ರೈತ ಸಂಘಟನೆಗಳು ಕೇಂದ್ರ ಸರ್ಕಾರ ತರಲಿಚ್ಚಿಸಿರುವ ಕಾಯ್ದೆಯನ್ನು ವಿರೋಧಿಸಿ ಇಂದು ದೇಶವ್ಯಾಪಿ ಬಂದ್ಗೆ ಕರೆ ಕೊಟ್ಟಿದೆ. ಸಮಾನ ಮನಸ್ಕ ಸಂಘಟನೆಗಳು, ರೈತ ಬೆಳೆದ ಅನ್ನವನ್ನೇ ನಾವು ತಿನ್ನುತ್ತೇವೆ ಎನ್ನುವ ಪ್ರಜ್ಞೆ ಇರುವವರು ಈ ಬಂದ್ಗೆ ಬೆಂಬಲ ಕೊಟ್ಟಿದ್ದಾರೆ. ರೈತರ ಭೂಮಿ ದೈತ್ಯ ಕಂಪೆನಿಗಳ ಪಾಲಾಗದಂತೆ ತಡೆಯಲು, ಧಾನ್ಯಗಳ ಕಳ್ಳ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಯಾಗದೇ ಇರಲು, ಅನ್ನ ಬೆಳೆಯುವ ರೈತ ಕಾರ್ಪೋರೆಟ್ ಕಂಪೆನಿಯ ಮುಂದೆ ಮಂಡಿಯೂರದಂತಾಗಲು, ಪಡಿತರ ವ್ಯವಸ್ಥೆ ಜೀವಂತವಾಗಿರಲು, ರೈತರಿಗೆ ಕನಿಷ್ಠ ಬೆಲೆ ದೊರೆಯುವಂತಾಗಲು, ಆಳುವ ವರ್ಗಕ್ಕೆ ಚೂರಾದರೂ ಬಿಸಿ ತಟ್ಟಲು ಈ ಬಂದ್ ಅನಿವಾರ್ಯ.
ಈಗಾಗಲೇ ಈ ಸರ್ಕಾರ ಲಾಭದಲ್ಲಿದ್ದ ಸರ್ಕಾರಿ ಸ್ವಾಮ್ಯದ ಕಂಪೆನಿಗಳನ್ನೂ ಖಾಸಗಿಯವರಿಗೆ ಮಾರಾಟ ಮಾಡಿದೆ. ಮಾರಾಟ ಮಾಡದೇ ಉಳಿದದ್ದು ಅಥವಾ ಮಾರಾಟವಾಗದೇ ಉಳಿದದ್ದು ತಿನ್ನುವ ಅನ್ನ ಮತ್ತು ಕುಡಿಯುವ ನೀರು ಮಾತ್ರ. ಈಗ ಸರ್ಕಾರ ‘ರೈತ ಪರ’ ಎನ್ನುವ ಧ್ವನಿಯಲ್ಲಿ ಅವನ್ನೂ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರುವ ಹುನ್ನಾರ ನಡೆಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದುವರೆಗೆ APMCಗಳ ಮೂಲಕ ರೈತ ಬೆಳೆದ ಆಹಾರವನ್ನು ಕನಿಷ್ಠ ಬೆಂಬಲ ಬೆಲೆ ಕೊಟ್ಟು ಖರೀದಿಸಿ, ತನ್ನ ದಾಸ್ತಾನಲ್ಲಿ ಸಂಗ್ರಹಿಸಿ ಬಡಜನರಿಗೆ ಹಂಚುತ್ತಿತ್ತು. ಕಾಯ್ದೆಯ ಪ್ರಕಾರ APMCಗಳ ರದ್ದಾಗಿ ರೈತ ಬೆಳೆವ ಅನ್ನ ಖಾಸಗಿ ಕಂಪೆನಿಗಳ ಪಾಲಾದರೆ ‘ಆಹಾರ ಭದ್ರತಾ ಕಾಯ್ದೆ’ಗೆ ಬೆಲೆಯೇ ಇಲ್ಲದಂತಾಗುತ್ತದೆ. ಯಾಕೆಂದರೆ ಈ ದೇಶದ ಬಡವನ ಆಹಾರ ಭದ್ರತೆಯ ಭಾದ್ಯತೆಗಳನ್ನು ಖಾಸಗಿ ಕಂಪೆನಿಗಳು ಖಂಡಿತವಾಗಿಯೂ ಹೊರಲು ಸಿದ್ಧವಿರುವುದಿಲ್ಲ. ಕರೋನಾ ದುರಂತ ಕಾಲದಲ್ಲಿ ಭಾರತದ ದೈತ್ಯ ಕಂಪೆನಿಗಳು ಯಾವ ಬಡವನಿಗೂ ಸಹಾಯ ಮಾಡದೆ ಕೈ ಚೆಲ್ಲಿದ್ದಕ್ಕೆ ನಾವು ಸಾಕ್ಷಿಯಾಗಿದ್ದೇವೆ.
