ತನಿಖಾ ಪತ್ರಕರ್ತ ಸೈಮನ್ ಹೆರ್ಶ್ 1969ರಲ್ಲಿ ಪ್ರಕಟಿಸಿದ ‘ಮೈ ಲಾಯ್’ (my lai) ವರದಿಯೊಂದು ಅಮೆರಿಕಾದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಅಮೆರಿಕಾ ಸೈನ್ಯದ ತುಕಡಿಯೊಂದು ನಿಶ್ಯಸ್ತ್ರ ಹಳ್ಳಿಗರನ್ನು, ಮಕ್ಕಳನ್ನು, ವೃದ್ಧರನ್ನು ಹೇಗೆ ಹತ್ಯೆ ಮಾಡಿದ್ದಾರೆ ಮತ್ತು ಮಹಿಳೆಯರನ್ನು ಅತ್ಯಾಚಾರ ಮಾಡಿದ್ದಾರೆ ಎಂಬುವುದರ ಬಗ್ಗೆ ಬರೆದ ವರದಿ ಅದು. ವರದಿ ಬಿಡುಗಡೆಯಾದ ಬಳಿಕ ಅಮೆರಿಕಾದ ನಾಗರಿಕರು ತನಿಖೆಯ ಕೂಗೆತ್ತಿದರು. ಇದು ಅಮೆರಿಕದಲ್ಲಿ ಯುದ್ಧ ವಿರೋಧಿ ಚಳವಳಿ ರೂಪುಗೊಳ್ಳಲೂ ಕಾರಣವಾಯಿತು. ತನ್ನ ಈ ವರದಿಗಾಗಿ ಹೆರ್ಶ್ ಪ್ರತಿಷ್ಠಿತ ಪುಲ್ಟಿಜರ್ ಪ್ರಶಸ್ತಿಯನ್ನು ಪಡೆದುಕೊಂಡರು.
ಅದೇ ಹೆರ್ಶ್ ಇವತ್ತಿನ ಭಾರತದ ಪತ್ರಕರ್ತನಾಗಿರುತ್ತಿದ್ದರೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು? ಸದಾ ವ್ಯವಸ್ಥೆಯ ಪರ ನಿಲ್ಲುವ, ಅದರಲ್ಲೂ ಸೈನ್ಯದ ವಿರುದ್ಧ ಮಾತಾಡುವುದನ್ನು ಅಪರಾಧ ಎಂದೇ ಪರಿಗಣಿಸಿರುವ ಪತ್ರಿಕೆಗಳು, ಪಬ್ಲಿಕೇಷನ್ಗಳು ವರದಿಯನ್ನು ಪ್ರಕಟಿಸುತ್ತಲೇ ಇರಲಿಲ್ಲ. ಹಾಗೊಂದು ವೇಳೆ ಪ್ರಕಟಿಸುವ ಧೈರ್ಯ ತೋರಿದರೆ ಸೋಶಿಯಲ್ ಮೀಡಿಯಾ, ಟ್ರೋಲ್ಸ್ ಪೇಜ್ಗಳು ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರ, ಆಡಳಿತ ಪಕ್ಷದ ಐಟಿ ಸೆಲ್, ಸರ್ಕಾರವನ್ನು ಮೆಚ್ಚಿಸಲೆಂದೇ ಇರುವ ಕೆಲ ಮಾಧ್ಯಮಗಳು ಅವರನ್ನು ದೇಶದ್ರೋಹಿ ಎಂದು ಬಿಂಬಿಸುತ್ತಿದ್ದವು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮತ್ತು ಸರ್ಕಾರವೇ ಅವರ ಮೇಲೆ ಐ.ಟಿ ದಾಳಿಗಳಂತಹ ದಾಳಿ ಸಂಘಟಿಸುತ್ತಿತ್ತು. ಪ್ರಶಸ್ತಿ, ಅಭಿನಂದನೆ ಸಲ್ಲಿಸುವುದು ಬಿಡಿ, ‘ಸೈನಿಕರನ್ನು ಅವಮಾನಿಸಲಾಗುತ್ತಿದೆ’, ‘ಸೈನ್ಯದ ಬಗ್ಗೆ ನೆಗೆಟಿವ್ ಸ್ಟೋರಿ ಕಟ್ಟಿಕೊಡುವಂತಿಲ್ಲ’ ಎಂದೆಲ್ಲಾ ಅವರ ಕೈ ಕಟ್ಟಿಹಾಕುತ್ತಿದ್ದರು.
