ತು ಭಾರತೀಯ ಪೌರತ್ವ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮಂಡಿಸಿದ್ದ ಮಹತ್ವದ ಮಸೂದೆಯೇ ಭಾರತೀಯ ಪೌರತ್ವ ಕಾಯ್ದೆ-1955.ಕಳೆದ ಆರು ದಶಕಗಳಿಂದ ದೇಶದಲ್ಲಿ ಚಾಲ್ತಿಯಲ್ಲಿರುವುದು ಇದೇ ಮಸೂದೆ. ಈ ಮಸೂದೆಯ ಪ್ರಕಾರ ನೆರೆ ರಾಷ್ಟ್ರದಲ್ಲಿ ನೆಲೆಸಿರುವ ಧಾರ್ಮಿಕ ಅಲ್ಪ ಸಂಖ್ಯಾತರಾದ ಹಿಂದೂ, ಸಿಖ್, ಕ್ರೈಸ್ತ, ಪಾರ್ಸಿ, ಬೌದ್ಧ, ಜೈನ ಮತ್ತು ಯಹೂದಿಗಳು ನಿರ್ದಿಷ್ಟ ದಾಖಲೆಗಳ ಜೊತೆಗೆ ಭಾರತದಲ್ಲಿ ಸುಮಾರು 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ನೆಲೆಸಿದ್ದರೆ ಅವರಿಗೆ ಭಾರತೀಯ ಪೌರತ್ವ ನೀಡಲಾಗುತ್ತಿತ್ತು. ಆದರೆ ನೂತನವಾಗಿ ತಿದ್ದುಪಡಿಯಾಗಿರುವ ಕಾಯ್ದೆಯಲ್ಲಿ ಹತ್ತಾರು ನಿಯಮಗಳನ್ನು ಸಡಿಲಿಸಲಾಗಿದೆ. ಮತ್ತು ಈ ನಿಯಮದಿಂದ ಇಸ್ಲಾಂ ಧರ್ಮದವರನ್ನು ಸಂಪೂರ್ಣವಾಗಿ ಹೊರಗಿಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನೂತನ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಏನಿದೆ?
ಭಾರತದ ನೆರೆಯ ರಾಷ್ಟ್ರಗಳು ಬಹುತೇಕ ಇಸ್ಲಾಂ ರಾಷ್ಟ್ರಗಳು. ಭಾರತದಿಂದ ವಲಸೆ ಹೋದ ಅನೇಕರು ನೆಲೆಸಿರುವುದು ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್ ಮತ್ತು ಇಂಡೋನೇಷ್ಯಾದಲ್ಲೇ.
ಹೀಗೆ ವಲಸೆ ಹೋದವರ ಪೈಕಿ ಹಿಂದೂಗಳು ಸೇರಿ ಅನೇಕ ಧಾರ್ಮಿಕ ಅಲ್ಪ ಸಂಖ್ಯಾತರಿದ್ದಾರೆ. ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ ನೆರೆ ರಾಷ್ಟ್ರದಲ್ಲಿ ಹಿಂಸೆ ಅನುಭವಿಸುತ್ತಿರುವ ಜನರಿಗೆ ಮತ್ತೆ ಭಾರತಕ್ಕೆ ಬಂದು ನೆಲೆಸಲು ಅವಕಾಶ ನೀಡಬೇಕು ಎಂಬುದು ಪ್ರಸ್ತುತ ಕೇಂದ್ರ ಸರ್ಕಾರದ ನಿಲುವು.
ಕೇಂದ್ರ ಸರ್ಕಾರದ ಈ ನಿಲುವನ್ನು ಇಡೀ ದೇಶ ಸ್ವಾಗತಿಸುತ್ತದೆ. ಆದರೆ, ತಕರಾರಿರುವುದು ನೂತನ ಪೌರತ್ವ ತಿದ್ದುಪಡಿ ಮಸೂದೆಯಲ್ಲಿನ ಪೌರತ್ವ ಪಡೆಯಲು ಇರುವ ನಿಯಮ ಸಡಿಲಿಕೆಯ ಕುರಿತು.
ಈ ಹಿಂದಿನ ಮಸೂದೆಯಲ್ಲಿ ಭಾರತೀಯ ಮೂಲದ ನಿರಾಶ್ರಿತರು ದೇಶದ ಪೌರತ್ವ ಪಡೆಯಲು ಕನಿಷ್ಟ 12 ವರ್ಷ ಭಾರತದಲ್ಲಿ ನೆಲೆಸಿರಬೇಕು ಮತ್ತು ದೇಶದಲ್ಲಿ ನೆಲೆಸಲು ವಲಸಿಗರು ಸೂಕ್ತ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ ಎನ್ನಲಾಗಿತ್ತು. ಆದರೆ, ಹೊಸ ಕಾಯ್ದೆಯಲ್ಲಿ ಸೂಕ್ತ ದಾಖಲೆಗಳಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಪೌರತ್ವ ಪಡೆಯಲು ಕೇವಲ 6 ವರ್ಷ ಭಾರತದಲ್ಲಿ ನೆಲೆಸಿದರೆ ಸಾಕು ದೇಶದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂಬುದು ನೂತನ ಪೌರತ್ವ ತಿದ್ದುಪಡಿ ಮಸೂದೆಯ ಸಾರ.
