ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮತ್ತೆ ರೈತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ತಾಂತ್ರಿಕವಾಗಿ ಅದು ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ಮಾಡುವ ಭಾಷಣ, ಆದರೆ ವಾಸ್ತವವಾಗಿ ಆ ಮೂಲಕ ಅವರು ಇಡೀ ದೇಶದ ರೈತರಿಗೆ ಸಂದೇಶ ರವಾನಿಸಲು ಹೊರಟಿದ್ದಾರೆ. ಇತ್ತೀಚೆಗೆ ನರೇಂದ್ರ ಮೋದಿ ಪದೇ ಪದೇ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಅವರ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ, ವಾರಣಾಸಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ವೇಳೆ, ಭಾರತೀಯ ವಾಣಿಜ್ಯೋದ್ಯಮ ಸಂಘಟನೆಗಳ ಒಕ್ಕೂಟದ ವಾರ್ಷಿಕ ಮಹಾ ಸಮ್ಮೇಳನದಲ್ಲಿ ರೈತರ ಬಗ್ಗೆ, ಕೃಷಿ ಕ್ಷೇತ್ರದ ಕುರಿತು ಮಾತನಾಡಿದ್ದೇ ಮಾತನಾಡಿದ್ದು.
ಇನ್ನೊಂದೆಡೆ ನವೆಂಬರ್ 26ರಿಂದ ದೆಹಲಿಯ ಗಡಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ‘ಇತ್ತೀಚೆಗೆ ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದಂತೆ ತಂದಿರುವ ಮೂರು ಕಾನೂನುಗಳು ನಮ್ಮ ಪಾಲಿಗೆ ಮರಣಶಾಸನವಾಗಿವೆ, ಅವುಗಳನ್ನು ರದ್ದುಪಡಿಸಿ’ ಎನ್ನುವುದು ರೈತರ ಪ್ರಮುಖ ಬೇಡಿಕೆ. ಅದಕ್ಕಾಗಿ 23 ದಿನಗಳಿಂದ ರೈತರು ಕೊರೆಯುವ ಚಳಿಯನ್ನೂ ಲೆಕ್ಕಿಸದೆ ‘ದೆಹಲಿ ಚಲೋ’ ಹೆಸರಿನಲ್ಲಿ ಚಳವಳಿ ನಡೆಸುತ್ತಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಪ್ರಕಾರ ‘ದೆಹಲಿ ಚಲೋ’ ಪ್ರತಿಭಟನೆ ವೇಳೆ ಈವರೆಗೆ 23 ರೈತರು ಮೃತಪಟ್ಟಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಷ್ಟೆಲ್ಲಾ ಆದರೂ ಪ್ರಧಾನ ಮಂತ್ರಿಗಳು ರೈತರ ಪ್ರತಿಭಟನೆ ಬಗ್ಗೆ, ಅಲ್ಲಿ ಸತ್ತವರ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಬದಲಿಗೆ ತಾವು ತಂದಿರುವ ಕಾನೂನುಗಳಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ ಎಂದು ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರ ಸಚಿವರು ದಿನಕ್ಕೊಬ್ಬರಂತೆ ಸುದ್ದಿಗೋಷ್ಟಿ ನಡೆಸಿ ಅಥವಾ ‘ಎಎನ್ ಐ’ ಸುದ್ದಿ ಸಂಸ್ಥೆ ಮೂಲಕ ಕೃಷಿ ಕಾನೂನುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವತಿಯಿಂದ ಕೃಷಿ ಕಾನೂನುಗಳ ಪರ ಇರುವ ಸುದ್ದಿಗಳನ್ನು ‘ಪ್ಲಾಂಟ್’ ಮಾಡುವ ಕೆಲಸವಾಗುತ್ತಿದೆ.
ಇತ್ತೀಚೆಗೆ ನಟ ಪ್ರಕಾಶ ತಮ್ಮ ‘JustAsking’ ಎಂಬ ಅಭಿಯಾನದ ಮೂಲಕ ‘ಮೋದಿ ಜೀ ರೈತರ ಜೊತೆ ಕುಳಿತು ಮಾತನಾಡಿ, ಅವರು ಏನು ಹೇಳುತ್ತಾರೆ ಎಂಬುದಕ್ಕೆ ಕಿವಿಗೊಡಿ. ವಾಸ್ತವವನ್ನು ತಿಳಿದುಕೊಳ್ಳಿ. ರೈತರ ವಿಶ್ವಾಸವನ್ನು ಗಳಿಸಿ. ಜೊತೆಗೆ ಬಲವಂತವಾಗಿ ಹೇರಿರುವ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಿರಿ’ ಎಂದು ಸಲಹೆ ನೀಡಿದ್ದರು. ಸೈದ್ದಾಂತಿಕವಾಗಿ ಮೋದಿ ಮತ್ತು ಪ್ರಕಾಶ್ ರೈ ಅವರದು ಭಿನ್ನ ದಾರಿಗಳೇ ಇರಬಹುದು. ಆದರೆ ಪ್ರಕಾಶ್ ರೈ ನೀಡಿರುವುದು ಸಮಯೋಚಿತ ಸಲಹೆ. ನರೇಂದ್ರ ಮೋದಿ ‘ಆಯ್ದ ರೈತರ’ ಜೊತೆ ಸಂವಾದ ನಡೆಸುವುದರ ಜೊತೆಗೆ ಪ್ರತಿಭಟನಾನಿರತ ರೈತರೊಂದಿಗೂ ಮಾತನಾಡಿ ಅವರ ಕಷ್ಟವನ್ನೂ ಕೇಳಬೇಕಾಗಿದೆ.