ಪತ್ರಕರ್ತನಿಗೂ ಸೈದ್ಧಾಂತಿಕ, ರಾಜಕೀಯ ನಿಲುವುಗಳನ್ನು ಹೊಂದುವ ಹಕ್ಕಿದೆ. ಆದರೆ ಅದು ಅವನ ಪತ್ರಿಕಾಧರ್ಮವನ್ನು ಮರೆಸುವಂತಿರಬಾರದು. ವೈಯಕ್ತಿಕ ನಿಲುವುಗಳು ಮತ್ತು ವೃತ್ತಿ ಧರ್ಮದ ಭಾದ್ಯತೆಗಳ ಮಧ್ಯೆ ಸ್ಪಷ್ಟ ಗೆರೆ ಎಳೆಯುವ ಪ್ರಬುದ್ಧತೆ ಅವನಿಗಿರಬೇಕು. ಅಧಿಕಾರ, ಸಿದ್ದಾಂತ ಮತ್ತು ನಿರ್ದಿಷ್ಟ ಪಕ್ಷವೊಂದರ ಝಂಡಾ ಹಿಡಿಯುವುದರಿಂದ ಅಂತರ ಕಾಯ್ದುಕೊಳ್ಳಲೇಬೇಕು.
Also Read: ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯ ಭದ್ರತಾ ಪಡೆಗಳ ಅಧೀನದಲ್ಲಿದೆಯೇ?
ಪತ್ರಕರ್ತನ ಕೆಲಸ ಆಡಳಿತ ಯಂತ್ರವನ್ನು ಪ್ರಶ್ನಿಸುವುದೇ ಹೊರತು ಅಧಿಕಾರಸ್ಥರ ಪರವಾಗಿ ಸುದ್ದಿ ಬಿತ್ತರಿಸುವುದಲ್ಲ. ಅಂತಿಮವಾಗಿ ಪತ್ರಿಕೋದ್ಯಮ ಎಂದರೆ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದೇ ಆಗಿದೆ. ನಮ್ಮ ಸೈನಿಕರು ವೈರಿ ಪಡೆಯೊಂದಿಗೆ ಹೇಗೆ ಹೋರಾಡಿದರು ಎನ್ನುವುದು ಸುದ್ದಿಯಾಗುತ್ತದೆ ಅಂದರೆ ನಮ್ಮ ನೆಲ ಎಷ್ಟು ವಿರೋಧಿಗಳ ಪಾಲಾಯ್ತು, ನಮ್ಮ ಭದ್ರತಾ ಪಡೆಗಳ ವೈಫಲ್ಯವೇನು ಅನ್ನುವುದೂ ಸುದ್ದಿಯಾಗಬೇಕು. ಸೈನಿಕರಿಂದ ಉಲ್ಲಂಘನೆಯಾದ ಮಾನವ ಹಕ್ಕುಗಳು, ಅತ್ಯಾಚಾರ ಪ್ರಕರಣಗಳೂ ಸುದ್ದಿಯಾಗಬೇಕು. ಪತ್ರಕರ್ತರ ಪ್ರಶ್ನೆಗಳಿಂದ, ಯಾವುದೂ ಯಾರೂ ಅತೀತರಲ್ಲ. ಸೈನ್ಯ ಅಥವಾ ಯಾವುದೇ ಸಂಸ್ಥೆ, ವ್ಯಕ್ತಿಯೂ ಇಲ್ಲಿ ಪರಮೋಚ್ಚವಲ್ಲ.