ಈ ಮಸೂದೆ ಲೋಕಸಭೆ ಮತ್ತೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ಜಾರಿಯಾದರೆ 2015ಕ್ಕಿಂತ ಮುಂಚಿತವಾಗಿ ನೆರೆಯ ದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಬಂದು ನೆಲೆಸಿರುವ ನಿರಾಶ್ರಿತರಿಗೆ ದೇಶದ ಪೌರತ್ವ ದೊರೆಯುತ್ತದೆ. ಆದರೆ, ಭಾರತದ ಮೂಲದವರೇ ಆಗಿದ್ದರು ಇಸ್ಲಾಂ ಧರ್ಮದವರನ್ನು ಈ ಅವಕಾಶದಿಂದ ದೂರ ಇಡಲಾಗಿದೆ. ಇಸ್ಲಾಂ ಧರ್ಮದ ನಿರಾಶ್ರಿತರಿಗೆ ಮಾತ್ರ ಭಾರತ ಪೌರತ್ವ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಕಾರಣವೇನು?
ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಿಂದ ದೇಶದಲ್ಲಿರುವ ಅಕ್ರಮ ಬಾಂಗ್ಲಾ ಇಸ್ಲಾಂ ಧರ್ಮದ ವಲಸಿಗರನ್ನು, ರೋಹಿಂಗ್ಯಾ ಮುಸಲ್ಮಾನರನ್ನು ದೇಶದಿಂದ ಹೊರಹಾಕುವ ಸಲುವಾಗಿ “ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ”ಯನ್ನು ಜಾರಿಗೆ ತಂದಿದೆ. ಒಂದು ಅಂದಾಜಿನ ಪ್ರಕಾರ ಬಾಂಗ್ಲಾದೇಶ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಭಾರತಕ್ಕೆ ಬಂದು ನೆಲೆಸಿರುವ ನಿರಾಶ್ರಿತರ ಸಂಖ್ಯೆ ಬರೋಬ್ಬರಿ 20 ಲಕ್ಷಕ್ಕೂ ಅಧಿಕ. ಹೀಗೆ ಅಕ್ರಮವಾಗಿ ದೇಶಕ್ಕೆ ನುಸುಳಿದವರು ಇದೀಗ ದೇಶದ ನಾನಾಮೂಲೆಗಳಲ್ಲಿ ನೆಲೆಸಿದ್ದಾರೆ.
ಆದರೆ, ಈ ಅಕ್ರಮ ವಲಸಿಗರಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಹಿಂದೂಗಳು ಹಾಗೂ ಬೌದ್ಧರೂ ಇದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯ ಪ್ರಕಾರ ಇವರೆಲ್ಲ ಇದೀಗ ಭಾರತವನ್ನು ತ್ಯಜಿಸುವುದು ಅನಿವಾರ್ಯ. ಆದರೆ, ಎನ್ಆರ್ಸಿ ಕಾಯ್ದೆಯ ಮೂಲಕ ಹಿಂದೂಗಳನ್ನು ದೇಶದಿಂದ ಹೊರಗೆ ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಸುತಾರಾಂ ಇಷ್ಟವಿಲ್ಲ. ಇದೇ ಕಾರಣಕ್ಕೆ ಹಿಂದೂಗಳನ್ನು ದೇಶದಲ್ಲೇ ಉಳಿಸಿಕೊಂಡು ಮುಸ್ಲೀಮರನ್ನು ಮಾತ್ರ ದೇಶದಿಂದ ಗಡಿಪಾರು ಮಾಡುವ ಸಲುವಾಗಿ ಕೇಂದ್ರ ಸರ್ಕಾರ “ಪೌರತ್ವ ತಿದ್ದುಪಡಿ ಮಸೂದೆ”ಯನ್ನು ಜಾರಿಗೆ ತರಲು ಮುಂದಾಗಿದೆ ಎನ್ನಲಾಗುತ್ತಿದೆ.
