ಕರೋನಾ ವೈರಸ್ ಸೋಂಕು ತಡೆಗೆ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಹುಮುಖ್ಯವಾಗುತ್ತದೆ. ಆದರೆ ಬಿಜೆಪಿ ಸರ್ಕಾರದಲ್ಲಿ ವಿರೋಧ ಪಕ್ಷಗಳ ಮಾತಿಗೆ ಕಿಮ್ಮತಿಲ್ಲದಂತಾಗಿದೆಯಾ ಎನ್ನುವ ಅನುಮಾನಗಳು ದಟ್ಟವಾಗುತ್ತಿವೆ. ಮೊದಲು ಕರೋನಾ ಸೋಂಕು ತಡೆಯುವ ವಿಚಾರದಲ್ಲಿ ಸರ್ಕಾರ ಎಡರು ತೊಡರಿನ ಕಾಲು ಹಾಕುತ್ತಾ ಸಾಕಷ್ಟು ನಿರ್ಧಾರಗಳಲ್ಲಿ ಎಡವಿತ್ತು. ಆ ಬಳಿಕ ಸುಧಾರಿಸಿಕೊಂಡು ಎಲ್ಲರ ಸಲಹೆ ಸೂಚನೆ ಕೇಳಿಕೊಂಡು ಉತ್ತಮ ಸ್ಥಿತಿಗೆ ಬಂದಿತ್ತು. ಆದರೆ ಮುಸಲ್ಮಾನರು ವಾಸಿಸುವ ಪ್ರದೇಶದಲ್ಲಿ ಸೋಂಕು ಕಾಣಿಸಿಕೊಂಡ ನಂತರ ಅಲ್ಲಿ ನಡೆದ ಕೆಲವೊಂದು ಹಲ್ಲೆ ಹಾಗೂ ಹಲ್ಲೆ ಯತ್ನ ಘಟನೆಗಳ ಬಳಿಕ ಸರ್ಕಾರ ಯೂಟರ್ನ್ ತೆಗೆದುಕೊಂಡಿತ್ತು. ಆ ನಂತರ ತೆಗೆದುಕೊಂಡ ನಿಲುವುಗಳು ಸರ್ಕಾರದ ಪಾಲಿಗೆ ಮುಳುವಾಗುತ್ತಿವೆ. ಕರೋನಾ ಸೋಂಕನ್ನೇ ಕಾಣದ ರಾಮನಗರ ಸೋಂಕಿಗೆ ತುತ್ತಾಗಿದ್ದು, ಅದೆಷ್ಟು ಜನರಿಗೆ ಸೋಂಕು ಹರಡುತ್ತದೆಯೋ ಎನ್ನುವ ಆತಂಕ ರೇಷ್ಮೆ ನಾಡಿನಲ್ಲಿ ಮನೆ ಮಾಡಿದೆ.
ಪಾದರಾಯನಪುರ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡುವ ನಿರ್ಧಾರ ಮಾಡಲಾಗಿತ್ತು. ಆಗಲೇ ವಿರೋಧ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ರಾಮನಗರ ಗ್ರೀನ್ ಜೋನ್ಲ್ಲಿದೆ. ನನ್ನ ಮಗನ ಮದುವೆ ಬಗ್ಗೆ ಸಾಕಷ್ಟು ಟೀಕೆ ಮಾಡಿದಿರಿ. ಆದರೆ ಇದೀಗ ಸೋಂಕಿತ ಪ್ರದೇಶದ ಆರೋಪಿಗಳನ್ನು ರಾಮನಗರಕ್ಕೆ ಕರೆತರುತ್ತಿರುವುದು ಯಾವ ಉದ್ದೇಶಕ್ಕೆ ಎಂದು ಪ್ರಶ್ನೆ ಮಾಡಿದ್ದರು. ಆದರೂ ಮೊದಲಿಗೆ 49 ಜನ ಹಾಗೂ ನಂತರ 72 ಮಂದಿಯನ್ನು ಶಿಫ್ಟ್ ಮಾಡಲಾಗಿತ್ತು. ಆದರೆ ಇದೀಗ ಇಬ್ಬರು ಆರೋಪಿಗಳಿಗೆ ಕರೋನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನೂ ಮೂರರಿಂದ ನಾಲ್ಕು ಮಂದಿ ಆರೋಪಿಗಳಲ್ಲಿ ರೋಗ ಲಕ್ಷಣ ಕಾಣಿಸಿವೆ ಎನ್ನಲಾಗ್ತಿದೆ. ಜೈಲು ಸಿಬ್ಬಂದಿ ಕೂಡ ಸರ್ಕಾರದ ನಡೆಯನ್ನು ವಿರೋಧಿಸಿ ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಸೋಂಕು ಕಾಣಿಸಿಕೊಳ್ಳುವ ಮುನ್ಸೂಚನೆ ಇದ್ದರೂ ರಾಜ್ಯ ಸರ್ಕಾರ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದ ಉದ್ದೇಶವೇನು ಎಂದು ಎಲ್ಲರೂ ಪ್ರಶ್ನಿಸುವಂತಾಗಿದೆ. ಒಂದು ವೇಳೆ ಜೈಲು ಸಿಬ್ಬಂದಿಗಳಿಗೆ ಸೋಂಕು ತಗುಲಿದ್ದರೆ, ಅವರ ಕುಟುಂಬಸ್ಥರಿಗೂ ಸೋಂಕು ತಗುಲುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ.
