ಕರೋನಾ ಸೋಂಕು ದಿನವೊಂದಕ್ಕೆ 6 ಸಾವಿರ ಗಡಿ ದಾಟಿ ವ್ಯಾಪಿಸುತ್ತಿದೆ. ಆದರೂ ಹೆಚ್ಚಿನ ಜನರು ಯಾವುದೇ ಭಯಭೀತಿಗೆ ಒಳಗಾಗದೆ ದಿನನಿತ್ಯದ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ, ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಕಂಡಾಗ ನಿಜವಾಗಿಯೂ ಸರ್ಕಾರ ಇದೆಯಾ..? ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ವೈದ್ಯರಿಗೆ ಮಾನವೀಯತೆ ಇದೆಯಾ ಎನ್ನುವ ಪ್ರಶ್ನೆ ಮೂಡುವುದು ಸಹಜ. ರಾಜ್ಯಾದ್ಯಂತ ಈ ರೀತಿಯ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಇದೊಂದು ಪ್ರಕರಣ ಮಾತ್ರ ಕಣ್ಣೀರು ತರದೆ ಇರಲಾರದು. ಸ್ವತಃ ಶಾಸಕಿಯೇ ಮುಂದೆ ನಿಂತು ಹಾಸ್ಪಿಟಲ್‌ಗಳಿಗೆ ಕರೆ ಮಾಡಿ ಮನವಿ ಮಾಡಿಕೊಂಡರೂ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಮನಸ್ಸು ಕರಗಲಿಲ್ಲ. ಆಸ್ಪತ್ರೆಗಳಿಂದ ಆಸ್ಪತ್ರೆಗೆ ಸುತ್ತಾಡುತ್ತಲೇ ಪ್ರಾಣ ಬಿಟ್ಟಿದ್ದಾಳೆ 6 ದಿನಗಳ ಬಾಣಂತಿ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಡೆದಿದ್ದೇನು..?
ಕಳೆದ ಆರು ದಿನಗಳ ಹಿಂದೆ 26 ವರ್ಷದ ಮಹಿಳೆಗೆ ಹೆರಿಗೆಯಾಗಿತ್ತು. ಆ ಬಳಿಕ ಕರೋನಾ ತಪಾಸಣೆ ಮಾಡಿದ್ದು, ನಿನ್ನೆ ಸೋಂಕು ಇರುವುದು ದೃಢಪಟ್ಟಿದೆ. ಕರೋನಾ ಸೋಂಕಿನ ವರದಿ ಬರುವ ಮುನ್ನವೇ ಮಹಿಳೆಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಆದರೂ ಪಾಸಿಟಿವ್ ರಿಪೋರ್ಟ್ ಬಂದ ಬಳಿಕ ಆಸ್ಪತ್ರೆಗೆ ಸೇರಿಸಲು ಕುಟುಂಬಸ್ಥರು ಮುಂದಾಗಿದ್ದರು. ಗುರುವಾರ ರಾತ್ರಿಯಿಂದ ಆಂಬ್ಯುಲೆನ್ಸ್ ಮಾಡಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೆ ಯಾವುದೇ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡುವ ಮನಸ್ಸು ಮಾಡಲಿಲ್ಲ. ಎಲ್ಲಾ ಆಸ್ಪತ್ರೆಗಳಲ್ಲೂ ಉತ್ತರ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಇಲ್ಲ ಎನ್ನುವ ಉತ್ತರವೇ ದೊರೆತಿದೆ. ಎಂಎಸ್ ರಾಮಯ್ಯ, ಸುಹಾಸ್ ಚಾರಿಟೆಬಲ್ ಹಾಸ್ಪಿಟಲ್, ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ವೆಂಕಟೇಶ್ವರ ಆಸ್ಪತ್ರೆ ಸೇರಿದಂತೆ ಸಾಕಷ್ಟು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಕೊನೆಗೆ ಎಲ್ಲೂ ಚಿಕಿತ್ಸೆ ಸಿಗದೆ 6 ದಿನದ ಕಂದಮ್ಮನ್ನನ್ನು ಬಿಟ್ಟು ಆ ತಾಯಿ ಆಂಬ್ಯುಲೆನ್ಸ್‌ನಲ್ಲೇ ಸಾವನ್ನಪ್ಪಿದ್ದಾರೆ.