ಸರ್ಕಾರವೇನೋ ರೈತ MSPಯ ಬಗ್ಗೆ ಚಿಂತಿಸಬೇಕಿಲ್ಲ, ಈ ಕಾಯ್ದೆಯಿಂದ ಅವನ ಹಕ್ಕು ಈ ನಿರ್ಭಾದಿತವಾಗಿ ಮುಂದುವರಿಯತ್ತದೆ, ಅವನು ಸುರಕ್ಷಿತವಾಗಿರುತ್ತಾನೆ ಎಂದು ವಾದಿಸುತ್ತಿದೆ. ಆದರೆ ಹೊಸದಾಗಿ ಬರಲಿರುವ ಕಾಯ್ದೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಯಾಬ ನಿಯಮವೂ ಇಲ್ಲ. ಒಂದೆರಡು ವರ್ಷ ಲಾಭ ನೀಡಿ ಕಂಪೆನಿಗಳು ಕೈ ಎತ್ತಿದರೆ ರೈತ ಎಲ್ಲಿಗೆ ಹೋಗಬೇಕು?
ಇದಕ್ಕೆ ಸ್ಪಷ್ಟ ಉದಾಹರಣೆ ಘಾನಾದ ಕೊಕೊ ಬೆಳೆಗಾರರು. ಬಹುರಾಷ್ಟ್ರೀಯ ಕಂಪೆನಿ ಕ್ಯಾಡ್ಬರಿ ಅಲ್ಲಿನ ರೈತರು ತಮ್ಮ ಬೆಲೆಗೆ ಹೆಚ್ಚು ಬೆಲೆ ಕೇಳಿದರೆಂದು ಭಾರತೀಯರು ಕೊಕೊ ಬೆಳೆಯಲು ಪ್ರೋತ್ಸಾಹಿಸಿತು. ಇಲ್ಲಿ ಬೆಳೆ ಬೆಳೆದಂತೆ ಘಾನಾದ ಬೆಳೆಗಾರರು ಬೇರೆ ಮಾರ್ಗವಿಲ್ಲದೆ ಕಂಪೆನಿ ಕೊಟ್ಟ ಜುಜುಬಿ ಬೆಲೆಗೆ ಒಪ್ಪಿಕೊಂಡು ತಮ್ಮ ಬೆಳೆ ಮಾರಾಟ ಮಾಡಿದರು. ಇತ್ತ ಭಾರತೀಯ ಬೆಳೆಗಾರರು ತಮ್ಮ ಬೆಳೆಯನ್ನು ಮಾರಲಾಗದೆ, ಇಟ್ಟುಕೊಳ್ಳಲೂ ಆಗದೆ ಪರಿತಪಿಸತೊಡಗಿದರು. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ಬೆಳೆ ಕಣ್ಣೆದುರೇ ಕೊಳೆತು ಹೋಗುವಾಗ ಅವರ ಸಂಕಷ್ಟಕ್ಕೆ ಕಿವಿಯಾದದ್ದು ಇದೇ APMC. . ಈಗ ಸರಕಾರ ಮುಚ್ಚಲು ಹೊರಟಿರುವುದು ಅಂಥದ್ದೇ ಸಾವಿರಾರು ಎಪಿಎಂಸಿಗಳನ್ನು ಮತ್ತು ನಿರ್ಗತಿಕರನ್ನಾಗಿ ಮಾಡ ಹೊರಟದ್ದು ಈ ದೇಶದ ಕೋಟ್ಯಾಂತರ ರೈತರನ್ನು.