Also Read: ಕರೋನಾ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಕಠಿಣ ಕಾನೂನು ಜಾರಿ..!
ಸರ್ಕಾರದ ನಡೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ತೀವ್ರವಾಗಿ ಖಂಡಿಸಿದ್ದಾರೆ. ರಾಮನಗರ ಜೈಲಿನಿಂದ 119 ಮಂದಿಯನ್ನು ಶಿಫ್ಟ್ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಟ್ವೀಟ್ ಮೂಲಕ ಎಚ್ಚರಿಕೆ ಕೊಟ್ಟಿದ್ದರು. ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ನನ್ನ ಮೇಲಿನ ದ್ವೇಷಕ್ಕೆ ಜನರಿಗೆ ತೊಂದರೆ ಕೊಡುವುದು ಬೇಡ. ಅಲೋಕ್ ಮೋಹನ್ ಎಂಬ ಅಧಿಕಾರಿಗೆ ನನ್ನ ಮೇಲೆ ದ್ವೇಷವಿದೆ. ಇದೇ ಮನುಷ್ಯನೇ ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡಿಸಿದ್ದು, ನನ್ನ ಮೇಲಿನ ದ್ವೇಷವನ್ನು ನನ್ನ ಮೇಲೇ ತೀರಿಸಿಕೊಳ್ಳಲಿ, ಜನರ ಮೇಲೆ ಬೇಡ ಎಂದಿದ್ದಾರೆ.
ಸರ್ಕಾರದ ತಪ್ಪು ಕ್ರಮದಿಂದ ರಾಮನಗರ ಜನಕ್ಕೆ ಸಂಕಷ್ಟ ಎದುರಾಗಿದೆ. 2 ಬ್ಯಾಚ್ನಲ್ಲಿ ಬಂದಿದ್ದ ಆರೋಪಿಗಳನ್ನು ತಲಾ 25 ಆರೋಪಿಗಳಿಗೆ ಒಂದು ಕೊಠಡಿ ಮೀಸಲಿಡಲಾಗಿತ್ತು. ಅವರಿಗೆ ಊಟ ಬಡಿಸಿದವರಿಂದ ಎಲ್ಲಾ ಸಿಬ್ಬಂದಿಗಳಿಗೆ ಸೋಂಕು ಹಬ್ಬಿದೆ ಎನ್ನುವ ಮಾತು ಶುರುವಾಗಿದೆ ಎಂದಿದ್ದಾರೆ.
ಕುಮಾರಸ್ವಾಮಿ ಆರೋಪವನ್ನು ತಳ್ಳಿ ಹಾಕಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೈದಿಗಳನ್ನು ಶಿಫ್ಟ್ ಮಾಡಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ಆರೋಪಿಗಳನ್ನು ಶಿಫ್ಟ್ ಮಾಡಲು ಕ್ರಮಕೈಗೊಳ್ಳಲಾಗಿದೆ. ಜೈಲು ಸಿಬ್ಬಂದಿಗಳಿಗೂ ಕ್ವಾರಂಟೈನ್ಗೆ ಸೂಚನೆ ಕೊಡಲಾಗಿದೆ. ಪಾದರಾಯನಪುರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರಿಗೂ ತಪಾಸಣೆಗೆ ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಪಾದರಾಯನಪುರ ಕಾರ್ಯಾಚರಣೆಯಲ್ಲಿ ಭಾಗಿಯಾದವರನ್ನೂ ಕ್ವಾರಂಟೈನ್ ಮಾಡಲಾಗುತ್ತದೆ ಎಂದಿದ್ದಾರೆ. ಯಾರು ಸಲಹೆ ಕೊಡ್ತಾರೆ ಎನ್ನುವುದು ಮುಖ್ಯವಲ್ಲ, ನಾವು ಏನೇ ಮಾಡಿದರೂ ಆಪಾದನೆ ಬಂದೇ ಬರುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಜೈಲಿನಲ್ಲಿ ಇಡುವ ಬದಲು ಆಸ್ಪತ್ರೆಯಲ್ಲಿ ಇಟ್ಟಿದ್ದರೂ ಆರೋಪ ಮಾಡುತ್ತಿದ್ದರು ಎನ್ನುವ ಮೂಲಕ ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ್ದಾರೆ.
Also Read: ಲಾಕ್ಡೌನ್ ವಿನಾಯಿತಿ ನಿರ್ಧಾರ ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆಯೇ?