ಉಸಿರಾಟ ಸಮಸ್ಯೆಯಿಂದ ಬಳಲುತಿದ್ದ ಬಾಣಂತಿಯ, ಸಂಬಂಧಿಕರು ನಿನ್ನೆ ತಡರಾತ್ರಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ಸಂಪರ್ಕಿಸಿದ್ದು, ತಮಗೆ ಹೇಗಾದರೂ ಸಹಾಯ ಮಾಡಿ ಎಂದು ಬೇಡಿಕೊಂಡಿದ್ದಾರೆ. ಶಾಸಕಿ ಸೌಮ್ಯಾ ರೆಡ್ಡಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳಿಗೂ ಒಂದು ಬೆಡ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಎಲ್ಲಿಯೂ ಬೆಡ್ ವ್ಯವಸ್ಥೆ ಆಗಿಲ್ಲ. ಟ್ವೀಟ್ ಮೂಲಕವೂ ಮನವಿ ಮಾಡಿಕೊಂಡಿದ್ದಾರೆ, ಯಾವ ಅಧಿಕಾರಿಗಳಿಂದಲೂ ಸರಿಯಾದ ಸ್ಪಂದನೆ ದೊರೆತಿಲ್ಲ. ಅಂತಿಮವಾಗಿ ಆ 26 ವರ್ಷ ಬಾಣಂತಿ ರಸ್ತೆಯಲ್ಲೇ ಹೆಣವಾಗಿದ್ದಾರೆ. ಅಂತಿಮವಾಗಿ ಓರ್ವ ಬಾಣಂತಿಗೆ ಬೆಡ್ ಕಲ್ಪಿಸಲು ಸಾಧ್ಯವಾಗದ ಕಾರಣ ಶಾಸಕಿ ಸೌಮ್ಯಾ ರೆಡ್ಡಿ ಕೂಡ ಕಣ್ಣೀರು ಹಾಕಿಕೊಂಡು ಸರ್ಕಾವರನ್ನು ಶಪಿಸಿದ್ದಾರೆ.
ಶಾಸಕಿ ಟ್ವೀಟ್ ಮಾಡಿದರೂ ಚಿಕಿತ್ಸೆ ಸಿಗಲಿಲ್ಲ. ಆದರೆ, ವೈದ್ಯಕೀಯ ಶಿಕ್ಷಣ ಸಚಿವರು ಕೂಡ ಸಾಕಷ್ಟು ಟ್ವೀಟ್‌ಗಳನ್ನು ಮಾಡುತ್ತಾರೆ. ಎಲ್ಲಿಯಾದರೂ ಚಿಕಿತ್ಸೆ ಸಿಗುತ್ತಿಲ್ಲ ಎಂದಾಗ ಚಿಕಿತ್ಸೆ ನೀಡದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಆಸ್ಪತ್ರೆಗಳ ಮಾನ್ಯತೆಯನ್ನೇ ರದ್ದು ಮಾಡುತ್ತೇವೆ ಎಂದು ಗುಟುರು ಹಾಕುತ್ತಾರೆ. ಎಲ್ಲಿಯಾದರೂ ಸಮಸ್ಯೆ ಇದೆ ಎಂದಾಗ ನೋವಾಯ್ತು, ಆಘಾತವಾಯ್ತು ಎಂದು ಟ್ವೀಟ್ ಮಾಡುವ ಮೂಲಕ ಮಾನವೀಯತೆ ಮೆರೆಯುವ ನಾಟಕ ಆಡುತ್ತಾರೆ.
ಹಾಸಿಗೆ ಇಲ್ಲದೆ ರೋಗಿಗಳ ಪರದಾಟ- ಸಚಿವ ಸುಧಾಕರ್‌ಗೆ ಟ್ವೀಟ್ ಆಟ..!
ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ಗೆ ಪ್ರಚಾರದ ಗೀಳು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇತ್ತೀಚಿಗೆ ಮಾಡಿರುವ ಟ್ವೀಟ್‌ಗಳನ್ನು ಒಮ್ಮೆ ನೋಡುವುದಾದರೆ, ನಟಿ ಸುಧಾರಾಣಿ ಅಣ್ಣನ ಮಗಳಿಗೆ ಅಪೋಲೋ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂದು ಕಿರಿಕಿರಿ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಸಚಿವ ಸುಧಾಕರ್ ಹೀಗೊಂದು ಟ್ವೀಟ್ ಮಾಡಿದ್ದರು. ಖಾಸಗಿ ಆಸ್ಪತ್ರೆ ವಿರುದ್ಧ ಶಿಸ್ತು ಕ್ರಮ ಎಂದು. ಆದರೆ ಯಾವ ಕ್ರಮವೂ ಆಗಲಿಲ್ಲ. ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆ ಆಗುತ್ತಿದೆ. 5 ಲಕ್ಷ ಬಿಲ್ ಸುದ್ದಿ ಕೇಳಿ ಆಘಾತವಾಯ್ತು ಎಂದು ಡಾ. ಸುಧಾಕರ್ ಟ್ವೀಟ್ ಮಾಡಿದ್ದರು.
