ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ. ಇಲ್ಲಿ ಒಂದು ರೀತಿಯಲ್ಲಿ ಗಾಳಿ ಬಂದ ಕಡೆಗೆ ತೂರು ಎಂಬಂತಹ ವಾತಾವರಣವೇ ಅಧಿಕ. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬರುತ್ತವೆ.
ರಾಜಕೀಯ ಪಕ್ಷಗಳು ಪರಸ್ಪರ ದ್ವೇಷ ಮಾಡಿದರೂ ಆಂತರ್ಯದಲ್ಲಿ ಒಂದು ಪಕ್ಷದ ನಾಯಕ ಮತ್ತೊಂದು ಪಕ್ಷದ ನಾಯಕನೊಂದಿಗೆ ಸಂಪರ್ಕ ಇಟ್ಟುಕೊಳ್ಳದೇ ಇರಲಾರ. ಹೀಗಾಗಿ ದ್ವೇಷದ ರಾಜಕಾರಣ ಕೇವಲ ಕ್ಷಣಿಕ ಎಂಬಂತಿತ್ತು.
ಆದರೆ, ದೇಶದಲ್ಲಿ ಕಳೆದ ಆರು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ದ್ವೇಷದ ರಾಜಕಾರಣ ಕೊಂಚ ಎಲ್ಲೆ ಮೀರಿದೆ ಎಂದೇ ಕರೆಯಬಹುದು.
ಪ್ರತಿಯೊಂದು ರಾಜ್ಯದಲ್ಲಿಯೂ ತನ್ನ ಪ್ರಗತಿಗೆ ಮುಳುಗು ನೀರಾಗುತ್ತಾರೆ ಎಂದು ಬಿಂಬಿಸಿಕೊಳ್ಳುವ ವಿರೋಧ ಪಕ್ಷಗಳ ನಾಯಕರನ್ನು ಒಬ್ಬೊಬ್ಬರನ್ನಾಗಿ ಸದ್ದಡಗಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ.
ಈ ಸದ್ದಡಗಿಸಲು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿರುವುದು ಸ್ವಾಯತ್ತ ಸಂಸ್ಥೆಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ(ಐಟಿ), ಸಿಬಿಐ ಮೊದಲಾದ ಸಂಸ್ಥೆಗಳನ್ನು. ಈ ಸಂಸ್ಥೆಗಳನ್ನು ಛೂ ಬಿಟ್ಟು ವಿರೋಧಿ ಪಾಳಯದ ನಾಯಕರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಪಿ.ಚಿದಂಬರಂ, ಜಗನ್ ಮೋಹನ್ ರೆಡ್ಡಿ, ಅಹ್ಮದ್ ಪಟೇಲ್ ಸೇರಿದಂತೆ ಹಲವಾರು ನಾಯಕರ ಮನೆ-ಕಚೇರಿಗಳ ಬಾಗಿಲಿಗೆ ಈ `ಸ್ವಾಯತ್ತ ಸಂಸ್ಥೆ’ಗಳ ಅಧಿಕಾರಿಗಳನ್ನು ಕಳುಹಿಸಿ ಕಿರುಕುಳ ನೀಡಿರುವುದು ಗೌಪ್ಯವಾಗಿ ಉಳಿದಿಲ್ಲ.
ಇನ್ನು ರಾಜ್ಯದ ವಿಚಾರಕ್ಕೆ ಬಂದರೆ ಕಾಂಗ್ರೆಸ್ ನ ಹಿರಿಯ ನಾಯಕ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಿದ್ದೆಗೆಡಿಸಿದ್ದು. ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆ ತಂದು ಅವರಿಗೆ ಆಶ್ರಯ ನೀಡಿದರು ಎಂಬ ಕಾರಣಕ್ಕೆ ಮತ್ತು ಇಂದಲ್ಲಾ ನಾಳೆ ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗೆ ಮೂಗುದಾರ ಹಾಕುವ ನಾಯಕನಾಗಲಿದ್ದಾರೆ ಎಂದು ಭಾವಿಸಿ ಅವರ ವಿರುದ್ಧ ಇಡಿ, ಐಟಿ ಮತ್ತು ಸಿಬಿಐ ಯನ್ನು ಛೂ ಬಿಟ್ಟು ಜೈಲಿಗೂ ಕಳುಹಿಸಿದ್ದಾಯ್ತು.
