ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ಎಡವಿ ಮುಖ ಕೆಡಿಸಿಕೊಂಡಿರುವ ಬಿಜೆಪಿಗೆ ಈಗ ಕರ್ನಾಟಕದಲ್ಲಿ ಮುಖ ಉಳಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಅಲ್ಪಮತದ ಸರ್ಕಾರವನ್ನು ಸರಳ ಬಹುಮತದ ಸರ್ಕಾರವಾಗಿ ಭದ್ರಪಡಿಸಿಕೊಳ್ಳುವ ಮೂಲಕ ಮಹಾರಾಷ್ಟ್ರದಲ್ಲಿ ಹೋಗಿರುವ ಮಾನವನ್ನು ಕರ್ನಾಟಕದಲ್ಲಿ ಗಳಿಸಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ.
ಹೌದು, ಬಿಜೆಪಿ ಪಾಲಿಗೆ ದಕ್ಷಿಣದ ಹೆಬ್ಬಾಗಿಲು ಮಾತ್ರವಲ್ಲ, ಏಕೈಕ ಬಾಗಿಲು ಕರ್ನಾಟಕ. ಅಂತೂ ಇಂತೂ ಅನರ್ಹ ಶಾಸಕರ ಕಾರಣದಿಂದಾಗಿ ಬಿಜೆಪಿ ಅಲ್ಪಮತದ ಸರ್ಕಾರ ರಚಿಸುವಂತಾಯಿತು. ಇದೀಗ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರವನ್ನು ಸರಳ ಬಹುಮತದೊಂದಿಗೆ ಉಳಿಸಿಕೊಳ್ಳುವುದು ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ.
ಹೀಗಾಗಿ ಇದುವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಮೇಲೆ ಹೊಂದಿರುವ ಹಿಡಿತವನ್ನು ಸಡಿಲಗೊಳಿಸಲು ನಡೆಸುತ್ತಿರುವ ಪ್ರಯತ್ನಗಳಿಗೆ ಪಕ್ಷದ ವರಿಷ್ಠರು ತಡೆಯೊಡ್ಡಿದ್ದಾರೆ. ಬದಲಾಗಿ ಯಡಿಯೂರಪ್ಪ ಅವರ ಸಂಪೂರ್ಣ ಸಹಕಾರ ಮತ್ತು ಸಲಹೆಯೊಂದಿಗೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂಬ ಸಂದೇಶವನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರವಾನಿಸಿದ್ದಾರೆ. ಪಕ್ಷದ ಎಲ್ಲಾ ನೀತಿ, ನಿರ್ಧಾರಗಳಲ್ಲಿ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಬೇಕು ಎಂಬ ಸ್ಪಷ್ಟ ಸೂಚನೆಯನ್ನೂ ನೀಡಿದ್ದಾರೆ.
ಹೌದು, ಮಹಾರಾಷ್ಟ್ರ ಸರ್ಕಾರ ರಚನೆ ವಿಚಾರದಲ್ಲಿ ಬಿಜೆಪಿಗೆ ಆಗಿರುವ ಅವಮಾನ ಮತ್ತು ಹಿನ್ನಡೆ ರಾಜ್ಯ ಬಿಜೆಪಿ ಘಟಕದಲ್ಲಿ ಯಡಿಯೂರಪ್ಪ ಅವರ ಶಕ್ತಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಅವರನ್ನು ನಿರ್ಲಕ್ಷಿಸಿದರೆ ಪಕ್ಷ ಗಟ್ಟಿಯಾಗುವುದು ಕಷ್ಟ ಎಂಬ ಅಭಿಪ್ರಾಯ ಬಿಜೆಪಿ ವರಿಷ್ಠರಿಗೆ ಬಂದಿದೆ. ಇದರ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳುವುದರೊಂದಿಗೆ ಯಡಿಯೂರಪ್ಪ ಅವರ ಕೈ ಬಲಪಡಿಸುವ ಕೆಲಸಕ್ಕೆ ವರಿಷ್ಠರು ಮುಂದಾಗಿದ್ದಾರೆ.