ದೇಶದೊಳಗಿನ ವಿಚಾರಗಳನ್ನು ವರದಿ ಮಾಡುವುದರಿಂದ ಅಂತರ್ರಾಷ್ಟ್ರೀಯವಾಗಿ ಮಾನ ಹರಾಜಾಗುತ್ತದೆ ಎಂದು ಪತ್ರಕರ್ತನೊಬ್ಬ ಯೋಚಿಸುವುದೇ ತಪ್ಪಾಗುತ್ತದೆ. ನಡೆದಿರುವ, ನಡೆಯುತ್ತಿರುವ ಅಪರಾಧವನ್ನು ಜಗತ್ತಿನ ಮುಂದೆ ತೆರೆದಿಡುವುದೇ ಪತ್ರಕರ್ತನ ಕೆಲಸ, ಹಾಗೆ ತೆರೆದಿಟ್ಟರೆ ಮಾತ್ರ ಅಪರಾಧವನ್ನು ತಡೆಯಲು, ಪುನಾರವರ್ತನೆ ಆಗದಂತೆ ಮಾಡಲು ಸಾಧ್ಯ. ಹತ್ರಾಸಿನ, ದೆಹಲಿಯ, ಹೈದಾರಾಬಾದಿನ ಅತ್ಯಾಚಾರ ಮತ್ತು ಕೊಲೆಯನ್ನು ಪತ್ರಕರ್ತರು ಜಗತ್ತಿನ ಕಣ್ಣಿಂದ ಮುಚ್ಚಿಡಲು ಪ್ರಯತ್ನಿಸಿದ್ದರೆ ಅದು ಮತ್ತಷ್ಟು ಅಂತಹ ಹೇಯ ಘಟನೆಗಳಿಗೆ ಮುನ್ನುಡಿಯಾಗುತ್ತಿತ್ತು.
Also Read: ಮಾಧ್ಯಮ ಬಿಕ್ಕಟ್ಟು: ಲಾಭಾಂಶ ವೃದ್ಧಿಗೆ ಪ್ರಯೋಗವಾಯ್ತೆ ಲಾಕ್ಡೌನ್ ಅಸ್ತ್ರ?
ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕಾ ತನ್ನ ದುರಂಹಕಾರವನ್ನು, ಅನೀತಿಯನ್ನು ಯಾರೂ ಪ್ರಶ್ನಿಸುವುದೇ ಇಲ್ಲ, ಎಲ್ಲಾ ಅನ್ಯಾಯಗಳನ್ನೂ ಸುಮ್ಮನೆ ತೇಲಿಸಿಬಿಡಬಹುದು ಎಂದೇ ಅಂದುಕೊಂಡಿತ್ತು. ಆದರೆ ಹೆರ್ಶ್ನಂತಹ ಪತ್ರಕರ್ತರು ಸರ್ಕಾರದ ಕಣ್ಣು ತಪ್ಪಿಸಿ ಸ್ವತಃ ಮೈದಾನಕ್ಕಿಳಿದು ವರದಿ ಮಾಡಿದ್ದರಿಂದ ಅಮೆರಿಕನ್ ಸೈನ್ಯದ ದುರ್ವ್ಯವಹಾರ ಜಗತ್ತಿಗೆ ತಿಳಿಯಿತು. ಆದರೆ 2003ರ ಇರಾಕ್ ಯುದ್ಧದಲ್ಲಿ ಪೆಂಟಗಾನ್ ತನ್ನ ಮಿಲಿಟರಿಯೊಂದಿಗೆ ‘ತನಗೆ ಬೇಕಾದ’ ಪತ್ರಕರ್ತರನ್ನು ಕಳುಹಿಸಿ ‘ತನಗೆ ಬೇಕಾದ’ ರೀತಿಯ ವರದಿಯನ್ನು ಮಾತ್ರ ಬರೆಯಿಸುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿತು.