ತಗಲಾಕಿಕೊಂಡ ಕೇಂದ್ರ ಸರ್ಕಾರ!
ತಪ್ಪು ಮಾಡುವವನು ಒಂದಲ್ಲಾ ಒಂದು ದಿನ ಸಿಕ್ಕಿ ಹಾಕಿಕೊಳ್ಳಲೇಬೇಕಾಗುತ್ತದೆ. ಅದೇ ರೀತಿ ಕೇಂದ್ರ ಸರ್ಕಾರ ತನ್ನ ಮೂಗಿನ ನೇರಕ್ಕೆ ಕೆಲಸ ಮಾಡುವ ಇಡಿಯ ಮೂಲಕ ಸುಪ್ರೀಂ ಕೋರ್ಟಿನ ಕೈಗೆ ಸಿಕ್ಕಿ ಬಿದ್ದಿದೆ.
ಇಲ್ಲಿ ಅಧಿಕಾರಿಗಳು ಕೇಂದ್ರ ಸರ್ಕಾರದ ಅಣತಿ ಮೇರೆಗೆ ಹೇಗಾದರೂ ಮಾಡಿ ಡಿ.ಕೆ.ಶಿವಕುಮಾರ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಬೇಕೆಂದು ನಿರ್ಧರಿಸಿದ್ದರು. ಇದಕ್ಕೆ ಪ್ರಮುಖ ರಾಜ್ಯದಲ್ಲಿ ಇತ್ತೀಚೆಗಷ್ಟೇ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ವೇಳೆ ಶಿವಕುಮಾರ್ ಜೈಲಿನಿಂದ ಹೊರಗಿದ್ದರೆ ಸರ್ಕಾರಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸಂಚಕಾರ ಎಂದು ಭಾವಿಸಿದ ಕೇಂದ್ರ ಬಿಜೆಪಿ ನಾಯಕರು ಡಿಕೆಶಿಯನ್ನು ಮತ್ತೆ ಜೈಲಿಗೆ ಕಳುಹಿಸುವ ತಂತ್ರವನ್ನು ರೂಪಿಸಿದರು.
ಆದರೆ, ಅವರ ಈ ದ್ವೇಷ ಬಹುಕಾಲ ಗುಟ್ಟಾಗಿ ಉಳಿಯಲಿಲ್ಲ. ಅಧಿಕಾರಿಗಳು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ವಿರುದ್ಧ ಸಲ್ಲಿಸಿದ್ದ ಚಾರ್ಜ್ ಶೀಟನ್ನೇ ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿಯೂ ಸಲ್ಲಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಅಂದರೆ, ಚಿದಂಬರಂ ಚಾರ್ಜ್ ಶೀಟ್ ನಲ್ಲಿ ಚಿದಂಬರಂ ಹೆಸರಿದ್ದ ಜಾಗದಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ಸೇರ್ಪಡೆ ಮಾಡಿದ್ದಾರೆ. ಈ ಅಧಿಕಾರಿಗಳ ಹುಂಬತನ ಹೇಗಿತ್ತೆಂದರೆ, ಚಿದಂಬರಂ ಅವರು ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಇಲಾಖೆಗಳು ಅಂದರೆ ಗೃಹ ಸಚಿವ ಮತ್ತು ಆರ್ಥಿಕ ಸಚಿವ ಎಂದು ಡಿ.ಕೆ.