ಯಡಿಯೂರಪ್ಪ ನೇತೃತ್ವದ ಸರ್ಕಾರವೇ ಇರಬೇಕು
ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸದೇ ಇದ್ದರೂ ಸರ್ಕಾರ ಉರುಳಲು ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ ವರಿಷ್ಠರು, ಅದರಲ್ಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪದೇ ಪದೇ ಹೇಳುತ್ತಾ ಬಂದಿದ್ದಾರೆ. ಒಂದೊಮ್ಮೆ ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದರೆ ಬೆಂಬಲ ನೀಡಿ ಸರ್ಕಾರ ಉಳಿಸಲು ಜೆಡಿಎಸ್ ಕೈಜೋಡಿಸುತ್ತದೆ. ಆದರೆ, ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದವರಿಯಲು ಕುಮಾರಸ್ವಾಮಿಯವರಾಗಲಿ, ದೇವೇಗೌಡರಾಗಲಿ ಒಪ್ಪುವುದಿಲ್ಲ. ಯಡಿಯೂರಪ್ಪ ಬದಲು ಬೇರೆಯವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳ್ಳಿರಿಸಿ ನಂತರ ತಮ್ಮ ಆಟವನ್ನು ಜೆಡಿಎಸ್ ನಾಯಕರು ಶುರುಹಚ್ಚಿಕೊಳ್ಳುವುದು ಖಂಡಿತ.
ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಗೊತ್ತಿದೆ. ಏಕೆಂದರೆ, 2018ರ ವಿಧಾನಸಭೆ ಚುನಾವಣೆ ಬಳಿಕ ಯಾವುದೇ ಪಕ್ಷಕ್ಕೂ ಬಹುಮತ ಸಿಗದಿದ್ದರೆ ಜೆಡಿಎಸ್ ಬೆಂಬಲ ಪಡೆದು ಸರ್ಕಾರ ರಚಿಸುವ ಬಗ್ಗೆ ಮೊದಲೇ ಮಾತುಕತೆಯಾಗಿತ್ತು. ಆದರೆ, ಬಿಜೆಪಿ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಹೇಳಿದ್ದರಿಂದ ಜೆಡಿಎಸ್ ನಾಯಕರು ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಜತೆ ಹೋಗಿದ್ದರು. ಯಡಿಯೂರಪ್ಪ ಹೊರತಾಗಿ ಬೇರೆ ಯಾರನ್ನೇ ಮುಖ್ಯಮಂತ್ರಿ ಮಾಡಿದ್ದರೂ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುತ್ತಿತ್ತು. ಈಗಲೂ ಬಿಜೆಪಿಗೆ ಬೆಂಬಲ ನೀಡುವ ಪರಿಸ್ಥಿತಿ ಬಂದರೆ ಬೇರೆ ಯವರನ್ನು ಮುಖ್ಯಮಂತ್ರಿ ಮಾಡುವಂತೆ ಜೆಡಿಎಸ್ ಪಟ್ಟು ಹಿಡಿಯುವುದು ನಿಶ್ಚಿತ.
ಜೆಡಿಎಸ್ ಒತ್ತಾಯದಂತೆ ಮುಖ್ಯಮಂತ್ರಿಯನ್ನು ಬದಲಿಸಿ ಬಿಜೆಪಿ ಸರ್ಕಾರ ಉಳಿಸಿಕೊಳ್ಳಬಹುದು. ಆದರೆ, ಭವಿಷ್ಯದಲ್ಲಿ ಸರ್ಕಾರ ಮತ್ತು ಪಕ್ಷದ ಮೇಲೆ ಅದು ಪ್ರತೀಕೂಲ ಪರಿಣಾಮ ಬೀರುತ್ತದೆ. ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿ ಪಕ್ಷ ಕಟ್ಟಲು ಹೊರಟರೆ ಅದರಿಂದ ನಷ್ಟವೇ ಹೆಚ್ಚು. ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಆಗಿರುವ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರವಾಗುತ್ತದೆ. ಯಡಿಯೂರಪ್ಪ ಅವರೂ ಸುಮ್ಮನಾಗುತ್ತಾರೆ. ಸರ್ಕಾರ ಉರುಳಿಸಲು ಕಾಂಗ್ರೆಸ್ ಹೊಂಚು ಹಾಕುತ್ತಾ ಕುಳಿತಿರುವಾಗ ಲಿಂಗಾಯತ ಸಮುದಾಯ ದೂರವಾದರೆ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂದು ಹೇಳಲಾಗದು. ಸರ್ಕಾರ ಉರುಳಿ ಮಧ್ಯಂತರ ಚುನಾವಣೆ ಎದುರಾದರೆ ಆಗಲೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಆದ್ದರಿಂದ ಬಿಜೆಪಿ ಬಲವಾಗಿ ಇರಬೇಕಾದರೆ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವೇ ಇರಬೇಕಾಗುತ್ತದೆ. ಈ ಕಾರಣಗಳಿಂದಾಗಿಯೇ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರ ಕೈ ಬಲಪಡಿಸುವುದರ ಜತೆಗೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಎಲ್ಲಾ ತೀರ್ಮಾನಗಳನ್ನು ಕೈಗೊಳ್ಳಿ ಎಂದು ಪಕ್ಷದ ರಾಜ್ಯಾಧ್ಯರಿಗೆ ಸೂಚನೆ ನೀಡಿದ್ದಾರೆ.