ಆಂಬ್ಯುಲೆನ್ಸ್‌ನಲ್ಲೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಈ ವೇಳೆ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಲಾಗಿತ್ತು. ಆ ಬಗ್ಗೆ ಟ್ವೀಟ್ ಮಾಡಿದ್ದ ಸಚಿವ ಡಾ ಸುಧಾಕರ್, ಆಂಬ್ಯುಲೆನ್ಸ್‌ನಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು ನೋವಿನ ಸಂಗತಿ. ಶೀಘ್ರವಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಿದ್ದರೆ ಪ್ರಾಣ ಉಳಿಸಬಹುದಿತ್ತು ಎಂದಿದ್ದರು. ಮಂಡ್ಯದ ಕಾಮೇಗೌಡರಿಗೆ ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದಾರೆ ಎಂದಾಗಲೂ ಸೂಕ್ತ ಚಿಕಿತ್ಸೆ ನೀಡಲು ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಆದರೆ ಕೇವಲ ಟ್ವೀಟ್ ಮಾತ್ರ ಮಾಡಿದರೆ ಕ್ರಮ ಕೈಗೊಂಡಂತೆ ಆಗುತ್ತದೆಯೇ?
ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ವ್ಯಾಪ್ತಿಯಲ್ಲಿ ಬೆಂಗಳೂರಿನ ಬಹುತೇಕ ಆಸ್ಪತ್ರೆಗಳು ಬರಲಿದ್ದು, ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗುತ್ತಿಲ್ಲ. ಆದರೆ, ಡಾ ಸುಧಾಕರ್ ದಿನನಿತ್ಯ ಸುದ್ದಿಗೋಷ್ಠಿ ನಡೆಸುತ್ತಾ ಮಾಧ್ಯಮಗಳ ಎದುರು ನಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಎಷ್ಟು ಪ್ರಕರಣಗಳಾದರೂ ನಮ್ಮ ಸರ್ಕಾರ ಉತ್ತಮವಾಗಿ ನಿಬಾಯಿಸಲಿದೆ. ಜನರು ಹೆದರುವ ಅವಶ್ಯಕತೆ ಇಲ್ಲ ಎಂದು ಮಾತಿನ ಶೂರನಂತೆ ಮಾತನಾಡುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಜನರ ಸಾವಿನ ಬಗ್ಗೆ ಕನಿಷ್ಠ ಸಮಯ ಕೊಟ್ಟರೂ ಜನರ ಜೀವ ಉಳಿಸಬಹುದಾಗಿದೆ. ಇನ್ನಾದರೂ ಟ್ವೀಟ್ ಮಾಡುತ್ತಾ ಪ್ರಚಾರ ಪಡೆಯುವುದನ್ನು ಬಿಟ್ಟು ಕೆಲಸ ಮಾಡಬೇಕಿದೆ.
ಸಿಎಂ ಬಿ.ಎಸ್ ಯಡಿಯೂರಪ್ಪ ಮಾಧ್ಯಮಗಳ ಯಾವ ಪ್ರಶ್ನೆಗಳಿಗೂ ಉತ್ತರ ನೀಡದೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಕರೋನಾ ಕ್ರಮಗಳ ಬಗ್ಗೆಯೂ ಸಿಎಂ ಮಾತನಾಡುತ್ತಿಲ್ಲ. ಮಾಧ್ಯಮಗಳನ್ನು ಕಂಡೊಡನೆ ಕೈ ಮುಗಿದು ತೆರಳಿದ್ದಾರೆ. ಕರೋನಾ ನಿಯಂತ್ರಣ ಮಾಡಲು ಸಂಪೂರ್ಣ ವಿಫಲರಾಗಿರುವ ಬಿ.ಎಸ್ ಯಡಿಯೂರಪ್ಪ ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಹೆರಿಗೆಗೆ ತೆರಳುವ ಮುಂಚೆ ತುಂಬಾ ಚೆನ್ನಾಗಿದ್ದ ಮಹಿಳೆಯಲ್ಲಿ, ಹೆರಿಗೆ ಮಾಡಿಸಿಕೊಂಡು ಬಂದ ಬಳಿಕ ಕೋವಿಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆಸ್ಪತ್ರೆಯಲ್ಲಿಯೇ ಬಂತೋ..? ಎಲ್ಲಿಂದ ಬಂತೋ..? ಸರ್ಕಾರದ ಬೇಜವಾಬ್ದಾರಿಗೆ 6 ದಿನದ ಕಂದಮ್ಮ ತಬ್ಬಲಿಯಾಗಿದೆ.