ಶಿವಕುಮಾರ್ ಅವರ ಹುದ್ದೆಯನ್ನು ನಮೂದಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಇಡಿ ಅಧಿಕಾರಿಗಳಿಗೆ ಸಾಕಷ್ಟು ಛೀಮಾರಿಯನ್ನೇ ಹಾಕಿದೆ. ವಿವೇಚನೆ, ವಿವೇಕ ಇಲ್ಲದೇ ಚಾರ್ಜ್ ಶೀಟ್ ಸಲ್ಲಿಸಿದ್ದೀರಿ. ನೀವು ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತಿಲ್ಲ. ಚಿದಂಬರಂ ಪ್ರಕರಣದಲ್ಲಿ ಮಂಡಿಸಿದ ವಾದವನ್ನೇ ಇಲ್ಲಿ ಕಟ್ ಅಂಡ್ ಪೇಸ್ಟ್ ಮಾಡಿಕೊಂಡು ಬಂದಿದ್ದೀರಿ? ಏನಿದು ನಿಮ್ಮ ಕೆಲಸ? ಮೊದಲು ನಿಮ್ಮ ನಡೆಯನ್ನು ಬದಲಿಸಿಕೊಳ್ಳಿ ಎಂದು ತಾಕೀತು ಮಾಡಿ ಇಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಸ್ವಾಯತ್ತ ಸಂಸ್ಥೆಗಳಾಗಿ ಉಳಿಯದ ಕೇಂದ್ರ ಸಂಸ್ಥೆಗಳು
ಇಡಿ ಅಧಿಕಾರಿಗಳ ಈ ನಡೆಯನ್ನು ಗಮನಿಸಿದರೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಸ್ವಾಯತ್ತ ಸಂಸ್ಥೆಗಳ ಕಾರ್ಯ ವೈಖರಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬುದು ತಿಳಿಯುತ್ತದೆ. ಈ ಕಾರಣದಿಂದಲೇ ದ್ವೇಷವನ್ನು ಬಿಟ್ಟು ಸ್ವಾಯತ್ತ ಸಂಸ್ಥೆಗಳಾಗಿ ಕೆಲಸ ಮಾಡಿ ಎಂದು ಹೇಳಿರುವುದು.
ಸುಪ್ರೀಂಕೋರ್ಟ್ ಇಡಿ ಅಧಿಕಾರಿಗಳಿಗೆ ನಮ್ಮ ತೀರ್ಪಿನ ಜತೆ ಆಟವಾಡಬೇಡಿ. ಶಿವಕುಮಾರ್ ಅವರಿಗೆ ಹೊಸ ಸಮನ್ಸ್ ನೀಡುವಂತಿಲ್ಲ ಮತ್ತು ಅವರನ್ನು ಯಾವುದೇ ಕಾರಣಕ್ಕೂ ಅರೆಸ್ಟ್ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ.
ಇಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಇಡಿ, ಐಟಿಯಂತಹ ಸ್ವಾಯತ್ತ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ದ್ವೇಷದ ರಾಜಕಾರಣ ನಡೆಸುತ್ತಿದೆ ಎಂಬುದಕ್ಕೆ ಈಗ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಇಲ್ಲಿ ಡಿಕೆ ಶಿವಕುಮಾರ್ ಆಗಲೀ, ಪಿ.ಚಿದಂಬರಂ ಆಗಲೀ ಅವರನ್ನು ಸಮರ್ಥನೆ ಮಾಡುವ ಪ್ರಶ್ನೆಯಲ್ಲ. ಅವರು ಒಂದು ವೇಳೆ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ.
ಇಲ್ಲಿರುವ ಪ್ರಶ್ನೆಯೆಂದರೆ ಸ್ವಾಯತ್ತ ಸಂಸ್ಥೆ ಎಂಬ ಹಣೆಪಟ್ಟಿ ಕಟ್ಟಿಕೊಂಡು ಡಂಗೂರ ಸಾರುತ್ತಿರುವ ಇಡಿ, ಐಟಿ, ಸಿಬಿಐನಂತಹ ಸಂಸ್ಥೆಗಳ ಕಣ್ಣಿಗೆ ಕೇವಲ ಕಾಂಗ್ರೆಸ್ ಅಥವಾ ಇನ್ನಿತರೆ ಬಿಜೆಪಿಯೇತರ ಪಕ್ಷಗಳ ನಾಯಕರು ಮಾತ್ರ ಅಕ್ರಮ ನಡೆಸಿದ್ದಾರೆ. ಬಿಜೆಪಿ ನಾಯಕರು ಮಾತ್ರ ಸುಬಗರಂತೆ ಕಾಣುತ್ತಿದ್ದಾರೆಯೇ?