ಈ ಮಸೂದೆಯಲ್ಲಿ ನಿರಾಶ್ರಿತರು ಅಕ್ರಮವಾಗಿ ದೇಶ ಪ್ರವೇಶ ಮಾಡಿದ್ದರೂ ಕೇವಲ ನೆರೆ ರಾಷ್ಟ್ರದ ಅಲ್ಪ ಸಂಖ್ಯಾತರಾದರೆ ಸಾಕು ಎಂಬ ನಿಯಮ ಬರೋಬ್ಬರಿ 5 ರಿಂದ 6 ಲಕ್ಷ ಹೆಚ್ಚುವರಿ ಹಿಂದೂ ನಿರಾಶ್ರಿತರನ್ನು ದೇಶದಲ್ಲೇ ಉಳಿಸಲಿದೆ. ಇದೇ ಕಾರಣಕ್ಕೆ ಈ ಮಸೂದೆ ಮುಸ್ಲೀಂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂಬುದು ಭಾರತೀಯ ಅಲ್ಪ ಸಂಖ್ಯಾತ ಸಮುದಾಯದ ಮೊದಲ ಆರೋಪ.
ಕೇಂದ್ರದ ಈ ನೂತನ ಮಸೂದೆಗೆ ಈಶಾನ್ಯ ಭಾರತ ರೊಚ್ಚಿಗೇಳಲು ಕಾರಣವೇನು?
ಈಶಾನ್ಯ ಭಾರತ ದೇಶದಲ್ಲೇ ಅತಿಹೆಚ್ಚು ಅಮೂಲ್ಯ ನೈಸರ್ಗಿಕ ಸಂಪತ್ತು ಹಾಗೂ ವಿಶಿಷ್ಠ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ರಾಜ್ಯಗಳು. ಆದರೆ, ಇದರ ಜೊತೆಗೆ ನೆರೆಯ ಟಿಬೆಟಿಯನ್ನರನ್ನೂ ಸೇರಿದಂತೆ ಅಸಂಖ್ಯಾತ ವಸಿಗರನ್ನು ತನ್ನ ಒಡಲಲ್ಲಿ ಸಾಕುತ್ತಿರುವ ರಾಜ್ಯವೂ ಹೌದು…!
ಈಗಾಗಲೇ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ನಿರಾಶ್ರಿತರ ಸ್ವರ್ಗವಾಗಿ ಬದಲಾಗಿದೆ. ಅಸ್ಸಾಂ ಒಂದೇ ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ನಿರಾಶ್ರಿತರು ನೆಲೆಸಿದ್ದಾರೆ. ಈ ಪೈಕಿ ಹಿಂದೂಗಳ ಸಂಖ್ಯೆಯೇ ಅಧಿಕ. ಅಲ್ಲದೆ, ಇಲ್ಲಿನ ಎಲ್ಲಾ ನಿರಾಶ್ರಿತರೂ ಅಕ್ರಮ ವಲಸಿಗರು ಎಂಬುದು ಉಲ್ಲೇಖಾರ್ಹ.
ಆದರೆ, ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರವಾದರೆ ಇಲ್ಲಿ ಎಲ್ಲಾ ಹಿಂದೂ ಅಕ್ರಮ ವಲಸಿಗರಿಗೂ ದೇಶದ ಪೌರತ್ವ ಲಭ್ಯವಾಗುತ್ತದೆ. ಹೀಗೆ ಎಲ್ಲರಿಗೂ ಪೌರತ್ವ ಲಭ್ಯವಾದರೆ ಇವರು ಸ್ಥಳೀಯ ಜನರ ಅವಕಾಶಗಳನ್ನು ಕಸಿದುಕೊಳ್ಳುತ್ತಾರೆ. ಸ್ಥಳೀಯ ಹಿಂದೂಗಳು ಅಲ್ಪ ಸಂಖ್ಯಾತರಾಗುತ್ತಾರೆ. ಈಶಾನ್ಯ ಭಾರತ ಮತ್ತೊಂದು ಕಾಶ್ಮೀರವಾಗಿ ಬದಲಾಗುತ್ತದೆ. ಅಲ್ಲದೆ, ನಿರಾಶ್ರಿತರಿಗೂ ನುಸುಳುಕೋರರಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ ಎಂಬುದು ಪ್ರತಿಭಟನಾಕಾರರ ವಾದ.
ಆದರೆ, ವಿರೋಧ ಪಕ್ಷಗಳ ಟೀಕೆ ಹಾಗೂ ಈಶಾನ್ಯ ಭಾರತೀಯರ ಜನಾಕ್ರೋಶದ ನಡುವೆಯೂ ಕೇಂದ್ರ ಸರ್ಕಾರ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಕಾಯ್ದೆ ಸಂಸತ್ನ ಎರಡೂ ಸದನದಲ್ಲಿ ಈಗಾಗಲೇ ಅಂಗೀಕಾರವಾಗಿದೆ. ಆದರೆ, ದೇಶದಾದ್ಯಂತ ಆರಂಭವಾಗಿರುವ ಪ್ರತಿಭಟನೆ ಕಡಿಮೆಯಾಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ.