ಮುದ್ದು ಮುಖದ ಲೀನಾ ಹಿಂದಿ ಚಿತ್ರರಂಗದಲ್ಲಿ ಮಿನುಗಿದ ಕನ್ನಡತಿ. ಸಿಕ್ಕಿದ ಕೆಲವೇ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಪಾತ್ರಗಳಿಗೆ ನ್ಯಾಯ ಸಲ್ಲಿಸಿದರು. ಹುಟ್ಟಿದ್ದು ಧಾರವಾಡದಲ್ಲಿ (1950). ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಅಲ್ಲಿಯೇ. ಸಿನಿಮಾ ಕುರಿತಾಗಿ ಲೀನಾಗಿದ್ದ ಅಪಾರ ಅಭಿಮಾನ, ಪ್ರೀತಿಯೇ ಅವರನ್ನು ಮುಂಬೈಗೆ ಕರೆದೊಯ್ದಿದ್ದು. ಅತಿಯಾದ ಮುಗ್ಧ ಭಾವವೇ ಒಂದು ಹಂತದಲ್ಲಿ ಆಕೆಗೆ ಆರಂಭದಲ್ಲಿ ತೊಡಕಾಗಿದ್ದು ಹೌದು.
ಫಿಲ್ಮ್‌ಫೇರ್ ನಡೆಸಿದ ‘ಫ್ರೆಶ್ ಫೇಸ್’ ಸ್ಪರ್ಧೆಯಲ್ಲಿ ಲೀನಾ ರನ್ನರ್ ಅಪ್ ಆಗಿ ಗುರುತಿಸಿಕೊಂಡರು. ಬಣ್ಣದ ಬದುಕಿಗೆ ಪ್ರವೇಶಿಸಲು ಇದೇ ನಾಂದಿಯಾಯ್ತು. ಸಿನಿಮಾದಲ್ಲಿ ನಟಿಸುವ ಆಸಕ್ತಿಯಿದ್ದರೂ ಅವರಿಗೆ ಆಗ ಸೂಕ್ತ ಅವಕಾಶಗಳು ಸಿಗಲಿಲ್ಲ. ಅವರು ಜಾಹೀರಾತುಗಳೆಡೆ ಹೊರಳಿದರು. ಅದೃಷ್ಟ ಆಕೆಯನ್ನು ಕೈಬಿಡಲಿಲ್ಲ. ಜಾಹೀರಾತಿನಲ್ಲಿ ಆಕೆಯನ್ನು ನೋಡಿದ ನಟ ಸುನಿಲ್ ದತ್ ತಮ್ಮ ಚಿತ್ರಕ್ಕೆ ಕರೆತಂದರು. ಇದಕ್ಕೆ ಸುನಿಲ್‌ರ ತಾರಾ ಪತ್ನಿ ನರ್ಗಿಸ್‌ರ ಶಿಫಾರಸು ಕೂಡ ಇತ್ತು. ಸುನೀಲ್ ದತ್‍ರ `ಮನ್ ಕಾ ಮೀಠ್’ ಚಿತ್ರದೊಂದಿಗೆ ಲೀನಾ ಬೆಳ್ಳಿತೆರೆಗೆ ಪರಿಚಯವಾದರು. ನಟ ವಿನೋದ್ ಖನ್ನಾ ಅವರಿಗೂ ಇದು ಚೊಚ್ಚಲ ಸಿನಿಮಾ ಎನ್ನುವುದು ವಿಶೇಷ.
ಬಬ್ಲಿ ಇಮೇಜ್‍ನ ಲೀನಾಗೆ ಸಿನಿಮಾಗಳಲ್ಲಿ ಸದೃಢ ಪಾತ್ರಗಳು ಸಿಗಲಿಲ್ಲ. ಆದರೆ ಸಿಕ್ಕ ಅವಕಾಶಗಳಲ್ಲೇ ಅವರು ಗಮನ ಸೆಳೆದರು. 1969ರಿಂದ 1979ರ ಅವಧಿಯಲ್ಲಿ ಅವರು ನಾಯಕಿಯಾಗಿ ನಟಿಸಿದ ಹಲವು ಸಿನಿಮಾಗಳು ಯಶಸ್ಸು ಕಂಡವು. `ಮೆಹಬೂಬ್ ಕಿ ಮೆಹಂದಿ’, `ರಖ್‍ವಾಲಾ’, `ಹನಿಮೂನ್’, `ಮೇ ಸುಂದರ್ ಹೂ’, `ಎಕ್ ಕುವಾರಾ ಎಕ್ ಕುವಾರಿ’ ಲೀನಾರ ಪ್ರಮುಖ ಸಿನಿಮಾಗಳು. ದಿಲೀಪ್ ಕುಮಾರ್‌ರ `ಬೈರಾಗ್’ ಮತ್ತು ರಾಜೇಶ್ ಖನ್ನಾ ಜೊತೆಗಿನ ‘ಮೆಹಬೂಬ್ ಕಿ ಮೆಹಂದಿ’ ಚಿತ್ರಗಳು ಲೀನಾರ ಶ್ರೇಷ್ಠ ಅಭಿನಯಕ್ಕೆ ಸಾಕ್ಷಿಯಾಗಿವೆ.
ಹಿರಿಯರು ನಿಶ್ಚಯಿಸಿದಂತೆ ಲೀನಾ ಅವರು ಗೋವಾ ಮೂಲದ ರಾಜಕಾರಣಿ ಸಿದ್ದಾರ್ಥ್ ಬಂಡೋದ್ಕರ್ ಅವರನ್ನು ವರಿಸಿದರು. ಆಕಸ್ಮಿಕವೊಂದರಲ್ಲಿ ಸಿದ್ದಾರ್ಥ್ ಮೃತರಾದಾಗ ಲೀನಾಗೆ 25 ಇಪ್ಪತ್ತೈದು ವರ್ಷವಷ್ಟೆ. ಇದಾಗಿ ಕೆಲ ಸಮಯದಲ್ಲೇ ಅವರು ಮೇರು ಗಾಯಕ, ನಟ ಕಿಶೋರ್ ಕುಮಾರ್‍ರನ್ನು ವರಿಸಿದರು. ಅದು ಕಿಶೋರ್‍ಗೆ ನಾಲ್ಕನೇ ವಿವಾಹ. ಮದುವೆಯ ನಂತರ ಲೀನಾ ನಟನೆಯಿಂದ ಸಂಪೂರ್ಣವಾಗಿ ದೂರ ಉಳಿದರು. ಲೀನಾ – ಕಿಶೋರ್ ದಾಂಪತ್ಯಕ್ಕೆ ಪುತ್ರ ಸುಮಿತ್ ಕುಮಾರ್ ಜನಿಸಿದ.
ಸೋನಿ ಟೀವಿ ಆಯೋಜಿಸಿದ್ದ ಜನಪ್ರಿಯ ‘ಕೆ ಫಾರ್ ಕಿಶೋರ್’ (2007) ರಿಯಾಲಿಟಿ ಶೋನ ಕೆಲವು ಸಂಚಿಕೆಗಳಲ್ಲಿ ಲೀನಾ ಅತಿಥಿ ತೀರ್ಪುಗಾರ್ತಿಯಾಗಿ ಪಾಲ್ಗೊಂಡಿದ್ದರು. ಇದಾದ ನಂತರ ಲೀನಾ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದಾರೆ. ಸದ್ಯ ಲೀನಾ ಚಂದಾವರ್ಕರ್ ತಮ್ಮ ಪುತ್ರ ಸುಮಿತ್ ಕುಮಾರ್ ಜೊತೆ ಮುಂಬಯಿಯಲ್ಲಿ ನೆಲೆಸಿದ್ದಾರೆ.