ಇಡೀ ದೇಶದ ವಿಚಾರ ಬೇಡ. ಕರ್ನಾಟಕದಲ್ಲಿಯೇ ಅದೆಷ್ಟೋ ಮಂದಿ ನಾಯಕರು ರಿಯಲ್ ಎಸ್ಟೇಟ್ ದಂಧೆ ಮೂಲಕ ಬಿಜೆಪಿ ಪ್ರವೇಶಿಸಿ ಅದರ ಆಶ್ರಯದಲ್ಲಿಯೇ ಅಕ್ರಮಗಳನ್ನು ನಡೆಸಿಲ್ಲವೇ? ನಡೆಸುತ್ತಿಲ್ಲವೇ? ಡಜನ್ ಗೂ ಹೆಚ್ಚು ಜನರ ವಿರುದ್ಧ ವಿವಿಧ ಹಣಕಾಸು ಅಕ್ರಮಗಳು ಸೇರಿದಂತೆ ಇನ್ನಿತರೆ ಅಕ್ರಮಗಳ ಬಗ್ಗೆ ದೂರುಗಳು ಸಲ್ಲಿಕೆಯಾಗಿಲ್ಲವೇ?
ಹಾಗಾದರೆ ಆ ಪ್ರಕರಣಗಳನ್ನು ಏಕೆ ರೀಓಪನ್ ಮಾಡುವ ಧೈರ್ಯವನ್ನು ಈ ಸೋಕಾಲ್ಡ್ ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರು ಮಾಡುತ್ತಿಲ್ಲ. ಈ ಬಿಜೆಪಿ ನಾಯಕರ ಮನೆ, ಆಸ್ತಿಪಾಸ್ತಿ ಮೇಲೇಕೆ ದಾಳಿ ಮಾಡುತ್ತಿಲ್ಲ? ಹಾಗಾದರೆ ಅವರೆಲ್ಲಾ ಸತ್ಯ ಹರಿಶ್ಚಂದ್ರರೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿರುವುದು ಸಹಜವಾಗಿದೆ.
ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ ದ್ವೇಷದ ರಾಜಕಾರಣವನ್ನು ಮಾಡದೇ ಇರಲಾರವು. ಈ ಹಿಂದೆ ದೇಶದಲ್ಲಿ ಹಲವಾರು ದಶಕಗಳ ಕಾಲ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಸಹ ದ್ವೇಷದ ರಾಜಕಾರಣವನ್ನು ನಡೆಸಿದ ನಿದರ್ಶನಗಳು ಸಾಕಷ್ಟಿವೆ. ರಾಜ್ಯ ಸರ್ಕಾರಗಳನ್ನು ವಜಾ ಮಾಡುವುದರಲ್ಲಿ ಕಾಂಗ್ರೆಸ್ ಪಕ್ಷ ಎತ್ತಿದ ಕೈ ಎಂಬ ಅಪಖ್ಯಾತಿಯನ್ನು ಹೊಂದಿದೆ. ಆದರೆ, ತೀರಾ ವ್ಯಕ್ತಿಗತವಾದ ದ್ವೇಷವನ್ನು ಸಾಧಿಸಿದ್ದು ಅತಿ ವಿರಳ. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡು `ಸ್ವಾಯತ್ತ’ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಾ ಅವರನ್ನು ಬಗ್ಗುಬಡಿಯುವ ಕೆಲಸ ಮಾಡುತ್ತಿದೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ದೇಶಾದ್ಯಂತ ತನ್ನ ವಿರುದ್ಧ ಸೆಡ್ಡು ಹೊಡೆಯುತ್ತಿರುವ ನಾಯಕರ ತೊಡೆಯನ್ನು ಮುರಿಯುವ ಕೆಲಸ ಮಾಡುತ್ತಿದೆ ಬಿಜೆಪಿ ಸರ್ಕಾರ.