ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಸಿಎಂ ಬಿ ಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಿಗೆ ನೌಕರರನ್ನು ದುರುದ್ದೇಶದಿಂದ ಸಸರ್ಕಾರದ ವಿರುದ್ದ ಎತ್ತಿಕಟ್ಟಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಈ ಕುರಿತಾಗಿ ಶನಿವಾರ ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ ಬಿಎಸ್ವೈ, ಚಂದ್ರಶೇಖರ್ ಅವರು ದುರುದ್ದೇಶದಿಂದ ಕೆಲವು ಸಾರಿಗೆ ನೌಕರರನ್ನು ಎತ್ತಿಕಟ್ಟಿ ಮುಷ್ಕರ ನಡೆಸಲು ಮತ್ತು ರಾಜ್ಯದ ವಿವಿದೆಡೆ ಬಸ್ಸುಗಲ ಮೇಲೆ ಕಲ್ಲು ತೂರಾಟ ಮಾಡಲು ಪ್ರಚೋದಿಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಲು ಕಾರಣಕರ್ತರಾಗಿದ್ದಾರೆ, ಎಂದು ಹೇಳಿದ್ದಾರೆ.
ಇದರೊಂದಿಗೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುರಿತು ಲಘುವಾಗಿ ಮಾತನಾಡಿರುವುದನ್ನು ಸಿಎಂ ಖಂಡಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಕುರಿತು ಹೇಳಿಕೆ ನೀಡಿರುವ ಸಿಎಂ ಬಿಎಸ್ವೈ, ಅವಶ್ಯಕ ಸೇವೆಯಡಿ ಬರುವ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ರಾಜ್ಯದೆಲ್ಲೆಡೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಸಾರಿಗೆ ಸಂಸ್ಥೆಯ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರಿಗೆ ಸೂಚನೆ ನೀಡಲಾಗಿದೆ, ಎಂದಿದ್ದಾರೆ.
ಈ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು, “ಸಾರಿಗೆ ಮುಷ್ಕರಕ್ಕೆ ಸಂಬಂದ ಇದೆ. ಆದರೆ, ಕಲ್ಲು ತೂರಾಟಕ್ಕೂ ನನಗೂ ಸಂಬಂಧವಿಲ್ಲ. ನನ್ನದು ಅಹಿಂಸಾತ್ಮಕ ಮಾರ್ಗ. ಮುಖ್ಯಮಂತ್ರಿಗಳ ಹೇಳಿಕೆ ಸರಿಯಲ್ಲ,” ಎಂದು ಹೇಳಿದ್ದಾರೆ.