ರಾಮನಗರ ಜೈಲಿನಿಂದ ಈಗಾಗಲೇ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗಿದೆ. ಆದರೆ, ಬೆಂಗಳೂರಿನಿಂದ ರಾಮನಗರಕ್ಕೆ ಶಿಫ್ಟ್ ಮಾಡುವ ಬದಲು ಬೆಂಗಳೂರಿನಲ್ಲೇ ಸಾಕಷ್ಟು ಹೋಟೆಲ್ಗಳಿವೆ. ಆ ಹೋಟೆಲ್ನಲ್ಲೇ ಕ್ವಾರಂಟೈನ್ ಮಾಡಬಹುದಿತ್ತು. ರಾಮನಗರ ಜೈಲಿನಲ್ಲಿದ್ದ 177 ಕೈದಿಗಳ ಪೈಕಿ 160 ಜನರನ್ನು ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಿ, ನಂತರ ಪಾದರಾಯನಪುರ ಆರೋಪಿಗಳನ್ನು ಇಲ್ಲಿಗೆ ಕರೆತರುವ ಅವಶ್ಯಕತೆ ಏನಿತ್ತು? ಒಂದು ವೇಳೆ ಸಂಪೂರ್ಣ ಜೈಲನ್ನು ಕ್ವಾರಂಟೈನ್ಗೆ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದರು ಎನ್ನುವುದಾದರೆ, ಈಗ ಎಲ್ಲಾ ಆರೋಪಿಗಳನ್ನು ಜೈಲಿನಿಂದ ವಾಪಾಸ್ಸು ಶಿಫ್ಟ್ ಮಾಡಿರುವುದು ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಅವರೇ ನೀಡಬೇಕಿದೆ. ಇದೀಗ ಜೈಲಿನಲ್ಲಿ ಸನ್ನಡತೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 17 ಕೈದಿಗಳಿಗೆ ಸೋಂಕು ಬಂದಿದ್ದರೆ ಯಾರು ಹೊಣೆ? ಜೈಲಿನ ಪೊಲೀಸ್ ಸಿಬ್ಬಂದಿಗಳಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಅವರಿಂದ ಅವರ ಮನೆಯವರಿಗೆ ಸೋಂಕು ಹರಡಿದರೆ, ಗ್ರೀನ್ ಜೋನ್ನಲ್ಲಿರುವ ರಾಮನಗರ ಆರೇಂಜ್ ಜೋನ್ ಅಥವಾ ರೆಡ್ಜೋನ್ನತ್ತ ಹೋಗಲಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ವಿರೋಧ ಪಕ್ಷಗಳ ಮಾತನ್ನು ಧಿಕ್ಕರಿಸಿದ್ದರು. ರಾಹುಲ್ ಗಾಂಧಿ ಕರೋನಾ ವೈರಸ್ ಸೋಂಕು ತುಂಬಾ ಅಪಾಯಕಾರಿ ಎನಿಸುತ್ತಿದೆ. ಭಾರತ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ ಎಂದು ಟೀಕಿಸಿದ ಬಳಿಕವೂ ಕೇಂದ್ರ ಸರ್ಕಾರ ರಾಹುಲ್ ಮಾತನ್ನು ಮುಲಾಜಿಗೆ ತೆಗೆದುಕೊಳ್ಳಲಿಲ್ಲ. ಕರ್ನಾಟಕದಲ್ಲೂ ಕುಮಾರಸ್ವಾಮಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದರು. ಆದರೆ ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದ ರಾಜ್ಯ ಸರ್ಕಾರ, ರಾಮನಗರಕ್ಕೆ ಸೋಂಕಿತ ಆರೋಪಿಗಳನ್ನು ಶಿಫ್ಟ್ ಮಾಡಿದ್ದು, ಇದೀಗ ಅಲ್ಲಿಂದ ಅವರನ್ನು ಹಜ್ ಭವನಕ್ಕೆ ಶಿಫ್ಟ್ ಮಾಡುತ್ತಿರುವುದು ಎಲ್ಲವನ್ನೂ ನೋಡಿದರೆ ಆಡುವ ಮಕ್ಕಳ ಕೆಲಸದಂತಾಗಿದೆ. ಇದಿಗ ಡಿಸಿಎಂ ಅಶ್ವತ್ಥ ನಾರಾಯಣ ಸಿಎಂ ಭೇಟಿ ಬಳಿಕ ಮತ್ತೊಂದು ಸ್ಫೋಟಕ ವಿಚಾರ ತಿಳಿಸಿದ್ದು, ರಾಮನಗರ ಜೈಲಿನಲ್ಲಿ ಐವರಿಗೆ ಸೋಂಕು ಬಂದಿದೆ ಎಂದು ಖಚಿತಪಡಿಸಿದ್ದಾರೆ. ಒಟ್ಟಾರೆ, ಕರೋನಾ ಸೋಂಕಿತರನ್ನೂ ಧರ್ಮದ ಆಧಾರದಲ್ಲಿ ನೋಡಲು ಹೋದ ಸರ್ಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ಮಕಾಡೆ ಬಿದ್ದಿದೆ. ಮುಂದೆ ಯಾವ ರೀತಿ ನಿಭಾಯಿಸಲಿದೆ ಎನ್ನುವುದು ಈಗಿರುವ ಸವಾಲು.