Also Read: ಭಾರತ ಬಂದ್: ಬೆಂಗಳೂರಿನಲ್ಲಿ ರಸ್ತೆ ತಡೆ ನಡೆಸಿದ ರೈತ ಪರ ಹೋರಾಟಗಾರರು
ಈಗಾಗಲೇ APMC ರದ್ದಾಗಿರುವ ಬಿಹಾರದಲ್ಲಿ ಯಾವ ಖಾಸಗಿ ಮಂಡಿಗಳೂ ರೈತರಿಗೆ ಸ್ಪರ್ಧಾತ್ಮಕ ದರ ನೀಡುವುದಿಲ್ಲ. ಅಕ್ಕಪಕ್ಕದ ಇತರ ರಾಜ್ಯಗಳ ರೈತರು ಪಡೆಯುವ ಕನಿಷ್ಠ ಬೆಂಬಲ ಬೆಲೆಯ ಮುಕ್ಕಾಲರಷ್ಟನ್ನೂ ಬಿಹಾರದ ರೈತರು ಪಡೆಯುತ್ತಿಲ್ಲ. ಇನ್ನು ಲಾಭಕೋರತನವನ್ನೇ ಧ್ಯೇಯವಾಗಿಸಿಕೊಂಡಿರುವ ದೈತ್ಯ ಕಂಪೆನಿಗಳು ರೈತರಿಗೆ ಲಾಭ ನೀಡೀಯಾವೇ?
ಇದು ರೈತರ ಸಂಕಷ್ಟವಾದರೆ ಈ ಕಾಯ್ದೆಯಿಂದ ಜನಸಾಮಾನ್ಯರಿಗೆ, ಈ ದೇಶದ ಬಡವನಿಗೆ ಆಗುವ ತೊಂದರೆಗಳೇ ಬೇರೆ. APMCಗಳೇ ಇಲ್ಲದಿದ್ದರೆ ಸರ್ಕಾರ ಆಹಾರ ಸಾಮಾಗ್ರಿಗಳನ್ನು ಕೊಂಡುಕೊಳ್ಳಲೂ ಇಲ್ಲ, ಅವನ್ನು ಬಡವರಿಗೆ ವಿತರಿಸಲೂ ಇಲ್ಲ. ಒಂದು ರೀತಿಯಲ್ಲಿ ಇಡೀ ಪಡಿತರ ವ್ಯವಸ್ಥೆಯನ್ನೇ ರದ್ದು ಮಾಡುವ ಕುತಂತ್ರ ಇದು. ಅಷ್ಟು ಮಾತ್ರ ಅಲ್ಲ ಖಾಸಗಿ ಕಂಪೆನಿಗಳು ಎಷ್ಟು ಬೇಕಾದರೂ ಆಹಾರ ದಾಸ್ತಾನು ಮಾಡಿಟ್ಟುಕೊಳ್ಳಲು ಈ ಕಾಯ್ದೆ ಅನುವು ಮಾಡಿಕೊಡುತ್ತದೆ. ಬರಗಾಲ ಬಂದರೂ ಕಂಪೆನಿಗಳು ರಫ್ತಿಗಾಗಿ ಇಟ್ಟುಕೊಂಡಿರುವ ಧಾನ್ಯಗಳನ್ನು ಸರ್ಕಾರ ಮುಟ್ಟುವುದಿಲ್ಲ ಎನ್ನುವ ಖಾತ್ರಿಯನ್ನೂ ಕಾಯ್ದೆ ನೀಡುತ್ತದೆ.