‘ಕಾರ್ಗಿಲ್’ ಯುದ್ಧದ ನಂತರ ಭಾರತ ಯಾವುದೇ ಯುದ್ಧದಲ್ಲಿ ಭಾಗಿಯಾಗಿಲ್ಲ. ಆದರೆ ‘ಸರ್ಜಿಕಲ್ ಸ್ಟ್ರೈಕ್’, ಚೀನಾದ ಜೊತೆಗಿನ ಸಂಘರ್ಷಗಳಲ್ಲಿ ಕೇವಲ ಸಚಿವಾಲಯದ ಅಧಿಕಾರಿಗಳು ನೀಡಿದ ವರದಿಗಳು ಮಾತ್ರ ಜನರನ್ನು ತಲುಪಿದವು. ಕೆಲವು ನಿವೃತ್ತ ಸೇನಾಧಿಕಾರಿಗಳು ಸರ್ಕಾರವನ್ನು ಪ್ರಶ್ನಿಸಿದರಾದರೂ ಆಡಳಿತ ಪಕ್ಷಕ್ಕೆ ನಿಷ್ಠೆಯಿಂದಿರುವ ಪತ್ರಿಕಾಲಯಗಳು, ಟಿವಿ ಚಾನೆಲ್ಗಳು ಅವಕ್ಕೆ ಪ್ರಾಮುಖ್ಯತೆ ಕೊಡಲೇ ಇಲ್ಲ. ಹಾಗಾಗಿ ಸರ್ಕಾರದ ಹೇಳಿಕೆಗಳು, ದೃಷ್ಟಿ ಕೋನವನ್ನು ಪ್ರಶ್ನಿಸುವವರೇ ಇಲ್ಲದಂತಾಯಿತು.
Also Read: ಕರಸೇವಕ ಮಾಧ್ಯಮ ಕಟ್ಟುತ್ತಿರುವ ವರ್ಚಸ್ಸು ಶ್ರೀರಾಮನದೋ, ಮೋದಿಯದ್ದೋ?
ಮುಖ್ಯವಾಹಿನಿಯ ಪತ್ರಿಕೆಗಳು ಆಡಳಿತ ಯಂತ್ರದ ಕೈಗೊಂಬೆಯಾದಂದಿನಿಂದ ಜನಸಾಮಾನ್ಯರು ಪತ್ರಿಕೆಗಳ ಮೇಲಿನ ನಂಬಿಕೆ ಕಳೆದುಕೊಂಡರು. ಈಗೀಗ ಸೋಶಿಯಲ್ ಮೀಡಿಯಾದಲ್ಲಿ ಸ್ವತಂತ್ರವಾಗಿ ಬರೆಯುವ, ಓದುವ ಹೊಸವರ್ಗವೊಂದು ಹುಟ್ಟಿಕೊಂಡಿದೆ. ಆದರೆ ಅಲ್ಲೂ ಸುಳ್ಳು ಹರಡುವ, ಕಪೋಲ ಕಲ್ಪಿತ ವರದಿ ನೀಡುವ ಜಾಲ ಸಕ್ರಿಯವಾಗಿವೆ.
ದೇಶಭಕ್ತಿ ಎಂಬುವುದು ಆಳುವ ಸರ್ಕಾರವನ್ನು ಪ್ರಶ್ನಿಸದೇ ಇರುವುದಲ್ಲ, ಪತ್ರಿಕೋದ್ಯಮವೆಂದರೆ ಸರ್ಕಾರದ ಪರವಾಗಿ ಅಭಿಪ್ರಾಯ ರೂಪುಗೊಳಿಸುವುದಲ್ಲ. ಈಗಾಗಲೇ ಜನರ ನಂಬಿಕೆ ಕಳೆದುಕೊಂಡಿರುವ ಪತ್ರಿಕಾ ವೃತ್ತಿ ಮತ್ತೆ ನಂಬಿಕೆ ಗಳಿಸಿಕೊಳ್ಳಬೇಕೆಂದರೆ ರಾಷ್ಟ್ರೀಯತೆಯ, ಧರ್ಮದ ಹೆಸರಿನಲ್ಲಿ ಆಡಳಿತ ವರ್ಗವು ಸೃಷ್ಟಿಸಿರುವ ಉನ್ಮಾದವನ್ನು ಪತ್ರಿಕೋದ್ಯಮಿಗಳು, ಪತ್ರಕರ್ತರು ಹುಸಿಗೊಳಿಸಬೇಕು.
Also Read: ಮೋದಿ ಸರ್ಕಾರದ ಮಾಧ್ಯಮ ದಮನ ನೀತಿ ವಿರುದ್ಧ ದನಿ ಎತ್ತಿದ ಜಾಗತಿಕ ಸಂಸ್ಥೆಗಳು