ಉಪ ಚುನಾವಣೆಯಿಂದಲೇ ಒಗ್ಗಟ್ಟು ಪ್ರದರ್ಶನ
ವರಿಷ್ಠರ ಸೂಚನೆ ಮೇಲೆ ಪ್ರಸ್ತುತ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಿಂದಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿಯ ಒಗ್ಗಟ್ಟು ಪ್ರದರ್ಶನ ಆರಂಭವಾಗಲಿದೆ. ವರಿಷ್ಠರ ಸೂಚನೆಯನ್ನು ಎಲ್ಲಾ ಜಿಲ್ಲಾ ಘಟಕಗಳಿಗೂ ಕಳುಹಿಸಿಕೊಡಲಾಗಿದೆ. ಇದರಿಂದಾಗಿ ಸದ್ಯ ರಾಜ್ಯಾಧ್ಯಕ್ಷರ ಜತೆ ಗುರುತಿಸಿಕೊಂಡಿರುವ ನಾಯಕರು, ಮುಖಂಡರು ಕೂಡ ಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ಇದಲ್ಲದೆ, ಪಕ್ಷದ ರಾಜ್ಯ ಘಟಕ, ಜಿಲ್ಲಾ ಘಟಕ, ತಾಲೂಕು ಘಟಕಗಳ ಪುನಾರಚನೆ ವೇಳೆಯೂ ಯಡಿಯೂರಪ್ಪ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವಂತೆ ವರಿಷ್ಠರಿಂದ ಸೂಚನೆ ಬಂದಿದೆ. ಹೀಗಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮೇಲೆ ಪಕ್ಷದ ರಾಜ್ಯ ಘಟಕದಲ್ಲಿ ಅವರನ್ನು ಬದಿಗೆ ಸರಿಸುವ ಪ್ರಯತ್ನಗಳಿಗೆ ತೆರೆ ಬಿದ್ದಂತಾಗಿದೆ.
ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದ ಬಳಿಕ ಬಿಜೆಪಿ ಸರ್ಕಾರ ಬಹುಮತ ಗಳಿಸಿದರೆ ಈ ಗೆಲುವಿನ ಸಂಪೂರ್ಣ ಶ್ರೇಯಸ್ಸು ಯಡಿಯೂರಪ್ಪ ಮತ್ತು ಅವರ ತಂಡಕ್ಕೆ ಸಲ್ಲುತ್ತದೆಯೇ ವಿನಃ ಪಕ್ಷದ ಪದಾಧಿಕಾರಿಗಳಿಗಲ್ಲ. ಏಕೆಂದರೆ, ಶಾಸಕರು ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು ಯಡಿಯೂರಪ್ಪ ಅವರ ಮೇಲಿನ ವಿಶ್ವಾದಿಂದಲೇ ಹೊರತು ಬಿಜೆಪಿ ಕಾರಣಕ್ಕೆ ಅಲ್ಲ. ಹೀಗಾಗಿ ಆ ಅನರ್ಹ ಶಾಸಕರು ಗೆದ್ದರೆ ಯಶಸ್ಸಿನ ಸಿಂಹಪಾಲು ಯಡಿಯೂರಪ್ಪ ಅವರಿಗೇ ಸಲ್ಲಬೇಕಾಗುತ್ತದೆ. ಈ ಅಂಶವೇ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡದಂತೆ ವರಿಷ್ಠರಿಂದ ಸೂಚನೆ ಬರಲು ಕಾರಣವಾಗಿದೆ. ಆದ್ದರಿಂದ ಉಪ ಚುನಾವಣೆ ಫಲಿತಾಂಶ ಸರ್ಕಾರದ ಪರವಾಗಿ ಬಂದರೆ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಳೆದುಕೊಂಡಿರುವ ಹಿಡಿತ ಇನ್ನಷ್ಟು ಬಲಗೊಳ್ಳಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.