ವಿವಾದಿತ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020 ವಿಧಾನಪರಿಷತ್ತಿನಲ್ಲಿ ಜೆಡಿಎಸ್ನ ಸಹಾಯದಿಂದ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಜೆಡಿಎಸ್ ವಿರುದ್ದ ಅಸಮಾಧಾನ ಭುಗಿಲೆದ್ದಿದೆ. 450 ಎಕರೆ ಕೃಷಿ ಭೂಮಿಯನ್ನು ಖರೀದಿಸಲು ಯಾರಿಗೆ ಬೇಕಾದರೂ ಅವರಕಾಶವನ್ನು ನೀಡುವ ಈ ಕಾಯ್ದೆಯನ್ನು ಜಾರಿಗೆ ತಂದಿರುವ ವಿರುದ್ದ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ನಟ ಚೇತನ್ ಕೂಡಾ ಈ ತಿದ್ದುಪಡಿಯ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ರೈತ ನಾಯಕರು ಎಂದು ಹೇಳಿಕೊಂಡು ಮತ ಪಡೆದ ಬಿ ಎಸ್ ಯಡಿಯೂರಪ್ಪ, ದೇವೇಗೌಡ ಹಾಗೂ ಕುಮಾರಸ್ವಾಮಿಯವರು, ಮೋಸಗಾರರು ಎಂದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ತಿದ್ದುಪಡಿ ವಿಧಾನಪರಿಷತ್ತಿನಲ್ಲಿ ಅಂಗೀಕಾರವಾದ ತಕ್ಷಣವೇ ರೈತ ಪರ ಸಂಘಟನೆಗಳು ಹಾಗೂ ಐಕ್ಯ ಹೋರಾಟ ಸಮಿತಿಯು ನಗರದ ಮೌರ್ಯ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದವು. ಪೊಲೀಸರ ಮನವೊಲಿಕೆಗೆ ಜಗ್ಗದ ರೈತ ಮುಖಂಡರನ್ನು ವಶಕ್ಕೂ ಪಡೆಯಲಾಗಿತ್ತು.