Also Read: ಬಗೆಹರಿಯದ ರೈತರ ಸಮಸ್ಯೆ; ಇಂದು ಪ್ರಶಸ್ತಿ ವಾಪಸ್, ನಾಳೆ ಭಾರತ್ ಬಂದ್, ನಾಳಿದ್ದು ಮತ್ತೊಂದು ಸಭೆ
ಈ ಮಧ್ಯೆ ಕೆಲ ಅತಿ ಬುದ್ಧಿವಂತ ವಿದ್ಯಾವಂತರು , ಸೋಶಿಯಲ್ ಮೀಡಿಯಾ ಪದವೀಧರರು ‘ರೈತರಿಗೆ ಕೊಡುವ ಸಬ್ಸಿಡಿ ನಾವು ಕಟ್ಟುವ ಟ್ಯಾಕ್ಸ್ ದುಡ್ಡು’ ಎಂಬಂತೆ ಬರೆದುಕೊಳ್ಳುತ್ತಿದ್ದಾರೆ. ಇದು, ವಾಚ್ ಕಟ್ಟಿಕೊಂಡರೆ, ಕಾರ್ ಇಟ್ಟುಕೊಂಡರೆ ಆತ ರೈತನೇ ಅಲ್ಲ ಎಂಬ ತೀರ್ಮಾನಕ್ಕೆ ಬರುವುದರ ಮತ್ತೊಂದು ರೂಪ. ನಿಜ,ಯಾವ ರೈತನೂ ತಾನು ಬೆಳೆದ ಬೆಳೆಯನ್ನು ಉಚಿತವಾಗಿ ಹಂಚುವುದಿಲ್ಲ. ಆದರೆ ಅನ್ನ ಸುಮ್ಮನೆ ಹುಟ್ಟುವುದಿಲ್ಲ, ಪರಿಸರ, ಮಳೆ, ಗಾಳಿ, ಕೊನೆಗೆ ಮಾರುಕಟ್ಟೆ ಕೂಡ ರೈತನ ಬೆಳೆಯನ್ನು, ಧಾನ್ಯದ ಬೆಲೆಯನ್ನು ನಿರ್ಧರಿಸುತ್ತದೆ. ಪ್ರಪಂಚದಲ್ಲಿ ತನ್ನ ಉತ್ಪಾದನೆಗೆ ತಾನೇ ಬೆಲೆ ನಿರ್ಧರಿಸಲಾಗದವನು ರೈತ ಮಾತ್ರ. ಹಾಗಾಗಿಯೇ ಕೃಷಿ ಸಾವಿರಾರು ವರ್ಷದಿಂದಲೂ ಸತತವಾಗಿ ನಷ್ಟ ಹೊಂದುತ್ತಲೇ ಇರುವುದು. ಹತ್ತೋ ಹದಿನೈದೋ ವರ್ಷಗಳ ಹಿಂದೆ ಕಣ್ಣು ಬಿಟ್ಟ ಕಂಪೆನಿಗಳೇ ಇವತ್ತು ಲಾಭವನ್ನು ದಾಖಲಿಸುತ್ತಿವೆ, ಆದರೆ ತಲೆತಲಾಂತರದಿಂದಲೂ ಕೃಷಿ ಮಾಡುತ್ತಿರುವ ರೈತ ನಷ್ಟದಲ್ಲಿದ್ದಾನೆ ಎಂದರೆ ಅವನು ಅನ್ನವನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡಿಲ್ಲ ಎಂದರ್ಥ. ಇವತ್ತು ಸರಕಾರ ವ್ಯಾಪಾರೀಕರಣಗೊಳಿಸಹೊರಟದ್ದೂ ಇದೇ ಅನ್ನವನ್ನು.
ನಾವೀಗ ವಿರೋಧಿಸಬೇಕಿರುವುದು ಈ ವ್ಯಾಪರೀಕರಣವನ್ನೇ. ನಮ್ಮ ಆಹಾರದ ಸಾರ್ವಭೌಮತ್ವವನ್ನು, ರೈತನ ಶ್ರಮವನ್ನು ಖಾಸಗಿ ಕಂಪೆನಿಗಳ ಪದತಲಕ್ಕೆ ಅರ್ಪಿಸಲು ಬಿಡಬಾರದು. ಬಹುಮತದ ಅಹಂಕಾರದಿಂದ ಬೀಗುತ್ತಿರುವ ಸರ್ಕಾರಕ್ಕೆ ಬಿಸಿ ಮುಟ್ಟಿಸಲೇಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇದು ರೈತರ ಹೋರಾಟ ಮಾತ್ರವಲ್ಲ, ಈ ದೇಶದ ಪ್ರತಿಯೊಬ್ಬ ನಾಗರಿಕನ ಹೋರಾಟ ಅನ್ನುವುದು ನಮಗೂ ನಮ್ಮ ಪ್ರಭುತ್ವಕ್ಕೂ ಅರ್ಥವಾಗಬೇಕು.