Dear PRIME MINISTER @narendramodi ji .. REPEAL the forced #FarmerBill2020 ..SIT with our farmers.. HEAR them out .ASSES ground realities.. WIN their TRUST. #JustAsking #FarmersProstests #FarmLaws #WeUnitedForFarmers
— Prakash Raj (@prakashraaj) December 14, 2020
ಕೇಂದ್ರ ಕೃಷಿ ಸಚಿವ ನರೇಂದ್ರ ಥೋಮರ್, ವಾಣಿಜ್ಯ ವ್ಯವಹಾರಗಳ ಸಂಪುಟ ದರ್ಜೆ ಸಚಿವ ಪಿಯೂಷ್ ಗೋಯಲ್, ರಾಜ್ಯ ಖಾತೆಯ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಪ್ರತಿನಿಧಿಗಳ ನಡುವೆ ಈವರೆಗೆ 5 ಸಭೆಗಳಾಗಿವೆ. ಇದಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತ ಸಂಘಟನೆಗಳ 13 ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಮಾತುಕತೆಯೊಂದನ್ನು ನಡೆಸಿದ್ದಾರೆ. ಆದರೆ ಅಮಿತ್ ಶಾ ಅವರಾಗಲಿ, ಇತರೆ ಕೇಂದ್ರ ಸಚಿವರಾಗಲಿ ರೈತರಿಗೆ ಭರವಸೆ ಮೂಡಿಸಿಲ್ಲ. ಕೇಂದ್ರ ಸಚಿವರು ಪ್ರತಿ ಬಾರಿಯೂ ‘ಕೇಂದ್ರ ಸರ್ಕಾರ ಮುಕ್ತವಾಗಿ ಚರ್ಚಿಸಲು ಸಿದ್ಧವಿದೆ’ ಎಂದು ಹೇಳುತ್ತಿದ್ದಾರೆ. ಆದರೆ ಚರ್ಚೆ ಮಾತ್ರ ಆಗುತ್ತಿಲ್ಲ. ನಿರ್ಧಾರವೂ ಆಗುತ್ತಿಲ್ಲ. ಅದೇ ರೀತಿ ಪ್ರತಿ ಬಾರಿಯೂ ‘ಎಂಎಸ್ ಪಿ ಮತ್ತು ಎಪಿಎಂಸಿ ವ್ಯವಸ್ಥೆಗೆ ಧಕ್ಕೆ ಇಲ್ಲ’ ಎಂದು ಹೇಳುತ್ತಿದ್ದಾರೆ. ಆದರೆ ‘ಇದೇ ವಿಷಯಗಳನ್ನು ಲಿಖಿತವಾಗಿ ಕೊಡಿ’ ಎಂದರೆ ಅದಕ್ಕೆ ಉತ್ತರ ಇಲ್ಲ. ಸಮಸ್ಯೆಗೆ ಸೂಕ್ತ ಪರಿಹಾರವಲ್ಲದ ‘ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪ’ ಮುಂದಿಟ್ಟಿದ್ದಾರೆ.

ಪರಿಸ್ಥಿತಿ ಹೀಗಿರುವಾಗ, ತಮ್ಮ ಸಂಪುಟ ಸಹುದ್ಯೋಗಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಫಲರಾದಾಗ ಸರ್ಕಾರದ ಮುಖ್ಯಸ್ಥರು ಏನು ಮಾಡಬೇಕು? ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಕರೆಸಿಕೊಂಡು ಮಾತನಾಡಬೇಕಲ್ಲವೇ? ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ‘ರೈತರ ಪ್ರತಿಭಟನೆ ರಾಷ್ಟ್ರೀಯ ಸಮಸ್ಯೆಯಾಗುವ ಮುನ್ನವೇ ಪರಿಹರಿಸಿ’ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ ‘ದೆಹಲಿ ಗಡಿಯಿಂದ ರೈತರನ್ನು ತೆರವುಗೊಳಿಸುವಂತೆ ಆದೇಶಿಸಲು ಸಾಧ್ಯವಿಲ್ಲ, ಪ್ರತಿಭಟನೆ ಮಾಡುವುದು ಸಂವಿಧಾನಿಕ ಹಕ್ಕು’ ಎಂದು ಹೇಳಿದೆ. ಈಗಲಾದರೂ ಪ್ರಧಾನ ಮೋದಿ ರೈತ ಪ್ರತಿನಿಧಿಗಳೊಂದಿಗೆ ಮಾತನಾಡಬೇಕಿದೆ. ರೈತರ ಬಗ್ಗೆ ಅವರು ಈಗಾಗಲೇ ಸಾಕಷ್ಟು ಮಾತನಾಡಿದ್ದಾರೆ. ಈಗ ರೈತರು ಏನು ಹೇಳುತ್ತಾರೆ? ಅವರ ಕಷ್ಟ-ಕಾರ್ಪಣ್ಯಗಳೇನು? ಎಂಬುದನ್ನು ಕೇಳಿಸಿಕೊಳ್ಳಬೇಕಿದೆ.